ಜಿಲ್ಲಾಡಳಿತ ಉಳ್ಳವರ ಪರ ವಹಿಸುವುದನ್ನು ನಿಲ್ಲಿಸಿ ಬಡವರ ಪರ ಕಾಳಜಿ ತೋರಬೇಕು : ಯು.ಟಿ. ಖಾದರ್ - Karavali Times ಜಿಲ್ಲಾಡಳಿತ ಉಳ್ಳವರ ಪರ ವಹಿಸುವುದನ್ನು ನಿಲ್ಲಿಸಿ ಬಡವರ ಪರ ಕಾಳಜಿ ತೋರಬೇಕು : ಯು.ಟಿ. ಖಾದರ್ - Karavali Times

728x90

29 March 2020

ಜಿಲ್ಲಾಡಳಿತ ಉಳ್ಳವರ ಪರ ವಹಿಸುವುದನ್ನು ನಿಲ್ಲಿಸಿ ಬಡವರ ಪರ ಕಾಳಜಿ ತೋರಬೇಕು : ಯು.ಟಿ. ಖಾದರ್








ಖಾದರ್ ನೇತೃತ್ವದ ಕಾಂಗ್ರೆಸ್ ಮುಖಂಡರ ನಿಯೋಗದಿಂದ ಡೀಸಿಗೆ ಮನವಿ


ಮಂಗಳೂರು (ಕರಾವಳಿ ಟೈಮ್ಸ್) : ಜಿಲ್ಲಾಡಳಿತ ಕೇವಲ ಮಾಲ್, ಹೈಪರ್ ಮಾರ್ಕೆಟ್, ಸೂಪರ್ ಮಾರ್ಕೆಟ್‍ಗಳಿಗೆ ಮಾತ್ರ ವ್ಯಾಪಾರಕ್ಕೆ ಅನುಮತಿ ನೀಡಿ ಶ್ರೀಮಂತರ ಹಿತ ಮಾತ್ರ ಕಾಯುವುದನ್ನು ನಿಲ್ಲಿಸಿ ಗ್ರಾಮಾಂತರ ಪ್ರದೇಶಗಳ ಬಡವರ ಪರ ಕಾಳಜಿ ವಹಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ, ಮಂಗಳೂರು ಶಾಸಕ ಯು.ಟಿ. ಖಾದರ್ ಜಿಲ್ಲಾಡಳಿತವನ್ನು ಆಗ್ರಹಿಸಿದರು.

ಭಾನುವಾರ ಸಂಜೆ ತನ್ನ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರ ನಿಯೋಗದೊಂದಿಗೆ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರಿಗೆ ಮನವಿ ನೀಡಿ ಮಾತನಾಡಿದವರು ಮಹಾನಗರ ಮಾಲ್, ಹೈಪರ್ ಮಾರ್ಕೆಟ್‍ಗಳಿಗೆ ಮಾತ್ರ ತೆರೆಯಲು ಜಿಲ್ಲಾಡಳಿತ ಅನುಮತಿ ನೀಡಿದರೆ, ಉಳ್ಳವರು ಬಂದು ಖರೀದಿಸಿ ಸುಖವಾಗಿರುತ್ತಾರೆ. ಆದರೆ ಗ್ರಾಮೀಣ ಹಾಗೂ ಸಣ್ಣ ಪೇಟೆಗಳಲ್ಲಿರುವ ದಿನಸಿ ಅಂಗಡಿಗಳಿಗೆ ಅನುಮತಿ ನೀಡಿದಾಗ ಬಡವÀರು ತಮ್ಮ ಅಗತ್ಯ ಸೇವೆಗಳನ್ನು ಖರೀದಿಸಲು ಅನುಕೂಲವಾಗುತ್ತದೆ. ಇಂತದ ಸಂದರ್ಭಗಳಲ್ಲಿ ಜನರು ತಮ್ಮ ಹತ್ತಿರದ ಗುರುತು-ಪರಿಚಯ ಇರುವ ಅಂಗಡಿಗಳಲ್ಲಿ ಕೈಯಲ್ಲಿ ಕಾಸಿಲ್ಲದಿದ್ದರೂ ಅಗತ್ಯ ಸಾಮಾಗ್ರಿ ಖರೀದಿಸಿ ಮೊತ್ತವನ್ನು ಪರಿಸ್ಥಿತಿ ಸುಧಾರಿಸಿದ ಬಳಿಕ ನೀಡಲು ಅನುಕೂಲವಾಗುತ್ತದೆ ಎಂದರು.

