ಪರಿಸರ ಪ್ರೇಮ ಒಂದೇ ದಿನಕ್ಕೆ ಸೀಮಿತವಾಗದಿರಲಿ... - Karavali Times ಪರಿಸರ ಪ್ರೇಮ ಒಂದೇ ದಿನಕ್ಕೆ ಸೀಮಿತವಾಗದಿರಲಿ... - Karavali Times

728x90

4 June 2020

ಪರಿಸರ ಪ್ರೇಮ ಒಂದೇ ದಿನಕ್ಕೆ ಸೀಮಿತವಾಗದಿರಲಿ...



- ಡಿ.ಎಸ್.ಐ.ಬಿ ಪಾಣೆಮಂಗಳೂರು

1972 ರಲ್ಲಿ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಪರಿಸರ ದಿನಾಚರಣೆ ಆಚರಿಸಬೇಕು ಎಂದು ನಿರ್ಧರಿಸಲಾಯಿತು. 1973 ರಿಂದ ಪರಿಸರ ದಿನದ ಆಚರಣೆ ಪ್ರಾರಂಭವಾಯಿತು. ಅಂತೆಯೇ ಜೂನ್ 5 ವಿಶ್ವ ಪರಿಸರ ದಿನಾಚರಣೆ. ಪ್ರಪಂಚದಾದ್ಯಂತ ಗಿಡ ನೆಡುವ ಸಂಭ್ರಮ. ಪ್ರತಿಯೊಂದು ಶಾಲೆ, ಮನೆ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಗಿಡ ನೆಡುವುದು ಮತ್ತು ವಿತರಿಸುವ ಮೂಲಕ ಪರಿಸರ ದಿನಕ್ಕೆ ಕೈ ಜೋಡಿಸುತ್ತಿದ್ದಾರೆ.

ವಿಶ್ವ ಪರಿಸರ ದಿನ ವರ್ಷಕ್ಕೊಮ್ಮೆ ಆಚರಿಸಿದರೆ, ನಾಶ ದಿನವಾಗಿ ಪ್ರತಿದಿನವೂ ಆಚರಿಸುತ್ತಿದ್ದಾರೆ.
ಕಾಲುದಾರಿಯಿಂದ  ರಾಷ್ಟ್ರೀಯ ಹೆದ್ದಾರಿ ನಿರ್ಮಾಣವರೆಗೆ ರಸ್ತೆ ಮಾಡವ ಸಲುವಾಗಿ ಅದೆಷ್ಟೋ ಮರ, ಗಿಡಗಳನ್ನು ನಾಶ ಮಾಡುತ್ತಿರುವ ದೃಶ್ಯಗಳನ್ನು ಪ್ರತಿಯೊಬ್ಬರು ಕೂಡ ನೋಡಿರಬಹುದು. ಒಂದು ದಿನವಾಗಿ ಅಚರಿಸಲು ನಿರ್ಮಿಸುವ ವೇದಿಕೆಯಲ್ಲಿ ಕೆಲವೊಂದು ಅಧಿಕಾರಿಗಳ ಭಾಷಣ ಕೇಳಿದರೆ ಕಲ್ಲು ಹೃದಯ ಕೂಡ ಕರಗಬಹುದು ಅಷ್ಟೊಂದು ಗಂಭೀರವಾದ ಭಾಷಣವಾಗಿರುತ್ತೆ ಆದರೆ ಅದೇ ಅಧಿಕಾರಿಗಳು ಕೆಲವೊಮ್ಮೆ ರಸ್ತೆ, ಕಟ್ಟಡ ನಿರ್ಮಾಣಗಳು ಬಂದಾಗ ಮರಗಿಡಗಳನ್ನು ನಾಶ ಮಾಡಲು ಸೂಚಿಸುತ್ತಾರೆ. ವೇದಿಕೆಯಲ್ಲಿ ಇದ್ದ ಪರಿಸರ ಸ್ನೇಹ ಕಛೇರಿಯಲ್ಲಿ ಕೂತಾಗ ಎಲ್ಲಿ ಹೋಯಿತು. ಸರಿಯಾಗಿ ಬೀಳುತ್ತಿದ್ದ ಮಳೆ ಕಣ್ಮರೆಯಾಗಿದೆ. ಕಾರಣ ಒಂದೇ ನಾವುಗಳು ನಾಶ ಮಾಡುತ್ತಿರುವ ಪರಿಸರದಿಂದಾಗಿದೆ.

