ಬಂಟ್ವಾಳ ಪೇಟೆ ಸೀಲ್‍ಡೌನ್ ಬಗ್ಗೆ ಗ್ರಾಮಸ್ಥರ ತಕರಾರು : ಸಮಸ್ಯೆಗೆ ಪರಿಹಾರ ಕಲ್ಪಿಸದಿದ್ದಲ್ಲಿ ಧರಣಿ ಪ್ರತಿಭಟನೆಯ ಎಚ್ಚರಿಕೆ - Karavali Times ಬಂಟ್ವಾಳ ಪೇಟೆ ಸೀಲ್‍ಡೌನ್ ಬಗ್ಗೆ ಗ್ರಾಮಸ್ಥರ ತಕರಾರು : ಸಮಸ್ಯೆಗೆ ಪರಿಹಾರ ಕಲ್ಪಿಸದಿದ್ದಲ್ಲಿ ಧರಣಿ ಪ್ರತಿಭಟನೆಯ ಎಚ್ಚರಿಕೆ - Karavali Times

728x90

3 May 2020

ಬಂಟ್ವಾಳ ಪೇಟೆ ಸೀಲ್‍ಡೌನ್ ಬಗ್ಗೆ ಗ್ರಾಮಸ್ಥರ ತಕರಾರು : ಸಮಸ್ಯೆಗೆ ಪರಿಹಾರ ಕಲ್ಪಿಸದಿದ್ದಲ್ಲಿ ಧರಣಿ ಪ್ರತಿಭಟನೆಯ ಎಚ್ಚರಿಕೆ

 

 

ಆಕ್ರೋಶಿತ ನಾಗರಿಕರಿಂದ ಶಾಸಕರ ಕಿಟ್ ನಿರಾಕರಣೆ?


ಬಂಟ್ವಾಳ (ಕರಾವಳಿ ಟೈಮ್ಸ್) : ಕೋವಿಡ್-19 ಸೋಂಕಿಗೆ ಈಗಾಗಲೇ ಮೂರು ಮಂದಿ ಬಲಿಯಾದ ಬಂಟ್ವಾಳ ಕಸಬಾ ಗ್ರಾಮದಲ್ಲಿ ಜಿಲ್ಲಾಧಿಕಾರಿ ಆದೇಶವನ್ನು ಮೀರಿ ಯಾವುದೋ ದುರುದ್ದೇಶದಿಂದ 100 ಮೀಟರ್ ವ್ಯಾಪ್ತಿಗೂ ಹೆಚ್ಚಿನ ಪ್ರದೇಶಗಳನ್ನು ಸೀಲ್‍ಡೌನ್ ಮಾಡಿದ ಬಗ್ಗೆ ಇದೀಗ ಗ್ರಾಮಸ್ಥರು ಆಕ್ರೋಶಗೊಂಡಿದ್ದು, ತಾಲೂಕು ತಹಶೀಲ್ದಾರರಿಗೆ ಸ್ಪಷ್ಟನೆ ಬಯಸಿ ಸುದೀರ್ಘ ಪತ್ರ ಬರೆದಿದ್ದಾರೆ. ತಹಶೀಲ್ದಾರ್ ಅವರು ಈ ಬಗ್ಗೆ ಸೂಕ್ತ ಪ್ರತಿಕ್ರಿಯೆ ನೀಡದಿದ್ದಲ್ಲಿ ಸಾಮಾಜಿಕ ಅಂತರ ಹಾಗೂ ಲಾಕ್‍ಡೌನ್ ನಿಯಮಗಳನ್ನು ಪಾಲಿಸಿ ರಸ್ತೆಯಲ್ಲೇ ಧರಣಿ ನಡೆಸುವುದಾಗಿ ಎಚ್ಚರಿಸಿದ್ದಾರೆ.

