ಈದುಲ್ ಅಝ್‍ಹಾ : ಸಂತೋಷಾಚರಣೆಗೆ ಸೀಮಿತವಾಗದೆ ತ್ಯಾಗ, ಸಮರ್ಪಣಾ ಮನೋಭಾವದ ಸಂದೇಶ ಅಳವಡಿಕೆಯಾಗಲಿ ..... - Karavali Times ಈದುಲ್ ಅಝ್‍ಹಾ : ಸಂತೋಷಾಚರಣೆಗೆ ಸೀಮಿತವಾಗದೆ ತ್ಯಾಗ, ಸಮರ್ಪಣಾ ಮನೋಭಾವದ ಸಂದೇಶ ಅಳವಡಿಕೆಯಾಗಲಿ ..... - Karavali Times

728x90

28 July 2020

ಈದುಲ್ ಅಝ್‍ಹಾ : ಸಂತೋಷಾಚರಣೆಗೆ ಸೀಮಿತವಾಗದೆ ತ್ಯಾಗ, ಸಮರ್ಪಣಾ ಮನೋಭಾವದ ಸಂದೇಶ ಅಳವಡಿಕೆಯಾಗಲಿ .....ಈದುಲ್ ಅಳ್ ಹಾ ವಿಶೇಷ ಲೇಖನ

- ಪಿ.ಎಂ.ಎ. ಪಾಣೆಮಂಗಳೂರು

ಪವಿತ್ರ ಇಸ್ಲಾಮಿನ ಪಂಚ ಕಡ್ಡಾಯ ಕರ್ಮಗಳಲ್ಲಿ ಹಜ್ಜ್ ಯಾತ್ರೆಗೆ ಮಹತ್ವದ ಸ್ಥಾನವಿದೆ. ಸಾಂಪತ್ತಿಕವಾಗಿ ಸಾಧ್ಯವಿರುವ ಪ್ರತಿಯೊಬ್ಬ ಮುಸಲ್ಮಾನನೂ ತನ್ನ ಜೀವಿತದಲ್ಲಿ ಒಂದು ಬಾರಿಯಾದರೂ ಕಹ್‍ಬಾ ಪ್ರದಕ್ಷಿಣೆ ಅರ್ಥಾತ್ ಹಜ್ ಯಾತ್ರೆ ಕೈಗೊಳ್ಳುವುದು ಕಡ್ಡಾಯವಾಗಿದೆ. ಸಹಸ್ರಾರು ವರ್ಷಗಳ ಹಿಂದೆ ಇಬ್ರಾಹಿಂ ನೆಬಿ (ಅ) ಸರ್ವಶಕ್ತನ ಆದೇಶದಂತೆ ಜಗತ್ತನ ಮುಸ್ಲಿಮರ ಕೇಂದ್ರವಾದ ಕಹ್‍ಬಾವನ್ನು ಪುನರ್ ನಿರ್ಮಿಸಿ ಜಗತ್ತಿನ ಮುಸ್ಲಿಮರನ್ನು ಪವಿತ್ರ ಕಹ್‍ಬಾದ ಪ್ರದಕ್ಷಿಣೆಗಾಗಿ ಕರೆ ನೀಡಿದರು. ಆ ಸಂದರ್ಭ ಅವರ ಕರೆಯನ್ನು ಜನ ಸಮೂಹ ಮೂರು ಪ್ರತ್ಯೇಕ ಸ್ಥಳಗಳಿಂದಲೂ ಸ್ವೀಕರಿಸಿ ಉತ್ತರಿಸಿದರು ಎಂದು ಇಸ್ಲಾಮಿ ಚರಿತ್ರೆ ಹೇಳುತ್ತದೆ. ಅವರ ಕರೆಗೆ ಓಗೊಟ್ಟ ಆ ಮೂರು ವಿಭಾಗಗಳೆಂದರೆ ಮೊದಲನೆಯವರು ಆ ಕಾಲಘಟ್ಟದಲ್ಲಿ ಜೀವಿಸುತ್ತಿದ್ದವರು, ಎರಡನೆಯದಾಗಿ ಆ ಕಾಲದಲ್ಲಿ ತಾಯಿಯ ಗರ್ಭಾಶಯದಲ್ಲಿದ್ದ ನವಜಾತ ಶಿಶುಗಳು ಹಾಗೂ ಮೂರನೆಯದಾಗಿ ಆತ್ಮಗಳ ಲೋಕ (ಆಲಮುಲ್ ಅರ್‍ವಾಹ್) ದಲ್ಲಿರುವವರು ಎಂಬುದು ಇಸ್ಲಾಮೀ ಚರಿತ್ರೆಯ ಸಾರಾಂಶದಲ್ಲಿ ವಿವರಿಸಲಾಗಿದೆ. ಅವರ ಕರೆಗೆ ಒಂದು ಬಾರಿ ಉತ್ತರಿಸಿದವರು ಜೀವನದಲ್ಲಿ ಒಂದು ಬಾರಿ ಹಜ್ಜ್ ಯಾತ್ರೆ ಕೈಗೊಳ್ಳುವ ಭಾಗ್ಯ ತಮ್ಮದಾಗಿಸಿಕೊಂಡರೆ, ಹಲವು ಬಾರಿ ಉತ್ತರಿಸಿದವರು ಹಲವು ಸಲ ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ಭಾಗ್ಯವನ್ನು ತಮ್ಮದಾಗಿಸಿಕೊಳ್ಳುತ್ತಾರೆ ಎಂಬ ಸಂದೇಶವನ್ನು ಪವಿತ್ರ ಇಸ್ಲಾಮಿನಲ್ಲಿ ಸಾರಿ ಹೇಳಲಾಗಿದೆ. 

