ನಮಗೆ ಲೀಗಲ್ ನೋಟೀಸು ಕೊಟ್ಟು ಸರಕಾರ ನಮ್ಮ ಕೆಲಸ ಸುಲಭ ಮಾಡಿದೆ : ಸಿದ್ದರಾಮಯ್ಯ - Karavali Times ನಮಗೆ ಲೀಗಲ್ ನೋಟೀಸು ಕೊಟ್ಟು ಸರಕಾರ ನಮ್ಮ ಕೆಲಸ ಸುಲಭ ಮಾಡಿದೆ : ಸಿದ್ದರಾಮಯ್ಯ - Karavali Times

728x90

2 August 2020

ನಮಗೆ ಲೀಗಲ್ ನೋಟೀಸು ಕೊಟ್ಟು ಸರಕಾರ ನಮ್ಮ ಕೆಲಸ ಸುಲಭ ಮಾಡಿದೆ : ಸಿದ್ದರಾಮಯ್ಯ



ಸತ್ಯ ಹೇಳಲು ನಿಮಗೆ ಭಯ ಯಾಕೆ : ಸಿಎಂಗೆ ಪ್ರಶ್ನೆಗಳ ಸುರಿಮಳೆಗೈದ ವಿರೋಧ ಪಕ್ಷದ ನಾಯಕ


ಪರಿಸ್ಥಿತಿ ಕೈ ಮೀರಿದ ಮೇಲೂ ಪ್ರಶ್ನಿಸದಿದ್ದರೆ ಹೇಗೆ? ಜನದ್ರೋಹ ಬಗೆಯಲು ನಮ್ಮಿಂದ ಸಾಧ್ಯವಿಲ್ಲ


ಬೆಂಗಳೂರು (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಕ್ರಮ ಪ್ರಶ್ನಿಸಿದ ನಮಗೆ ವಕೀಲರ ಮೂಲಕ ನೋಟೀಸ್ ಕೊಟ್ಟು ಬಿಜೆಪಿ ನಮ್ಮ ಕೆಲಸವನ್ನು ಸುಲಭ ಮಾಡಿದೆ. ನಾವೇ ನ್ಯಾಯಾಲಯದ ಮೆಟ್ಟಿಲು ಹತ್ತಬೇಕೆಂದಿದ್ದೆವು. ನಮಗೆ ನೀಡದ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಲೇಬೇಕಲ್ಲಾ? ಕೋರ್ಟ್‍ನಲ್ಲಿಯಾದರೂ ನಮ್ಮನ್ನು ಎದುರಿಸಲೇಬೇಕಲ್ಲಾ? ನಾನು ಬಹಿರಂಗವಾಗಿ ಖರೀದಿ ಅಕ್ರಮಗಳನ್ನು ಪ್ರಶ್ನಿಸಿದ ನಂತರ ಲೂಟಿ ಸ್ವಲ್ಪ ನಿಯಂತ್ರಣಕ್ಕೆ ಬಂದಿದೆ.

    ಕೋಟ್ಯಂತರ ರೂಪಾಯಿಯ ಖರೀದಿ ಆದೇಶಗಳನ್ನು ಸರಕಾರ ತಡೆಹಿಡಿದಿದೆ. ಹೊಟ್ಟೆಗೆ ಕಲ್ಲು ಹಾಕಿದನಲ್ಲಾ ಎಂದು ಇವರಿಗೆಲ್ಲ ನನ್ನ ಮೇಲೆ ಕೋಪ. ಅದಕ್ಕಾಗಿ ನನ್ನ ಮೇಲೆ ದಾಳಿ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಪ್ರತಿದಿನ 5000ಕ್ಕೂ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ದಾಖಲಾಗುತ್ತಿವೆ. ಸರಾಸರಿ 80-90 ಮಂದಿ ಸಾಯುತ್ತಿದ್ದಾರೆ. ಸಚಿವ ಹರ್ಷವರ್ಧನ್ ಪ್ರಕಾರ ಕೊರೊನಾ ಸಾವಿನ ಪ್ರಮಾಣ ಇಳಿಯುತ್ತಿದೆಯಂತೆ. ಅದಕ್ಕಾಗಿ ವೆಂಟಿಲೇಟರ್ ರಫ್ತಿಗೆ ಅವಕಾಶಕ್ಕೆ ಕೊಡ್ತಾರಂತೆ. ಹೃದಯಹೀನ ಸರ್ಕಾರ ನಮ್ಮದು ಎಂದು ಸಿದ್ದು ತೀವ್ರ ಗರಂ ಆಗಿದ್ದಾರೆ.

