ಬಂಟ್ವಾಳದಲ್ಲೊಂದು ವಿಲಕ್ಷಣ ಪಂಚಾಯತ್ ಕಚೇರಿ : ಅಮ್ಟಾಡಿ ಪಂಚಾಯತ್ ಕಾರ್ಯಾಲಯ ತಲುಪಲು ಗ್ರಾಮಸ್ಥರು ಕ್ರಮಿಸಬೇಕಿದೆ 18 ಕಿ ಮೀ! - Karavali Times ಬಂಟ್ವಾಳದಲ್ಲೊಂದು ವಿಲಕ್ಷಣ ಪಂಚಾಯತ್ ಕಚೇರಿ : ಅಮ್ಟಾಡಿ ಪಂಚಾಯತ್ ಕಾರ್ಯಾಲಯ ತಲುಪಲು ಗ್ರಾಮಸ್ಥರು ಕ್ರಮಿಸಬೇಕಿದೆ 18 ಕಿ ಮೀ! - Karavali Times

728x90

4 February 2022

ಬಂಟ್ವಾಳದಲ್ಲೊಂದು ವಿಲಕ್ಷಣ ಪಂಚಾಯತ್ ಕಚೇರಿ : ಅಮ್ಟಾಡಿ ಪಂಚಾಯತ್ ಕಾರ್ಯಾಲಯ ತಲುಪಲು ಗ್ರಾಮಸ್ಥರು ಕ್ರಮಿಸಬೇಕಿದೆ 18 ಕಿ ಮೀ!

ಬಂಟ್ವಾಳ, ಫೆಬ್ರವರಿ 04, 2022 (ಕರಾವಳಿ ಟೈಮ್ಸ್) : ತಾಲೂಕಿನ ಅಮ್ಟಾಡಿ ಗ್ರಾಮ ಪಂಚಾಯತ್ ಕಚೇರಿ ಕಾರ್ಯಾಲಯ ಇರುವುದು ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಂಟ್ವಾಳ ಮೂಡ, ಬಂಟ್ವಾಳ ಕಸ್ಬಾ ಗ್ರಾಮ ಹಾಗೂ ಅರಳ ಗ್ರಾಮ ಪಂಚಾಯತ್ ಗಡಿ ಭಾಗವಾಗಿರುವ ಲೊರೆಟ್ಟೋ ಚರ್ಚ್ ಬಳಿ. ಅಂದರೆ ಇಲ್ಲಿನ ಪಂಚಾಯತಿನ ಕೆಲ ಗ್ರಾಮಸ್ಥರಿಗೆ ತಮ್ಮ ದೈನಂದಿನ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಪಂಚಾಯತ್ ಕಚೇರಿಗೆ ಎಡತಾಕಬೇಕಾದರೆ ಕನಿಷ್ಠ ಎಂದರೂ ಸುಮಾರು 15-18 ಕಿ ಮೀ ಪ್ರಯಾಣಿಸಬೇಕಾಗಿದೆ. ಅಲ್ಲದೆ ಎರಡು ಗ್ರಾಮಗಳನ್ನು ದಾಟಿ ಎರಡು ಬಸ್ಸುಗಳಲ್ಲಿ ಸಂಚರಿಸುವ ದುಸ್ಥಿತಿ ಇದೆ. ಪಂಚಾಯತ್ ವ್ಯಾಪ್ತಿಯ ಜನರ ಸಮಯ, ಹಣ, ಶ್ರಮ ಎಲ್ಲವನ್ನೂ ವ್ಯರ್ಥ ಮಾಡುವ ಪಂಚಾಯತ್ ಕಚೇರಿ ಇದ್ದರೇನು ಬಿಟ್ಟರೇನು ಎಂಬ ಪರಿಸ್ಥಿತಿ ಇಲ್ಲಿನ ಗ್ರಾಮಸ್ಥರಿಗೆ ಉಂಟಾಗಿದೆ. 

ಗ್ರಾಮ ಪಂಚಾಯತ್ ಕಾರ್ಯಾಲಯ ಇರಬೇಕಾದುದು ಆಯಾ ಗ್ರಾಮಸ್ಥರ ಅನುಕೂಲಕ್ಕಾಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಧ್ಯಭಾಗದಲ್ಲಿ ಎಂಬುದು ಜನಜನಿತ. ಆದರೆ ಅಮ್ಟಾಡಿ ಗ್ರಾಮ ಪಂಚಾಯತ್ ಕಚೇರಿ ಮಾತ್ರ ಇದಕ್ಕಿಂತ ಭಿನ್ನವಾಗಿದ್ದು, ಸ್ವಂತ ವಾಹನ ಇದ್ದವರಿಗೆ ಮಾತ್ರ ತಮ್ಮ ಸಾರ್ವಜನಿಕ ಕೆಲಸ-ಕಾರ್ಯಗಳಿಗೆ ಪಂಚಾಯತ್ ಕಚೇರಿಗೆ ತೆರಳಲು ಸಾಧ್ಯ ಎಂಬಂತಾಗಿದ್ದು, ವಾಹನ ಇಲ್ಲದ ಗ್ರಾಮಸ್ಥರು ಎರಡು ಬಸ್ಸುಗಳಲ್ಲಿ ಸಂಚಾರ ಮಾಡಬೇಕಾದ ಅನಿವಾರ್ಯತೆ ಇಲ್ಲಿದೆ. 

