ನೇತ್ರಾವತಿ ವೀರರ ಬಗ್ಗೆ ಸರಕಾರ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ : ವೆಲ್ಫೇರ್ ಪಾರ್ಟಿ ಕಿಡಿ - Karavali Times ನೇತ್ರಾವತಿ ವೀರರ ಬಗ್ಗೆ ಸರಕಾರ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ : ವೆಲ್ಫೇರ್ ಪಾರ್ಟಿ ಕಿಡಿ - Karavali Times

728x90

27 May 2020

ನೇತ್ರಾವತಿ ವೀರರ ಬಗ್ಗೆ ಸರಕಾರ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ : ವೆಲ್ಫೇರ್ ಪಾರ್ಟಿ ಕಿಡಿ




ಬಂಟ್ವಾಳ (ಕರಾವಳಿ ಟೈಮ್ಸ್) : ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಮುಳುಗುತ್ತಿದ್ದ ನಿಶಾಂತ್ ಎಂಬ ಹುಡುಗನ ಜೀವ ರಕ್ಷಣೆಗೆ ಗೂಡಿನಬಳಿ ಪ್ರದೇಶದ ಈಜುಪಟು ಯುವಕರು ಪ್ರಯತ್ನಿಸಿದ ಸಾಹಸಿ ಘಟನೆ ದೇಶಾದ್ಯಂತ ಸಂಚಲ ಮೂಡಿಸಿದ್ದು, ಈ ನೇತ್ರಾವತಿ ವೀರರಿಗೆ ನಾಡಿನಾದ್ಯಂತ ಶಹಬ್ಬಾಸ್ ಗಿರಿ ಬರುತ್ತಿರುವುದಲ್ಲದೆ ಜಾತಿ-ಮತ ಬೇಧ ಮರೆತು ಅವರನ್ನು ಗೌರವಿಸುವ, ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿರುವಾಗ ಸ್ಥಳೀಯ ಶಾಸಕರ ಸಹಿತ ಇಲ್ಲಿನ ಜನಪ್ರತಿನಿಧಿಗಳಾಗಲೀ ಇನ್ನೂ ಎಚ್ಚೆತ್ತುಕೊಂಡಿಲ್ಲ. ಸಾಹಸಿಗಳ ಜೀವ ಕಾರುಣ್ಯ ಸೇವೆಯನ್ನು ಗುರುತಿಸುವ ಸನ್ಮನಸ್ಸು ತೋರದೆ ಇರುವುದು ಅತ್ಯಂತ ಖೇದಕರ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಜಿಲ್ಲಾಧ್ಯಕ್ಷ ಸುಲೈಮಾನ್ ಕಲ್ಲರ್ಪೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಬುಧವಾರ ಪಾಣೆಮಂಗಳೂರು ಸಮೀಪದ ಬೋಳಂಗಡಿಯ ಉಮ್ಮುಲ್ ಕುರಾ‌ ತಹ್ ಫೀಝುಲ್ ಕುರ್ ಆನ್ ಮದ್ರಸ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸುಮಾರು 20-25 ಮೀಟರ್ ಎತ್ತರದ ಸೇತುವೆಯಿಂದ ನದಿಗೆ ಹಾದಿ ಯುವಕನ ರಕ್ಷಣೆಗೆ ಧಾವಿಸಿ ಬಂದಿದ್ದ ಮುಹಮ್ಮದ್, ಶಮೀರ್, ತೌಸೀಫ್, ಝಾಹಿದ್, ಮುಖ್ತಾರ್ ಹಾಗೂ ಆರಿಫ್ ಎಂಬವರ ಶ್ರಮ ನಿಜಕ್ಕೂ ಸಾಹಸಿಕ ಘಟನೆ ಎಂಬುದು ಒಪ್ಪಿಕೊಳ್ಳಲೇಬೇಕಾಗಿದೆ ಎಂದರು.

ಇಲ್ಲಿನ ಸಾಹಸಿ ಯುವಕರು ಈ ಹಿಂದೆಯೂ ತಮ್ಮ ಜೀವವನ್ನು ಪಣಕ್ಕಿಟ್ಟು ಇಂತಹ ಹಲವು ಸೇವಾ ಕಾರ್ಯಗಳನ್ನು ಮಾಡಿರುವುದಕ್ಕೆ ಇಡೀ ಸಮಾಜ ಸಾಕ್ಷಿಯಾಗಿದೆ. ಹೀಗಿದ್ದರೂ ಕನಿಷ್ಠ ತಾಲೂಕಾಡಳಿತ, ಜಿಲ್ಲಾಡಳಿತವಾಗಲೀ ಅಥವಾ ಸ್ಥಳೀಯ ಶಾಸಕರ ಮಟ್ಟದಲ್ಲೂ ಗುರುತಿಸುವ ಕಾರ್ಯ ನಡೆದಿಲ್ಲ ಎಂಬುದೇ ಇಂದು ಚರ್ಚೆಗೆ ಅವಕಾಶ ಒದಗಿಸಿಕೊಟ್ಟ ವಿಚಾರವಾಗಿದೆ ಎಂದರು.


