ಕ್ರಿಕೆಟ್ ಲೋಕದ ದಿಗ್ಗಜ, ಅಸ್ಟ್ರೇಲಿಯಾ ತಂಡದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ದೇಹ ನಿಶ್ಚಲ ಸ್ಥಿತಿಯಲ್ಲಿ ಪತ್ತೆ : ಹೃದಯಾಘಾತದಿಂದ ನಿಧನದ ಶಂಕೆ - Karavali Times ಕ್ರಿಕೆಟ್ ಲೋಕದ ದಿಗ್ಗಜ, ಅಸ್ಟ್ರೇಲಿಯಾ ತಂಡದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ದೇಹ ನಿಶ್ಚಲ ಸ್ಥಿತಿಯಲ್ಲಿ ಪತ್ತೆ : ಹೃದಯಾಘಾತದಿಂದ ನಿಧನದ ಶಂಕೆ - Karavali Times

728x90

4 March 2022

ಕ್ರಿಕೆಟ್ ಲೋಕದ ದಿಗ್ಗಜ, ಅಸ್ಟ್ರೇಲಿಯಾ ತಂಡದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ದೇಹ ನಿಶ್ಚಲ ಸ್ಥಿತಿಯಲ್ಲಿ ಪತ್ತೆ : ಹೃದಯಾಘಾತದಿಂದ ನಿಧನದ ಶಂಕೆ

ಸಿಡ್ನಿ, ಮಾರ್ಚ್ 04, 2022 (ಕರಾವಳಿ ಟೈಮ್ಸ್) : ಕ್ರಿಕೆಟ್ ಲೋಕದ ಸ್ಪಿನ್ ಮಾಂತ್ರಿಕ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಶೇನ್ ವಾರ್ನ್ (52) ಅವರು ಶುಕ್ರವಾರ ಸಂಜೆ ತಮ್ಮ ಮನೆಯಲ್ಲೇ ನಿಶ್ಚಲ ಸ್ಥಿತಿಯಲ್ಲಿ ಪತ್ತೆಯಾಗಿದ್ದು,  ಹೃದಯಾಘಾತದಿಂದ ನಿಧನರಾಗಿರಬಹುದು ಎಂದು ಶಂಕಿಸಲಾಗಿದೆ. ಶೇನ್ ವಾರ್ನ್ ನಿಧನರಾಗಿರುವ ಬಗ್ಗೆ ಆಸ್ಟ್ರೇಲಿಯಾದ ಫಾಕ್ಸ್ ಕ್ರಿಕೆಟ್ ವರದಿ ಖಚಿತಪಡಿಸಿದೆ. 

ಕ್ರಿಕೆಟ್ ಲೆಜೆಂಡ್ ಶೇನ್ ವಾರ್ನ್ ಅವರ ಹಠಾತ್ ನಿಧನಕ್ಕೆ ವಿಶ್ವದಾದ್ಯಂತ ದಿಗ್ಭಮೆ ವ್ಯಕ್ತವಾಗುತ್ತಿದೆ.  ಶುಕ್ರವಾರ ಮುಂಜಾನೆಯಷ್ಟೆ ಆಸ್ಟ್ರೇಲಿಯಾ ತಂಡ ಮಾಜಿ ಆಟಗಾರ ರೋಡ್ ಮಾರ್ಷ್ ನಿಧನರಾಗಿದ್ದು, ಅವರ ನಿಧನಕ್ಕೆ ಶೇನ್ ವಾರ್ನ್ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಶೇನ್ ವಾರ್ನ್ ನಿಧನ ಸುದ್ದಿ ಕ್ರಿಕೆಟ್ ಲೋಕಕ್ಕೆ ಬರ ಸಿಡಿಲಿನಂತೆ ಬಂದಪ್ಪಳಿಸಿದೆ. 

