ಮಹಿಳಾ ಆರೋಗ್ಯ ಸಹಾಯಕಿಯರ ಬಗ್ಗೆ ನಿರ್ಲಕ್ಷ್ಯವೇಕೆ? - Karavali Times ಮಹಿಳಾ ಆರೋಗ್ಯ ಸಹಾಯಕಿಯರ ಬಗ್ಗೆ ನಿರ್ಲಕ್ಷ್ಯವೇಕೆ? - Karavali Times

728x90

12 April 2020

ಮಹಿಳಾ ಆರೋಗ್ಯ ಸಹಾಯಕಿಯರ ಬಗ್ಗೆ ನಿರ್ಲಕ್ಷ್ಯವೇಕೆ?


ಕೋವಿಡ್ ಎಮೆರ್ಜೆನ್ಸಿ ಸೇವೆಯಲ್ಲಿರುವ ಸಹಾಯಕರಿಗೆ ಸರಕಾರ ಭದ್ರತೆ ನೀಡಬೇಕಿದೆ 


ಮಂಗಳೂರು (ಕರಾವಳಿ ಟೈಮ್ಸ್) : ಕೋವಿಡ್-19 ವೈರಸ್ ನಿಯಂತ್ರಣದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಹಿರಿಯ ಹಾಗೂ ಕಿರಿಯ ಆರೋಗ್ಯ ಸಹಾಯಕಿಯರು ನಿತ್ಯ ಜೀವದ ಹಂಗು ತೊರೆದು ಜನರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಕಾರ್ಯನಿರ್ವಹಿಸುತ್ತಿರುವುದು ಎಲ್ಲರಿಗೂ ಗೊತ್ತಿದೆ. ನಿತ್ಯವೂ ಯಾವುದೇ ರಜಾ ಅವಕಾಶಗಳಿಲ್ಲದೆ ಜಿಲ್ಲೆಯ ಎಲ್ಲಾ ಹಿರಿಯ-ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ತಮ್ಮ ಮನೆಯಿಂದ ಬೆಳಿಗ್ಗೆ ಹೊರಟು ದೂರದ ಊರುಗಳಲ್ಲಿರುವ ತಮ್ಮ ಕರ್ತವ್ಯ ಸ್ಥಳಗಳಿಗೆ ಬಂದು ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಕಾರ್ಯನಿರ್ವಹಿಸುವುದು ಅನಿವಾರ್ಯವಾಗಿದೆ. ಈ ಕರ್ತವ್ಯವನ್ನು ಮಹಿಳಾ ಆರೋಗ್ಯ ಸಹಾಯಕಿಯರು ನಿರ್ವಹಿಸುತ್ತಲೂ ಇದ್ದಾರೆ. ಇವರ ಶ್ರಮಕ್ಕೆ ನಿಜಕ್ಕೂ ಸರಕಾರ, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಹ್ಯಾಟ್ಸಪ್ ಎನ್ನಲೇಬೇಕಾಗಿದೆ. ನೇರವಾಗಿ ಜಿಲ್ಲಾ ಆರೋಗ್ಯಾಧಿಕಾರಿಗಳ ಅಧೀನದಲ್ಲಿದ್ದುಕೊಂಡು ಜಿಲ್ಲೆಯ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ ಇಂತಹ ಮಹಿಳಾ ಆರೋಗ್ಯ ಸಹಾಯಕಿಯರಿಗೆ ಯಾವುದೇ ಭದ್ರತೆ ಇದ್ದಂತೆ ಕಂಡು ಬರುತ್ತಿಲ್ಲ. ಲಾಕ್‍ಡೌನ್ ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ ಇವರಿಗೆ ಕನಿಷ್ಠ ಸಂಚಾರದ ವ್ಯವಸ್ಥೆಯನ್ನೂ ಸರಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮಾಡದೆ ಇರುವುದು ಮಹಿಳೆಯರ ಬಗ್ಗೆ ಇರುವ ಕಾಳಜಿಯನ್ನು ಎತ್ತಿತೋರಿಸುತ್ತಿದೆ.