    ಪುರಸಭಾ ಸದಸ್ಯ ಹಾಗೂ ಗ್ರಾಮದ ಗಣ್ಯಾತಿಗಣ್ಯ ವ್ಯಕ್ತಿಗಳೂ ಸೇರಿದಂತೆ ಸುಮಾರು 123 ಮಂದಿಗಳ ಸಹಿಯುಳ್ಳ ಪತ್ರವನ್ನು ತಾಲೂಕು ತಹಶೀಲ್ದಾರರಿಗೆ ಬರೆಯಲಾಗಿದ್ದು, ಪತ್ರದಲ್ಲಿ ಜಿಲ್ಲಾಧಿಕಾರಿಗಳ ಆದೇಶ ಸಂಖ್ಯೆ : ಸಿಎಎಲ್.ಸಿಆರ್ 22/2020/88613/ಸಿ1/ಪಿ-390 ಉಲ್ಲೇಖಿಸಲಾಗಿದೆ. ಎಪ್ರಿಲ್ 20 ರಂದು ಬಂಟ್ವಾಳ ಕಸಬಾ ಗ್ರಾಮದ ಕೋವಿಡ್ ರೋಗಿ ಸಂಖ್ಯೆ 390 ಮೃತಪಟ್ಟಿದ್ದು, ಅದರಂತೆ ಮುಂಜಾಗ್ರತಾ ಕ್ರಮವಾಗಿ ಮೃತ ರೋಗಿಯ ಮನೆಯ ಸುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಗಳು ಸೀಲ್‍ಡೌನ್ ಘೋಷಿಸಿದ್ದಾರೆ. ಜಿಲ್ಲಾಧಿಕಾರಿ ಆದೇಶದಂತೆ ಪೂರ್ವಕ್ಕೆ ನೆರೆ ವಿಮೋಚನಾ ರಸ್ತೆ, ಪಶ್ಚಿಮಕ್ಕೆ ದೇವರಕಟ್ಟೆ ಬಸ್ ನಿಲ್ದಾಣ, ಉತ್ತರಕ್ಕೆ ಪೂರ್ಣಿಮಾ ಸ್ಟೋರ್ ಜಂಕ್ಷನ್, ದಕ್ಷಿಣಕ್ಕೆ ಎಸ್‍ವಿಎಸ್ ಶಾಲಾ ಆಟದ ಮೈದಾನ ಎಂದು ಗಡಿಗುರುತು ಮಾಡಲಾಗಿದೆ. ಈ ವ್ಯಾಪ್ತಿಯಲ್ಲಿ ಒಟ್ಟು 92 ಮನೆಗಳು, 54 ಅಂಗಡಿಗಳು, ಆಫೀಸ್‍ಗಳು ಇರುವುದೆಂದು ಹಾಗೂ ಒಟ್ಟು ಜನಸಂಖ್ಯೆ 368 ಎಂದು ನಮೂದಿಸಲಾಗಿದೆ.

    ಆದರೆ ಪ್ರಸ್ತುತ ಗಡಿ ಗುರುತು ಮಾಡಿರುವ ವ್ಯಾಪ್ತಿಯ ಒಳಗೆ ಸುಮಾರು 160ಕ್ಕೂ ಹೆಚ್ಚು ಮನೆಗಳು ಬಂಟ್ವಾಳ ಕಸಬಾ ಗ್ರಾಮದಲ್ಲಿ ಹಾಗೂ 10 ಮನೆಗಳು ಅಮ್ಟಾಡಿ ಗ್ರಾಮದಲ್ಲಿರುತ್ತದೆ. ಅಲ್ಲದೆ ಸುಮಾರು 40ಕ್ಕೂ ಹೆಚ್ಚು ಮನೆಗಳು ರಸ್ತೆಯ ರಥಬೀದಿಯಲ್ಲಿದ್ದು, ದೇವರಕಟ್ಟೆ ಬಸ್ ನಿಲ್ದಾಣದಿಂದ ನೆರೆ ವಿಮೋಚನೆಯ ರಸ್ತೆಯ ತನಕ ಸುಮಾರು 750 ಮೀಟರ್ ರಾಜ ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ಹಾಕಿ ಸಂಪೂರ್ಣ ಸೀಲ್‍ಡೌನ್ ಮಾಡಲಾಗಿದೆ.

    ಹೀಗಿರುತ್ತಾ ಜಿಲ್ಲಾಧಿಕಾರಿ ಆದೇಶದಲ್ಲಿ ನಮೂದಿಸಿದ 92 ಮನೆಗಳು ಹಾಗೂ 100 ಮೀಟರ್ ವ್ಯಾಪ್ತಿಯನ್ನು ಗುರುತಿಸುವ ಬಗ್ಗೆ ಈಗಾಗಲೇ ಗ್ರಾಮಸ್ಥರಾದ ನಾವು ಹಲವು ಮಂದಿ ಕಂದಾಯ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರೂ ಯಾವುದೇ ಸ್ಪಂದನೆ ದೊರೆತಿಲ್ಲ. ದೂರವಾಣಿ ಕರೆ ಮಾಡಿದರೂ ಕನಿಷ್ಠ ಸ್ಪಂದನೆಯೂ ದೊರೆತಿಲ್ಲ ಎಂದು ತಹಶೀಲ್ದಾರ್‍ಗೆ ಬರೆದ ಪತ್ರದಲ್ಲಿ ಗ್ರಾಮಸ್ಥರು ಉಲ್ಲೇಖಿಸಿದ್ದಾರೆ.