ಮನೆಯಿಂದ ಹೊರಬಾರದ ಕಾರಣ ಅನುಮಾನಗೊಂಡು ತಪಾಸಣೆ ನಡೆಸಿದಾಗ ಒಳಗೆ ಶೇನ್ ವಾರ್ನ್ ನಿಶ್ಚಲ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಎಂದು ಮನೆ ಮಂದಿ ಹೇಳಿಕೊಂಡಿದ್ದಾರೆ. 

ಶೇನ್ ವಾರ್ನ್ ನಿಧನರಾಗಿರುವ ಬಗ್ಗೆ ಅವರ ಮ್ಯಾನೇಜ್ ಮೆಂಟ್ ಕಂಪೆನಿ ಸಂಕ್ಷಿಪ್ತ ಪದಗಳ ಹೇಳಿಕೆಯನ್ನು ಪ್ರಕಟ ಮಾಡಿದೆ. “ತಮ್ಮ ಮನೆಯಲ್ಲಿ ಯಾವುದೇ ಪ್ರತಿಕ್ರ್ರಿಯೆ ಇಲ್ಲದೇ ನಿಶ್ಚಲ ಸ್ಥಿತಿಯಲ್ಲಿ ಬಿದ್ದು ಕಂಡು ಬಂದಿದ್ದರು. ವೈದ್ಯಕೀಯ ಸಿಬ್ಬಂದಿಯ ಅವಿರತ ಪ್ರಯತ್ನದ ಹೊರತಾಗಿಯೂ ಅವರನ್ನು ಜೀವಂತವಾಗಿ ಉಳಿಸಲು ಸಾಧ್ಯವಾಗಿಲ್ಲ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. “ಕುಟುಂಬವು ಈ ಸಮಯದಲ್ಲಿ ಗೌಪ್ಯತೆಯನ್ನು ಕಾಪಾಡಲು ವಿನಂತಿಸುತ್ತದೆ ಮತ್ತು ಸರಿಯಾದ ಸಮಯದಲ್ಲಿ ಹೆಚ್ಚಿನ ವಿವರಗಳನ್ನು ಒದಗಿಸಲಾಗುತ್ತದೆ” ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. 

ಕಳೆದ 24 ಗಂಟೆಯ ಅವಧಿಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗೆ ಎರಗಿದ 2ನೇ ಹಠಾತ್ ನಿಧನದ ಸುದ್ದಿ ಇದಾಗಿದೆ. ಕಳೆದ ವಾರ ಗಂಭೀರ ಹೃದಯಾಘಾತಕ್ಕೆ ತುತ್ತಾಗಿದ್ದ ಆಸ್ಟ್ರೇಲಿಯಾದ ಮಾಜಿ ಆಟಗಾರ ರೋಡ್ ಮಾರ್ಷ್ ಶುಕ್ರವಾರ ಮುಂಜಾನೆ ನಿಧನರಾಗಿದ್ದರು. 

ಜಗತ್ತಿನಾದ್ಯಂತ ಕೋಟ್ಯಂತರ ಮಂದಿ ಅಭಿಮಾನಿಗಳಿಂದ “ವಾರ್ನಿ” ಎಂಬ ಅಡ್ಡ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ವಾರ್ನ್, ಅವರನ್ನು ಎದುರಿಸಿದ ಬ್ಯಾಟ್ಸ್‍ಮನ್‍ಗಳೆಲ್ಲರೂ ಅವರನ್ನು ತಾವು ಎದುರಿಸಿದ ಅತ್ಯಂತ ಕಷ್ಟದ ಬೌಲರ್ ಎಂದು ಬಣ್ಣಿಸಿದ್ದಾರೆ. 15 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಆಟವಾಡಿದ ಶೇನ್ ವಾರ್ನ್ ಅವರು 708 ಟೆಸ್ಟ್ ವಿಕೆಟ್‍ಗಳನ್ನು ಪಡೆದಿದ್ದಾರೆ. ಆ ಮೂಲಕ ಆಸ್ಟ್ರೇಲಿಯಾ ಪರವಾಗಿ ಗರಿಷ್ಠ ಟೆಸ್ಟ್ ವಿಕೆಟ್ ಉರುಳಿಸಿದ ಬೌಲರ್ ಹಾಗೂ ಸಾರ್ವಕಾಲಿಕವಾಗಿ ಗರಿಷ್ಠ ಟೆಸ್ಟ್ ವಿಕೆಟ್ ಉರುಳಿಸಿದ ವಿಶ್ವದ 2ನೇ ಬೌಲರ್ ಎನಿಸಿದ್ದಾರೆ.

