ಐತಿಹಾಸಿಕ ಕನ್ನಡ ತಾಣಗಳ ಪುನರುಜ್ಜೀವನ ಹಾಗೂ ಕನ್ನಡದ ಡಿಜಿಟಲ್ ಮತ್ತು ತಂತ್ರಜ್ಞಾನ ಬೆಳವಣಿಗೆಗೆ ಸರ್ಕಾರ ಒತ್ತು : ಸಚಿವ ಖಾದರ್ - Karavali Times ಐತಿಹಾಸಿಕ ಕನ್ನಡ ತಾಣಗಳ ಪುನರುಜ್ಜೀವನ ಹಾಗೂ ಕನ್ನಡದ ಡಿಜಿಟಲ್ ಮತ್ತು ತಂತ್ರಜ್ಞಾನ ಬೆಳವಣಿಗೆಗೆ ಸರ್ಕಾರ ಒತ್ತು : ಸಚಿವ ಖಾದರ್ - Karavali Times

728x90

1 November 2026

ಐತಿಹಾಸಿಕ ಕನ್ನಡ ತಾಣಗಳ ಪುನರುಜ್ಜೀವನ ಹಾಗೂ ಕನ್ನಡದ ಡಿಜಿಟಲ್ ಮತ್ತು ತಂತ್ರಜ್ಞಾನ ಬೆಳವಣಿಗೆಗೆ ಸರ್ಕಾರ ಒತ್ತು : ಸಚಿವ ಖಾದರ್

ರಾಜ್ಯೋತ್ಸವ ಕೇವಲ ಸರ್ಕಾರಿ ಕಾರ್ಯಕ್ರಮ ಎಂದು ಭಾವಿಸದೆ ಪ್ರತಿಯೊಬ್ಬರು ಮನೆಯ ಹಬ್ಬವನ್ನಾಗಿ ಆಚರಿಸಲು ಸಚಿವರ ಕರೆ 


ಮಂಗಳೂರು, ನವಂಬರ್ 01, 2026 (ಕರಾವಳಿ ಟೈಮ್ಸ್) : ಕನ್ನಡವೆಂದರೆ ಅದು ಕೇವಲ  ಒಂದು ಭಾಷೆಯ ಹೆಸರಲ್ಲ, ಅದೊಂದು ಮಂತ್ರ, ಅದೊಂದು ಮಹಾಶಕ್ತಿ. ಕನ್ನಡವೆಂದರೆ ನಮ್ಮ ಅಸ್ಮಿತೆ, ಈ ನಮ್ಮ ಮಣ್ಣಿನ ಕಂಪು ಮಾತ್ರವಲ್ಲ ಬದುಕಿನ ಪ್ರತಿ ಹೆಜ್ಜೆಯಲ್ಲೂ ಬೆಸೆದುಕೊಂಡಿರುವ ಆತ್ಮೀಯತೆಯ ನಂಟು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಡಾ ಯು ಟಿ ಖಾದರ್ ಹೇಳಿದರು.

ದ.ಕ. ಜಿಲ್ಲಾಡಳಿತ ವತಿಯಿಂದ ನಗರದ ನೆಹರು ಮೈದಾನದಲ್ಲಿ ನ 1 ರಂದು ನಡೆದ 71ನೇ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಧ್ವಜಾರೋಹಣಗೈದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರನ್ನು ಗೌರವಿಸಿ ಮಾತನಾಡಿದ ಅವರು, ಪ್ರಪಂಚದ ಸಾವಿರಾರು ಭಾಷೆಗಳ ನಡುವೆ, ಎರಡು ಸಾವಿರ ವರ್ಷಗಳಿಗೂ ಮೀರಿದ ಇತಿಹಾಸ ಮತ್ತು ಶ್ರೀಮಂತ ಸಾಹಿತ್ಯಿಕ ಪರಂಪರೆಯನ್ನು ಹೊಂದಿ, ಭಾರತ ಸರ್ಕಾರದ ಶಾಸ್ತ್ರೀಯ ಭಾಷೆಯ ಗೌರವಕ್ಕೆ ಪಾತ್ರವಾಗಿರುವ ಕೆಲವೇ ಕೆಲವು ಭಾಷೆಗಳಲ್ಲಿ ನಮ್ಮ ಹೆಮ್ಮೆಯ ಕನ್ನಡವೂ ಒಂದು ಎಂದರು. 