ಪಂಚಾಯತ್ ವ್ಯಾಪ್ತಿಯ ಬೆದ್ರಗುಡ್ಡೆ, ನಲ್ಕೆಮಾರ್, ಪಚ್ಚಿನಡ್ಕ, ಕಲ್ಪನೆ ಈ ಭಾಗದ ಜನರು ಪಂಚಾಯತ್ ಕಚೇರಿಗೆ ತೆರಳಲು ಬಿ ಸಿ ರೋಡುವರೆಗೆ ಒಂದು ಬಸ್ಸಿನಲ್ಲಿ ಬಂದು ನಂತರ ಅಲ್ಲಿಂದ ಮೂಡಬಿದ್ರೆ ಮಾರ್ಗವಾಗಿ ಸಂಚರಿಸುವ ಬಸ್ಸಿನಲ್ಲಿ ತೆರಳಿ ಬಂಟ್ವಾಳ ಕಸ್ಬಾ ಗ್ರಾಮದ ಲೊರೆಟ್ಟೋ ಚರ್ಚ್ ಬಳಿ ಇಳಿದು ಬಳಿಕ ಅಲ್ಲಿಂದ ಕಾಲು ದಾರಿಯಾಗಿ ಮತ್ತೆ ಒಂದು ಕಿಲೋ ಮೀಟರ್ ದೂರ ನಡೆದುಕೊಂಡು ಸಾಗಬೇಕಾಗಿದೆ. 

ಅಮ್ಟಾಡಿ ನಾಗರಿಕರಿಗೆ ಪಂಚಾಯತ್ ಕಾರ್ಯಾಲಯ ಸಂಪರ್ಕಿಸಲು ಗ್ರಾಮದೊಳಗೆ ಸುಸಜ್ಜಿತವಾದ ರಸ್ತೆ ಇದ್ದರೂ ಬಸ್ಸು ಸಂಚಾರದ ವ್ಯವಸ್ಥೆ ಇರುವುದಿಲ್ಲ. ಸರಕಾರಿ ಕಾರ್ಯಕ್ರಮಗಳ ಪ್ರಯೋಜನ ಪಡೆಯಲು ಇಲ್ಲಿನ ಬಡ ಜನತೆ ಅಟೋ ರಿಕ್ಷಾ ಗೊತ್ತುಪಡಿಸಿ ದುಬಾರಿ ಮೊತ್ತ ಬಾಡಿಗೆ ನೀಡಿ ಸಂಪರ್ಕಿಸಬೇಕಾದ ದುಸ್ಥಿತಿ ಇದೆ ಎಂಬುದು ಗ್ರಾಮಸ್ಥರ ಅಳಲು. 

ಇಲ್ಲಿನ ಗ್ರಾಮ ಪಂಚಾಯಿತಿ ರಚನೆಗೆ ಮುಂಚೆ ಮಂಡಲ ಪಂಚಾಯತಿಗಳು ಅಸ್ತಿತ್ವದಲ್ಲಿದ್ದ ಸಂದರ್ಭ ಕಚೇರಿಗಳು ಗ್ರಾಮ ಮಟ್ಟದ ಕೆಂಪುಗುಡ್ಡೆ ಮತ್ತು ಕುರಿಯಾಳ ಪ್ರದೇಶದಲ್ಲೇ ಇತ್ತು. 1991ರಲ್ಲಿ ಕುರಿಯಾಳ ಮತ್ತು ಅಮ್ಟಾಡಿ ಗ್ರಾಮಗಳು ಸೇರಿ ನೂತನ ಅಮ್ಟಾಡಿ ಗ್ರಾಮ ಪಂಚಾಯತ್ ಅಸ್ತಿತ್ವಕ್ಕೆ ಬಂದ ಬಳಿಕ ಈ ಸಂಚಾರ ತೊಂದರೆಗೆ ಇಲ್ಲಿನ ಗ್ರಾಮಸ್ಥರು ಒಳಗಾಗಿದ್ದಾರೆ. ಕಲ್ಪನೆಯಿಂದ ನಲ್ಕೆಮಾರ್ ಇಲ್ಲವೇ ಕೆಂಪುಗುಡ್ಡೆ-ಅಜೆಕಲವಾಗಿ ಬಂಟ್ವಾಳ ಬೈಪಾಸ್ ರಸ್ತೆಗೆ ಕೂಡು ರಸ್ತೆ ಇದ್ದು ಈ ಭಾಗದಲ್ಲಿ ದಿನದಲ್ಲಿ ಕನಿಷ್ಠ ಎರಡು ಹೊತ್ತಿನಲ್ಲಿ ಬಸ್ಸು ಸಂಚಾರಕ್ಕೆ ಕ್ರಮ ಕೈಗೊಂಡರೆ ಈ ಭಾಗದ ಜನರ ಈ ಸಂಚಾರ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಇದಲ್ಲದಿದ್ದರೆ ಸರಕಾರ ಗ್ರಾಮದ ಜನರಿಗೆ ಸರಕಾರಿ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ನೂತನ ಯೋಜನೆಗೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಡುತ್ತಾರೆ.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲೊಂದು ವಿಲಕ್ಷಣ ಪಂಚಾಯತ್ ಕಚೇರಿ : ಅಮ್ಟಾಡಿ ಪಂಚಾಯತ್ ಕಾರ್ಯಾಲಯ ತಲುಪಲು ಗ್ರಾಮಸ್ಥರು ಕ್ರಮಿಸಬೇಕಿದೆ 18 ಕಿ ಮೀ! Rating: 5 Reviewed By: karavali Times
Scroll to Top