ರಾಣಿ ಅಬ್ಬಕ್ಕಳ ಭಾವೈಕ್ಯತೆಯೆ ಮಣ್ಣಿಗೆ ಕೋಮುವಾದಿಗಳ ಸರ್ಟಿಫಿಕೇಟ್ ಅಗತ್ಯವಿಲ್ಲ : ಮಂಗಳೂರು ಶಾಸಕ ಖಾದರ್ ಗರಂ - Karavali Times ರಾಣಿ ಅಬ್ಬಕ್ಕಳ ಭಾವೈಕ್ಯತೆಯೆ ಮಣ್ಣಿಗೆ ಕೋಮುವಾದಿಗಳ ಸರ್ಟಿಫಿಕೇಟ್ ಅಗತ್ಯವಿಲ್ಲ : ಮಂಗಳೂರು ಶಾಸಕ ಖಾದರ್ ಗರಂ - Karavali Times

728x90

13 August 2021

ರಾಣಿ ಅಬ್ಬಕ್ಕಳ ಭಾವೈಕ್ಯತೆಯೆ ಮಣ್ಣಿಗೆ ಕೋಮುವಾದಿಗಳ ಸರ್ಟಿಫಿಕೇಟ್ ಅಗತ್ಯವಿಲ್ಲ : ಮಂಗಳೂರು ಶಾಸಕ ಖಾದರ್ ಗರಂ

ಮಂಗಳೂರು, ಆಗಸ್ಟ್ 13, 2021 (ಕರಾವಳಿ ಟೈಮ್ಸ್) : ಉಳ್ಳಾಲ ಕ್ಷೇತ್ರದ ಮಾಜಿ ಶಾಸಕ ದಿವಂಗತ ಬಿ ಎಂ ಇದಿನಬ್ಬ ಅವರ ಮನೆ ಮೇಲೆ ನಡೆದಿದ್ದ ಎನ್‍ಐಎ ದಾಳಿ ಹಿನ್ನಲೆಯಲ್ಲಿ ಅವರ ಮನೆಗೆ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಮುತ್ತಿಗೆ ನಡೆಸಿದ್ದರ ಬಗ್ಗೆ ಮಾಜಿ ಸಚಿವ, ಮಂಗಳೂರು ಶಾಸಕ ಯು ಟಿ ಖಾದರ್ ತೀವ್ರ ಗರಂ ಆಗಿದ್ದಾರೆ. 

ಈ ಬಗ್ಗೆ ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಯು ಟಿ ಖಾದರ್ ದಿವಂಗತ ಇದ್ದಿನಬ್ಬ ಮಗನ ಮನೆಯ ದೀಪ್ತಿ ಮಾರ್ಲ ಬಗ್ಗೆ ಕೇಳೋಕೆ ಈ ಸಂಘಟನೆಯವರು ಯಾರು? ಆ ಹೆಣ್ಣು ಮಗಳ ಹೆತ್ತವರೇನಾದರೂ ಈ ಸಂಘಟನೆ ಮಂದಿಗೆ ದೂರು ಕೊಟ್ಟಿದ್ದಾರಾ? ಹುಡುಗಿ ಬಗ್ಗೆ ಸಮಸ್ಯೆ ಇದ್ದರೆ ಅವಳ ಮನೆಯವರು ಪೊಲೀಸರಿಗೆ ದೂರು ಕೊಡುತ್ತಾರೆ. ಅವರ ಮನೆಯ ವಿಚಾರ ಅವರು ನೋಡಿಕೊಳ್ಳುತ್ತಾರೆ. ಆ ವಿಷಯ ಎಲ್ಲ ಇವರಿಗೆ ಯಾಕೆ? ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಲವ್ ಜಿಹಾದ್ ಅದು ಇದು ಎಂದೆಲ್ಲಾ ಹೇಳಿ ಹಿಡನ್ ಅಜೆಂಡಾ ಇಟ್ಟುಕೊಂಡು ನನ್ನ ಕ್ಷೇತ್ರಕ್ಕೆ ಬಂದು ಸಂಘಟನೆಗೆ ಸೇರಿದವರು ಯಾಕೆ ಪ್ರತಿಭಟನೆ ಮಾಡುತ್ತಾರೆ? ತಾಕತ್ತಿದ್ದರೆ ಲವ್ ಜಿಹಾದ್ ವಿರುದ್ದ ಕಾನೂನು ತರಲು ಉಪವಾಸ ಮಾಡಿ. ಅದು ಬಿಟ್ಟು ಹೊರಗಿನವರು ನನ್ನ ಕ್ಷೇತ್ರಕ್ಕೆ ಬಂದು ಯಾಕೆ ಸಮಸ್ಯೆ ಮಾಡ್ತೀರಾ? ಎಂದು ಪ್ರಶ್ನಿಸಿದ್ದಾರೆ. 

