ಆನ್‍ಲೈನ್ ತರಗತಿ ಬಗ್ಗೆ ಶಿಕ್ಷಣ, ಕಾನೂನು ಸಚಿವರ ದ್ವಂದ್ವ ಹೇಳಿಕೆ : ಗೊಂದಲಕ್ಕೀಡಾಗಿರುವ ವಿದ್ಯಾರ್ಥಿ ಪೋಷಕರು - Karavali Times ಆನ್‍ಲೈನ್ ತರಗತಿ ಬಗ್ಗೆ ಶಿಕ್ಷಣ, ಕಾನೂನು ಸಚಿವರ ದ್ವಂದ್ವ ಹೇಳಿಕೆ : ಗೊಂದಲಕ್ಕೀಡಾಗಿರುವ ವಿದ್ಯಾರ್ಥಿ ಪೋಷಕರು - Karavali Times

728x90

11 June 2020

ಆನ್‍ಲೈನ್ ತರಗತಿ ಬಗ್ಗೆ ಶಿಕ್ಷಣ, ಕಾನೂನು ಸಚಿವರ ದ್ವಂದ್ವ ಹೇಳಿಕೆ : ಗೊಂದಲಕ್ಕೀಡಾಗಿರುವ ವಿದ್ಯಾರ್ಥಿ ಪೋಷಕರುಬೆಂಗಳೂರು (ಕರಾವಳಿ ಟೈಮ್ಸ್) : ವಿದ್ಯಾರ್ಥಿಗಳ ಆನ್‍ಲೈನ್ ತರಗತಿ ಬಗ್ಗೆ ಶಿಕ್ಷಣ ಸಚಿವ ಹಾಗೂ ಕಾನೂನು ಸಚಿವರ ದ್ವಂದ್ವ ಹೇಳಿಕೆಗಳು ಇದೀಗ ಮತ್ತೆ ವಿದ್ಯಾರ್ಥಿಗಳ, ಪೋಷಕರ ಹಾಗೂ ಶಿಕ್ಷಕರ ಪಾಲಿಗೆ ಒಂದು ರೀತಿಯ ಗೊಂದಲವನ್ನು ಸೃಷ್ಟಿಸಿ ಹಾಕಿದೆ.

ನಿನ್ನೆ ಸುದ್ದಿಗೋಷ್ಠಿ ನಡೆಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಎಲ್.ಕೆ.ಜಿ, ಯುಕೆಜಿ ಸೇರಿದಂತೆ 5ನೇ ತರಗತಿವರೆಗೆ ಆನ್‍ಲೈನ್ ತರಗತಿ ರದ್ದುಪಡಿಸಿ ಆದೇಶ ಹೊರಡಿಸಲಾಗಿದೆ ಎಂದು ಹೇಳಿದ್ದರು. ಇಂದು ಮುಖ್ಯಮಂತ್ರಿ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಕಾನೂನು ಸಚಿವ ಜೆ.ಪಿ. ಮಾಧುಸ್ವಾಮಿ 7ನೇ ತರಗತಿವರೆಗೂ ಆನ್‍ಲೈನ್ ತರಗತಿ ರದ್ದುಪಡಿಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ಮಾಧುಸ್ವಾಮಿ ಸುದ್ದಿಗೋಷ್ಠಿಯ ಬಳಿಕ ಮತ್ತೆ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದು, 6 ಮತ್ತು 7ನೇ ತರಗತಿಗೆ ಆನ್‍ಲೈನ್ ಶಿಕ್ಷಣ ರದ್ದು ಸಂಬಂಧ ಸರಕಾರ ನಿರ್ಧಾರ ಪ್ರಕಟಿಸಿಲ್ಲ ಎಂದು ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸುರೇಶ್ ಕುಮಾರ್, ಕರ್ನಾಟಕ ಸರ್ಕಾರ ಎಲ್‍ಕೆಜಿ, ಯುಕೆಜಿ, 1 ರಿಂದ 5ನೇ ತರಗತಿಯವರೆಗಿನ ಆನ್‍ಲೈನ್ ಶಿಕ್ಷಣವನ್ನು ರದ್ದು ಮಾಡಿದೆ. 6 ಮತ್ತು 7ನೇ ತರಗತಿಯವರೆಗಿನ ಆನ್‍ಲೈನ್ ಶಿಕ್ಷಣವನ್ನು ರದ್ದು ಮಾಡಬೇಕು ಎಂದು ಕೆಲ ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಸರಕಾರ ರದ್ದುಪಡಿಸುವ ಯಾವುದೇ ನಿರ್ಧಾರ ಪ್ರಕಟಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇಂದು ಕ್ಯಾಬಿನೆಟ್ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ, ಸಂಪುಟದಲ್ಲಿ ಆನ್‍ಲೈನ್ ತರಗತಿಯ ಬಗ್ಗೆ ಚರ್ಚೆ ನಡೆಯಿತು. 7ನೇ ತರಗತಿಯವರೆಗಿನ ಆನ್‍ಲೈನ್ ಶಿಕ್ಷಣವನ್ನು ರದ್ದು ಮಾಡುವಂತೆ ಸಚಿವರು ಒತ್ತಾಯಿಸಿದರು. ಹೀಗಾಗಿ ಎಲ್ಲ ಮಾದರಿಯ ಪಠ್ಯ ಬೋಧಿಸುತ್ತಿರುವ ಶಾಲೆಗಳಲ್ಲಿ ನಡೆಯುತ್ತಿರುವ 7ನೇ ತರಗತಿವರೆಗೆ ಆನ್‍ಲೈನ್ ಶಿಕ್ಷಣವನ್ನು ರದ್ದು ಮಾಡಲಾಗಿದೆ ಎಂದು ತಿಳಿಸಿದ್ದರು.

