ಬಂಟ್ವಾಳ, ಫೆಬ್ರವರಿ 16, 2025 (ಕರಾವಳಿ ಟೈಮ್ಸ್) : ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ನಾರ್ಶ ಎಂಬಲ್ಲಿನ ಉದ್ಯಮಿ ಸುಲೈಮಾನ್ ಹಾಜಿ ಸಿಂಗಾರಿ ಅವರ ಮನೆಯಲ್ಲಿ ಜನವರಿ 3 ರಂದು ರಾತ್ರಿ ಇ ಡಿ ಅಧಿಕಾರಿಗಳ ಸೋಗಿನಲ್ಲಿ ಬಂದು ಸುಮಾರು 30 ಲಕ್ಷ ನಗದು ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ಪೊಲೀಸ್ ತನಿಖಾ ತಂಡ ಮೂವರು ಸ್ಥಳೀಯರ ಸಹಿತ ಮತ್ತೆ ನಾಲ್ವರನ್ನು ಶನಿವಾರ ಬಂಧಿಸಿದ್ದಾರೆ.
ಬಂಧಿತರನ್ನು ಕೊಳ್ನಾಡು ನಿವಾಸಿ ಸಿರಾಜುದ್ದೀನ್ (37), ಪರ್ಲಿಯಾ ನಿವಾಸಿ ಮೊಹಮ್ಮದ್ ಇಕ್ಬಾಲ್ ಯಾನೆ ಮಟನ್ ಇಕ್ಬಾಲ್ (38), ಮಂಗಳೂರು- ಪಡೀಲ್ ನಿವಾಸಿ ಮೊಹಮ್ಮದ್ ಅನ್ಸಾರ್ (27) ಹಾಗೂ ದರೋಡೆ ಕೃತ್ಯಕ್ಕೆ ಮೂಲ ಸೂತ್ರದಾರ ಕೇರಳ-ತ್ರಿಶೂರ್ ಜಿಲ್ಲೆಯ ಕೊಡಂಗಲ್ಲೂರು ಪೊಲೀಸ್ ಠಾಣಾ ಎಎಸ್ಸೈ ಶಫೀರ್ ಬಾಬು (48) ಎಂದು ಹೆಸರಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೇರಳ ಕೊಲ್ಲಂ ನಿವಾಸಿಗಳಾದ ಅನಿಲ್ ಫೆರ್ನಾಂಡಿಸ್ (49), ಸಚ್ಚಿನ್ ಟಿ ಎಸ್ (29) ಹಾಗೂ ಶಬಿನ್ ಎಸ್ (27) ಎಂಬವರುಗಳನ್ನು ಬಂಧಿಸಿದ್ದು, ಅವರುಗಳು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುತ್ತಾರೆ.
ಸದ್ರಿ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಜಿಲ್ಲಾ ಎಸ್ಪಿ ಯತೀಶ್ ಎನ್ ಅವರ ಮಾರ್ಗದರ್ಶನದಲ್ಲಿ, ಜಿಲ್ಲಾ ವ್ಯಾಪ್ತಿಯ ಠಾಣೆಗಳಿಂದ ಅಪರಾಧ ಕೃತ್ಯಗಳ ತನಿಖೆಯಲ್ಲಿ ಪರಿಣಿತರಾದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ನಾಲ್ಕು ತಂಡಗಳು ಕಾರ್ಯಾಚರಣೆ ನಡೆಸಿರುತ್ತದೆ.
0 comments:
Post a Comment