ಜಗತ್ತಿನ ಮುಸ್ಲಿಮರು ನಿತ್ಯ ಆರಾಧನೆಯಾಗಿ ನಿರ್ವಹಿಸುವ ಕಡ್ಡಾಯ ಕರ್ಮ ನಮಾಝ್ ಸಂದರ್ಭದಲ್ಲಿ ಇದೇ ಪವಿತ್ರ ಕಹ್‍ಬಾಲಯವನ್ನು ಕೇಂದ್ರೀಕರಿಸುವುದು ಕಡ್ಡಾಯವಾಗಿದೆ. ಜಗತ್ತಿನ ಯಾವುದೇ ಭಾಗದಿಂದ ನೋಡಿದರೂ ಪವಿತ್ರ ಕಹ್‍ಬಾಲಯವಿರುವುದು ಭೂಮಿಯ ಮಧ್ಯಭಾಗದಲ್ಲಾಗಿದೆ. ಸೃಷಿಕರ್ತನು ಮನುಷ್ಯ ವಿಭಾಗವನ್ನು ಸೃಷ್ಟಿಸುವ ಮೊದಲೇ ಪವಿತ್ರ ಕಹ್‍ಬಾಲಯ ಇತ್ತೆಂದೂ, ಆ ಸಂದರ್ಭ ಅದನ್ನು ದೇವದೂತರು (ಮಲಕ್‍ಗಳು) ಪ್ರದಕ್ಷಿಣೆ ನಡೆಸುತ್ತಿದ್ದರೆಂದೂ ಇಸ್ಲಾಮೀ ಚರಿತ್ರೆ ಹೇಳುತ್ತದೆ. 

ಈ ಜಗತ್ತು ಒಂದೂಕಾಲು ಲಕ್ಷದಷ್ಟು ಪ್ರವಾದಿಯವರನ್ನು ಕಂಡಿದೆ. ಅವರೆಲ್ಲರೂ ಪವಿತ್ರ ಕಹ್‍ಬಾಲಯದ ದುರಸ್ತಿ ಕಾರ್ಯವನ್ನು ಮಾಡಿದ್ದಾರೆಂಬುದು ಇತಿಹಾಸ. ಸ್ವರ್ಗ ಲೋಕದಿಂದ ತರಲಾಗಿರುವ ‘ಹಜರುಲ್ ಅಸ್ವದ್’ ಎಂಬ ಪಾವನ ಕಲ್ಲು ಕಹ್‍ಬಾಲಯದ ಒಂದು ಮೂಲೆಯಲ್ಲಿ ಇದೆ. ಈ ಪವಿತ್ರ ಕಲ್ಲನ್ನು ಚುಂಬಿಸುವುದು ಹಜ್ ವಿಧಿ ವಿಧಾನಗಳಲ್ಲಿ ಒಂದಾಗಿದೆ.
 
ಹಜ್‍ಗೆ ಸಂಬಂಧಪಟ್ಟ ವಿಧಿ ವಿಧಾನಗಳು ಪ್ರಾರಂಭವಾಗುವುದು ಇಸ್ಲಾಮೀ ಕ್ಯಾಲೆಂಡ್ ಪ್ರಕಾರ ಹನ್ನೆರಡನೇ ತಿಂಗಳಾಗಿರುವ ದ್ಸುಲ್‍ಹಜ್ಜ್ ತಿಂಗಳಲ್ಲಾಗಿದೆ. ಹಜ್ ಕರ್ಮದ ವಿಧಿ ವಿಧಾನಗಳು ಅಂತ್ಯವಾಗುವ ದುಲ್‍ಹಜ್ ತಿಂಗಳ ಹತ್ತನೇ ದಿನದಂದು ಅತ್ತ ಪವಿತ್ರ ಮಕ್ಕಾದಲ್ಲಿರುವ ಮುಸ್ಲಿಂ ಬಾಂಧವರು ಹಜ್ ವಿಧಿ ವಿಧಾನಗಳನ್ನು ನೆರವೇರಿಸುತ್ತಿದ್ದರೆ, ಇತ್ತ ಊರಿನಲ್ಲಿರುವ ಮುಸ್ಲಿಂ ಬಾಂಧವರು ಆ ದಿನದಂದು ಈದುಲ್ ಅಝ್‍ಹಾ ಹಬ್ಬವನ್ನು ವಿವಿಧ ಆರಾಧನಾ ಕರ್ಮಗಳೊಂದಿಗೆ ಆಚರಿಸುತ್ತಾರೆ. 