ಲಾಕ್‍ಡೌನ್ ಅವಧಿಯ ಪ್ರತಿ ದಿನ ಕೂಡಾ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಸಣ್ಣ ಪೇಟೆ, ಗ್ರಾಮೀಣ ಪ್ರದೇಶಗಳಲ್ಲಿ ದಿನಸಿ ಸಹಿತ ಅಗತ್ಯ ಸಾಮಾಗ್ರಿಗಳ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಬೇಕು ಎಂದು ಆಗ್ರಹಿಸಿದ ಯು.ಟಿ. ಖಾದರ್ ಮಂಗಳೂರು ಮಹಾನಗರ ವ್ಯಾಪ್ತಿಯ 60 ವಾರ್ಡ್‍ಗಳಿಗೂ ವಾಹನಗಳಲ್ಲಿ ತರಕಾರಿ ಮೊದಲಾದ ವಸ್ತುಗಳನ್ನು ಪೂರೈಕೆ ಮಾಡುವ ವ್ಯವಸ್ಥೆ ಕೈಗೊಂಡಾಗ ನಗರದ ಜನ ಸೆಂಟ್ರಲ್ ಮಾರ್ಕೆಟ್‍ಗೆ ಬಂದು ನೂಕುನುಗ್ಗಲು ಉಂಟಾಗುವ ಪರಿಸ್ಥಿತಿ ತಪ್ಪಲಿದೆ ಎಂದರು. ತಕರಾರಿ ಕೊರತೆ ಈಗಾಗಲೇ ಮಿತಿ ಮೀರಿರುವುದರಿಂದ ಎಲ್ಲಾ ಮಾಂಸದ ಅಂಗಡಿಗಳನ್ನೂ ನಿರ್ಬಂಧಿತ ನಿಯಮದೊಂದಿಗೆ ತೆರೆಯಲು ಅವಕಾಶ ನೀಡಬೇಕು. ಒಟ್ಟಿನಲ್ಲಿ ಜನರಿಗೆ ಆಹಾರದ ಸಮಸ್ಯೆ ಎದುರಾಗದಂತೆ ಜಿಲ್ಲಾಡಳಿತ ಲಾಕ್‍ಡೌನ್ ಅವಧಿಯಲ್ಲಿ ನೋಡಿಕೊಳ್ಳಬೇಕು ಎಂದರು.

ಕ್ರಿಮಿನಲ್ ಹಿನ್ನಲೆಯ ವ್ಯಕ್ತಿಗಳಿಂದ ಪಾಸ್ ದುರ್ಬಳಕೆ : ಮಿಥುನ್ ಆರೋಪ


ಇದೇ ವೇಳೆ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಜಿಲ್ಲಾಡಳಿತ ಅಗತ್ಯ ಸೇವೆಗಳಿಗೆ ಒದಗಿಸುವ ಪಾಸ್ ಕೂಡಾ ದುರುಪಯೋಗವಾಗಿದ್ದು, ಅಗತ್ಯ ಇರುವವರು ಅರ್ಜಿ ಸಲ್ಲಿಸಿರುವುದು ಇನ್ನೂ ವಿಲೇವೇರಿಯಾಗಿಲ್ಲ. ಆದರೆ ಕ್ರಿಮಿನಲ್ ಹಿನ್ನಲೆಯುಳ್ಳ ವ್ಯಕ್ತಿಗಳೂ ಕೂಡಾ ಉಪ ಆಯುಕ್ತರ ಕಛೇರಿಯಿಂದ ಐವತ್ತಕ್ಕೂ ಹೆಚ್ಚು ಪಾಸ್ ಕಾರ್ಡ್‍ಗಳನ್ನು ಪಡೆದು ಬೇಕಾಬಿಟ್ಟಿ ಹಂಚುತ್ತಿರುವ ಬಗ್ಗೆ ಗಂಭೀರ ದೂರುಗಳು ಕೇಳಿ ಬಂದಿದೆ ಎಂದು ಆರೋಪಿಸಿದರು. ಈ ಬಗ್ಗೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿಗಳು ಮ್ಯಾನ್ಯುವಲ್ ಪಾಸ್ ವಿತರಣಾ ಕ್ರಮವನ್ನು ಈಗಾಗಲೇ ನಿಲ್ಲಿಸಲಾಗಿದ್ದು, ಇ-ಪಾಸ್ ವಿತರಣೆ ಮಾತ್ರ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ನಿಯೋಗದಲ್ಲಿ ಶಾಸಕ ಐವನ್ ಡಿ’ಸೋಜ, ಮಂಗಳೂರು ತಾ ಪಂ ಅಧ್ಯಕ್ಷ ಮುಹಮ್ಮದ್ ಮೋನು, ಮನಪಾ ಪ್ರತಿಪಕ್ಷ ನಾಯಕ ಅಬ್ದುಲ್ ರವೂಫ್, ಸದಸ್ಯ ಎ.ಸಿ. ವಿನಯರಾಜ್ ಮೊದಲಾದವರು ಇದ್ದರು. 
  • Blogger Comments
  • Facebook Comments

0 comments:

Post a Comment

Item Reviewed: ಜಿಲ್ಲಾಡಳಿತ ಉಳ್ಳವರ ಪರ ವಹಿಸುವುದನ್ನು ನಿಲ್ಲಿಸಿ ಬಡವರ ಪರ ಕಾಳಜಿ ತೋರಬೇಕು : ಯು.ಟಿ. ಖಾದರ್ Rating: 5 Reviewed By: karavali Times
Scroll to Top