ಬಾಲ್ಕನಿ ಕುಸಿತದಲ್ಲಿ ತಲೆಗೆ ಗಂಭೀರ ಏಟಾಗಿದ್ದ ಶಮ್ಮಾಸ್ ಚಿಕಿತ್ಸೆಗೆ ಸ್ಪಂದಿಸದೆ ಮೃತ್ಯು, ಕಟ್ಟಡ ಮಾಲಕ ಹಾಗೂ ಕಾರ್ಯಕ್ರಮ ಆಯೋಜಕರ ವಿರುದ್ದ ಪ್ರಕರಣ ದಾಖಲು - Karavali Times ಬಾಲ್ಕನಿ ಕುಸಿತದಲ್ಲಿ ತಲೆಗೆ ಗಂಭೀರ ಏಟಾಗಿದ್ದ ಶಮ್ಮಾಸ್ ಚಿಕಿತ್ಸೆಗೆ ಸ್ಪಂದಿಸದೆ ಮೃತ್ಯು, ಕಟ್ಟಡ ಮಾಲಕ ಹಾಗೂ ಕಾರ್ಯಕ್ರಮ ಆಯೋಜಕರ ವಿರುದ್ದ ಪ್ರಕರಣ ದಾಖಲು - Karavali Times

728x90

27 September 2026

ಬಾಲ್ಕನಿ ಕುಸಿತದಲ್ಲಿ ತಲೆಗೆ ಗಂಭೀರ ಏಟಾಗಿದ್ದ ಶಮ್ಮಾಸ್ ಚಿಕಿತ್ಸೆಗೆ ಸ್ಪಂದಿಸದೆ ಮೃತ್ಯು, ಕಟ್ಟಡ ಮಾಲಕ ಹಾಗೂ ಕಾರ್ಯಕ್ರಮ ಆಯೋಜಕರ ವಿರುದ್ದ ಪ್ರಕರಣ ದಾಖಲು

ಮಂಗಳೂರು, ಸೆಪ್ಟೆಂಬರ್ 28, 2026 (ಕರಾವಳಿ ಟೈಮ್ಸ್) : ಎಮ್ಮೆಕೆರೆ ಬಳಿ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ಸೇರಿದ್ದ ಸಭಾಂಗಣದ ಬಾಲ್ಕನಿ ಕುಸಿದು ಬಿದ್ದ ಘಟನೆಯಲ್ಲಿ ಗಾಯಗೊಂಡ ಐವರ ಪೈಕಿ ತಲೆಗೆ ಗಂಭೀರ ಗಾಯಗೊಂಡು ಬ್ರೈನ್ ಡೆಡ್ ಆಗಿದ್ದ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಸೆ 26 ರಂದು ರಾತ್ರಿ ಮೃತಪಟ್ಟಿದ್ದಾನೆ. 

ಮೃತ ವಿದ್ಯಾರ್ಥಿಯನ್ನು ಮೂಲತಃ ಹಳೆಯಂಗಡಿ-ಸಾಗ್ ನಿವಾಸಿ, ಪ್ರಸ್ತುತ ಜೆಪ್ಪು-ಮಾರ್ನಮಿಕಟ್ಟೆ ಡೈಮಂಡ್ ಸಿಟಿ ಅಪಾರ್ಟ್ ಮೆಂಟಿನಲ್ಲಿ ವಾಸವಾಗಿರುವ ಮಹಮ್ಮದ್ ಇಲಿಯಾಸ್ ಮೊಯಿದಿನಬ್ಬ ಅವರ ಪುತ್ರ, ಮಂಗಳೂರು ಸಂತ ಎಲೋಶಿಯಸ್ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಮೊಯಿದಿನ್ ಶಮ್ಮಾಸ್ (16) ಎಂದು ಹೆಸರಿಸಲಾಗಿದೆ. 

ಘಟನೆಯಲ್ಲಿ ಗಾಯಗೊಂಡಿರುವ ಸೂರಿಂಜೆ ನಿವಾಸಿ ಹಬೀಬ್ ಅಹಮ್ಮದ್ ಅವರ ಪುತ್ರ ಮಹಮ್ಮದ್ ಶನಾನ್ ಅಹಮ್ಮದ್ (18), ಅಡ್ಯಾರ್ ನಿವಾಸಿ ಸುಲೈಮಾನ್ ಅವರ ಪುತ್ರ ಹನೀಫ್ (23), ಕಾವೂರು-ಗಾಂಧಿನಗರ ನಿವಾಸಿ ಫಾತಿಮಾ ಅವರ ಪುತ್ರ ದಾವೂದ್ ಫರ್ಸೀನ್ ಅಹಮ್ಮದ್ (18) ಹಾಗೂ ಕಸಬ-ಬೆಂಗ್ರೆ ನಿವಾಸಿ ಮಹಮ್ಮದ್ ಶಾಲಿ ಅವರ ಪುತ್ರ ಮಹಮ್ಮದ್ ಶಕೀಲ್ ಹುಸೈನ್ (18) ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. 

