ಬಾಡಿಗೆದಾರರ ಹಿತ ಕಾಯಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಲಿ : ಅಬೂಬಕ್ಕರ್ ಸಜಿಪ - Karavali Times ಬಾಡಿಗೆದಾರರ ಹಿತ ಕಾಯಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಲಿ : ಅಬೂಬಕ್ಕರ್ ಸಜಿಪ - Karavali Times

728x90

1 April 2020

ಬಾಡಿಗೆದಾರರ ಹಿತ ಕಾಯಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಲಿ : ಅಬೂಬಕ್ಕರ್ ಸಜಿಪ



ಬಂಟ್ವಾಳ (ಕರಾವಳಿ ಟೈಮ್ಸ್) : ಲಾಕ್‍ಡೌನ್ ಪರಿಸ್ಥಿತಿ ಜನಸಾಮಾನ್ಯರಿಗೆ ಚಿಂತಾಜನಕ ಪರಿಸ್ಥಿತಿ ತಂದೊಡ್ಡಿದ್ದು, ಇದೀಗ ಎಪ್ರಿಲ್ ತಿಂಗಳು ಆರಂಭವಾಗಿದೆ. ತಿಂಗಳ ಆರಂಭದಲ್ಲೇ ಮನೆ ಮಾಲಕರು ಬಾಡಿಗೆದಾರರನ್ನು ಬಾಡಿಗೆ ಪಾವತಿಸುವಂತೆ ಕರೆ ಮಾಡಿ ಪೀಡಿಸಲು ಆರಂಭಿಸಿದ್ದಾರೆ. ರಾಜ್ಯ ಕಂದಾಯ ಸಚಿವರು ಬಾಡಿಗೆದಾರರನ್ನು ಬಾಡಿಗೆಗಾಗಿ ಪೀಡಿಸಿದರೆ ಮಾಲಕರ ವಿರುದ್ದ ಕ್ರಿಮಿನಲ್ ಮೊಕದ್ದಮೆಯ ಎಚ್ಚರಿಕೆ ನೀಡಿರುವುದು ಕೇವಲ ಘೋಷಣೆಯಾಗಿ ಮಾತ್ರ ಬಾಕಿಯಾಗಿದೆ ಎಂದು ಜಿಲ್ಲಾ ವಕ್ಫ್ ಸಮಿತಿ ನಿಕಟಪೂರ್ವ ಉಪಾಧ್ಯಕ್ಷ ಎಸ್. ಅಬೂಬಕ್ಕರ್ ಸಜಿಪ ಆರೋಪಿಸಿದ್ದಾರೆ.

ಕಂದಾಯ ಸಚಿವರ ಆದೇಶ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್, ಪುರಸಭೆ, ನಗರ ಪಾಲಿಕೆಗಳ ವ್ಯಾಪ್ತಿಗಳಲ್ಲಿ ಬರುವ ಬಾಡಿಗೆ ಮನೆಗಳ ಮಾಲಿಕರುಗಳನ್ನು ಆಯಾ ಸ್ಥಳೀಯಾಡಳಿತದ ಅಧಿಕಾರಿಗಳು ಕರೆದು ತಕ್ಷಣ ಸಭೆ ನಡೆಸಿ ಎಲ್ಲಾ ಮನೆಗಳ ಯಜಮಾನರುಗಳಿಗೂ ನೋಟೀಸು ಜಾರಿಮಾಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ.

ಕೊರೋನ ಎಂಬ ಸಾಂಕ್ರಾಮಿಕ ರೋಗದಿಂದ ದೇಶವೇ ಲಾಕ್ ಡೌನ್ ಆಗಿರುವಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ದುಡಿಯುವ ವರ್ಗ, ಅದರಲ್ಲೂ ಮಧ್ಯಮ ವರ್ಗವು ಇಂದು ಬಹಳಷ್ಟು ಕಷ್ಟವನ್ನು ಎದುರಿಸುತ್ತಿವೆ. ಸರಕಾರವು ರೇಷನ್ ವ್ಯವಸ್ಥೆಯನ್ನು ಮಾಡುತ್ತಿದ್ದಂತೆ ಇನ್ನಿತರ ಸಂಘ ಸಂಸ್ಥೆಗಳು ಹಾಗೂ ದಾನಿಗಳು ರೇಷನ್ ವ್ಯವಸ್ಥೆಯನ್ನು ಮಾಡುತ್ತಿವೆಯಾದುದರಿಂದ ಆಹಾರ ಸಮಸ್ಯೆ ಒಂದಷ್ಟರ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ.

ಆದರೆ ಪ್ರತಿಯೊಂದು ಮನೆಗಳಲ್ಲೂ ಸಣ್ಣ ಮಕ್ಕಳಿಂದ ಹಿಡಿದು ವೃದ್ದರವರೆಗಿನ ಜನ ಒಂದಲ್ಲ ಒಂದು ರೀತಿಯ ಆರೋಗ್ಯ ಸಂಬಂಧಿ ಸಮಸ್ಯೆ ಎದುರಿಸುತ್ತಿರುವುದು ಸಾಮಾನ್ಯವಾಗಿದೆ. ಇಂತಹ ಸಂದರ್ಭದಲ್ಲಿ ದೈನಂದಿನ ಔಷದಿಗಳನ್ನು ಖರೀದಿ ಮಾಡಿ ತರುವಂತಹ ಆರ್ಥಿಕ ಸಮೃದ್ದಿ ಇಂದು ಜನತೆಯಲ್ಲಿ ಇಲ್ಲದಾಗಿದೆ. ಈ ನಡುವೆ ಇದೀಗ ಮನೆ ಮಾಲಕರು ಬಾಡಿಗೆದಾರರನ್ನು ತಿಂಗಳ ಆರಂಭದಲ್ಲೇ ಬಾಡಿಗೆಗಾಗಿ ಕರೆ ಮಾಡುತ್ತಿರುವುದು ಬಡ ಬಾಡಿಗೆ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ ಎಂದಿರುವ ಅಬೂಬಕ್ಕರ ಸಜಿಪ ಈ ನಿಟ್ಟಿನಲ್ಲಿ ಬಾಡಿಗೆದಾರರ ಹಿತ ಕಾಪಾಡಲು ಸರಕಾರದ ಕಂದಾಯ ಇಲಾಖಾ ಸಚಿವರ ಆದೇಶ ಪಾಲನೆ ಮಾಡಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ಬಡ ಜನರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಬಾಡಿಗೆದಾರರ ಹಿತ ಕಾಯಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಲಿ : ಅಬೂಬಕ್ಕರ್ ಸಜಿಪ Rating: 5 Reviewed By: karavali Times
Scroll to Top