ಲವ್ ಜಿಹಾದ್ ಬಗ್ಗೆ ಪ್ರತಿಕ್ರಯಿಸಿರುವ ಶಾಸಕ ಖಾದರ್ ಮುಸ್ಲಿಂ ಸಹೋದರಿ ಹಿಂದೂ ಸಹೋದರನನ್ನು ಮದುವೆಯಾದ ಉದಾಹರಣೆ ಇಲ್ವ? ಹೀಗೆ ಮದುವೆ ಆದವರು ರಾಜಕೀಯಕ್ಕೆ ಬಂದು ಜನಪ್ರತಿನಿಧಿ ಆದವರೂ ಇದ್ದಾರೆ. ನಿಮಗೆ ಬದ್ದತೆ ಇದ್ದರೆ ಬಿಜೆಪಿ ಕಚೇರಿ ಮುಂದೆ ಲವ್ ಜಿಹಾದ್ ಕಾನೂನು ತರಲು ನಾಳೆಯಿಂದ ಪ್ರತಿಭಟಿಸಿ. ಪರಸ್ಪರ ಮದುವೆ ಆಗುವ ಕಾನೂನುಗಳನ್ನ ರದ್ದು ಮಾಡುವಂತೆಯೂ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟಿಸಿ, ದೇಶದ ಕಾನೂನು, ಸಂವಿಧಾನ ಒಂದು ಹೇಳುವಾಗ ಫತ್ವಾ ಹೊರಡಿಸೋಕೆ ಇವರ್ಯಾರು ಎಂದು ತೀವ್ರ ಖಡಕ್ ಆಗಿ ಪ್ರಶ್ನಿಸಿದರು. 

ದಿವಂಗತ ಇದ್ದಿನಬ್ಬ ಮನೆ ಮುಂದೆ ಪ್ರತಿಭಟಿಸಿದ ಸಂಘಟನೆ ಬಗ್ಗೆ ತೀವ್ರ ಅಕ್ರೋಶ ವ್ಯಕ್ತಪಡಿಸಿದ ಖಾದರ್ ಯಾರ್ಯಾರ ಮನೆ ಮುಂದೆ ಹೋಗಿ ಪ್ರತಿಭಟಿಸೋಕೆ ಇವರ್ಯಾರು? ಇದಕ್ಕೆಲ್ಲ ಇವರಿಗೆ ಅಧಿಕಾರ ಕೊಟ್ಟವರು ಯಾರು? ಧರ್ಮ ಜಾತಿ ಎಂಬೆಲ್ಲಾ ವಿಚಾರಕ್ಕೆ ಸಂಬಂಧಿಸಿ ಇವರಿಗೆ ಪೇಟೆಂಟ್ ಕೊಟ್ಟವರು ಯಾರು? ಎಂದು ಪ್ರಶ್ನಿಸಿದರಲ್ಲದೆ ಇಂತಹ ಸಂಘಟನೆಯವರ ಬಣ್ಣ ಮೊದಲು ಬಯಲಾಗಬೇಕು. ಉಳ್ಳಾಲದ ಜನ ಪರಸ್ಪರ ಭಾವೈಕ್ಯತೆ ಮತ್ತು ಪ್ರೀತಿಯಿಂದ ಬದುಕುತ್ತಿದ್ದಾರೆ. ದೇಶವನ್ನು ಪ್ರೀತಿಸುವ ದೇಶಪ್ರೇಮಿ ಜನರು ಈ ಭಾಗದಲ್ಲಿ ಇದ್ದಾರೆ. ದೇಶದ್ರೋಹದ ಕೆಲಸವನ್ನು ಯಾರೂ ಕ್ಷಮಿಸಲ್ಲ, ಯಾರೂ ಬೆಂಬಲಿಸಲ್ಲ. ಉಳ್ಳಾಲದ ನಾಗರಿಕರು ಇದನ್ನ ಒಪ್ಪಲ್ಲ ಎಂದ ಶಾಸಕ ಖಾದರ್ ಅಬ್ಬಕ್ಕನ ಭಾವೈಕ್ಯತೆಯೆ ಮಣ್ಣಿಗೆ ಕೋಮುವಾದಿಗಳ ಸರ್ಟಿಫಿಕೇಟ್ ಅಗತ್ಯವಿಲ್ಲ ಎಂದು ಝಾಡಿಸಿದರು. 