ಕೋವಿಡ್-19 ಎಮರ್ಜೆನ್ಸಿ ಸೇವೆಯಲ್ಲಿರುವ ಇಂತಹ ಮಹಿಳಾ ಸಹಾಯಕಿಯರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಿ, ಕರ್ತವ್ಯ ಮುಗಿಸಿಕೊಂಡು ಮತ್ತೆ ಮನೆ ಸೇರಬೇಕಾದರೆ ತೀವ್ರ ಸಂಕಷ್ಟ ಅನುಭವಿಸುವಂತಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿದೆ. ಎಮರ್ಜೆನ್ಸಿ ಸಮಯದಲ್ಲಿ ಇಂತಹ ಮಹಿಳಾ ಸಹಾಯಕಿಯರ ಸಂಚಾರಕ್ಕೆ ಯಾವುದೇ ವಾಹನದ ವ್ಯವಸ್ಥೆಯನ್ನು ಸರಕಾರ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಮಾಡದ ಪರಿಣಾಮ ಇವರು ಕರ್ತವ್ಯಕ್ಕೆ ಬರುವ ಹಾಗೂ ಕರ್ತವ್ಯ ಮುಗಿಸಿ ವಾಪಾಸು ತೆರಳುವ ಸಂದರ್ಭ ಸಿಕ್ಕಿದ ವಾಹನಗಳ ಮುಂದೆ ಕೈ ಹಿಡಿದು ತೆರಳುತ್ತಿರುವ ಸನ್ನಿವೇಶ ಜಿಲ್ಲೆಯಲ್ಲಿ ಕಂಡು ಬರುತ್ತಿದೆ. ಮಹಿಳೆಯರ ಪಾಲಿಗೆ ಇದು ಅತ್ಯಂತ ಆತಂಕ ಹಾಗೂ ಅಪಾಯಕಾರಿ ಸನ್ನಿವೇಶವಾಗಿ ಕಂಡು ಬರುತ್ತಿದೆ.

ಮಹಿಳೆಯರ ಸುರಕ್ಷೆತೆಗೆ ಅತಿ ಹೆಚ್ಚಿನ ಆದ್ಯತೆ ನೀಡಬೇಕಾದ ಸರಕಾರ ಹಾಗೂ ಅಧಿಕಾರಿಗಳು ಇಂತಹ ಎಮರ್ಜೆನ್ಸಿ ಸಮಯದಲ್ಲೇ ಈ ರೀತಿಯ ನಿರ್ಲಕ್ಷ್ಯ ತಾಳಿದರೆ ಮುಂದೇನಾದರೂ ಅನಾಹುತ, ಅಚಾನಕ್ ಘಟನೆಗಳು ನಡೆದು ಹೋದರೆ ಅದಕ್ಕೆ ಹೊಣೆ ಯಾರು ಎಂಬ ಪ್ರಶ್ನೆ ಉದ್ಭವಿಸುವುದರ ಜೊತೆಗೆ ಅಪಾಯ ಉಂಟಾಗುವುದಕ್ಕೆ ಮುಂಚಿತವಾಗಿ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಸಹಾಯಕಿಯರಿಗೆ ಸೂಕ್ತ ಭದ್ರತೆ ಹಾಗೂ ಸಂಚಾರಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಡಬೇಕಾಗಿದೆ. ಕನಿಷ್ಠ ಕೋವಿಡ್-19 ಎಮೆರ್ಜೆನ್ಸಿ ಸೇವೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಹನಗಳ ಪೈಕಿ ಕೆಲವನ್ನಾದರೂ ಇಂತಹ ಮಹಿಳಾ ಸಹಾಯಕಿಯರ ಬಗ್ಗೆ ಕಾರು ಕಾಳಜಿ ವಹಿಸಲು ಸಂಬಂಧಪಟ್ಟವರು ಆದೇಶ ಹೊರಡಿಸಬೇಕಾಗಿದೆ. ಕನಿಷ್ಠ ದೂರ ದೂರದ ಊರುಗಳಿಂದ ಬರುವ ಮಹಿಳಾ ಸಹಾಯಕಿಯರಿಗಾದರೂ ಸೂಕ್ತ ಕಲ್ಪಿಸಬೇಕಾಗಿದೆ. ಈ ಬಗ್ಗೆ ಜಿಲ್ಲೆಯ ಎಲ್ಲಾ ಶಾಸಕರುಗಳು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರಾದಿಯಾಗಿ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳೂ ಕೂಡಾ ಈ ಬಗ್ಗೆ ಗಮನ ಹರಿಸಿ ಮಹಿಳಾ ಸುರಕ್ಷತೆಯ ದೃಷ್ಟಿಯಲ್ಲಿ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಯಾ ಪ್ರದೇಶಗಳ ಸಾರ್ವಜನಿಕರು ಆಗ್ರಹಿಸಿದ್ದಾರೆ. 
  • Blogger Comments
  • Facebook Comments

0 comments:

Post a Comment

Item Reviewed: ಮಹಿಳಾ ಆರೋಗ್ಯ ಸಹಾಯಕಿಯರ ಬಗ್ಗೆ ನಿರ್ಲಕ್ಷ್ಯವೇಕೆ? Rating: 5 Reviewed By: karavali Times
Scroll to Top