ಘಟನೆಗೆ ಸಂಬಂಧಿಸಿದಂತೆ ಮೃತ ವಿದ್ಯಾರ್ಥಿಯ ತಂದೆ ಮೊಹಮ್ಮದ್ ಇಲಿಯಾಸ್ ಅವರು ಘಟನೆಗೆ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ನೀಡಿದ ದೂರಿನ ಆಧಾರದಲ್ಲಿ ಕಟ್ಟಡದ ಮಾಲಿಕ ಪರೀಕ್ಷಿತ್ ರೈ ಹಾಗೂ ಕಾರ್ಯಕ್ರಮ ಆಯೋಜಕ ನ್ಯಾಯವಾದಿ ದಿನಕರ್ ಶೆಟ್ಟಿ ಎಂಬವರ ವಿರುದ್ದ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಂiÀiಲ್ಲಿ ಪ್ರಕರಣ ದಾಖಲಾಗಿದೆ. 

ಸೆ 26 ರಂದು ಮಧ್ಯಾಹ್ನ ಸುಮಾರು 2.50ರ ವೇಳೆಗೆ ಎಮ್ಮೆಕೆರೆಯ ರಾಮ ಲಕ್ಷ್ಮಿ ನಾರಾಯಣ್ ಸಭಾಂಗಣದಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುತ್ತಿತ್ತು. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿದ್ದರು. ವಿದ್ಯಾರ್ಥಿಗಳು ಸಭಾಂಗಣ ಪ್ರವೇಶಿಸಲು ಮೆರವಣಿಗೆಯಲ್ಲಿ ಬರುತ್ತಿದ್ದ ವೇಳೆ, ಕೆಲವರು ಮೊದಲ ಮಹಡಿಯ ಬಾಲ್ಕನಿಯಲ್ಲಿ ನಿಂತು ವೀಕ್ಷಿಸುತ್ತಿದ್ದರು. ಇದೇ ವೇಳೆ ಕಟ್ಟಡದ ಕೆಳಭಾಗದಲ್ಲಿ ನಿಂತು ಮೆರವಣಿಗೆ ವೀಕ್ಷಿಸುತ್ತಿದ್ದ ಶಮ್ಮಾಸ್ ಅವರ ಮೇಲೆ ಮೊದಲ ಮಹಡಿಯ ಬಾಲ್ಕನಿ ಏಕಾಏಕಿ ಕುಸಿದು ಬಿದ್ದಿದೆ. ಶಮ್ಮಾಸ್ ಅವರ ತಲೆ, ಭುಜ ಹಾಗೂ ಎರಡೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಸ್ಥಳದಲ್ಲಿದ್ದ ಇತರ ವಿದ್ಯಾರ್ಥಿಗಳು ಅವರನ್ನು ಆಸ್ಪತ್ರೆಗೆ ಸಾಗಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ವೇಳೆ ಶಮ್ಮಾಸ್ ಮೃತಪಟ್ಟಿದ್ದಾರೆ. 

ಕಟ್ಟಡವು ಶಿಥಿಲಾವಸ್ಥೆಯಲ್ಲಿದ್ದರೂ ಯಾವುದೇ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳದೆ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿದೆ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳದೆ ಹಾಗೂ ಕಟ್ಟಡದ ದುರ್ಬಲ ಸ್ಥಿತಿಯ ಬಗ್ಗೆ ಎಚ್ಚರಿಕೆ ನೀಡದೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಮ್ಮಾಸ್ ಅವರ ತಂದೆ ನೀಡಿದ ದೂರಿನಂತೆ ಬಿ ಎನ್ ಎಸ್ ಸೆಕ್ಷನ್ 125(ಎ), 125(ಬಿ), 290 ಮತ್ತು 106(1)ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಬಾಲ್ಕನಿ ಕುಸಿತದಲ್ಲಿ ತಲೆಗೆ ಗಂಭೀರ ಏಟಾಗಿದ್ದ ಶಮ್ಮಾಸ್ ಚಿಕಿತ್ಸೆಗೆ ಸ್ಪಂದಿಸದೆ ಮೃತ್ಯು, ಕಟ್ಟಡ ಮಾಲಕ ಹಾಗೂ ಕಾರ್ಯಕ್ರಮ ಆಯೋಜಕರ ವಿರುದ್ದ ಪ್ರಕರಣ ದಾಖಲು Rating: 5 Reviewed By: karavali Times
Scroll to Top