ಮೊಯಿನ್ ಅಲಿ ಸ್ಪಿನ್ ಮೋಡಿಗೆ ರಾಜಸ್ಥಾನ ತತ್ತರ : ಚೆನ್ನೈಗೆ 45 ರನ್‍ಗಳ ಭರ್ಜರಿ ಜಯ - Karavali Times ಮೊಯಿನ್ ಅಲಿ ಸ್ಪಿನ್ ಮೋಡಿಗೆ ರಾಜಸ್ಥಾನ ತತ್ತರ : ಚೆನ್ನೈಗೆ 45 ರನ್‍ಗಳ ಭರ್ಜರಿ ಜಯ - Karavali Times

728x90

19 April 2021

ಮೊಯಿನ್ ಅಲಿ ಸ್ಪಿನ್ ಮೋಡಿಗೆ ರಾಜಸ್ಥಾನ ತತ್ತರ : ಚೆನ್ನೈಗೆ 45 ರನ್‍ಗಳ ಭರ್ಜರಿ ಜಯ

 
ಮುಂಬೈ, ಎಪ್ರಿಲ್ 20, 2021 (ಕರಾವಳಿ ಟೈಮ್ಸ್) : ಸಿನ್ಪರ್ ಮೊಯಿನ್ ಅಲಿ ಆಕ್ರಮಣಕಾರಿ ಬೌಲಿಂಗಿಗೆ ನಲುಗಿದ ರಾಜಸ್ಥಾನ ರಾಯಲ್ಸ್ ತಂಡ ಚೆನ್ನೈ ವಿರುದ್ಧ 45 ರನ್‍ಗಳ ಸೋಲುಂಡಿದೆ.


    ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಚೆನ್ನೈ ನೀಡಿದ 189 ರನ್‍ಗಳ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ ತಂಡಕ್ಕೆ ಚೆನ್ನೈ ಸ್ಪಿನ್ನರ್ ಮೊಯಿನ್ ಅಲಿ ಆಘಾತವಿಕ್ಕಿದರು. ಮೊಯಿನ್ ಅಲಿ 3 ಓವರ್‍ಗಳಲ್ಲಿ ಕೇವಲ 7 ರನ್ ಬಿಟ್ಟುಕೊಟ್ಟು ಡೇವಿಡ್ ಮಿಲ್ಲರ್, ರಿಯಾನ್ ಪರಾಗ್ ಮತ್ತು ಕ್ರಿಸ್ ಮೋರಿಸ್ ಅವರ ಪ್ರಮುಖ 3 ವಿಕೆಟ್ ಪಡೆಯುವ ಮೂಲಕ ಚೆನ್ನೈ ಗೆಲುವಿನ ರೂವಾರಿಯಾದರು. ರಾಜಸ್ಥಾನ ಆರಂಭಿಕ ಆಟಗಾರ ಮನನ್ ವೋಹ್ರ 14 ರನ್ (11 ಎಸೆತ, 1 ಬೌಂಡರಿ 1 ಸಿಕ್ಸರ್) ಸಿಡಿಸಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಬಳಿಕ ಬಂದ ನಾಯಕ ಸಂಜು ಸ್ಯಾಮ್ಸನ್ ಕೇವಲ 1 ರನ್ ಗಳಿಸಿ ಪೆವಿಲಿಯನ್ ಸೇರಿದರು. ನಂತರ ಬಂದ ಶಿವಂ ದುಬೆ 17 ರನ್ (20 ಎಸೆತ, 2 ಬೌಂಡರಿ) ಸಿಡಿಸಿ ಔಟಾದರು.


    ಒಂದು ಕಡೆ ವಿಕೆಟ್ ಉರುಳುತ್ತಿದ್ದರೆ ಮತ್ತೊಂದು ಕಡೆ ಏಕಾಂಗಿ ಹೋರಾಟ ನಡೆಸಿದ ಜೋಸ್ ಬಟ್ಲರ್ ರಾಜಸ್ಥಾನ ತಂಡವನ್ನು ಮೇಲೆತ್ತುವ ಪ್ರಯತ್ನ ನಡೆಸಿದರು. ಆದರೆ 49 ರನ್ (35 ಎಸೆತ, 5 ಬೌಂಡರಿ, 2 ಸಿಕ್ಸರ್) ಸಿಡಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಒಂದು ರನ್‍ನಿಂದ ಅರ್ಧಶತಕ ವಂಚಿತರಾದರು.