ಆಲೂರು ವೆಂಕಟರಾಯರಿಂದ ಹಿಡಿದು ಕನ್ನಡ ಏಕೀಕರಣದ ಹೋರಾಟಗಾರರವರೆಗೆ, ಬಸವಣ್ಣನಿಂದ ಕನಕದಾಸರವರೆಗೆ, ಪಂಪನಿಂದ ಕುವೆಂಪುವರೆಗೆ ಪ್ರತಿಯೊಂದು ತಲೆಮಾರೂ ಕನ್ನಡದ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡಿದೆ. ಕನ್ನಡಕ್ಕೆ ದೊರೆತಿರುವ ಎಂಟು ಜ್ಞಾನಪೀಠ ಪ್ರಶಸ್ತಿಗಳು ನಮ್ಮ ಸಾಹಿತ್ಯಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿವೆ ಎಂದ ಅವರು, ಕನ್ನಡಕ್ಕೆ ಕೊಡುಗೆ ನೀಡಿದವರು ಕೇವಲ ಕವಿಗಳೂ ಸಾಹಿತಿಗಳೂ, ಹೋರಾಟಗಾರರು ಮಾತ್ರವಲ್ಲ. ಕನ್ನಡದಲ್ಲಿ ಮೊದಲ ಅಕ್ಷರ ಬರೆದ ಮಗು, ತನ್ನ ಮಗುವಿಗೆ ಕನ್ನಡ ಕಲಿಸುವ ತಾಯಿ, ಕನ್ನಡದಲ್ಲಿ ಪಾಠ ಮಾಡುವ ಶಿಕ್ಷಕ, ಕನ್ನಡದಲ್ಲಿ ಸಂಶೋಧನೆ ನಡೆಸುವ ವಿಜ್ಞಾನಿ, ಕನ್ನಡದಲ್ಲಿ ಆಡಳಿತ ನಡೆಸುವ ಅಧಿಕಾರಿ, ಕನ್ನಡದ ನೆಲ-ನುಡಿಯನ್ನು ಉಳಿಸಲು ಶ್ರಮಿಸುವ ಪ್ರತಿಯೊಬ್ಬ ನಾಗರಿಕನೂ ಕನ್ನಡದ ಬೆಳವಣಿಗೆಯ ಪಾಲುದಾರನೇ ಆಗಿದ್ದಾನೆ ಎಂದರು. 

ಇಂದು ಕೃತಕ ಬುದ್ಧಿಮತ್ತೆ, ತಂತ್ರಜ್ಞಾನ ಮತ್ತು ಡಿಜಿಟಲ್ ಶಿಕ್ಷಣ ಜಗತ್ತಿನಲ್ಲಿ ನಾವಿದ್ದೇವೆ. ಈ ಹೊಸ ಜಗತ್ತಿನಲ್ಲಿ ಕನ್ನಡವೂ ಸಕ್ರಿಯವಾಗಿ ಭಾಗವಹಿಸಬೇಕು. ಕನ್ನಡದ ಪದಸಂಪತ್ತು, ಉಪಭಾಷೆಗಳು, ಜನಪದ ಜ್ಞಾನ ಮತ್ತು ಸಾಹಿತ್ಯವನ್ನು ಡಿಜಿಟಲ್ ರೂಪದಲ್ಲಿ ಸಂರಕ್ಷಿಸಬೇಕು. ಕನ್ನಡದಲ್ಲಿ ಗುಣಮಟ್ಟದ ವಿಜ್ಞಾನ ಸಾಹಿತ್ಯ, ತಾಂತ್ರಿಕ ಸಂಪನ್ಮೂಲಗಳು ಮತ್ತು ಶೈಕ್ಷಣಿಕ ವಿಷಯಗಳನ್ನು ರೂಪಿಸಬೇಕು. ಕನ್ನಡವು ಕೇವಲ ತಂತ್ರಜ್ಞಾನವನ್ನು ಬಳಸುವ ಭಾಷೆಯಾಗದೆ, ತಂತ್ರಜ್ಞಾನದ ಬೆಳವಣಿಗೆಗೆ ಕೊಡುಗೆ ನೀಡುವ ಭಾಷೆಯಾಗಬೇಕು. ಆದರೆ ಭಾಷೆಯ ಭವಿಷ್ಯವನ್ನು ತಂತ್ರಜ್ಞಾನವೊಂದೇ ನಿರ್ಧರಿಸುವುದಿಲ್ಲ. ಅದನ್ನು ಬಳಸುವ ಜನರ ಜೀವನಶೈಲಿ ಕೂಡ ನಿರ್ಧರಿಸುತ್ತದೆ ಎಂದರು. 

ಕರ್ನಾಟಕದ ನಾಡಧ್ವಜಕ್ಕೆ ಅಧಿಕೃತ ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ಸಚಿವ ಸಂಪುಟದ ನಿರ್ಣಯ, ಸರ್ವಪಕ್ಷಗಳ ಒಮ್ಮತ, ಕೇಂದ್ರ ಸರ್ಕಾರದೊಂದಿಗೆ ಸಂವಾದ ಹಾಗೂ ರಾಜ್ಯವ್ಯಾಪಿ ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡುವ ಸಂಕಲ್ಪವನ್ನು ಸರ್ಕಾರ ಹೊಂದಿದೆ ಎಂದ ಸಚಿವ ಖಾದರ್, ಇದರ ಮುಂದುವರಿದ ಭಾಗವಾಗಿ 31 ಜಿಲ್ಲೆಗಳನ್ನು ಒಳಗೊಂಡ ನಾಡಧ್ವಜ ಸಂಕಲ್ಪ ಯಾತ್ರೆ, ವಿಶ್ವ ಕನ್ನಡಿಗರ ಸಹಭಾಗಿತ್ವ, ಕೇಂದ್ರ ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶ ಕಲ್ಪಿಸುವ ಪ್ರಯತ್ನ, ಕನ್ನಡಿಗರ ಉದ್ಯೋಗಾವಕಾಶಗಳಿಗೆ ಆದ್ಯತೆ, ಐತಿಹಾಸಿಕ ಕನ್ನಡ ತಾಣಗಳ ಪುನರುಜ್ಜೀವನ ಹಾಗೂ ಕನ್ನಡದ ಡಿಜಿಟಲ್ ಮತ್ತು ತಂತ್ರಜ್ಞಾನ ಬೆಳವಣಿಗೆಗೆ ಸರ್ಕಾರ ಒತ್ತು ನೀಡುತ್ತಿದೆ ಎಂದರು. 