ಒಂದು ದಿನಕ್ಕಾಗಿ ಮಾಧ್ಯಮದ ಮುಂದೆ ಒಂದು ಗಿಡನೆಟ್ಟು  ಪರಿಸರ ಸ್ನೇಹಿಯಾದರೆ ಸಾಲದು ಆ ಗಿಡ ಬೆಳೆದು ಮರವಾಗಿ ಮನುಷ್ಯನಿಗಲ್ಲದಿದ್ದರು ಪ್ರಾಣಿ ಪಕ್ಷಿಗಳಿಗಾದರು ನೆರಳಾಗಲು ನಾವು ಕಾರಣರಾಗಬೇಕಾಗಿದೆ.
ಮರಗಿಡಗಳ ನಾಶದಿಂದಾಗಿ ಸೂರ್ಯನ ಬಿಸಿಲಿಗೆ ಬರೀ ಮನುಷ್ಯನಿಗೆ ಅಲ್ಲದೆ ಪ್ರಾಣಿ, ಪಕ್ಷಿಗಳಿಗೂ ತಡೆಯಲು ಸಾಧ್ಯವಾಗುತ್ತಿಲ್ಲ. ‌ಆರೋಗ್ಯ ಕೂಡ ಕೆಡುತ್ತಿವೆ. ಮಾನವ ಹಣದ ಆಸೆಗಾಗಿ ಮರ ಗಿಡಗಳನ್ನು ಕಡಿದು ಕಟ್ಟಡ, ಕಾರ್ಖಾನೆಗಳನ್ನು ನಿರ್ಮಿಸಿ, ಕೊನೆಗೆ ಆರೋಗ್ಯ ಕೆಡುವಾಗ ಪರಿಸರ ನೆನಪಾದರೆ ಏನು ಪ್ರಯೋಜನ. ಇಂದು ಕೃಷಿ ಮಾಡೋಣ ಅಂದರು ಸರಿಯಾದ ಜಾಗ ಕೂಡ ಸಿಗುತ್ತಿಲ್ಲ ಕಟ್ಟಡಗಳೆ ತಲೆ ಎತ್ತಿ ನಿಂತಿವೆ. ಕಟ್ಟಡಗಳ ಕಲುಷಿತವಾದ ನೀರುಗಳಿಂದಲೂ ಪರಿಸರ, ಕೃಷಿ ಭೂಮಿ ಕೆಡುತ್ತಿವೆ. ರೈತ ಕೃಷಿ ಭೂಮಿ ನಾಶದಿಂದಾಗಿ ಆತ್ಮಹತ್ಯೆಗೆ ದಾರಿಯಾಗುತ್ತಿವೆ.

ಪರಿಸರ ಸ್ನೇಹಿಯೆಂದು ಗಿಡವೊಂದು ನೆಡುವ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಪ್ರತಿಯೊಂದು ನಿಮಿಷ ಆ ಫೋಟೋಗೆ ಎಷ್ಟು ಲೈಕ್, ಕಾಮೆಂಟ್ ಗಳು ಬಂದಿವೆಂದು ನೋಡುವ ಹಾಗೆ ನೆಟ್ಟ ಗಿಡವನ್ನು ಕೂಡ ನೋಡುತ್ತಲೇ ಇರಬೇಕು. ಇನ್ನೂ ಗಿಡಗಳನ್ನು ರಸ್ತೆ ಬದಿ ಅಥವಾ ಗಿಡ ಕಳೆದುಕೊಳ್ಳುವ ಸಾಧ್ಯತೆ ಇರುವಂತಹ ಸ್ಥಳಗಳಲ್ಲಿ ನೆಡಬೇಡಿ ಮುಂದೆ ಮರವಾಗಿ ಬೆಳೆದಾಗ ಕಡಿಯಬೇಕಾಗಿ ಬರುವುದು ಅತೀ ಹೆಚ್ಚು ಅದಕ್ಕಾಗಿ ಸೂಕ್ತ ಸ್ಥಳಗಳಲ್ಲಿ ಬೆಳೆಸಿರಿ.

 ಪರಿಸರ ಸ್ನೇಹಿ ಸಾಲುಮರ ತಿಮ್ಮಕ್ಕರ ಬಗ್ಗೆ ತಿಳಿಯೋಣ.

