ಬಂಟ್ವಾಳ ಪೇಟೆಯಲ್ಲಿ ಸೀಲ್‍ಡೌನ್ ಗೊಂದಲ ಹೈಡ್ರಾಮ - Karavali Times ಬಂಟ್ವಾಳ ಪೇಟೆಯಲ್ಲಿ ಸೀಲ್‍ಡೌನ್ ಗೊಂದಲ ಹೈಡ್ರಾಮ - Karavali Times

728x90

21 May 2020

ಬಂಟ್ವಾಳ ಪೇಟೆಯಲ್ಲಿ ಸೀಲ್‍ಡೌನ್ ಗೊಂದಲ ಹೈಡ್ರಾಮ


 

 

ಒಂದು ವಿಭಾಗ ನಾಗರಿಕರಿಂದ ತೆರವಿಗೆ ಪ್ರತಿಭಟನೆ, ಇನ್ನೊಂದು ವಿಭಾಗ ನಾಗರಿಕರಿಂದ ಅವಧಿ ಮುಗಿಯದೆ ತೆರವುಗೊಳಿಸದಂತೆ ಅಭಿಯಾನ ಆರಂಭ


ಬಂಟ್ವಾಳ (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಮುಖ್ಯಪೇಟೆ ಹಾಗೂ ರಥ ಬೀದಿಲ್ಲಿ ಎಪ್ರಿಲ್ 19 ರಂದು ಮೊದಲ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಬಳಿಕ ಕಳೆದ ಒಂದು ತಿಂಗಳಿನಿಂದ ಸೀಲ್‍ಡೌನ್ ಮಾಡಲಾಗಿದೆ. ಜಿಲ್ಲಾಡಳಿತ ಸೀಲ್‍ಡೌನ್ ಬಗ್ಗೆ ನೀಡಿದ ಆದೇಶ ಸರಿಯಾಗಿಲ್ಲ ಎಂದು ಇಲ್ಲಿನ ನಿವಾಸಿಗಳು ಆರೋಪಿಸುತ್ತಲೇ ಬಂದಿದ್ದರು. ಪಾಸಿಟಿವ್ ಕೇಸ್ ಪತ್ತೆಯಾದ ಸ್ಥಳದಿಂದ 100 ಮೀಟರ್ ವ್ಯಾಪ್ತಿಯಲ್ಲಿ ಸೀಲ್‍ಡೌನ್ ಮಾಡುವುದು ಕ್ರಮ. ಆದರೆ ಬಂಟ್ವಾಳ ಪೇಟೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಈ ವ್ಯಾಪ್ತಿ ಮೀರಿ ಸುಮಾರು 500 ಮೀಟರ್‍ಗೂ ಅಧಿಕ ವ್ಯಾಪ್ತಿಯಲ್ಲಿ ಸೀಲ್ ಮಾಡಿದ್ದಾರೆ. ಇದನ್ನು ತಕ್ಷಣ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಹಿರಿಯ ಪುರಸಭಾ ಸದಸ್ಯ ಎ ಗೋವಿಂದ ಪ್ರಭು ನೇತೃತ್ವದಲ್ಲಿ ನೂರಾರು ಮಂದಿ ಸೇರಿಕೊಡು ಗುರುವಾರ ಹಠಾತ್ ಪ್ರತಿಭಟನೆ ನಡೆಸಿದ್ದಾರೆ.

    ಪ್ರತಿಭಟನಾ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಮಂಗಳೂರು ಎಸಿ ಮದನ್‍ಮೋಹನ್, ತಾಲೂಕು ತಹಶೀಲ್ದಾರ್ ರಶ್ಮಿ ಎಸ್ ಆರ್, ಪೊಲೀಸ್ ಅಧಿಕಾರಿಗಳ ಸಹಿತ ಎಲ್ಲರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರಲ್ಲದೆ ಪ್ರತಿಭಟನೆ ಹಿಂತೆಗೆಯುವ ಗೋಜಿಗೆ ಹೋಗಿಲ್ಲ. ಬಳಿಕ ಹೆಚ್ಚುವರಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಯಿತು. ಬಳಿಕ ತಹಶೀಲ್ದಾರ್ ಹಾಗೂ ಎಸಿ ಅವರು ನೀಡಿದ ಭರವಸೆಯಂತೆ ಒಂದು ಬಾರಿ ಪ್ರತಿಭಟನೆ ವಾಪಾಸು ಪಡೆದರಾದರೂ ಬಳಿಕ ಮತ್ತೆ ಸಂಜೆ ವೇಳೆಗೆ ಮತ್ತೆ ಪ್ರತಿಭಟನೆಗಿಳಿದಿದ್ದಾರೆ.

