ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ.) ಮದ್ದೂರು ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ
ಮದ್ದೂರು, ಆಗಸ್ಟ್ 24, 2026 (ಕರಾವಳಿ ಟೈಮ್ಸ್) : ಪತ್ರಿಕೋದ್ಯಮ ಕೇವಲ ವೃತ್ತಿಯಲ್ಲ, ಅದು ಸಮಾಜದ ಕಣ್ಣು. ಅನ್ಯಾಯ ಎಲ್ಲಿ ನಡೆಯುತ್ತದೆಯೋ ಅಲ್ಲಿ ಅದರ ವಿರುದ್ಧ ಧ್ವನಿ ಎತ್ತುವುದು ಪತ್ರಕರ್ತರ ಕರ್ತವ್ಯ. ನಾನು ಪತ್ರಕರ್ತ; ನನ್ನ ಜೊತೆಯಲ್ಲಿರುವವರೆಲ್ಲರೂ ಪತ್ರಕರ್ತರು. ಸಣ್ಣ-ದೊಡ್ಡ ಎಂಬ ತಾರತಮ್ಯವಿಲ್ಲದೆ ಎಲ್ಲ ಪತ್ರಕರ್ತರಿಗೂ ಸಮಾನ ಮಾನ್ಯತೆ ಮತ್ತು ಸೌಲಭ್ಯ ದೊರೆಯಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ.) ಇದರ ರಾಜ್ಯಾಧ್ಯಕ್ಷ ಹುಲಿ ಅಮರನಾಥ್ ಆಗ್ರಹಿಸಿದರು.
ಮದ್ದೂರಿನ ಪಿ ಎಲ್ ಡಿ ಬ್ಯಾಂಕಿನ ಕುವೆಂಪು ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ.) ಮದ್ದೂರು ತಾಲೂಕು ಘಟಕದ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದಿನ ಪತ್ರಿಕೆಗಳಿಗೆ ದೊರೆಯುತ್ತಿರುವ ಮಾನ್ಯತೆ ಸಣ್ಣ ಪತ್ರಿಕೆಗಳು, ಮಾಸ ಪತ್ರಿಕೆಗಳು, ಪಾಕ್ಷಿಕ ಪತ್ರಿಕೆಗಳು ಹಾಗೂ ಯೂಟ್ಯೂಬ್ ಸೇರಿದಂತೆ ಡಿಜಿಟಲ್ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಸಮರ್ಪಕವಾಗಿ ದೊರೆಯುತ್ತಿಲ್ಲ. ಗ್ರಾಮೀಣ ಭಾಗದ ಸಮಸ್ಯೆಗಳು, ರೈತರ ಹೋರಾಟಗಳು ಹಾಗೂ ಜನ ಸಾಮಾನ್ಯರ ಸಂಕಷ್ಟಗಳನ್ನು ಗುರುತಿಸಿ ಸಮಾಜದ ಮುಂದೆ ತರುವಲ್ಲಿ ಸಣ್ಣ ಪತ್ರಿಕೆಗಳು ಮತ್ತು ಡಿಜಿಟಲ್ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ ಎಂದರು.
ನಾನು ಮೂರು ಪತ್ರಿಕೆಗಳನ್ನು ನಡೆಸುತ್ತಿದ್ದೇನೆ. ಅವುಗಳ ಬೆಳವಣಿಗೆಯಲ್ಲಿ ವರದಿಗಾರರ ಶ್ರಮ ಬಹಳ ದೊಡ್ಡದು. ಪತ್ರಿಕೆ ಅಥವಾ ಮಾಧ್ಯಮದ ಗಾತ್ರಕ್ಕಿಂತ ಪತ್ರಕರ್ತ ನೀಡುವ ಸುದ್ದಿಯ ಗುಣಮಟ್ಟ ಮತ್ತು ಸಮಾಜಕ್ಕೆ ಅದರ ಕೊಡುಗೆ ಮುಖ್ಯವಾಗಬೇಕು. ಸರ್ಕಾರ ಎಲ್ಲ ವರ್ಗದ ಅರ್ಹ ಪತ್ರಕರ್ತರನ್ನು ಗುರುತಿಸಿ ಗುರುತಿನ ಚೀಟಿ, ಆರೋಗ್ಯ ವಿಮೆ, ಬಸ್ ಪಾಸ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ನಮಗೆ ಜಾಹೀರಾತಿಗಿಂತ ಪತ್ರಕರ್ತರೆಂಬ ಮಾನ್ಯತೆ ಮುಖ್ಯ ಎಂದವರು ಹೇಳಿದರು.