ಈ ಈದುಲ್ ಅಝ್‍ಹಾ ಹಬ್ಬಕ್ಕೆ ಸಂಬಂಧಪಟ್ಟಂತೆ ಇದರ ಹಿಂದೆ ಒಂದು ಪ್ರವಾದಿ ಕುಟುಂಬದ ತ್ಯಾಗೋಜ್ವಲ ಜೀವನದ ಪರಮ ದೃಷ್ಠಾಂತವಿದೆ. ಆ ಮಹಾ ಪ್ರವಾದಿವರ್ಯರೇ ಹಝ್ರತ್ ಇಬ್‍ರಾಹೀಮ್ ನೆಬಿ (ಅ) ಅವರಾಗಿದ್ದಾರೆ. ತನ್ನ ಹಲವು ವರ್ಷದ ದಾಂಪತ್ಯ ಜೀವನದಲ್ಲಿ ಸಂತಾನ ಭಾಗ್ಯವಿಲ್ಲದೆ ಕೊರಗುತ್ತಿದ್ದ ಹಝ್ರತ್ ಇಬ್‍ರಾಹೀವiರು ತನ್ನ ದುಃಖ ತಡೆಯಲಾರದೆ ಒಮ್ಮೆ ಅಲ್ಲಾಹನಲ್ಲಿ ಸಂತಾನ ಪ್ರಾಪ್ತಿಗಾಗಿ ಪರಮ ಭಕ್ತಿಯಿಂದ ಬೇಡಿಕೊಂಡರು ಮಾತ್ರವಲ್ಲ ದೇವನು ದಯಪಾಲಿಸಿದ ಕರುಳ ಕುಡಿಯನ್ನು ದೇವನಿಗಾಗಿ ಅರ್ಪಸುವೆ ಎಂಬ ಹರಕೆಯ ಸ್ವರೂಪದ ಪ್ರತಿಜ್ಞೆಯನ್ನೂ ಸರ್ವಶಕ್ತನ ಮುಂದೆ ಕೈಗೊಂಡರು. ಆ ಸಂದರ್ಭ ಹಝ್ರತ್ ಇಬ್‍ರಾಹೀಮರನ್ನು ಅತ್ಯಂತ ಘೋರ ಪರೀಕ್ಷೆಗೆ ಒಡ್ಡುವ ಸಲುವಾಗಿ ಭಗವಂತನು ಅವರ ಪ್ರಾರ್ಥನೆಯನ್ನು ಸ್ವೀಕರಿಸಿ, ಪತ್ನಿಯಾದ ಹಾಜಿರಾ ಬೀವಿಗೆ ಇಸ್ಮಾಯಿಲ್ ಎಂಬ ಕರುಳ ಕುಡಿಯನ್ನು ಮನ್ನಿಸುತ್ತಾನೆ. ಹಲವು ವರ್ಷಗಳಿಂದ ಪುಟಾಣಿಗಳ ಮುಗ್ಧತೆಯ ಶಬ್ದಗಳಿಲ್ಲದೆ ಮೌನ ಆವರಿಸಿದ್ದ ಆ ಮನೆಯಲ್ಲಿ ನವಜಾತತ ಶಿಶುವಿನ ಕಲರವ ಕೇಳಿಬರತೊಡಗಿತು. ಕಂದಮ್ಮನ ಮುಗ್ಧ ಮುಖವನ್ನು ಕಂಡು ಆ ಪ್ರವಾದಿ ಕುಟುಂಬ ಪುಳಕಿತಗೊಂಡಿತು. ಹಲವು ವರ್ಷಗಳ ದುಃಖಕ್ಕೆ ಸಂತೋಷದ ಸಿಂಚನವಾಗಿತ್ತು. 

ಒಂದು ದಿನ ಮುದ್ದಿನ ಕಂದನನ್ನು ಪ್ರೀತಿಯಿಂದ ಬಿಗಿದಪ್ಪಿ ಮಲಗಿದ ಹಝ್ರತ್ ಇಬ್‍ರಾಹೀಮರಿಗೆ ದೇವದೂತರಿಂದ ಒಂದು ಆದೇಶ ಕನಸಿನ ರೂಪದಲ್ಲಿ ಬರಸಿಡಿಲಿನಂತೆ ಬಂದಪ್ಪಳಿಸಿತು. ಓ ಇಬ್‍ರಾಹೀಮರೇ ...... ಇದು ಸೃಷ್ಟಿಕರ್ತನಾದ ಅಲ್ಲಾಹನ ಆದೇಶವಾಗಿದೆ .. ನೀವು ನಿಮ್ಮ ಪತ್ನಿ ಮತ್ತು ಪುಟ್ಟ ಮಗುವನ್ನು ಜನ-ಜಾನುವಾರುಗಳಿಲ್ಲದ, ಆಹಾರ-ಪಾನೀಯಗಳಿಲ್ಲದ ನಿರ್ಜನ ಗುಡ್ಡಗಾಡು ಪ್ರದೇಶವಾದ ಮಕ್ಕಾ ಎಂಬ ಸ್ಥಳದಲ್ಲಿ ಬಿಟ್ಟು ಬರಬೇಕು. ಹಝ್ರತ್ ಇಬ್‍ರಾಹೀಮರು ತಕ್ಷಣ ನಿದ್ರಾ ಲೋಕದಿಂದ ಎಚ್ಚೆತ್ತುಕೊಂಡು ದುಃಖದ ಕಡಲನ್ನು ಮನಸ್ಸಿನಲ್ಲಿ ಹುದುಗಿಸಿಟ್ಟುಕೊಂಡು, ತನ್ನೆಲ್ಲ ದುಃಖವನ್ನು ಸರ್ವಶಕ್ತನಿಗಾಗಿ ಸಹಿಸಿಕೊಳ್ಳುತ್ತಾ, ಅಲ್ಲಾಹನ ಆಜ್ಞೆಯನ್ನು ಸಂತೋಷಭರಿತರಾಗಿಯೇ ಸ್ವೀಕರಿಸುವ ಕಠಿಣ ನಿರ್ಧಾರಕ್ಕೆ  ಬರುತ್ತಾರೆ. ತಕ್ಷಣ ಅಲ್ಲಿಂದ ಹೊರಟು ನಿರ್ಜನ ಮರುಭೂಮಿಯಲ್ಲಿ ಪತ್ನಿ ಹಾಜರಾ ಬೀವಿ ಹಾಗೂ ಹಲವು ವರ್ಷಗಳ ಕಣ್ಣೀರ ಪ್ರಾರ್ಥನೆಯ ಸಾಫಲ್ಯತೆಯ ಪ್ರತೀಕವಾದ ಕರುಳ ಕುಡಿ ಇಸ್ಮಾಯೀಲರನ್ನು ಬಿಟ್ಟು ಹಿಂತುರುಗಿ ಬರುವಾಗ ದೇವಭಕ್ತಿಯಲ್ಲಿ ತನಗಿಂತ ಯಾವುದೇ ರೀತಿಯಲ್ಲಿ ಕಡಿಮೆಯಿರದ ಅಚಲ ದೇವಭಕ್ತೆಯಾದ ಪತ್ನಿ ಹಾಜರಾ ಬೀವಿ ಪತಿ ಇಬ್‍ರಾಹೀಮರಿಗೊಂದು ಪ್ರಶ್ನೆಯ ಬಾಣವನ್ನು ಎಸೆಯುತ್ತಾರೆ.. ‘ಇದು ನಿಮ್ಮ ಸ್ವಂತ ತೀರ್ಮಾನವೇ? ಅಥವಾ ಅಲ್ಲಾಹನ ತೀರ್ಮಾನವೇ? ಎಂಬುದಾಗಿ. ಆಗ ಹಝ್ರತ್ ಇಬ್‍ರಾಹೀಮರು ಇದು ಸರ್ವಶಕ್ತನ ತೀರ್ಮಾನವಾಗಿದೆ ಎಂದು ನುಡಿದರು. ದೇವನಲ್ಲಿ ಅಚಲ ವಿಶ್ವಾಸವಿರುವ  ಆ ಮಹಾ ನಾರಿ ಆ ಸಂದರ್ಭ ನೀಡಿದ ಉತ್ತರ ಹಝ್ರತ್ ಇಬ್‍ರಾಹೀಮರಿಗೆ ಸಾಂತ್ವನದ ಸಿಂಚನವಾಗಿತ್ತು. ಓ ಪ್ರಿಯರೇ, ನೀವು ಸಮಾಧಾನದಿಂದ ಹಿಂತಿರುಗಿ. ನಮಗೆ ಅಲ್ಲಾಹು ಸಾಕು. ಆತ ನಮ್ಮನ್ನು ಕೈಬಿಡಲಾರ ಎಂಬ ಅಚಲ ವಿಶ್ವಾಸದ ಮಾತು. 