    ಮುಂಜಾಗ್ರತಾ ಕ್ರಮವಾಗಿ ತಾಲೂಕು ವೈದ್ಯಾಧಿಕಾರಿಗಳು ಎಪ್ರಿಲ್ 27 ಹಾಗೂ 28 ರಂದು 380 ಜನರಿಗೆ ರ್ಯಾಂಡಮ್ ಟೆಸ್ಟ್ ಮಾಡಿದ್ದು, ಎಪ್ರಿಲ್ 22, 23 ಹಾಗೂ 24 ರಂದು ಮೃತರ ಮನೆಯ ಸುತ್ತಲಿನ ಸುಮಾರು 80 ಜನರ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದ್ದಾರೆ. ಇನ್ನೂ 100-150 ಜನರ ಪರೀಕ್ಷೆ ಬಾಕಿ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ ಗ್ರಾಮಸ್ಥರು ನಮ್ಮ ಮನವಿಗೆ ಸ್ಪಂದಿಸಿ ಜಿಲ್ಲಾಧಿಕಾರಿ ಆದೇಶಿಸಿರುವ 100 ಮೀಟರ್ ವ್ಯಾಪ್ತಿ ಹಾಗೂ 92 ಮನೆಗಳನ್ನು ಗುರುತಿಸಿ ದುರುದ್ದೇಶಪೂರಿತವಾಗಿ ಸೀಲ್‍ಡೌನ್ ಮಾಡಿರುವ ಮುಖ್ಯ ರಸ್ತೆಯನ್ನು ತೆರವುಗೊಳಿಸಿ ಉಳಿದವರ ದೈನಂದಿನ ಚಟುವಟಿಕೆಗೋಸ್ಕರ ಅವಕಾಶ ಮಾಡಿಕೊಡಬೇಕು. ತಪ್ಪಿದಲ್ಲಿ ಸಾಮಾಜಿಕ ಅಂತರ ಹಾಗೂ ಲಾಕ್‍ಡೌನ್ ನಿಯಮಾವಳಿಗೆ ಬದ್ದರಾಗಿ ಗ್ರಾಮಸ್ಥರು ರಸ್ತೆಯಲ್ಲೇ ಪ್ರತಿಭಟನೆ ಧರಣಿ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.

ಶಾಸಕರ ಕಿಟ್ ನಿರಾಕರಿಸಿದ ಕಸಬಾ ಗ್ರಾಮಸ್ಥರು?


    ಈ ಮಧ್ಯೆ ಬಂಟ್ವಾಳ ಕಸಬಾ ಗ್ರಾಮದಲ್ಲಿ ಸೀಲ್‍ಡೌನ್ ವಿಚಾರದಲ್ಲಿ ರಾಜಕೀಯ ಪ್ರೇರಿತವಾಗಿ ಅಧಿಕಾರಿಗಳು ನಡೆದುಕೊಂಡಿದ್ದು, ಇದಕ್ಕೆ ಸ್ಥಳೀಯ ಶಾಸಕರು ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿ ಭಾನುವಾರ ಇಲ್ಲಿನ ನಿವಾಸಿಗಳಿಗೆ ಶಾಸಕರ ವತಿಯಿಂದ ರೇಶನ್ ಕಿಟ್ ವಿತರಿಸಲು ಕಾರ್ಯಕರ್ತರು ತೆರಳಿದ ವೇಳೆ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ಕಿಟ್‍ನ್ನೇ ನಿರಾಕರಿಸಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

    ಒಟ್ಟಾರೆ ಬಂಟ್ವಾಳ ಪೇಟೆಯಲ್ಲಿ ಕೋವಿಡ್-19 ಸೋಂಕಿಗೆ ಸಂಬಂಧಪಟ್ಟಂತೆ ಸೀಲ್‍ಡೌನ್ ಮಾಡಿರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದು, ಗ್ರಾಮಸ್ಥರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಪೇಟೆ ಸೀಲ್‍ಡೌನ್ ಬಗ್ಗೆ ಗ್ರಾಮಸ್ಥರ ತಕರಾರು : ಸಮಸ್ಯೆಗೆ ಪರಿಹಾರ ಕಲ್ಪಿಸದಿದ್ದಲ್ಲಿ ಧರಣಿ ಪ್ರತಿಭಟನೆಯ ಎಚ್ಚರಿಕೆ Rating: 5 Reviewed By: karavali Times
Scroll to Top