‘ಸಿಂಗಂ’ ಖ್ಯಾತಿಯ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಇಂದು ಬಿಜೆಪಿ ಸೇರ್ಪಡೆ - Karavali Times ‘ಸಿಂಗಂ’ ಖ್ಯಾತಿಯ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಇಂದು ಬಿಜೆಪಿ ಸೇರ್ಪಡೆ - Karavali Times

728x90

24 August 2020

‘ಸಿಂಗಂ’ ಖ್ಯಾತಿಯ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಇಂದು ಬಿಜೆಪಿ ಸೇರ್ಪಡೆ


ನವದೆಹಲಿ (ಕರಾವಳಿ ಟೈಮ್ಸ್) : ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಮಂಗಳವಾರ (ಆ 25) ನವದೆಹಲಿಯ ಕೇಂದ್ರ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಅಣ್ಣಾಮಲೈ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. 

ಐಪಿಎಸ್ ಅಧಿಕಾರಿಯಾಗಿ ಕರ್ನಾಟಕದಲ್ಲಿ ಕಾರ್ಯನಿರ್ವಹಿಸಿದ್ದ ಅಣ್ಣಾಮಲೈ, ಕೆಲವೊಂದು ನಿರ್ಧಾರಗಳಿಂದ  ‘ಸಿಂಗಂ’ ಎಂದೇ ಖ್ಯಾತಿ ಗಳಿಸಿದ್ದರು. ಬಳಿಕ 2019ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಅವರು ತಮ್ಮ ಸ್ವಂತ ಊರು ತಮಿಳುನಾಡಿಗೆ ತೆರಳಿದ್ದರು. 

ಆರಂಭದಲ್ಲಿ ಅಣ್ಣಾ ಮಲೈ ಅವರು ತಮಿಳುನಾಡಿನ ನಟ ರಜಿನಿಕಾಂತ್ ಅವರ ಪಕ್ಷದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ನನ್ನ ಪ್ರಕಾರ ಐಪಿಎಸ್ ಎಂದರೆ ದೇಶ, ರಾಷ್ಟ್ರೀಯ ಭದ್ರತೆ. ನಾನು ಅಧಿಕಾರಿಯಾಗಿದ್ದೆ. ಅದೇ ನಿಟ್ಟಿನಲ್ಲಿ ತಮಿಳುನಾಡಿಗೆ ಈಗ ಪರ್ಯಾಯ ಆಡಳಿತದ ಅಗತ್ಯವಿದೆ. ಆ ಮಾರ್ಗವನ್ನು ಬಿಜೆಪಿ ಒದಗಿಸಬಹುದೆಂದು ನಾನು ಭಾವಿಸುತ್ತೇನೆ. ಹೀಗಾಗಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆ ಎಂದು ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯವಾದಿ ಪಕ್ಷ. ನಾನು ರಾಷ್ಟ್ರೀಯ ವಿಚಾರ ಹೊಂದಿರುವ ವ್ಯಕ್ತಿ. ಹೀಗಾಗಿ ನಾನು ಬೇಷರತ್ತಾಗಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದು, ನರೇಂದ್ರ ಮೊದಿ ಅವರ ಬಗ್ಗೆ ಇರುವ ಮೆಚ್ಚುಗೆಯೇ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವಾಯಿತು ಎಂದಿದ್ದಾರೆ. ಬಿಜೆಪಿಗೆ ಸೇರ್ಪಡೆಗೊಳ್ಳುವ ನಿರ್ಧಾರ ಬಹಳ ತಡವಾಗಿತ್ತು. ಸಾಮಾಜಿಕ ಬದಲಾವಣೆಗಿಂತ ರಾಜಕೀಯ ಬದಲಾವಣೆ ಮುಖ್ಯ ಎಂದು ಭಾವಿಸುತ್ತೇನೆ. ಅದಕ್ಕಾಗಿಯೇ ನಾನು ಈಗ ರಾಜಕೀಯ ಪ್ರವೇಶ ಮಾಡುವ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಅಣ್ಣಾಮಲೈ ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ಬಿಜೆಪಿಯನ್ನು ತಪ್ಪಾಗಿ ಗ್ರಹಿಸಿದ್ದಾರೆ. ಬಿಜೆಪಿ ಪಕ್ಷದ ಕುರಿತು ಇತರ ರಾಜ್ಯಗಳಲ್ಲಿ ಇರುವ ರೀತಿಯಲ್ಲಿ ಇಲ್ಲಿ ಗ್ರಹಿಸಲ್ಪಟ್ಟಿಲ್ಲ. ಬಿಜೆಪಿಯ ಬಗ್ಗೆ ತಪ್ಪು ಗ್ರಹಿಕೆ ಇಲ್ಲಿ ಸೃಷ್ಟಿಸಲಾಗಿದೆ ಎಂದು ಅಣ್ಣಾಮಲೈ ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ವರ್ಷ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

ಈ ಹಿಂದೆ ತಮ್ಮ ಫೇಸ್‍ಬುಕ್‍ನಲ್ಲಿ ಲೈವ್ ಬಂದು ಮಾತನಾಡಿದ್ದ ಅಣ್ಣಾಮಲೈ, ನಾನು 2021ರಲ್ಲಿ ವಿಧಾನ ಸಭೆಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ಹೇಳಿಕೊಂಡಿದ್ದರು. ಜೊತೆಗೆ ದೇಶದಲ್ಲಿ ಇರುವ ಮದ್ಯ ಮಾರಾಟ, ಸ್ಪರ್ಧಾತ್ಮಕ ಪರೀಕ್ಷೆಗಳು, ಅವರಿಗೆ ಅವರ ಊರಿನ ಮೇಲೆ ಇರುವ ಪ್ರೀತಿ ಮತ್ತು ಕಾಳಜಿ ಹಾಗೂ ಅಧಿಕಾರಿಗಳು ಮತ್ತು ಸರ್ಕಾರ ಹೀಗೆ ಹಲವಾರು ವಿಚಾರಗಳ ಬಗ್ಗೆ ಹಂಚಿಕೊಂಡಿದ್ದರು.

ನಾನು 10 ವರ್ಷ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದೇನೆ. ಈಗ ಕರ್ನಾಟಕವನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅಲ್ಲಿನ ಜನರು ನನಗೆ ಬಹಳ ಪ್ರೀತಿ ಕೊಟ್ಟಿದ್ದಾರೆ. ನಾನು ಅದಕ್ಕೆ ಸದಾ ಋಣಿಯಾಗಿ ಇರುತ್ತೇನೆ. ಸದ್ಯ ನಮ್ಮ ಊರಿನಲ್ಲಿ ಕೆಲಸ ಮಾಡಿ ಇಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಲು ತೀರ್ಮಾನಿಸಿದ್ದೇನೆ. ರಾಜಕೀಯ ವ್ಯವಸ್ಥೆಯನ್ನು ಸರಿಪಡಿಸಬೇಕಿದೆ ಎಂದು ಹೇಳಿದ್ದರು.


  • Blogger Comments
  • Facebook Comments

0 comments:

Post a Comment

Item Reviewed: ‘ಸಿಂಗಂ’ ಖ್ಯಾತಿಯ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಇಂದು ಬಿಜೆಪಿ ಸೇರ್ಪಡೆ Rating: 5 Reviewed By: karavali Times
Scroll to Top