ಶಾಸಕ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ಪ್ರಕರಣ : ಮೂವರ ಸಾವು; 110 ಮಂದಿ ಬಂಧನ - Karavali Times ಶಾಸಕ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ಪ್ರಕರಣ : ಮೂವರ ಸಾವು; 110 ಮಂದಿ ಬಂಧನ - Karavali Times

728x90

11 August 2020

ಶಾಸಕ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ಪ್ರಕರಣ : ಮೂವರ ಸಾವು; 110 ಮಂದಿ ಬಂಧನ


ಬೆಂಗಳೂರು (ಕರಾವಳಿ ಟೈಮ್ಸ್) : ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಅದು ಹಿಂಸಾರೂಪಕ್ಕೆ ತಿರುಗಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇದುವರೆಗೂ 110 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಡಿಜೆ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಶಾಂತಿ ಕಾಪಾಡಲು ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.


ಇಸ್ಲಾಮಿನ ಪ್ರವಾದಿಗಳ ಬಗ್ಗೆ ಶಾಸಕರ ಸಂಬಂಧಿ ನವೀನ್ ಎಂಬಾತ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಮಾಡಿದ್ದಾನೆ ಎಂದು ಆರೋಪಿಸಿದ 500ಕ್ಕೂ ಹೆಚ್ಚು ಜನರು, ಕೆ.ಜಿ. ಹಳ್ಳಿ, ಡಿ.ಜೆ. ಹಳ್ಳಿ ಹಾಗೂ ಕಾವಲ್‌ ಬೈರಸಂದ್ರದಲ್ಲಿ ಮಂಗಳವಾರ ರಾತ್ರಿ ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಯಲ್ಲಿ ಹಾಗೂ ಠಾಣೆ ಎದುರೇ ವಾಹನಗಳು ಹೊತ್ತಿ ಉರಿದವು. ಕೈಯಲ್ಲಿ ಕಟ್ಟಿಗೆ ಹಾಗೂ ಕಲ್ಲು ಹಿಡಿದಿದ್ದ ಕೆಲವರು, ಪೊಲೀಸ್ ಹಾಗೂ ಸಾರ್ವಜನಿಕರ ವಾಹನಗಳ ಕಿಟಕಿ ಗಾಜುಗಳನ್ನು ಒಡೆದರು. ಪುಲಿಕೇಶಿನಗರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಯ ಮೇಲೂ ದಾಳಿ ಮಾಡಿದ್ದ ಕೆಲವರು, ವಿದ್ಯುತ್ ದೀಪ ಹಾಗೂ ಗಾಜುಗಳನ್ನು ಒಡೆದು ಹಾಕಿದರು. ಉದ್ವಿಗ್ನಗೊಂಡಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.


ಗಲಾಟೆ ನಡೆದ ಕೆಲ ನಿಮಿಷಗಳ ನಂತರ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ನಗರದ ಎಲ್ಲ ವಲಯಗಳ ಡಿಸಿಪಿ ಹಾಗೂ ಎಸಿಪಿಗಳನ್ನು ಕೆ.ಜಿ. ಹಳ್ಳಿ–ಡಿ.ಜೆ. ಹಳ್ಳಿ ಠಾಣೆಗೆ ಕರೆಸಿಕೊಂಡು ತುರ್ತು ಸಭೆ ನಡೆಸಿದರು. ಎರಡೂ ಠಾಣೆ ವ್ಯಾಪ್ತಿಯಲ್ಲೂ ಪುಂಡಾಟಿಕೆ ಮಾಡಿದವರನ್ನು ಪತ್ತೆ ಹಚ್ಚಿ ಬಂಧಿಸುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದರು. 


‘ಎರಡೂ ಧರ್ಮದವರು ಅಣ್ಣ–ತಮ್ಮಂದಿರಂತೆ. ಯಾರೋ ‌ಕಿಡಿಗೇಡಿಗಳು ಮಾಡಿರುವ ತಪ್ಪು ಇದು. ನಾವು ಜಗಳ ಮಾಡಿಕೊಳ್ಳುವುದು ಬೇಡ. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆಯಾಗಲಿ. ನಾವೆಲ್ಲರೂ ಶಾಂತಿ ಕಾಪಾಡೋಣ’ ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನವಿ ಮಾಡಿದ್ದಾರೆ.


ಈ ಸಂಬಂಧ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಜೊತೆ ಚರ್ಚಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಹಿಂಸಾಚಾರ ಹರಡದಂತೆ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ನನ್ನ ಫೇಸ್ ಬುಕ್ ಖಾತೆಯನ್ನು ಯಾರೋ ಹ್ಯಾಕ್ ಮಾಡಿದ್ದಾರೆಂದು ಅಖಂಡ ಶ್ರೀನಿವಾಸ ಮೂರ್ತಿ ಸೋದರಳಿಯ ನವೀನ್ ಹೇಳಿದ್ದು, ಶೀಘ್ರವೇ ಪೊಲೀಸರ ಮುಂದೆ ಹಾಜರಾಗುವುದಾಗಿ ತಿಳಿಸಿದ್ದಾರೆ.

ಇನ್ನು ಘಟನೆಯಲ್ಲಿ 80ಕ್ಕೂ ಹೆಚ್ಚು ಪೊಲೀಸರಿಗೆ ಗಾಯಗಳಾಗಿವೆ. ಈ ಸಂಬಂಧ ಡಿ ಜೆ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಾಸಕರಾದ ಝಮೀರ್ ಅಹ್ಮದ್ ಹಾಗೂ ರಿಝ್ವಾನ್ ಹರ್ಷದ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ತಹಬದಿಗೆ ತರಲು ಯತ್ನಿಸಿದರು. ಗಲಭೆ ಸ್ಥಳದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.



  • Blogger Comments
  • Facebook Comments

0 comments:

Post a Comment

Item Reviewed: ಶಾಸಕ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ಪ್ರಕರಣ : ಮೂವರ ಸಾವು; 110 ಮಂದಿ ಬಂಧನ Rating: 5 Reviewed By: karavali Times
Scroll to Top