ಆದರೆ, ಅಲ್ಲಾಹನ ಪರೀಕ್ಷಾ ಘಟ್ಟಗಳು ಮತ್ತಷ್ಟು ತೀಕ್ಷ್ಣಗೊಳ್ಳತೊಡಗಿತ್ತು. ದಿನಗಳು ಕಳೆದವು ಹಾಜರಾ ಬೀವಿಯವರ ಕೈಯಲ್ಲಿದ್ದ ಅನ್ನಾಹಾರ-ಪಾನೀಯಗಳು ಖಾಲಿಯಾಗತೊಡಗಿತು. ಸಹಾಯಕ್ಕಾಗಿ ಅಂಗಲಾಚುವ ಪರಿಸ್ಥಿತಿ ಅಲ್ಲಿಲ್ಲ. ಜನ ಸಂಚಾರವಿಲ್ಲದ ದಟ್ಟ ಮರುಭೂಮಿ, ಕುಡಿಯಲು ಒಂದು ಹನಿ ನೀರು ಕೂಡಾ ಸಿಗುವಂತಿರಲಿಲ್ಲ. ಸೇವಿಸಲು ಅನ್ನಾಹಾರವಿಲ್ಲದೆ  ತಾಯಿಯ ಎದೆಹಾಲು ಬತ್ತಿ ಹೋಯಿತು. ಎದೆ ಹಾಲು ಮಾತ್ರ ಸೇವಿಸುವ ಪುಟ್ಟ ಕಂದಮ್ಮ ಹಸಿವಿನಿಂದ ಅಳಲು ಪ್ರಾರಂಭಿಸಿತು. ಹಸಿವಿನಿಂದ ಬಳಲುತ್ತಿರುವ ಕರುಳ ಕುಡಿಯನ್ನು ಕಂಡಾಗ ಹೆತ್ತ ಕರುಳ ಕಣ್ಣಿನಿಂದ ಕಣ್ಣೀರು ಹರಿಯತೊಡಗಿತು. ಎಲ್ಲಿಯಾದರೂ ಒಂದು ತೊಟ್ಟು ನೀರು ಸಿಗಬಹುದೇ ಎಂಬ ನಿರೀಕ್ಷೆಯಲ್ಲಿ ತಾಯಿ ಹಾಜರಾ ಬೀವಿ ಆಚೀಚೆ ಓಡಾಡತೊಡಗಿದರು. ಹೀಗೆ ಒಡಾಡುತ್ತಿದ್ದ ಹಾಜರಾ ಬೀವಿಗೆ ಮಗುವಿನ ಆರ್ತನಾದ ಜೋರಾಗಿ ಕೇಳಿಸಿದಾಗ ಮಗವಿನ ಬಳಿ ಓಡಿ ಬಂದು ನೋಡಿದಾಗ ... ಏನಾಶ್ಚರ್ಯ .... ತನ್ನ ಕಣ್ಣನ್ನು ತಾನೇ ನಂಬಲಾಗದ ಆಶ್ಚರ್ಯಕರ ಸನ್ನಿವೇಶವೊಂದಕ್ಕೆ ಬೀಬಿ ಹಾಜರಾ ಸಾಕ್ಷಿಯಾಗಿದ್ದರು. ಅಳುತ್ತಿರುವ ಪುಟ್ಟ ಕಂದ ಇಸ್ಮಾಯೀಲರ ಪಾದದಡಿಯಲ್ಲಿ ನೀರಿನ ಒರತೆ ಹರಿಯತೊಡಗಿತ್ತು. ಮರುಭೂಮಿಯಲ್ಲಿ ಹುಟ್ಟಿದ ನೀರಿನ ಒರತೆ ಕ್ಷಣಕ್ಷಣಕ್ಕೂ ತನ್ನ ರಭಸವನ್ನು ಹೆಚ್ಚಿಸತೊಡಗಿತ್ತು. ಉಕ್ಕಿ ಹರಿಯುವ ನೀರನ್ನು ಕಂಡ ಹಾಜರಾ ಬೀವಿ ಈ ನೀರು ಇದೇ ರೀತಿ ಹರಿಯುತ್ತಿದ್ದರೆ ಅಪಾಯವೆಂದು ಭಯಗೊಂಡು ಝಂ ಝಂ (ನಿಲ್ಲು ನಿಲ್ಲು) ಎಂಬ ಅರೆಬಿಕ್ ಶಬ್ದವನ್ನು ಉಚ್ಛಧ್ವನಿಯಲ್ಲಿ ಉಚ್ಚರಿಸಿದರು. ಆ ಸಂದರ್ಭ ಮತ್ತೊಂದು ಸೃಷ್ಟಿಕರ್ತನ ಮಹಾಮಹಿಮೆಗೆ ಸಾಕ್ಷಿಯಾಯಿತು. ತಕ್ಷಣ ಮರುಭೂಮಿಯಲ್ಲು ಉಕ್ಕಿ ಹರಿಯುತ್ತಿದ್ದ ನೀರಿನ ಒರತೆ ಶಾಂತವಾಯಿತು. 

