ಆಲಡ್ಕ : ವಸತಿ ಸಂಕೀರ್ಣದ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಸೊತ್ತು-ಸಾಮಾಗ್ರಿ, ಚಿನ್ನಾಭರಣ, ನಗದು ಸಹಿತ ಸಂಪೂರ್ಣ ಭಸ್ಮ - Karavali Times ಆಲಡ್ಕ : ವಸತಿ ಸಂಕೀರ್ಣದ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಸೊತ್ತು-ಸಾಮಾಗ್ರಿ, ಚಿನ್ನಾಭರಣ, ನಗದು ಸಹಿತ ಸಂಪೂರ್ಣ ಭಸ್ಮ - Karavali Times

728x90

18 May 2021

ಆಲಡ್ಕ : ವಸತಿ ಸಂಕೀರ್ಣದ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಸೊತ್ತು-ಸಾಮಾಗ್ರಿ, ಚಿನ್ನಾಭರಣ, ನಗದು ಸಹಿತ ಸಂಪೂರ್ಣ ಭಸ್ಮ


ಬಂಟ್ವಾಳ, ಮೇ 18, 2021 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಸಮೀಪದ ಆಲಡ್ಕ ಮಸೀದಿ ಸಮೀಪದ ವಸತಿ ಸಂಕೀರ್ಣದ ಮನೆಯೊಂದರಲ್ಲಿ ಮಂಗಳವಾರ ಮಧ್ಯ ರಾತ್ರಿ ವೇಳೆಗೆ ಆಕಸ್ಮಿಕ ಬೆಂಕಿ ಅವಘಡ ಉಂಟಾಗಿ ಮನೆಯೊಳಗಿನ ಎಲ್ಲಾ ಸಾಮಾಗ್ರಗಳು ಸಂಪೂರ್ಣ ಬೆಂಕಿಗಾಹುತಿಯಾಗಿ ಸುಟ್ಟು ಭಸ್ಮವಾಗಿದೆ.

ಇಸ್ಮಾಯಿಲ್ ಎಂಬವರಿಗೆ ಸೇರಿದ ವಸತಿ ಸಂಕೀರ್ಣ ಇದಾಗಿದ್ದು, ಉದ್ಯಮಿ ಹನೀಫ್ ಹಾಸ್ಕೋ ಅವರ ಕುಟುಂಬ ವಾಸ್ತವ್ಯ ಹೊಂದಿರುವ ಮನೆಯಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ. ಮನೆ ಮಂದಿ ಸಂಬಂಧಿಕರ ಮರಣ ಸಂಭವಿಸಿದ ಹಿನ್ನಲೆಯಲ್ಲಿ ತೆರಳಿದ್ದ ವೇಳೆ ಈ ಅಗ್ನಿ ಅವಘಡ ಸಂಭವಿಸಿದ್ದು, ಜೀವ ಹಾನಿಯಂತಹ ಹೆಚ್ಚಿನ ಅನಾಹುತ ಸ್ವಲ್ಪದರಲ್ಲೇ ತಪ್ಪಿ ಹೋಗಿದೆ. ಮನೆಯೊಳಗೆ ಬೆಂಕಿ ಜ್ವಾಲೆ ಕಂಡು ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ ಸ್ಥಳಕ್ಕಾಗಮಿಸಿದ ಹನೀಫ್ ಅವರು ಬೆಂಕಿಯ ಜ್ವಾಲೆ ಖಚಿತಪಡಿಸಿ ತಕ್ಷಣ ಬಂಟ್ವಾಳ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಸಫಲರಾದರೂ ಅದಾಗಲೇ ಮನೆಯೊಳಗಿನ ಸೊತ್ತುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

ವಿದ್ಯುತ್ ಶಾರ್ಟ್ ಸರ್ಕೂಟ್ ನಿಂದಾಗಿ ಈ ಬೆಂಕಿ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ.   ಮನೆಯೊಳಗಿನ ವಿದ್ಯುತ್ ಉಪಕರಣಗಳು, ಪೀಠೋಪಕರಣಗಳು ಸಹಿತ ಕಪಾಟಿನೊಳಗಿದ್ದ ವಸ್ತ್ರ, ಬಟ್ಟೆ-ರೆಗಳು, ಚಿನ್ನಾಭರಣಗಳು ಹಾಗೂ ನಗದು ಹಣ ಕೂಡಾ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಕರಟಿದ ಮಸಿಯಂತಾಗಿದೆ. ಮಂಗಳವಾರ ಸಂಜೆ ತನ್ನ ಉದ್ಯಮದ ಲೈನ್ ಮುಗಿಸಿ ಬಂದ ಹನೀಫ್ ಸುಮಾರು 50 ಸಾವಿರಕ್ಕೂ ಅಧಿಕ ಮೊತ್ತದ ನಗದು ಹಣವನ್ನು ಕಪಾಟಿನಲ್ಲೇ ಇಟ್ಟಿದ್ದರು ಎನ್ನಲಾಗಿದ್ದು ಅದೆಲ್ಲವೂ ಸುಟ್ಟು ಭಸ್ಮವಾಗಿದೆ. ಸುಮಾರು 20 ಪವನ್ ಗೂ ಅಧಿಕ ಚಿನ್ನಾಭರಣಗಳು ಇದ್ದು, ಅದೂ ಕೂಡಾ ಗುರುತು ಹಿಡಿಯಲಾರದಷ್ಟು ಕರಟಿ ಹೋಗಿದೆ. ಹನೀಫ್ ಅವರ ವಾಹನದ ಸಹಿತ ಇತರ ಅತ್ಯಮೂಲ್ಯ ದಾಖಲೆಗಳೂ ಕೂಡಾ ಬೆಂಕಿಯ ಕೆನ್ನಾಲಗೆಗೆ ಆಹುತಿಯಾಗಿದೆ. ಹಠಾತ್ ಸಂಭವಿಸಿದ ಈ ಬೆಂಕಿ ಅವಘಡದಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು, ನಿಖರ ನಷ್ಟ ತಿಳಿದುಬರಬೇಕಷ್ಟೆ.

ಮನೆ ಮಾಲಕ ಹನೀಫ್ ಹಾಸ್ಕೋ ಅವರು ಪಾಣೆಮಂಗಳೂರು ವಲಯ ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷರಾಗಿದ್ದು, ಸಾಮಾಜಿಕ ಸಂಘಟನೆಗಳ ಮೂಲಕ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ.

ಘಟನಾ ಸ್ಥಳಕ್ಕೆ ರಾತೋರಾತ್ರಿ ಆಗಮಿಸಿದ ಸ್ಥಳೀಯ ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್ ಅವರು ಅಗ್ನಿಶಾಮಕ ಸಿಬ್ಬಂದಿ ಕರೆಸಿ ಬೆಂಕಿ ನಂದಿಸುಲ್ಲಿ ಸಹಕರಿಸಿದ್ದು, ಸ್ಥಳೀಯ ಯುವಕರು ಕೈಜೋಡಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಆಲಡ್ಕ : ವಸತಿ ಸಂಕೀರ್ಣದ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಸೊತ್ತು-ಸಾಮಾಗ್ರಿ, ಚಿನ್ನಾಭರಣ, ನಗದು ಸಹಿತ ಸಂಪೂರ್ಣ ಭಸ್ಮ Rating: 5 Reviewed By: lk
Scroll to Top