ನೀಟ್, ಜೆಇಇ ಪರೀಕ್ಷೆಗಳು ಪೂರ್ವ ನಿಗದಿಯಂತೆ ಸೆಪ್ಟೆಂಬರ್ ತಿಂಗಳಲ್ಲೇ ನಡೆಸಿ : ಸುಪ್ರೀಂ ಕೋರ್ಟ್ ಅನುಮತಿ - Karavali Times ನೀಟ್, ಜೆಇಇ ಪರೀಕ್ಷೆಗಳು ಪೂರ್ವ ನಿಗದಿಯಂತೆ ಸೆಪ್ಟೆಂಬರ್ ತಿಂಗಳಲ್ಲೇ ನಡೆಸಿ : ಸುಪ್ರೀಂ ಕೋರ್ಟ್ ಅನುಮತಿ - Karavali Times

728x90

17 August 2020

ನೀಟ್, ಜೆಇಇ ಪರೀಕ್ಷೆಗಳು ಪೂರ್ವ ನಿಗದಿಯಂತೆ ಸೆಪ್ಟೆಂಬರ್ ತಿಂಗಳಲ್ಲೇ ನಡೆಸಿ : ಸುಪ್ರೀಂ ಕೋರ್ಟ್ ಅನುಮತಿ

 

ನವದೆಹಲಿ (ಕರಾವಳಿ ಟೈಮ್ಸ್) : ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನ್ಯಾಷನಲ್ ಎಲಜಿಬಿಲಿಟಿ ಕಂ ಎಂಟ್ರೆನ್ಸ್ ಟೆಸ್ಟ್-ನೀಟ್) ಮತ್ತು ಜಂಟಿ ಪ್ರವೇಶ ಪರೀಕ್ಷೆ (ಜೋಯಿಂಟ್ ಎಂಟ್ರೆನ್ಸ್ ಎಕ್ಸಾಮಿನೇಷನ್-ಜೆಇಇ) ಪೂರ್ವ ನಿಗದಿಯಂತೆ ಸೆಪ್ಟೆಂಬರ್ ತಿಂಗಳಲ್ಲಿ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ಅನುಮತಿಸಿದೆ. 

ಕೋವಿಡ್-19 ಹಿನ್ನೆಲೆಯಲ್ಲಿ ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ಮುಂದೂಡಬೇಕೆಂದು ಕೋರಿ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಲಾಗಿತ್ತು, ಅದನ್ನು ತಳ್ಳಿಹಾಕಿರುವ ಸುಪ್ರೀಂ ಕೋರ್ಟ್, ಯುವಜನತೆಯ ವೃತ್ತಿ ಬದುಕನ್ನು ಅಪಾಯಕ್ಕೆ ತಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಕೊರೋನಾ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಬೇಕೆಂದು 11 ಮಂದಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇದೀಗ ಸುಪ್ರೀಂ ಕೋರ್ಟ್ ಅರ್ಜಿಯನ್ನು ನಿರಾಕರಿಸುವುದರೊಂದಿಗೆ ಪರೀಕ್ಷೆಗಳು ನಿರಾಂತಂಕವಾಗಿ ಮುಂದಿನ ಸೆಪ್ಟೆಂಬರ್ ತಿಂಗಳಲ್ಲಿಯೇ ನಡೆಯಲಿದೆ.

ಕೊರೋನಾ ಇದೆ ಎಂದು ಜೀವನ ನಿಲ್ಲಿಸಲು ಸಾಧ್ಯವಿಲ್ಲ. ಸುರಕ್ಷತಾ ಕ್ರಮಗಳನ್ನು ಅನುಸರಿಸಿಕೊಂಡು ಮುಂದುವರಿಯಬೇಕು. ವಿದ್ಯಾರ್ಥಿಗಳು ಒಂದು ವರ್ಷವಿಡೀ ಹಾಳು ಮಾಡಲು ಸಿದ್ದರಿದ್ದೀರಾ? ಶಿಕ್ಷಣ ವ್ಯವಸ್ಥೆ ಮುಕ್ತವಾಗಬೇಕು. ಕೋವಿಡ್ ಒಂದು ವರ್ಷದವರೆಗೆ ಮುಂದೆ ಹೋಗಬಹುದು. ಮತ್ತೊಂದು ವರ್ಷ ನೀವು (ವಿದ್ಯಾರ್ಥಿಗಳು) ಕಾಯುತ್ತೀರಾ? ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ದೇಶಕ್ಕೆ ಎಷ್ಟು ನಷ್ಟ ಎಂದು ಗೊತ್ತೇ ನಿಮಗೆ ಎಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಮೂವರು ನ್ಯಾಯಮೂರ್ತಿಗಳನ್ನೊಳಗೊಂಡ ಪೀಠ ಇಂದು ವಿಚಾರಣೆ ವೇಳೆ ಪ್ರಶ್ನಿಸಿತು. 11 ರಾಜ್ಯಗಳ 11 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಕೊರೋನಾ ಕಡಿಮೆಯಾಗಿ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಮೇಲೆಯೇ ಪರೀಕ್ಷೆ ನಡೆಸಬೇಕೆಂದು ಮತ್ತು ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸುವಂತೆ ಕೂಡ ಒತ್ತಾಯಿಸಿದ್ದರು.

ವಿದ್ಯಾರ್ಥಿಗಳ ಪರ ವಾದ ಮಂಡಿಸಿದ ನ್ಯಾಯವಾದಿ ಅಲಕ್ ಅಲೋಕ್ ಶ್ರೀವಾಸ್ತವ, ವಿದ್ಯಾರ್ಥಿಗಳು ಪರಿಹಾರಕ್ಕೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ ಎಂದರು. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪರವಾಗಿ ವಾದ ಮಂಡಿಸಿದ ಸೊಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪರೀಕ್ಷೆ ನಡೆಸಲು ಎಲ್ಲಾ ಮುನ್ನೆಚ್ಚರಿಕೆ ವಹಿಸುವುದಾಗಿ ಹೇಳಿದರು. ಜೆಇಇ ಪರೀಕ್ಷೆ ಸೆಪ್ಟೆಂಬರ್ 1ರಿಂದ 6ರವರೆಗೆ, ನೀಟ್ ಪರೀಕ್ಷೆ ಸೆಪ್ಟೆಂಬರ್ 13 ರವರೆಗೆ ನಡೆಯಲಿದೆ. 






  • Blogger Comments
  • Facebook Comments

0 comments:

Post a Comment

Item Reviewed: ನೀಟ್, ಜೆಇಇ ಪರೀಕ್ಷೆಗಳು ಪೂರ್ವ ನಿಗದಿಯಂತೆ ಸೆಪ್ಟೆಂಬರ್ ತಿಂಗಳಲ್ಲೇ ನಡೆಸಿ : ಸುಪ್ರೀಂ ಕೋರ್ಟ್ ಅನುಮತಿ Rating: 5 Reviewed By: karavali Times
Scroll to Top