ತಾಯಿ ಹಾಗೂ ಮಗು ಜಗತ್‍ಕೇಂದ್ರವಾದ ಮಕ್ಕಾದ ಪರಮ ಪವಿತ್ರ ಮಣ್ಣಿನಲ್ಲಿ ಜೀವಿಸತೊಡಗಿದರು. ದಿವಸಗಳ ಬಳಿಕ ಅಲ್ಲಾಹನ ಆಜ್ಞೆಯಂತೆ ಹಝ್ರತ್ ಇಬ್‍ರಾಹೀಮರು ಪತ್ನಿ ಹಾಗೂ ಮಗುವನ್ನು ಊರಿಗೆ ಕರೆತಂದರು. ಮಕ್ಕಾದಲ್ಲಿದ್ದ ಸಂದರ್ಭ ಹತ್ತು ಹಲವು ಸಂಕಷ್ಟಗಳನ್ನು ಎದುರಿಸಿದ ಬೀವಿ ಹಾಜರಾ ಅವರು ಒಂದು ಹನಿ ನೀರಿಗಾಗಿ ಆಚೀಚೆ ಓಡಾಡಿದ ಆ ಸಂಕಷ್ಟಪೂರ್ಣ ಸನ್ನಿವೇಶವನ್ನು ಜನಮಾನಸದ ಮುಂದೆ ಅಂತ್ಯ ದಿನದವರೆಗೂ ನೆಲೆ ನಿಲ್ಲುವ ಪ್ರಯತ್ನದ ಭಾಗವಾಗಿ ಇಂದು ಪವಿತ್ರ ಮಕ್ಕಾ ಪ್ರದೇಶದಲ್ಲಿ ಸೇರಿದ ಲಕ್ಷಾಂತರ ಹಜ್ ಯಾತ್ರಿಗಳು ಸ್ವಫಾ-ಮರ್‍ವಾ ಪರ್ವತಗಳ ನಡುವೆ ಓಡುವ ಮೂಲಕ ಹಜ್ ಕರ್ಮದ ಮಹತ್ವದ ವಿಧಿಯನ್ನು ನೆರವೇರಿಸುತ್ತಾರೆ. ಅಂದು ಪುಟಾಣಿ ಇಸ್ಮಾಯೀಲರ ಪದಾದದಡಿಯಿಂದ ಚಿಮ್ಮಿದ ಒರತೆಯನ್ನೇ ಇಂದು ಹಜ್ ಯಾತ್ರೆ ಕೈಗೊಂಡವರು ಪವಿತ್ರ ಝಂ ಝಂ ನೀರಾಗಿ ಉಪಯೋಗಿಸುತ್ತಿರುವುದು. 