    ಬಂಟ್ವಾಳದಲ್ಲಿ ಈಗಾಗಲೇ ಮೂರು ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದು, ಕೊರೋನಾ ಹಾಟ್‍ಸ್ಪಾಟ್ ಆಗಿ ಜಿಲ್ಲಾಡಳಿತ ಗುರುತಿಸಿದೆ. ಈ ಹಿನ್ನಲೆಯಲ್ಲಿ ಪ್ರದೇಶದಲ್ಲಿ ಸಹಜ ಸೀಲ್‍ಡೌನ್ ಘೋಷಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಸೀಲ್‍ಡೌನ್ ತೆರವುಗೊಳಿಸದಿರಿ : ಇನ್ನೊಂದು ವರ್ಗದ ವಾದ


    ಜಿಲ್ಲೆಯ ವಿವಿಧೆಡೆ ಕೊರೋನಾ ಪಾಸಿಟಿವ್ ಪತ್ತೆಯಾದ ಬಳಿಕ ಆರೋಗ್ಯ ಇಲಾಖೆಯ ನಿರ್ದೇಶನದಂತೆ ಇದೇ ರೀತಿಯ ಸೀಲ್‍ಡೌನ್ ವ್ಯವಸ್ಥೆ ಜಾರಿಯಲ್ಲಿತ್ತು. ಜಿಲ್ಲೆಯ ಉಳಿದೆಡೆ ಯಾವುದೇ ಸಾವು ಸಂಭವಿಸರಲಿಲ್ಲ. ಕೇವಲ ಪಾಸಿಟಿವ್ ಮಾತ್ರ ಪತ್ತೆಯಾಗಿತ್ತು. ಬಳಿಕ ಎಲ್ಲರೂ ಗುಣಮುಖರಾಗಿದ್ದರು. ಆದರೂ ಮಹಾಮಾರಿಯ ಬಗ್ಗೆ ಮುಂಜಾಗ್ರತೆಗಾಗಿ ಸೀಲ್‍ಡೌನ್ ಮುಂದುವರಿಸಲಾಗಿತ್ತು. ಇದಕ್ಕೆ ಜನ ಜಿಲ್ಲಾಡಳಿತದೊಂದಿಗೆ ಸಂಪೂರ್ಣ ಸಹಕಾರವನ್ನೂ ನೀಡಿದ್ದರು. ಬಂಟ್ವಾಳ ಪೇಟೆಯಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾದ ಆರಂಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಇಲ್ಲಿನ ಕೆಳಗಿನ ಪೇಟೆ ಪ್ರದೇಶದಲ್ಲೂ ಕೆಲ ದಿನಗಳ ಕಾಲ ಸೀಲ್‍ಡೌನ್ ಮಾಡಲಾಗಿತ್ತು. ಆ ಸಂದರ್ಭ ಕೆಳಗಿನಪೇಟೆ ನಾಗರಿಕರು ಜಿಲ್ಲಾಡಳಿತದ ತೀರ್ಮಾನಕ್ಕೆ ಸೈ ಎಂದಿದ್ದರು.

    ಇದಲ್ಲದೆ ಜಿಲ್ಲೆಯ ಉಪ್ಪಿನಂಗಡಿ, ಸಜಿಪನಡು ಹಾಗೂ ತುಂಬೆ ಪ್ರದೇಶಗಳಲ್ಲೂ ಜಿಲ್ಲಾಡಳಿತ ಸೀಲ್‍ಡೌನ್ ಘೋಷಿಸಿದ ಬಳಿಕ ನಿಗದಿತ ಅವಧಿ ಮುಗಿದ ಬಳಿಕವೇ ಸೀಲ್‍ಡೌನ್ ತೆರವುಗೊಳಿಸಲಾಗಿತ್ತು. ಜಿಲ್ಲಾಡಳಿತಕ್ಕೆ ಕ್ರಮಕ್ಕೆ ಈ ಎಲ್ಲಾ ಪ್ರದೇಶದ ಜನ ಸಂಪೂರ್ಣ ಸಹಕಾರ ನೀಡಿ ತಮ್ಮ ಸಾಮಾಜಿಕ ಬದ್ದತೆ ಮೆರೆದಿದ್ದರು. ಆದರೆ  ಬಂಟ್ವಾಳ ಪೇಟೆಯಲ್ಲಿ  ಸೀಲ್‍ಡೌನ್ ಅವಧಿ ಪೂರ್ತಿಯಾಗಲು ಇನ್ನೂ 9 ದಿನಗಳು (ಮೇ 28) ಇದ್ದರೂ ಯಾವುದೋ ಸ್ವಾರ್ಥ ಉದ್ದೇಶಕ್ಕೋಸ್ಕರ ಯಾರೋ ಕೆಲ ಪಟ್ಟಭದ್ರರು ಬೀದಿಗಿಳಿದು ಸೀಲ್‍ಡೌನ್ ತೆರವುಗೊಳಿಸಲು ಜಿಲ್ಲಾಡಳಿತ ಹಾಗೂ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿರುವುದು ಸರಿಯಾದ ಕ್ರಮವಲ್ಲ.

    ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಜನತೆಯ ಸುರಕ್ಷತೆಯ ದೃಷ್ಟಿಯಿಂದ ವಿಧಿಸಿರುವ ಸೀಲ್‍ಡೌನ್ ನಿಗದಿತ ಸಮಯದ ಬಳಿಕವೇ ತೆರವುಗೊಳಿಸಬೇಕು. ಒಂದು ವೇಳೆ ಯಾರದೋ ಒತ್ತಡಕ್ಕೆ ಮಣಿದು ಜಿಲ್ಲಾಡಳಿತ ಅವಧಿಗಿಂತ ಮುಂಚೆ ಸೀಲ್‍ಡೌನ್ ತೆರವುಗೊಳಿಸಿದಲ್ಲಿ ಕೆಳಗಿನಪೇಟೆಯಿಂದ ಬಂಟ್ವಾಳ ಪೇಟೆಗಿರುವ ರಾಜ ಬೀದಿಯನ್ನು ತಮ್ಮ ಸುರಕ್ಷತೆಗಾಗಿ  ಸ್ವಯಂ ನಾಗರಿಕರೇ ಮುಚ್ಚುವುದಾಗಿ ಸಾಮಾಜಿಕ ಸಾಮಾಜಿಕ ತಾಣಗಳಲ್ಲಿ ಚರ್ಚಿಸುವ ಮೂಲಕ ಜಿಲ್ಲಾಡಳಿತಕ್ಕೆ ಸಂದೇಶ ನೀಡಿದ್ದಾರೆ.

ಈಗಾಗಲೇ ಸಿಎಂ, ಡಿಸಿಎಂ ಜೊತೆ ಚರ್ಚಿಸಲಾಗಿದೆ : ಶಾಸಕ ನಾಯಕ್


    ಬಂಟ್ವಾಳದ ಸೀಲ್‍ಡೌನ್ ಗೊಂದಲದ ಬಗ್ಗೆ ಸ್ಥಳೀಯ ಶಾಸಕ ಯು ರಾಜೇಶ್ ನಾಯಕ್ ಪ್ರತಿಕ್ರಯಿಸಿ ಈ ಬಗ್ಗೆ ಈಗಾಗಲೇ ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರೊಂದಿಗೂ ಚರ್ಚಿಸಲಾಗಿದೆ. ಇಲ್ಲಿನ ಪರಿಸ್ಥಿತಿಯ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೂ ಮನವರಿಕೆ ಮಾಡಲಾಗಿದೆ. ಸರಕಾರದ ಮುಂದಿನ ನೋಟಿಫಿಕೇಶನ್ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಮೇಲಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿ : ಮಾಜಿ ಸಚಿವ ರೈ


    ಈ ಬಗ್ಗೆ ಪ್ರತಿಕ್ರಯಿಸಿದ ಮಾಜಿ ಸಚಿವ ಹಾಗೂ ಸ್ಥಳೀಯ ಮಾಜಿ ಶಾಸಕ ಬಿ ರಮಾನಾಥ ರೈ ಬಂಟ್ವಾಳದ ಸೀಲ್‍ಡೌನ್ ಅವೈಜ್ಞಾನಿಕ ಎಂದು ಇಲ್ಲಿನ ಜನ ಆರೋಪಿಸುತ್ತಿದ್ದು, ಈ ಬಗ್ಗೆ ಮೇಲಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ತೀರ್ಮಾನ ಹಾಗೂ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

    ಒಟ್ಟಿನಲ್ಲಿ ಬಂಟ್ವಾಳದ ಸೀಲ್‍ಡೌನ್ ಒಂದು ರೀತಿಯ ಗೊಂದಲಕ್ಕೆ ಕಾರಣವಾಗುತ್ತಿದ್ದು, ಈ ಬಗ್ಗೆ ಜನರ ಮಧ್ಯೆ ಅವಿಶ್ವಾಸ ಮೂಡದಂತೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಸಮಸ್ಯೆ ಪರಿಹರಿಸಬೇಕಾಗಿದೆ.
  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಪೇಟೆಯಲ್ಲಿ ಸೀಲ್‍ಡೌನ್ ಗೊಂದಲ ಹೈಡ್ರಾಮ Rating: 5 Reviewed By: karavali Times
Scroll to Top