ಮನೆಗೆ ತೆರಳುವ ಅವಕಾಶವಿಲ್ಲದೆ ಕೊರೋನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಭುವನಾ ಭರತ್ - Karavali Times ಮನೆಗೆ ತೆರಳುವ ಅವಕಾಶವಿಲ್ಲದೆ ಕೊರೋನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಭುವನಾ ಭರತ್ - Karavali Times

728x90

12 May 2020

ಮನೆಗೆ ತೆರಳುವ ಅವಕಾಶವಿಲ್ಲದೆ ಕೊರೋನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಭುವನಾ ಭರತ್
ಮಂಗಳೂರು (ಕರಾವಳಿ ಟೈಮ್ಸ್) : ದೇಶವೇ ಕೊರೋನಾ ಹಾವಳಿಯಿಂದ ತತ್ತರಿಸಿರುವ ಸಂದರ್ಭ ಸೋಂಕು ಪೀಡಿತರಿಗಾಗಿ ಆಹೋ-ರಾತ್ರಿ ದುಡಿಯುತ್ತಿರುವ ಕೊರೋನಾ ವಾರಿಯರ್ಸ್‍ಗಳನ್ನು ಗುರುತಿಸುವ ಕಾರ್ಯ ನಿರಂತರವಾಗಿ ನಡೆಯಬೇಕಾಗಿದೆ. ಕಾರಣ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಇನ್ನೊಬ್ಬರ ಜೀವ ಉಳಿಸುವ ಕಾಯಕದಲ್ಲಿ ಅವರು ನಿತ್ಯವೂ ತೊಡಗಿಸಿಕೊಳ್ಳುತ್ತಾರೆ.

ಇಂತಹ ಕೊರೋನಾ ವಾರಿಯರ್ಸ್‍ಗಳ ಪೈಕಿ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಭುವನಾ ಭರತ್ ಪರಮಲೆ ಅವರು ಪಿಪಿಇ ಕಿಟ್ ಧರಿಸಿಕೊಂಡು ನಗರದ ಕೋವಿಡ್ ಆಸ್ಪತ್ರೆಯಲ್ಲಿ ಕೊರೋನಾ ಪೀಡಿತರ ಆರೈಕೆ ಮಾಡುತ್ತಿದ್ದಾರೆ. ಕಳೆದ 8 ವರ್ಷಗಳಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಭುವನಾ ಅವರು ಇದೀಗ ಕಳೆದ ಎರಡೂವರೆ ತಿಂಗಳಿನಿಂದ ಕೊರೋನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೋವಿಡ್-19 ಪಾಸಿಟಿವ್ ವಾರ್ಡಿನಲ್ಲಿ ಹಾಗೂ ಐಸಿಯುನಲ್ಲಿಯೂ ಇವರು ಕರ್ತವ್ಯ ನಿರ್ವಹಿಸುವ ಮೂಲಕ ಮಾರಕ ಕಾಯಿಲೆಯಿಂದ ಬಳಲುತ್ತಿರುವವರ ಜೀವ ಉಳಿಸುವ ಪ್ರಯತ್ನವನ್ನು ಮುಂದುವರಿಸುತ್ತಿದ್ದಾರೆ.

ಸದ್ಯ ಇವರ ಪತಿ ಭರತ್ ಗೌಡ ಅವರು ಬಿ ಸಿ ರೋಡು ಎಸ್‍ಡಿಸಿಸಿ ಬ್ಯಾಂಕ್ ಉದ್ಯೋಗಿಯಾಗಿ ದುಡಿಯುತ್ತಿದ್ದು, ಬಿಸಿ ರೋಡಿನ ಮೊಡಂಕಾಪಿನ ಬಾಡಿಗೆಯಲ್ಲಿ ವಾಸವಾಗಿದ್ದಾರೆ. ಆದರೆ ಕೋವಿಡ್ ಸೇವೆಯಲ್ಲಿರುವ ಭುವನಾ ಅವರು ಮನೆಗೆ ಹೋಗುವ ಅವಕಾಶ ಇಲ್ಲ. ವಾರಕ್ಕೊಮ್ಮೆ ಪತಿ ಭರತ್ ಅವರೇ ಮಂಗಳೂರಿಗೆ ಬಂದು ಪತ್ನಿಯ ಆರೋಗ್ಯದ ಬಗ್ಗೆ ವಿಚಾರಿಸಿ ತಿಳಿದುಕೊಂಡು ತೆರಳುತ್ತಾರೆ. ಪ್ರತಿನಿತ್ಯ ನಾಲ್ಕು ಗಂಟೆಗಳ ಕಾಲ ಪಿಪಿಇ ಕಿಟ್ ಧರಿಸಿಕೊಂಡೇ ಕರ್ತವ್ಯ ನಿರ್ವಹಿಸಬೇಕಾಗಿದ್ದು, ಪಿಪಿಇ ಕಿಟ್ ಧರಿಸುವುದೇ ಒಂದು ಸವಾಲಾಗಿದೆ. ಸೇವೆಯ ನಡುವೆ ಒಂದಷ್ಟು ಯಾಮಾರಿದರೂ ಪ್ರಾಣಕ್ಕೆ ಎರವಾಗುವ ಸಾಧ್ಯತೆ ಇರುವುದರಿಂದ ಬಹಳಷ್ಟು ಜಾಗರೂಕತೆಯಿಂದ ಭುವನಾ ಅವರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮಾರಕ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಾಗೂ ಜನ ಹತ್ತಿರ ಸುಳಿಯಲೂ ಹೆದರುತ್ತಿರುವ ಮಧ್ಯೆ ಇಂತಹ ಕೊರೋನಾ ವಾರಿಯರ್ಸ್‍ಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಹೆಮ್ಮೆ ಪಡಲೇಬೇಕಾಗಿದೆ. ಪ್ರಾಣ ಭಯದ ನಡುವೆಯೂ ಸಮಾಜದ ಸೋಂಕಿತರ ಪ್ರಾಣ ಉಳಿಸುವ ನಿಟ್ಟಿನಲ್ಲಿ ಮನೆ-ಕುಟುಂಬ ಬಿಟ್ಟು ನಿತ್ಯವೂ ಸೇವೆ ಸಲ್ಲಿಸುತ್ತಿರುವ ಇಂತಹ ವಾರಿಯರ್ಸ್‍ಗಳಿಗಾಗಿ ಸಮಾಜ ಸದಾ ನಿಷ್ಕಳಂಕ ಹೃದಯದಿಂದ ಪ್ರಾರ್ಥಿಸುವ ಅನಿವಾರ್ಯತೆ ಇದೆ. ಇಂದು ದೇಶವನ್ನು ಕಾಯುತ್ತಿರುವುದು ಇಂತಹ ವಾರಿಯರ್ಸ್‍ಗಳಾಗಿದ್ದು, ಇವರ ಆರೋಗ್ಯದ ಬಗ್ಗೆ ಸರಕಾರವೂ ವಿಶೇಷ ಕಾಳಜಿ ವಹಿಸಬೇಕಾಗಿದೆ.
  • Blogger Comments
  • Facebook Comments

0 comments:

Post a Comment

Item Reviewed: ಮನೆಗೆ ತೆರಳುವ ಅವಕಾಶವಿಲ್ಲದೆ ಕೊರೋನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಭುವನಾ ಭರತ್ Rating: 5 Reviewed By: karavali Times
Scroll to Top