ಈ ಪ್ರವಾದಿ ಕುಟುಂಬಕ್ಕೆ ಸರ್ವಶಕ್ತನ ಪರೀಕ್ಷಾ ಕಾಲ ಇಲ್ಲಿಗೆ ಮುಗಿಯುತ್ತಿಲ್ಲ. ಕಾಲ ಉರುಳುತ್ತಿರಬೇಕಾದರೆ ಮುದ್ದು ಮುದ್ದಾಗಿ ಬೆಳೆಯುತ್ತಿರುವ ಮುದ್ದು ಕಂದ ಇಸ್ಮಾಯೀಲ್ ಒಂದು ದಿನ ರಾತ್ರಿ ತಂದೆ ಹಝ್ರತ್ ಇಬ್‍ರಾಹೀಮರ ತೋಳಿನಲ್ಲಿ ಬೆಚ್ಚನೆ ಮಲಗಿದ್ದಾಗ ಇಬ್‍ರಾಹೀಮರಿಗೆ ಮತ್ತೊಂದು ಸ್ವಪ್ನ ದರ್ಶನವಾಗುತ್ತದೆ. ಓ ಇಬ್‍ರಾಹೀಮರೇ... ನೀವು ನಿಮ್ಮ ಹರಕೆಯನ್ನು ಈಡೇರಿಸುವ ಸಂದರ್ಭ ಕೂಡಿ ಬಂದಿದೆ. ಅಂದು ಸಂತಾನ ಪ್ರಾಪ್ತಿಗಾಗಿ ನೀನು ನನ್ನೊಂದಿಗೆ ಪ್ರಾರ್ಥಿಸುವಾಗ ನೀನು ದಯಪಾಲಿಸಿದ ಸಂತಾನವನ್ನು ನಿನಗಾಗಿ ಅರ್ಪಿಸಲು ಸಿದ್ದ ಎಂಬ ಪ್ರತಿಜ್ಞೆಯನ್ನು ಕೈಗೊಂಡಿದ್ದೀರಿ. ಅದನ್ನು ಇದೀಗ ಈಡೇರಿಸಿ ಎಂಬ ಆದೇಶ. ತಕ್ಷಣ ನಿದ್ರೆಯಿಂದ ಎಚ್ಚೆತ್ತ ಹಝ್ರತ್ ಇಬ್‍ರಾಹೀಮ್ ಈ ಕನಸು ಭಗವಂತನ ಭಾಗದಿಂದಲೋ ಅಥವಾ ಪಿಶಾಚಿಯ ಭಾಗದಿಂದಲೋ ಎಂಬ ಸಂಶಯ ಬಂದಾಗ ಮತ್ತೆ ನಿದ್ರೆಗೆ ಜಾರಿದಾಗ ಪದೇ ಪದೇ ಅದೇ ಕನಸು ಕಂಡಾಗ ಅದು ಖಂಡಿತವಾಗಿಯೂ ಅಲ್ಲಾಹನ ಭಾಗದಿಂದ ಉಂಟಾದ ಸ್ವಪ್ನ ದರ್ಶನವೆಂಬುದನ್ನು ದೃಢಪಡಿಸಿಕೊಂಡರು. ಅಂದು ತಾನು ಒಂದು ಸಂತಾನ ಪ್ರಾಪ್ತಿಗಾಗಿ ಕೈಗೊಂಡ ಪ್ರತಿಜ್ಞೆಯನ್ನು ಮರೆತಿದ್ದರೂ, ಮತ್ತೆ ಅದನ್ನು ತನ್ನ ಸ್ಮøತಿ ಪಟಲದಲ್ಲಿ ತಂದುಕೊಂಡು ಹಝ್ರತ್ ಇಬ್‍ರಾಹೀಮರು ಅಲ್ಲಾಹನ ಆದೇಶವನ್ನು ನೆರವೇರಿಸಲು ಮುಂದಾದರು. ಅದು ಇಬ್‍ರಾಹೀಮರು ಲೋಕಪಾಲಕನ ಮುಂದೆ ನಡೆಸುವ ಅಂತಿಂಥ ತಲೆಬಾಗುವಿಕೆಯಲ್ಲ. ಹಲವು ವರ್ಷಗಳ ಕಣ್ಣೀರನ್ನು ರಕ್ತವಾಗಿಸಿ ಮಾಡಿದ ಪ್ರಾರ್ಥನೆಯ ಫಲವಾಗಿ ದೊರೆತ ಮುದ್ದು ಕಂದಮ್ಮನನ್ನು ಜಗದ್ರಕ್ಷಕನಿಗಾಗಿ ಬಲಿ ನೀಡುವ ದುಃಖಕರ ಹಾಗೂ ದೃಢ ನಿರ್ಧಾರದ ಅತೀ ದೈನ್ಯತೆಯ ತಲೆಬಾಗುವಿಕೆ. 

ಅದೊಂದು ಮುಂಜಾನೆ ತಾಯಿ ಹಾಜಿರಾ ಬೀವಿ ಮಗನನ್ನು ಸ್ನಾನ ಮಾಡಿಸಿ ಶುಭ್ರ ಉಡುಗೆಯನ್ನು ತೊಡಿಸಿ ಅನ್ನಾಹಾರ ಪಾನೀಯಗಳನ್ನು ಕೊಟ್ಟು ಬೀಳ್ಕೊಡುವಾಗ ತಾಯಿಯಿಂದ ಮಗನಿಗೊಂದು ಪ್ರಶ್ನೆ : ಅಲ್ಲಾಹವಿನ ಆಜ್ಞೆಯಂತೆ ತಂದೆ ನಿನ್ನನ್ನು ಬಲಿ ಅರ್ಪಿಸಲು ಕರೆದುಕೊಂಡು ಹೋಗುತ್ತಿದ್ದು, ನಿನ್ನ ಅಭಿಪ್ರಾಯವೇನು ಕಂದಾ? ಆ ಸಂದರ್ಭ ತಾಯಿಯನ್ನು ಅಪ್ಪಿ ಹಿಡಿದ ಮುದ್ದು ಕಂದ ಇಸ್ಮಾಯಿಲ್ (ಅ) ರವರ ಉತ್ತರ ಹೀಗಿತ್ತು. ‘ಅಲ್ಲಾಹನ ತೀರ್ಮಾನವನ್ನು ಸ್ವೀಕರಿಸುವುದು ನನ್ನ ಜೀವನದಲ್ಲಿ ಅತ್ಯಂತ ದೊಡ್ಡ ಸಂತೋಷದ ವಿಷಯವಾಗಿದೆ’ ಎಂಬುದಾಗಿ ಉತ್ತರಿಸಿದ ಮಗನನ್ನು  ತಾಯಿ ಮಗನನ್ನು ಸಂತೋಷದಿಂದ ಬೀಳ್ಕೊಟ್ಟರು. ಅಲ್ಲಾಹುವಿನ ಆಜ್ಞೆಯನ್ನು ನೆರವೇರಿಸಲು ಹೋಗುವಾಗ ದಾರಿಯಲ್ಲಿ ಸಿಕ್ಕಿದ ಶಪಿಸಲ್ಪಟ್ಟ ಪಿಶಾಚಿ ಅಲ್ಲಾಹನ ಆಜ್ಞೆಯನ್ನು ಧಿಕ್ಕರಿಸುವಂತೆ ತನ್ನ ಪ್ರಯತ್ನವನ್ನು ಚಾಲ್ತಿಯಲ್ಲಿಟ್ಟ ಸಂದರ್ಭ ಮಗು ಕಲ್ಲನ್ನು ತೆಗೆದು ಪಿಶಾಚಿ ಕಡೆಗೆ ಬಿಸಾಡ ತೊಡಗಿತು. ಈ ಸಂದರ್ಭವನ್ನು ಸ್ಮರಿಸುವ ಸಲುವಾಗಿದೆ ಹಜ್ ಯಾತ್ರೆಯಲ್ಲಿ ಪಾಲ್ಗೊಂಡವರು ‘ಮಿನಾ’ ಎಂಬ ಸ್ಥಳದಲ್ಲಿ ಜಮರಾತ್ (ಶೈತಾನನಿಗೆ ಕಲ್ಲು ಬಿಸಾಡುವ ವಿಧಿ) ವಿಧಿಯನ್ನು ಹಜ್ ಕರ್ಮದ ಒಂದು ಭಾಗವಾಗಿ ನೆರವೇರಿಸುತ್ತಾರೆ. 