ಈ ಸಂದರ್ಭದಲ್ಲಿ ಮತ್ತೊಂದು ವಿಚಾರವನ್ನು ಒತ್ತಿಹೇಳಲು ಬಯಸುತ್ತೇನೆ. ನಮಗೆ ನಮ್ಮ ಭಾಷೆಯ ಬಗ್ಗೆ ಅಪಾರ ಅಭಿಮಾನ ಇರಬೇಕು. ಆದರೆ ಭಾಷಾಭಿಮಾನವೆಂಬುದು ಸಂಕುಚಿತ ಮನೋಭಾವನೆಯ ಗೋಡೆಯಾಗಬಾರದು, ಅದು ಜ್ಞಾನ ವೈಶಾಲ್ಯತೆಯ ಕಿಟಕಿಯಾಗಿ ತೆರೆದುಕೊಳ್ಳಬೇಕು ಎಂದ ಖಾದರ್, ಕನ್ನಡವನ್ನು ಪ್ರೀತಿಸುವುದಕ್ಕಾಗಿ ಇತರ ಭಾಷೆಗಳನ್ನು ದ್ವೇಷಿಸಬೇಕಿಲ್ಲ, ತಿರಸ್ಕರಿಸಬೇಕಿಲ್ಲ. ನಿಜವಾದ ಭಾಷಾ ಪ್ರೇಮವು ದ್ವೇಷದ ಮೇಲೆ ಅಲ್ಲ, ನಮ್ಮ ಭಾಷೆಯನ್ನು ಪ್ರೀತಿಸಿ, ಇತರ ಭಾಷೆಗಳನ್ನು ಗೌರವಿಸಿ, ಅದರಲ್ಲಿ ಇರುವ ಉತ್ತಮ ಅಂಶಗಳನ್ನು ನಮ್ಮ ಭಾಷೆಯೊಂದಿಗೆ ವಿಲೀನಗೊಳಿಸಿ ಭಾಷೆಯನ್ನು ಇನ್ನಷ್ಟು ಬೆಳೆಸುವುವುದರಲ್ಲಿ ಅಡಗಿದೆ. ಆದ್ದರಿಂದ ನಮ್ಮ ಕನ್ನಡಾಭಿಮಾನವು ಇತರ ಭಾಷಿಗರನ್ನು ದೂರವಿಡುವ ಶಕ್ತಿಯಾಗದೆ, ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಬೆಸೆಯುವ ಸೇತುವೆಯಾಗಬೇಕು ಎಂದು ಹೇಳಲಿಚ್ಚಿಸುತ್ತೇನೆ ಎಂದು ಅಭಿಪ್ರಾಯಪಟ್ಟರು. 

ಪ್ರತಿಯೊಬ್ಬ ನಾಗರಿಕರೂ ತಮ್ಮ ಮನೆಯ ಮುಂದೆ ಕೆಂಪು-ಹಳದಿ ಬಣ್ಣಗಳ ನಾಡಧ್ವಜದ ರಂಗೋಲಿಯನ್ನು  ಬಿಡಿಸಿ, ದೀಪಾಲಂಕಾರ ಮತ್ತು ಕನ್ನಡದ ಘೋಷವಾಕ್ಯಗಳ ಮೂಲಕ ರಾಜ್ಯೋತ್ಸವವನ್ನು ಕೇವಲ ಸರ್ಕಾರಿ ಕಾರ್ಯಕ್ರಮವಾಗಿರಿಸದೆ, ಪ್ರತಿಯೊಬ್ಬರ ಮನೆಯ ಹಬ್ಬವನ್ನಾಗಿ ಆಚರಿಸಿ ಎಂದು ಎಂದು ಹೇಳಲಿಚ್ಚಿಸುತ್ತೇನೆ ಎಂದು ಸಚಿವ ಖಾದರ್ ಹೇಳಿದರು. 

  • Blogger Comments
  • Facebook Comments

0 comments:

Post a Comment

Item Reviewed: ಐತಿಹಾಸಿಕ ಕನ್ನಡ ತಾಣಗಳ ಪುನರುಜ್ಜೀವನ ಹಾಗೂ ಕನ್ನಡದ ಡಿಜಿಟಲ್ ಮತ್ತು ತಂತ್ರಜ್ಞಾನ ಬೆಳವಣಿಗೆಗೆ ಸರ್ಕಾರ ಒತ್ತು : ಸಚಿವ ಖಾದರ್ Rating: 5 Reviewed By: karavali Times
Scroll to Top