    ರಾಜಸ್ಥಾನ ತಂಡದ ಮಧ್ಯಮ ಕ್ರಮಾಂಕ ಆಟಗಾರರಾದ ಡೇವಿಡ್ ಮಿಲ್ಲರ್ 2 ರನ್, ರಿಯಾನ್ ಪರಾಗ್ 3 ರನ್, ಕ್ರೀಸ್ ಮೋರಿಸ್ ಶೂನ್ಯಕ್ಕೆ ಔಟಾಗಿ ಸಂಪೂರ್ಣ ವಿಫಲರಾದುದು ರಾಜಸ್ಥಾನಕ್ಕೆ ಮುಳ್ಳಾಗಿ ಪರಿಣಮಿಸಿತು.  ಅಂತಿಮವಾಗಿ ರಾಜಸ್ಥಾನ ತಂಡ ನಿಗದಿತ 20 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿ 45 ರನ್‍ಗಳ ಅಂತರದಿಂದ ಸೋಲೊಪ್ಪಿಕೊಂಡಿತು. 


    ಚೆನ್ನೈ ಪರ ಬೌಲಿಂಗ್‍ನಲ್ಲಿ ಮಿಂಚಿದ ಮೋಯಿನ್ ಅಲಿ 3 ವಿಕೆಟ್ ಪಡೆದರೆ, ಸ್ಯಾಮ್ ಕರ್ರನ್ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್, ಡೇಯ್ನ್ ಬ್ರಾವೋ ಮತ್ತು ಠಾಕೂರ್ ತಲಾ 1 ವಿಕೆಟ್ ಪಡೆದರು. 


    ಈ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಚೆನ್ನೈ ಪರ ಆರಂಭಿಕರಾಗಿ ಕಣಕ್ಕಿಳಿದ ಋತುರಾಜ್ ಗಾಯಕ್ವಡ್ ಹಾಗೂ ಫಾಫ್ ಡುಪ್ಲೆಸಿಸ್ ಉತ್ತಮ ಆರಂಭ ನೀಡಲು ಮತ್ತೆ ವಿಫಲವಾದರು. ಋತುರಾಜ್ ಗಾಯಕ್ವಡ್ ಕೇವಲ 10 ರನ್ (13 ಎಸೆತ, 1 ಬೌಂಡರಿ) ಸಿಡಿಸಿ ಔಟಾದರೆ, ಫಾಫ್ ಡುಪ್ಲೆಸಿಸ್ 33 ರನ್ (17 ಎಸೆತ, 4 ಬೌಂಡರಿ, 2 ಸಿಕ್ಸರ್) ಬಾರಿಸಿ ಔಟಾದರು. ಬಳಿಕ ಬಂದ ಮೊಯಿನ್ ಅಲಿ 26 ರನ್ (20 ಎಸೆತ, 1 ಬೌಂಡರಿ, 2 ಸಿಕ್ಸರ್) ಸಿಡಿಸಿದ ವೇಳೆ ರಾಹುಲ್ ತೆವಾಟಿಯ ಬೌಲಿಂಗ್‍ನಲ್ಲಿ ರಿಯಾನ್ ಪರಾಗ್ ಅವರಿಗೆ ಕ್ಯಾಚಿತ್ತರು. ನಂತರ ಬಂದ ಸುರೇಶ್ ರೈನಾ 18 ರನ್ (15 ಎಸೆತ, 1 ಬೌಂಡರಿ, 1 ಸಿಕ್ಸರ್), ಅಂಬಾಟಿ ರಾಯುಡು 27 ರನ್ (17 ಎಸೆತ, 3 ಸಿಕ್ಸರ್), ಸ್ಯಾಮ್ ಕರ್ರನ್ 18 ರನ್ (6 ಎಸೆತ, 1 ಸಿಕ್ಸ್) ಮತ್ತು ಎಂ.ಎಸ್ ಧೋನಿ 18 ರನ್ (17 ಎಸೆತ, 2 ಬೌಂಡರಿ) ಗಳಿಸಿ ಔಟಾದರು. ಕೊನೆಯಲ್ಲಿ ಮಿಂಚಿದ ಡೇಯ್ನ್ ಬ್ರಾವೋ 20 ರನ್ (8 ಎಸೆತ, 2 ಬೌಂಡರಿ, 1 ಸಿಕ್ಸರ್) ಸಿಡಿಸುವ ಮೂಲಕ ತಂಡದ ಮೊತ್ತವನ್ನು 180ರ ಗಡಿ ದಾಟಿಸಿದರು. ರಾಜಸ್ಥಾನ ರಾಯಲ್ಸ್ ಪರ ಚೇತನ್ ಝಕರಿಯಾ 3 ವಿಕೆಟ್ ಕಿತ್ತರೆ, ಕ್ರಿಸ್ ಮೋರಿಸ್ 2 ವಿಕೆಟ್ ಪಡೆದರು.

  • Blogger Comments
  • Facebook Comments

0 comments:

Post a Comment

Item Reviewed: ಮೊಯಿನ್ ಅಲಿ ಸ್ಪಿನ್ ಮೋಡಿಗೆ ರಾಜಸ್ಥಾನ ತತ್ತರ : ಚೆನ್ನೈಗೆ 45 ರನ್‍ಗಳ ಭರ್ಜರಿ ಜಯ Rating: 5 Reviewed By: karavali Times
Scroll to Top