ತಂದೆ ಮಗನನ್ನು ಬಲಿ ಅರ್ಪಿಸಲು ನಿರ್ದಿಷ್ಟ ಪ್ರದೇಶದಲ್ಲಿ ಸಿದ್ದತೆ ನಡೆಸಿದಾಗ ಮುಗ್ಧ ಮಗು ತಂದೆಗೆ ನಿರ್ದೇಶನವನ್ನು ನೀಡುತ್ತದೆ : ‘ಅಪ್ಪಾ! ನಾನು ನಿಮ್ಮ ಮುಖ ನೋಡಿ ಮಲಗಿದರೆ ನಿಮಗೆ ನನ್ನ ಮೇಲಿರುವ ಅಪರಿಮಿತ ಸ್ನೇಹ ಹಾಗೂ ಕರುಣೆಯಿಂದ ಅಲ್ಲಾಹನ ಆಜ್ಞೆಯನ್ನು ಪಾಲಿಸುವಲ್ಲಿ ನಿಮ್ಮನ್ನು ತಡೆದೀತು. ಆದ್ದರಿಂದ ನನ್ನನ್ನು ಭೂಮಿಯ ಕಡೆಗೆ ಮುಖ ಮಾಡಿ ಮಲಗಿಸಿ’ ಎಂದು. ಮಗನ ನಿರ್ದೇಶನವನ್ನು ಸತ್ಯವೆಂದು ಮನವರಿಕೆ ಮಾಡಿಕೊಂಡ ಹಝ್ರತ್ ಇಬ್‍ರಾಹೀವiರು ಭೂಮಿ ಕಡೆ ಮುಖ ಮಾಡಿ ಮಲಗಿಸಿ ಬಿಸ್ಮಿ (ಜಗದೊಡೆಯನ ನಾಮ)ವನ್ನು ಉಚ್ಚರಿಸಿ ಕೈಯಲ್ಲಿರುವ ಹರಿತವಾದ ಖಡ್ಗದಿಂದ ಮಗನ ಕೊರಳನ್ನು ಕೊಯ್ಯಲು ಪ್ರಯತ್ನಿಸಿದಾಗ ಮಗುವಿನ ಕೊರಳ ಮಾಂಸಕ್ಕೆ ಖಡ್ಗ ತಾಗುತ್ತಿಲ್ಲ. ಆಗ ಇಬ್‍ರಾಹೀಮರು ಸಮೀಪವಿರುವ ಬಂಡೆ ಕಲ್ಲಿಗೆ ಖಡ್ಗವನ್ನು ಝಳಪಿಸಿದಾಗ ಕಲ್ಲು ಎರಡು ತುಂಡಾಯಿತು. ಅಷ್ಟು ಹರಿತವಾಗಿದ್ದರೂ ಮಗುವಿನ ಕೊರಳು ಖಡ್ಗಕ್ಕೆ ಕಠಿಣವಾಗಿ ಪರಿಣಮಿಸಿತ್ತು. ಆರ್ಥಾತ್ ಹಝ್ರತ್ ಇಬ್‍ರಾಹೀಮರು ಸರ್ವಶಕ್ತನ ಎಲ್ಲ ಕಠಿಣ ಪರೀಕ್ಷೆಗಳನ್ನು ಎದುರಿಸಿ ವಿಜಯಶಾಲಿಯಾಗಿದ್ದರು. ಆ ಸಂದರ್ಭ ಅಶರೀರವಾಣಿಯೊಂದು ಕೇಳಿಬಂತು. ‘ಓ... ಇಬ್‍ರಾಹೀಮರೇ .... ನೀವು ಅಲ್ಲಾಹುವಿನ ಪರೀಕ್ಷೆಗಳಲ್ಲಿ ಸಂಪೂರ್ಣವಾಗಿ ವಿಜಯಶಾಲಿಯಾಗಿದ್ದೀರಿ. ನೀವು ನಿಮ್ಮ ಕರುಳಕುಡಿಯನ್ನು ಅಲ್ಲಾಹನಿಗಾಗಿ ಬಲಿ ನೀಡುವುದು ಬೇಡ, ಅದು ಜಗಪರಿಪಾಲಕನಿಗೆ ಅಗತ್ಯವೂ ಇಲ್ಲ. ಮಗನನ್ನು ಅಲ್ಲಾಹನಿಗಾಗಿ ಬಲಿ ಅರ್ಪಿಸಿದ ಪುಣ್ಯವು ನಿಮಗೆ ಲಭ್ಯ. ಇದೋ ನೀವು ಈ ಮೇಕೆಯನ್ನು ಬಲಿ ಅರ್ಪಿಸಿರಿ’ ಎಂಬ ಶಬ್ಧದೊಂದಿಗೆ ಸ್ವರ್ಗದಿಂದ ಕಳಿಸಲ್ಪಟ್ಟ ಮೇಕೆಯೊಂದು ಅಲ್ಲಿ ಪ್ರತ್ಯಕ್ಷವಾಗಿತ್ತು. ಅದನ್ನು ಹಝ್ರತ್ ಇಬ್‍ರಾಹೀಮರು ಅಲ್ಲಾಹನಿಗಾಗಿ ಬಲಿ ನೀಡಿದರು. ಇದರ ಸ್ಮರಣೆಯೇ ಇಂದು ಜಗತ್ತಿನ ಮುಸಲ್ಮಾನರು ಆಚರಿಸುವ ಕುರ್‍ಬಾನಿ ಅಥವಾ ಉಳುಹಿಯ್ಯತ್ (ಬಲಿದಾನ) ನ ಪ್ರಧಾನ ಮರ್ಮವಾಗಿದೆ. 

