ಬಿ.ಸಿ.ರೋಡು : ಕಲಾಭಿಮಾನಿಗಳ ಮನಸೂರೆಗೊಂದ ಪುಟಾಣಿಗಳ ಯಕ್ಷಗಾನ ತಾಳಮದ್ದಳೆ ಪ್ರಸ್ತುತಿ - Karavali Times ಬಿ.ಸಿ.ರೋಡು : ಕಲಾಭಿಮಾನಿಗಳ ಮನಸೂರೆಗೊಂದ ಪುಟಾಣಿಗಳ ಯಕ್ಷಗಾನ ತಾಳಮದ್ದಳೆ ಪ್ರಸ್ತುತಿ - Karavali Times

728x90

14 October 2026

ಬಿ.ಸಿ.ರೋಡು : ಕಲಾಭಿಮಾನಿಗಳ ಮನಸೂರೆಗೊಂದ ಪುಟಾಣಿಗಳ ಯಕ್ಷಗಾನ ತಾಳಮದ್ದಳೆ ಪ್ರಸ್ತುತಿ

ಬಂಟ್ವಾಳ, ಅಕ್ಟೋಬರ್ 14, 2026 (ಕರಾವಳಿ ಟೈಮ್ಸ್) : ಬಿ ಸಿ ರೋಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಸ್ವರ್ಣ ಅಕಾಡೆಮಿ ಲರ್ನಿಂಗ್ ಸೆಂಟರ್ ಪುಟಾಣಿ ಮಕ್ಕಳಿಂದ ಯಕ್ಷಗುರು ನರಸಿಂಹ ಮಯ್ಯ ಅವರ ನಿರ್ದೇಶನದಲ್ಲಿ ನಡೆದ ‘ಕದಂಬ ಕೌಶಿಕೆ’ ಯಕ್ಷಗಾನ ತಾಳಮದ್ದಳೆ ಪ್ರಸ್ತುತಿ ಕಲಾಭಿಮಾನಿಗಳ ಮನಸೂರೆಗೊಂಡಿತು.

ತಾಳಮದ್ದಳೆಯಲ್ಲಿ ಮಕ್ಕಳ ಮಾತುಗಾರಿಕೆ ಆಕರ್ಷಕವಾಗಿದ್ದು, ಗುರುಗಳು ನೀಡಿದ ತರಬೇತಿ ಹಾಗೂ ಅಭ್ಯಾಸದ ಕ್ರಮಗಳು ಪ್ರಶಂಸನೀಯವಾಗಿದ್ದವು. ಶಿಕ್ಷಣ ಸಂಸ್ಥೆಯ ವ್ಯವಸ್ಥೆಯೂ ಅಚ್ಚುಕಟ್ಟಾಗಿತ್ತು. ಸಾಲು ಸಾಲಾಗಿ ಶಿಸ್ತಿನಿಂದ ಸಾಗುವುದು, ವೇದಿಕೆಯಿಂದ ಪ್ರೇಕ್ಷಕರಿಗೆ ನಮಸ್ಕರಿಸುವುದು ಸೇರಿದಂತೆ ಪ್ರತಿಯೊಂದು ಹಂತದಲ್ಲಿಯೂ ಮಕ್ಕಳ ಶಿಸ್ತು, ಸಂಯಮ ಹಾಗೂ ತಮಗೆ ವಹಿಸಿದ ಪಾತ್ರಗಳ ಬಗೆಗಿನ ಗಂಭೀರತೆ ಎದ್ದು ಕಾಣುತ್ತಿತ್ತು.

ಯಕ್ಷಗಾನದಲ್ಲಿ ವೇಷ ಭೂಷಣ ಮತ್ತು ಕುಣಿತ ಪ್ರಮುಖ ಆಕರ್ಷಣೆಯಾದರೆ, ತಾಳಮದ್ದಳೆಯಲ್ಲಿ ಮಾತುಗಾರಿಕೆ, ಅರ್ಥಗಾರಿಕೆ ಹಾಗೂ ಪಾತ್ರಾಭಿವ್ಯಕ್ತಿಯೇ ಮುಖ್ಯ. ಈ ಸವಾಲನ್ನು ಮಕ್ಕಳು ಸಮರ್ಥವಾಗಿ ನಿಭಾಯಿಸಿದ್ದು, ತಮ್ಮ ಪಾತ್ರಗಳಿಗೆ ತಕ್ಕ ಮಾತುಗಾರಿಕೆ, ಭಾವ ಪ್ರಕಟನೆ ಮತ್ತು ವಿಚಾರ ಮಂಡನೆಯ ಮೂಲಕ ಪಾತ್ರಗಳಿಗೆ ಜೀವ ತುಂಬಿದರು.

ಮಕ್ಕಳ ತಾಳಮದ್ದಳೆ ಎಂಬ ಭಾವನೆಯೊಂದಿಗೆ ಪ್ರೇಕ್ಷಕರು ಕುಳಿತಿದ್ದರೂ, ವೇದಿಕೆಯಲ್ಲಿ ಮಕ್ಕಳು ಮಕ್ಕಳಾಗಿ ಕಾಣದೆ, ಪ್ರಸಂಗದ ಪಾತ್ರಧಾರಿಗಳಾಗಿಯೇ ಮೂಡಿಬಂದದ್ದು ವಿಶೇಷವಾಗಿತ್ತು. ಪಾತ್ರಗಳ ಸ್ವರೂಪವನ್ನು ಅರಿತು, ಅದಕ್ಕೆ ತಕ್ಕಂತೆ ಗಂಭೀರವಾಗಿ ಮಾತನಾಡಿದ ಅವರ ಶೈಲಿ ಮೆಚ್ಚುಗೆಗೆ ಪಾತ್ರವಾಯಿತು.

ಮಕ್ಕಳಲ್ಲಿರುವ ಸುಪ್ತ ಕಲಾ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಸೂಕ್ತ ತರಬೇತಿ ನೀಡಿ ವೇದಿಕೆಗೆ ಪರಿಚಯಿಸಿದ ಯಕ್ಷಗುರು ನರಸಿಂಹ ಮಯ್ಯ ಅವರ ಶ್ರಮಕ್ಕೆ ಶ್ಲಾಘನೆ ವ್ಯಕ್ತವಾಯಿತು. 

  • Blogger Comments
  • Facebook Comments

0 comments:

Post a Comment

Item Reviewed: ಬಿ.ಸಿ.ರೋಡು : ಕಲಾಭಿಮಾನಿಗಳ ಮನಸೂರೆಗೊಂದ ಪುಟಾಣಿಗಳ ಯಕ್ಷಗಾನ ತಾಳಮದ್ದಳೆ ಪ್ರಸ್ತುತಿ Rating: 5 Reviewed By: karavali Times
Scroll to Top