  ತಿಮ್ಮಕ್ಕ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದರು. ತಂದೆ ಚಿಕ್ಕರಂಗಯ್ಯ, ತಾಯಿ ವಿಜಯಮ್ಮ. ಇವರಿಗೆ ಯಾವುದೇ ಔಪಚಾರಿಕ ಶಿಕ್ಷಣ ಲಭ್ಯವಾಗದೆ ಹತ್ತಿರದ ಒಂದು ಕಲ್ಲು ಗಣಿಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡಿದರು. ಇವರು ಚಿಕ್ಕಯ್ಯ ಎಂಬ ಒಬ್ಬ ದನಕಾಯುವವರನ್ನು ಮದುವೆಯಾಗಿದ್ದರು. ದುರದೃಷ್ಟವಶಾತ್, ಇವರಿಗೆ ಮಕ್ಕಳಿರಲಿಲ್ಲ. ತಿಮ್ಮಕ್ಕ ಅವರು ತಮಗೆ ಮಕ್ಕಳಿರದ ದುಃಖವನ್ನು ಮರೆಯಲು ಆಲದ ಮರಗಳನ್ನು ನೆಡಲಾರಂಭಿಸಿದರು. ಕುದೂರಿನಿಂದ ಹುಲಿಕಲ್ ತನಕವಿರುವ ರಾಜ್ಯ ಹೆದ್ದಾರಿ 94ರಲ್ಲಿ ತಿಮ್ಮಕ್ಕರವರು ಬೆಳಸಿದ ಆಲದ ಮರಗಳು ತಿಮ್ಮಕ್ಕ ಅವರ ಹಳ್ಳಿಯ ಬಳಿ ಆಲದ ಮರಗಳು ಹೇರಳವಾಗಿದ್ದವು. ತಿಮ್ಮಕ್ಕ ಮತ್ತು ಅವರ ಪತಿ ಈ ಮರಗಳಿಂದ ಸಸಿಗಳನ್ನು ಕಸಿಮಾಡಲು ಆರಂಭಿಸಿದರು. ಮೊದಲ ವರ್ಷದಲ್ಲಿ ಹತ್ತು ಸಸಿಗಳನ್ನು ನೆರೆಯ ಕುದೂರು ಹಳ್ಳಿಯ ಬಳಿ 4 ಕಿ.ಮೀ. ಉದ್ದಳತೆಯ ದೂರ ನೆಡಲಾಯಿತು. ಹೀಗೆಯೇ ಎರಡನೇ ವರ್ಷ 15 ಮತ್ತು ಮೂರನೇ ವರ್ಷ 20 ಸಸಿಗಳನ್ನು ನೆಡಲಾಯಿತು.

ಇವರು ಈ ಸಸಿಗಳನ್ನು ನೆಡಲು ತಮ್ಮ ಅತ್ಯಲ್ಪ ಆದಾಯವನ್ನೇ ಬಳಸಿದರು. ಈ ಗಂಡ-ಹೆಂಡಿರು ಸಸಿಗಳಿಗೆ ನೀರುಣಿಸಲು ಬಿಂದಿಗೆ ಕೊಳಗಗಳಲ್ಲಿ ನೀರನ್ನು ನಾಲ್ಕು ಕಿ.ಮೀ. ದೂರ ಸಾಗಿಸುತ್ತಿದ್ದರು. ಹಾಗೂ ಸಸಿಗಳನ್ನು ಮೇವಿನ ಜಾನುವಾರುಗಳ ಕಾಟದಿಂದ ತಪ್ಪಿಸಲು ಅವುಗಳ ಸುತ್ತ ಮುಳ್ಳು ಪೊದೆಗಳನ್ನು ಹೊದಿಸಿ ಕಾಪಾಡಿದರು. ಸಸಿಗಳು ಬೆಳೆಯಲು ನೀರಿನ ಅವಶ್ಯಕತೆಯಿರುವುದರಿಂದ, ಅವುಗಳನ್ನು ಹೆಚ್ಚಾಗಿ ಮುಂಗಾರು ಮಳೆಯ ಕಾಲದಲ್ಲಿ ನೆಡುತ್ತಿದ್ದರು.

ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ ಈಕೆ ಓರ್ವ ಅನಕ್ಷರಸ್ಥೆಯಾಗಿದ್ದುಕೊಂಡು ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದುದನ್ನು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ ಅಲ್ಲದೆ ಈಕೆ ಮುಂದಿನ ಪೀಳಿಗೆಯ ಒಳಿತಿಗಾಗಿ ಮರಗಳಿಗೆ ನೀರುಣಿಸಿ ಬೆಳೆಸಿದ್ದಾಳೆ.
ಸ್ನೇಹಿತರೇ ಇಂತಹ ವ್ಯಕ್ತಿಗಳಿಗಿರುವ ಪ್ರೇಮವನ್ನು ನಾವು ಕೂಡ ಹಿಂಬಾಲಿಸಿ ಮುಂದಿನ ಪೀಳಿಗೆಯಲ್ಲಿ ನಮ್ಮನ್ನು ಹಿಂಬಾಲಿಸಲು ಮುಂದಾಗಬೇಕಿದೆ.

ಜಾಗತಿಕವಾಗಿ ಏರುತ್ತಿರುವ ತಾಪಮಾನ, ಇಳಿಮುಖವಾಗುತ್ತಿರುವ ಮಳೆ, ಪರಿಸರ ಮಾಲಿನ್ಯಪ್ರತಿಯೊಬ್ಬರ ಮೇಲೂ ಪರಿಣಾಮ ಬೀರುತ್ತಿದೆ. ಕೈಗಾರಿಕೀಕರಣ, ನಗರೀಕರಣ ಹೀಗೆ ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ನಾಶ ಜತೆಗೆ ಪರಿಸರ ಮಾಲಿನ್ಯದ ಪ್ರಮಾಣ, ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಇದರ ಬಗ್ಗೆ ಜನರಿಗೆ ಅರಿವಿದ್ದರೂ ಕೈಗೊಳ್ಳುವ ಜಾಗೃತಿ ಕ್ರಮಗಳು ಕಡಿಮೆ.

ವಿಶ್ವಪರಿಸರ ದಿನಾಚರಣೆಗೆ ವಿಶ್ವಾದ್ಯಂತ ಸಾಕಷ್ಟು ಬೆಂಬಲ ಸಿಗುತ್ತಿದೆ. ಸಾರ್ವಜನಿಕರು, ಲಾಭ ರಹಿತ ಸಂಸ್ಥೆಗಳು, ಸರಕಾರಗಳಿಂದ ಬೆಂಬಲ ವ್ಯಕ್ತವಾಗುತ್ತದೆ. ಈ ದಿನದಂದು ಹಲವಾರು ಜಾಗೃತಿ ಕಾರ್ಯಕ್ರಮಗನ್ನು ಹಮ್ಮಿಕೊಳ್ಳಲಾಗುತ್ತದೆ. ಕಡಲ ತೀರದ ಸ್ವಚ್ಛತೆ ನಿರ್ವಹಣೆ, ಸಂಗೀತ ಕಾರ್ಯಕ್ರಮ, ವಸ್ತುಪ್ರದರ್ಶನ, ಚಲನಚಿತ್ರೋತ್ಸವ, ಸಮುದಾಯ ಕಾರ್ಯಕ್ರಮಗಳು ಅಲ್ಲದೆ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಮೂಲಕ ಪರಿಸರ ದಿನಾಚರಣೆಯ ಮಹತ್ವದ ಕುರಿತು ಅರಿವು ಮೂಡಿಸುವ ಪ್ರಯತ್ನ ಮಾಡುತ್ತಾರೆ.

 ಎರಡು ಮಾತು ಹೇಳಿ ನಾಲ್ಕು ಮಂದಿಯ ಚಪ್ಪಾಲೆಗೆ ದೊಡ್ಡವನಾದರೆ ಸಾಲದು. ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ಅದು ನಿತ್ಯ ನಿರಂತರವಾಗಿರಬೇಕು. ಅವಾಗ ಮಾತ್ರ ಪರಿಸರ ದಿನಾಚರಣೆಗೊಂದು ಅರ್ಥ ಸಿಗುವುದು.

ಸರ್ವರಿಗೂ ವಿಶ್ವ ಪರಿಸರ ದಿನದ ಹಾರ್ದಿಕ ಶುಭಾಶಯಗಳು.

  • Blogger Comments
  • Facebook Comments

0 comments:

Post a Comment

Item Reviewed: ಪರಿಸರ ಪ್ರೇಮ ಒಂದೇ ದಿನಕ್ಕೆ ಸೀಮಿತವಾಗದಿರಲಿ... Rating: 5 Reviewed By: karavali Times
Scroll to Top