ಒಟ್ಟಿನಲ್ಲಿ ಪವಿತ್ರ ಈದುಲ್ ಅಝ್‍ಹಾ ಹಬ್ಬದೊಂದಿಗೆ ಒಂದು ಪ್ರವಾದಿ ಕುಟುಂಬದ ಜೀವನದ ಕಷ್ಟ-ಕಾರ್ಪಣ್ಯಗಳ, ಸಂಕಷ್ಟಗಳ ಸರಮಾಲೆಯ ಹಾಗೂ ತ್ಯಾಗೋಜ್ವಲ ನಿರ್ಧಾರಗಳ ಅನಾವರಣದ ಸಂದೇಶವಿದೆ. ಲೌಕಿಕದ ಅಮಲಿನಲ್ಲಿ ಜೀವಿಸುವ ಮುಸಲ್ಮಾನ ವ್ಯಕ್ತಿಯ ಭಕ್ತಿಯ ಮಟ್ಟವನ್ನು ಪರೀಕ್ಷಿಸುವ ಒಂದು ಸಂದರ್ಭವಾಗಿದೆ ಈದುಲ್ ಅಝ್‍ಹಾ ಆರ್ಥಾತ್ ಬಕ್ರೀದ್ ಹಬ್ಬ. ತಾನೊಂದು ಮೇಕೆ, ಕುರಿ ಅಥವಾ ಇನ್ಯಾವುದೇ ಜೀವಿಯನ್ನು ಬಲಿ ಕೊಡುವುದರಲ್ಲಿ ಜಗಪಾಲಕನಿಗೆ ಯಾವುದೇ ಅಗತ್ಯವಿಲ್ಲ. ಆದರೆ ತಾನು ದಯಪಾಲಿಸಿದ ಸಂಪತ್ತನ್ನು ತನ್ನ ಮೇಲಿನ ವಿಶ್ವಾಸಕ್ಕಾಗಿ ಎಷ್ಟರಮಟ್ಟಿಗೆ ತನ್ನ ಸೃಷ್ಟಿಯಾದ ಮನುಷ್ಯ ವ್ಯಯಿಸಬಲ್ಲ ಎಂಬುದನ್ನು ಪರೀಕ್ಷಿಸುವುದೇ ಇಲ್ಲಿರುವ ಬಲಿದಾನದ ತಾತ್ಪರ್ಯವಾಗಿದೆ. ದೇವ ಸಂಪ್ರೀತಿಗಾಗಿ ಹಲವು ವಿಧ ಸಂಕಷ್ಟಗಳನ್ನು ಎದುರಿಸಿ ಕೊನೆಗೆ ತನ್ನ ಕರುಳಕುಡಿಯನ್ನೇ ಬಲಿ ಅರ್ಪಿಸಲು ಮುಂದಾದ ಹಝ್ರತ್ ಇಬ್‍ರಾಹೀಮ್, ಅವರ ತ್ಯಾಗ ಮನೋಭಾವಕ್ಕೆ ತಕ್ಕ ಸಾಥ್ ನೀಡಿದ ಮಾದರಿ ಮಹಿಳಾಮಣಿ ಹಝ್ರತ್ ಹಾಜರಾ ಬೀವಿ ಹಾಗೂ ಅವರ ತ್ಯಾಗ ಮನೋಭಾವನೆ ನೆರವೇರಿಸಲು ಯಾವುದೇ ರೀತಿಯಲ್ಲೂ ಅಡ್ಡಿಯಾಗದ ಪುತ್ರ ಹಝ್ರತ್ ಇಸ್ಮಾಯೀಲ್ ಒಟ್ಟಿನಲ್ಲಿ ಒಂದು ಪ್ರವಾದಿ ಕುಟುಂಬದ ತ್ಯಾಗಪೂರ್ಣ ಜೀವನದ ಸಂದೇಶವನ್ನು ಸಾರುವ ಈದುಲ್ ಅಝ್‍ಹಾ ಹಬ್ಬವು ನಾಡಿನ ಸರ್ವ ಜನಾಂಗದ ಜನರಿಗೆ ಕೋವಿಡ್-19 ಎಂಬ ವೈರಸ್ ಮೂಲಕ ಲೋಕವೇ ಸಂಕಷ್ಟವನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಕಷ್ಟ-ಸಂಕಷ್ಟಗಳನ್ನು ಎದುರಿಸುವ ಸೌಭಾಗ್ಯವನ್ನು ಸರ್ವಶಕ್ತನು ಕರುಣಿಸಲಿ ಎಂದು ಹಾರೈಸುವುದರೊಂದಿಗೆ ನಾಡಿನ ಸಮಸ್ತ ಜನತೆಗೆ ಈದುಲ್ ಅಝ್‍ಹಾ ಶುಭಾಶಯಗಳು.
  • Blogger Comments
  • Facebook Comments

0 comments:

Post a Comment

Item Reviewed: ಈದುಲ್ ಅಝ್‍ಹಾ : ಸಂತೋಷಾಚರಣೆಗೆ ಸೀಮಿತವಾಗದೆ ತ್ಯಾಗ, ಸಮರ್ಪಣಾ ಮನೋಭಾವದ ಸಂದೇಶ ಅಳವಡಿಕೆಯಾಗಲಿ ..... Rating: 5 Reviewed By: karavali Times
Scroll to Top