ಕ್ರಿಕೆಟ್ ಕುರಿತಾದ ಜಗತ್ತಿನ ಅತ್ಯಂತ ಪ್ರಖ್ಯಾತ ಮ್ಯಾಗಝೀನ್ ವಿಸ್ಡನ್ ಹೇಳಿದ ಶತಮಾನದ ಐವರು ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಶೇನ್ ವಾರ್ನ್, 1992 ರಿಂದ 2007ರ ವರೆಗೆ ವಿಶ್ವ ಕ್ರಿಕೆಟ್‍ನಲ್ಲಿ ಸಕ್ರಿಯರಾಗಿದ್ದರು. 1999ರಲ್ಲಿ ಆಸ್ಟ್ರೇಲಿಯಾದ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದರು. ಆಸ್ಟ್ರೇಲಿಯಾ ಪರವಾಗಿ 145 ಟೆಸ್ಟ್ ಹಾಗೂ 194 ಏಕದಿನ ಪಂದ್ಯವಾಡಿದ್ದ ಅವರು ಏಕದಿನ ಕ್ರಿಕೆಟ್‍ನಲ್ಲಿ 293 ವಿಕೆಟ್ ಉರುಳಿಸಿದ್ದರು. 1992ರಲ್ಲಿ ಭಾರತ ವಿರುದ್ಧ ಸಿಡ್ನಿ ಟೆಸ್ಟ್‍ನಲ್ಲಿ ಆಡುವ ಮೂಲಕ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದ ವಾರ್ನ್ ಮರು ವರ್ಷವೇ ನ್ಯೂಜಿಲೆಂಡ್ ವಿರುದ್ಧ ವೆಲ್ಲಿಂಗ್ಟನ್‍ನಲ್ಲಿ ಆಡುವ ಮೂಲಕ ಏಕದಿನ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದರು. 

1999ರಲ್ಲಿ ಆಸ್ಟ್ರೇಲಿಯಾದ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಮಹತ್ತರ ಪಾತ್ರ ನಿಭಾಯಿಸಿದ್ದ ವಾರ್ನ್, ಪಾಕಿಸ್ತಾನ ವಿರುದ್ಧ ಫೈನಲ್ ಪಂದ್ಯದಲ್ಲಿ 33 ರನ್‍ಗೆ 4 ವಿಕೆಟ್ ಉರುಳಿಸುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು. ಕ್ರಿಕೆಟ್ ನಿಂದ ನಿವೃತ್ತರಾದ ಬಳಿಕ ಕೋಚಿಂಗ್ ಹುದ್ದೆಯಲ್ಲಿದ್ದ ಶೇನ್ ವಾರ್ನ್, ಚೊಚ್ಚಲ ಆವೃತ್ತಿಯ ಐಪಿಎಲ್‍ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಳಿಕ ಅದೇ ತಂಡಕ್ಕೆ ಮೆಂಟರ್, ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದರು ಎಂಬುದಿಲ್ಲಿ ಸ್ಮರಣೀಯ.

  • Blogger Comments
  • Facebook Comments

0 comments:

Post a Comment

Item Reviewed: ಕ್ರಿಕೆಟ್ ಲೋಕದ ದಿಗ್ಗಜ, ಅಸ್ಟ್ರೇಲಿಯಾ ತಂಡದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ದೇಹ ನಿಶ್ಚಲ ಸ್ಥಿತಿಯಲ್ಲಿ ಪತ್ತೆ : ಹೃದಯಾಘಾತದಿಂದ ನಿಧನದ ಶಂಕೆ Rating: 5 Reviewed By: karavali Times
Scroll to Top