ರಾಜಕೀಯ ಪಕ್ಷಗಳ ಕೆಸರೆರಚಾಟ ಖಂಡನೀಯ


ಇಂತಹ ಮಾನವೀಯ ಹಾಗೂ ಜೀವ ಕಾರುಣ್ಯದ ಸೇವೆಗಳ ಸಂದರ್ಭಗಳಲ್ಲೂ ಬಿಜೆಪಿ-ಕಾಂಗ್ರೆಸ್ ಪಕ್ಷದ ನಾಯಕರು ಕೋಮು ರಾಜಕೀಯ ಹಾಗೂ ರಾಜಕೀಯ ಕೆಸರೆರಚಾಟ ನಡೆಸುತ್ತಿರುವುದು ಅತ್ಯಂತ ಖಂಡನೀಯ ಎಂದ ಸುಲೈಮಾನ್ ಕಲ್ಲರ್ಪೆ ಅವರು ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಯು ಟಿ ಖಾದರ್ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಸುವ ಚರ್ಚೆಗೆ ವಿರಾಮ ಹಾಕಿ ಸಾಹಸಿ ಯುವಕರಿಗೆ ಗೌರವ ಸಲ್ಲಿಸುವ ಕೆಲಸ ಪ್ರಾರಂಭಿಸಬೇಕು. ಜನಪ್ರತಿನಿಧಿಗಳು ಎಂಬ‌ ನೆಲೆಯಲ್ಲಿ ಇವರ ಸಾಹಸವನ್ನು ಗುರುತಿಸುವ ನಮನ ನಿಟ್ಟಿನಲ್ಲಿ ಸರಕಾರಕ್ಕೆ ಒತ್ತಡ ಹಾಕುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.


ಜೀವನ್ ರಕ್ಷಾ ಪದಕ್ ನೀಡಿ ಕೇಂದ್ರ ಸರಕಾರ ಗೌರವಿಸಲಿ


ಗೂಡಿನಬಳಿ ಯುವಕರ ಸಾಹಸಿ ಕಾರ್ಯವನ್ನು ಗುರುತಿಸಿ ಕೇಂದ್ರ ಸರಕಾರ ಕೊಡಮಾಡುವ 'ಜೀವನ್ ರಕ್ಷಾ ಪದಕ್' ಪ್ರಶಸ್ತಿಯನ್ನು ನೀಡಿ ಈ ವೀರರನ್ನು ದೇಶದಲ್ಲೇ ಗುರುತಿಸುವ ಕಾರ್ಯ ಮಾಡಬೇಕು ಎಂದ ಸುಲೈಮಾನ್ ಈ ಬಗ್ಗೆ ರಾಜ್ಯ ಸರಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿದರು.

ಜೀವ ರಕ್ಷಕ ಕಾರ್ಯ ಮಾಡುವ ಮಂದಿಗೆ ಕೇಂದ್ರ ಸರಕಾರ ಪ್ರತೀ ವರ್ಷ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸಮರ್ಪಿಸುವ ಜೀವನ್ ರಕ್ಷಾ ಪದಕ್ ಪ್ರಶಸ್ತಿಯು ಪದಕ, ಪ್ರಶಸ್ತಿ ಪತ್ರ ಸೇರಿದಂತೆ 1  ರಿಂದ 2 ಲಕ್ಷ ರೂಪಾಯಿವರೆಗಿನ ಗೌರವಧನ ಒಳಗೊಂಡಿರುತ್ತದೆ ಎಂದವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷ ಪ್ರಮುಖರಾದ ಮೊಯಿನ್ ಕಮರ್, ಶ್ರೀಕಾಂತ್ ಸಾಲ್ಯಾನ್, ದಿವಾಕರ ಬೋಳೂರು, ಎಸ್ ಎಂ ಮುತಾಲಿಬ್, ತಫ್ಲೀಲ್ ಯು, ಸಲೀಂ ಬೋಳಂಗಡಿ, ಸತ್ತಾರ್ ಗೂಡಿನಬಳಿ ಮೊದಲಾದವರು ಉಪಸ್ಥಿತರಿದ್ದರು.








  • Blogger Comments
  • Facebook Comments

0 comments:

Post a Comment

Item Reviewed: ನೇತ್ರಾವತಿ ವೀರರ ಬಗ್ಗೆ ಸರಕಾರ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ : ವೆಲ್ಫೇರ್ ಪಾರ್ಟಿ ಕಿಡಿ Rating: 5 Reviewed By: karavali Times
Scroll to Top