ಪತ್ರಕರ್ತರ ನಡುವೆ ಸಂಘಟನೆ, ಮಾಧ್ಯಮ ಅಥವಾ ಪತ್ರಿಕೆಯ ಆಧಾರದಲ್ಲಿ ತಾರತಮ್ಯ ಮಾಡಬಾರದು. ಊಹಾ ಪೆÇೀಹಗಳಿಗೆ ಕಿವಿಗೊಡದೆ ಪತ್ರಕರ್ತರು ತಮ್ಮ ವೃತ್ತಿಪರ ಕೆಲಸವನ್ನು ಪ್ರಾಮಾಣಿಕವಾಗಿ ಮುಂದುವರಿಸಬೇಕು. ಪತ್ರಕರ್ತರ ನ್ಯಾಯಯುತ ಹಕ್ಕುಗಳಿಗಾಗಿ ಸಂಘದ ಹೋರಾಟ ನಿರಂತರವಾಗಿರುತ್ತದೆ. ಈ ಹೋರಾಟಕ್ಕೆ ಎಲ್ಲ ಪತ್ರಕರ್ತರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಪತ್ರಕರ್ತರು ಸ್ಥಳೀಯ ಸಮಸ್ಯೆಗಳಿಗೆ ಧ್ವನಿಯಾಗಬೇಕು : ನ.ಲಿ. ಕೃಷ್ಣ
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮಾರ್ಗದರ್ಶಕ ಹಾಗೂ ಪತ್ರಕರ್ತ ನ.ಲಿ. ಕೃಷ್ಣ ಮಾತನಾಡಿ, ಪತ್ರಕರ್ತರ ಸಂಘಟನೆಗಳಲ್ಲಿ ಭಿನ್ನಾಭಿಪ್ರಾಯ ಮತ್ತು ತಾರತಮ್ಯಗಳು ಹಿಂದಿನಿಂದಲೂ ಇವೆ. ಅವುಗಳಿಗೆ ಹೆಚ್ಚಿನ ಮಹತ್ವ ನೀಡದೆ ಗುರಿ, ಆಶಯ ಮತ್ತು ವೃತ್ತಿಪರ ಬದ್ಧತೆಯತ್ತ ಗಮನಹರಿಸಬೇಕು ಎಂದರು.
ಹುಲಿ ಅಮರನಾಥ್ ಅವರು ವಿದ್ಯಾರ್ಥಿ ದೆಸೆಯಿಂದಲೇ ಪತ್ರಿಕೋದ್ಯಮದ ಬಗ್ಗೆ ಆಸಕ್ತಿ ಹೊಂದಿ, ಹಲವು ಸವಾಲುಗಳನ್ನು ಎದುರಿಸಿ ರಾಜ್ಯಮಟ್ಟದಲ್ಲಿ ಪತ್ರಕರ್ತರ ಸಂಘಟನೆ ಕಟ್ಟಿ ಪತ್ರಕರ್ತರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ ಎಂದರು.
ಪತ್ರಿಕೋದ್ಯಮ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಗ್ರಾಮೀಣ ಪತ್ರಕರ್ತರು ಸ್ಥಳೀಯ ಸಮಸ್ಯೆಗಳನ್ನು ಗುರುತಿಸಿ, ಅಧಿಕಾರಿಗಳು ಮತ್ತು ಸರ್ಕಾರದ ಗಮನಕ್ಕೆ ತರುವ ಮೂಲಕ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಸುದ್ದಿಯ ಮೂಲವನ್ನು ರಕ್ಷಿಸಬೇಕು. ಸುದ್ದಿಯ ವಾಸನೆ ಹಿಡಿದು ಅದರ ಬೆನ್ನತ್ತಿ ವಾಸ್ತವಾಂಶಗಳನ್ನು ಜನರ ಮುಂದಿಡಬೇಕು ಎಂದವರು ಸಲಹೆ ನೀಡಿದರು.
ಹೊಸದಾಗಿ ಪತ್ರಿಕೋದ್ಯಮಕ್ಕೆ ಬರುವವರಿಗೆ ಕಾರ್ಯಾಗಾರ ಮತ್ತು ತರಬೇತಿ ನೀಡಬೇಕು. ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಜನರಿಗೆ ತಲುಪಿಸುವುದರ ಜೊತೆಗೆ ಸರ್ಕಾರದ ಲೋಪದೋಷಗಳನ್ನೂ ಪಾರದರ್ಶಕವಾಗಿ ಎತ್ತಿ ಹಿಡಿಯಬೇಕು. ಹಳ್ಳಿಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪೆÇ್ರೀತ್ಸಾಹಿಸುವ ಕೆಲಸವನ್ನು ಪತ್ರಕರ್ತರು ಮಾಡಬೇಕು ಎಂದು ತಿಳಿಸಿದರು.
ಸಾಧಕರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ಪತ್ರಕರ್ತ ಹಾಗೂ ಪತ್ರಿಕಾ ಮಾರ್ಗದರ್ಶಕ ಅಣ್ಣೂರು ಲಕ್ಷ್ಮಣ್, ಖ್ಯಾತ ಪುರೋಹಿತರು, ಆಗಮಿಕರು ಹಾಗೂ ಜ್ಯೋತಿಷಿ ರಾಘವೇಂದ್ರ ರಾವ್, ರಾಮಾನುಜಾಚಾರ್ಯರ 40 ಅಡಿ ಬೃಹತ್ ಪ್ರತಿಮೆ ಸ್ಥಾಪನೆಯ ರೂವಾರಿ ಹಾಗೂ ರೈತ ಕೃಷಿ ಕಲ್ಯಾಣ ಯೋಜನೆ ಅಧ್ಯಕ್ಷ ಕಲ್ಕಿ ಜನಾರ್ದನ್ ಅವರನ್ನು ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ. ಕೃಷ್ಣ, ನ.ಲಿ. ಕೃಷ್ಣ, ಕಲ್ಕಿ ಜನಾರ್ದನ್, ರಾಘವೇಂದ್ರ ರಾವ್, ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ ಇದರ ಶಿವಲಿಂಗಯ್ಯ, ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಎಚ್.ಜಿ. ಪ್ರಭುಲಿಂಗ, ಎಸ್. ದಯಾನಂದ್, ಕೆ.ಆರ್. ಪೇಟೆ ತಾಲೂಕು ಅಧ್ಯಕ್ಷ ಲೋಕೇಶ್, ಪಾಂಡವಪುರ ತಾಲೂಕು ಘಟಕದ ಅಧ್ಯಕ್ಷ ಮದನ್, ಮಂಡ್ಯ ಪ್ರಧಾನ ಕಾರ್ಯದರ್ಶಿ ಅನಿಲ್, ರೈತ ಮುಖಂಡ ಸೋ.ಸಿ. ಪ್ರಕಾಶ್, ಸಂಪನ್ಮೂಲ ವ್ಯಕ್ತಿ ಕ್ಯಾತಘಟ್ಟ ರವಿಕುಮಾರ್, ರೈತ ಸಂಘದ ತಾಲೂಕು ಅಧ್ಯಕ್ಷ ಉಮೇಶ್ ವಳಗೆರೆಹಳ್ಳಿ, ಪ್ರಧಾನ ಕಾರ್ಯದರ್ಶಿ ವಿನೋದ್ ಬಾಬು, ದಲಿತ ಸಂಘಟನೆಯ ಮುಖಂಡ ಮರಳಿಗ ಶಿವರಾಜ್ ಸೇರಿದಂತೆ ರೈತ, ಕಾರ್ಮಿಕ, ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಮದ್ದೂರು ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ
ಮದ್ದೂರು ತಾಲೂಕು ಘಟಕದ ಅಧ್ಯಕ್ಷರಾಗಿ ಡಾ. ಬಿ. ಯೋಗೇಶ್, ಉಪಾಧ್ಯಕ್ಷರಾಗಿ ಮಹಾದೇವಪ್ಪ ಹಾಗೂ ಟಿ.ಪಿ. ಮನೋಹರ್ ಗೌಡ (ತಿಪ್ಪೂರು ಮನು), ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರಯ್ಯ, ಖಜಾಂಚಿಯಾಗಿ ಕವಿತಾ ವೈ.ವಿ., ಕಾರ್ಯದರ್ಶಿಯಾಗಿ ರಾಜಶೇಖರ್, ಸಹ ಕಾರ್ಯದರ್ಶಿಯಾಗಿ ನಾಗೇಂದ್ರ, ಸಂಘಟನಾ ಕಾರ್ಯದರ್ಶಿಯಾಗಿ ಜನಾರ್ದನ್ ಹೂತಗೆರೆ, ಸದಸ್ಯರಾಗಿ ಅರುಣೇಶ್ ಸಿ.ಜಿ., ಜಗದೀಶ್, ಲೋಕೇಶ್, ಗಿರೀಶ್, ಮನೋಜ್, ಈರೇಗೌಡ, ದೇವರಾಜು, ಸುರೇಶ್ ಮತ್ತು ಸಂತೋಷ್ ಅವರು ಆಯ್ಕೆಯಾದರು.
ವರದಿ : ಜನಾರ್ದನ್ ಹೂತಗೆರೆ





















0 comments:
Post a Comment