ಸಾಕಷ್ಟು ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಅನಾನುಕೂಲವಾಗುವ ಕಾರಣಕ್ಕೆ 6 ಮತ್ತು 7 ತರಗತಿಗಳಿಗೆ ಆನ್‍ಲೈನ್ ಶಿಕ್ಷಣ ಬೇಡ ಎಂದು ಸಂಪುಟ ಒಮ್ಮತದ ತೀರ್ಮಾನ ಮಾಡಿತು. ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕಾಗಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. 8ನೇ ತರಗತಿ ಹಾಗೂ 9ನೇ ತರಗತಿ ಆನ್‍ಲೈನ್ ಕ್ಲಾಸ್ ನಡೆಯುತ್ತಿದೆ. ಇದನ್ನೂ ನಿಲ್ಲಿಸಬೇಕೇ ಅಥವಾ ಬೇಡವೇ ಎನ್ನುವುದರ ಬಗ್ಗೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದರು.

ಈಗಾಗಲೇ ರಾಜ್ಯಾದ್ಯಂತ ವಿದ್ಯಾರ್ಥಿ ಪೋಷಕರು ಆನ್‍ಲೈನ್ ಕ್ಲಾಸ್ ವಿರುದ್ಧ ಅಭಿಯಾನ ಆರಂಭಿಸಿದ್ದಾರೆ. ಈ ಹಿನ್ನಲೆಯಲ್ಲಿ ಬುಧವಾರ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸಭೆ ನಡೆಸಿದ್ದರು. ಈ ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಜಗದೀಶ್, ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಸಮಗ್ರ ಶಿಕ್ಷಣ ಇಲಾಖೆ ನಿರ್ದೇಶಕ ರಿಜು, ಚಿಂತಕ ಗುರುರಾಜ ಕರ್ಜಗಿ, ಶಿಕ್ಷಣ ತಜ್ಞ ನಿರಂಜನ ಆರಾಧ್ಯ, ನಿಮ್ಹಾನ್ಸ್ ತಜ್ಞ ವೈದ್ಯರು ಹಾಗೂ ಖಾಸಗಿ ಶಾಲೆಗಳ ಸಂಘಟನೆ ಒಕ್ಕೂಟ (ಕ್ಯಾಮ್ಸ್) ಸಂಘಟನೆಯ ಕಾರ್ಯದರ್ಶಿ ಶಶಿಕುಮಾರ್ ಭಾಗವಹಿಸಿದ್ದರು. ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ 1 ರಿಂದ 5ನೇ ತರಗತಿಯವರೆಗಿನ ಮಕ್ಕಳ ಆನ್‍ಲೈನ್ ಶಿಕ್ಷಣವನ್ನು ರದ್ದು ಮಾಡಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ಆನ್‍ಲೈನ್ ತರಗತಿ ಬಗ್ಗೆ ಶಿಕ್ಷಣ, ಕಾನೂನು ಸಚಿವರ ದ್ವಂದ್ವ ಹೇಳಿಕೆ : ಗೊಂದಲಕ್ಕೀಡಾಗಿರುವ ವಿದ್ಯಾರ್ಥಿ ಪೋಷಕರು Rating: 5 Reviewed By: karavali Times
Scroll to Top