ಮಾಜಿ ಶಾಸಕರ ಮನೆ ಮೇಲೆ ನಡೆದ ಎನ್‍ಐಎ ದಾಳಿ ಬಗ್ಗೆ ಪ್ರತಿಕ್ರಯಿಸಿದ ಶಾಸಕ ಖಾದರ್, ಮೊನ್ನೆ ಘಟನೆಯಲ್ಲಿ ಎನ್‍ಐಎ ಬಂದು ಒಬ್ಬನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತನಿಖೆ ನಡೆಯುತ್ತಿದೆ. ತನಿಖಾ ಸಂಸ್ಥೆಯಿಂದ ತನಿಖೆ ನಡೆಯುತ್ತಿರುವಾಗ ಅದರ ಬಗ್ಗೆ ಯಾರೂ ಮಾತನಾಡುವುದು ಸರಿಯಲ್ಲ. ತನಿಖೆ ನಡೆದು ಸಮಗ್ರವಾದ ವಿಚಾರ ಬೆಳಕಿಗೆ ಬರಲಿ. ಎನ್‍ಐಎ ಬಂದಿರೋದು ಗಂಭೀರ ವಿಚಾರ, ಈ ಬಗ್ಗೆ ಸಮಗ್ರ ತನಿಖೆ ನಡೆಯಲಿ. ಆದರೆ ಈ ಬಗ್ಗೆ ರಾಜಕೀಯ ಮಾಡಿ ಯಾರೂ ಗೊಂದಲ ಸೃಷ್ಟಿಸಬಾರದು. ವಿನಾ ಕಾರಣ ರಾಜಕೀಯ ಮಾಡುವುದನ್ನು ನನ್ನ ಕ್ಷೇತ್ರದ ಜನ ಯಾರೂ ಕ್ಷಮಿಸಲ್ಲ. ಅಪರಾಧಿ ಆಗಿದ್ರೆ ಉಳ್ಳಾಲದ ಜನರು ಅವರನ್ನ ಯಾವತ್ತೂ ಕ್ಷಮಿಸಲ್ಲ. ಅವರು ನಿರಪರಾಧಿ ಆಗಿದ್ರೆ ಯಾಕೆ ಅವರ ಮೇಲೆ ಆರೋಪ ಬಂತು ಅನ್ನೋದ್ರ ಬಗ್ಗೆ ತನಿಖೆ ನಡೆಯಲಿ ಎಂದು ಶಾಸಕ ಖಾದರ್ ಇದೇ ವೇಳೆ ಆಗ್ರಹಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ರಾಣಿ ಅಬ್ಬಕ್ಕಳ ಭಾವೈಕ್ಯತೆಯೆ ಮಣ್ಣಿಗೆ ಕೋಮುವಾದಿಗಳ ಸರ್ಟಿಫಿಕೇಟ್ ಅಗತ್ಯವಿಲ್ಲ : ಮಂಗಳೂರು ಶಾಸಕ ಖಾದರ್ ಗರಂ Rating: 5 Reviewed By: karavali Times
Scroll to Top