    ನಮ್ಮಿಂದ ಸಹಕಾರ ನಿರೀಕ್ಷಿಸುವ ಬಿಜೆಪಿ ರಾಜ್ಯದಲ್ಲಿ ಕೊರೊನಾ ಸಾವು ಹೆಚ್ಚಳಕ್ಕೆ ವೆಂಟಿಲೇಟರ್ ಕೊರತೆಯೂ ಒಂದು ಕಾರಣ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸಕ್ರಿಯ ಸೋಂಕು ಪ್ರಕರಣಗಳು 57,396. ಲಭ್ಯ ಇರುವ ವೆಂಟಿಲೇಟರ್‍ಗಳು ಕೇವಲ 801. ಒಟ್ಟು ರಾಜ್ಯದ ಸ್ಥಿತಿ ಇನ್ನೂ ಚಿಂತಾಜನಕ. ಪ್ರಧಾನಿ ನರೇಂದ್ರ ಮೋದಿ ಸರಕಾರಕ್ಕೆ ರಫ್ತು ಹೆಚ್ಚಿಸುವ ಚಿಂತೆ.

    ರಾಜ್ಯದಲ್ಲಿ ಕೊರೊನಾ ಅನಿಯಂತ್ರಿತವಾಗಿ ಹರಡುವುದಕ್ಕೂ ಸರಕಾರದ ಭ್ರಷ್ಟಾಚಾರಕ್ಕೂ ನೇರವಾದ ಸಂಪರ್ಕ ಇದೆ. ಈ ಕಾರಣಕ್ಕಾಗಿ ನಾವು ಅಭಿಯಾನದ ಮೂಲಕ ಜನರ ಬಳಿ ನೇರವಾಗಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಜನರ ಕಷ್ಟದ ಕಾಲದಲ್ಲಿ ವಿರೋಧ ಪಕ್ಷಗಳು ಸಹಕಾರ ನೀಡಬೇಕು, ಆರೋಪ ಮಾಡುವುದು ಸರಿಯೇ ಎಂದು ಸಿಎಂ ಯಡಿಯೂರಪ್ಪ ಕೇಳ್ತಿದ್ದಾರೆ. ಇಂತಹ ಸಾವು-ನೋವಿನ ಕಷ್ಟ ಕಾಲದಲ್ಲಿ ಜನರ ಜೀವ ಉಳಿಸಬೇಕೇ ಹೊರತು ಭ್ರಷ್ಟಾಚಾರ ಮಾಡುವುದು ಸರಿಯೇ? ಎಂದು ನಾವು ಕೇಳುತ್ತಿದ್ದೇವೆ. ನಿಮ್ಮ ಆತ್ಮಸಾಕ್ಷಿಯನ್ನು ಕೇಳಿ ಹೇಳಿ. ಕೊರೊನಾ ಕಾಲದಲ್ಲಿ ಮಧ್ಯಪ್ರದೇಶದ ನಮ್ಮ ಸರಕಾರಕ್ಕೆ ನೀವು ಯಾಕೆ ಸಹಕಾರ ಕೊಡಲಿಲ್ಲ? ರಾಜಸ್ಥಾನದ ನಮ್ಮ ಸರಕಾರವನ್ನು ಉರುಳಿಸಲು ಹೊರಟದ್ದು ಯಾಕೆ?

    ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿತ್ತು ಎನ್ನುವ ಕಾರಣಕ್ಕೆ ಸಹಿಸಿಕೊಂಡು ಸುಮ್ಮನಿದ್ದೆವು. ಈಗ ಕೊರೊನಾ ಸಾವು-ನೋವುಗಳಲ್ಲಿ ಮಹಾರಾಷ್ಟ್ರ-ತಮಿಳುನಾಡುಗಳನ್ನು ಮೀರಿಸಿ ಕರ್ನಾಟಕ ನಂಬರ್ ಒನ್ ಆಗಲು ಹೊರಟಿದೆ. ಈಗಲೂ ಸುಮ್ಮನಿದ್ದರೆ ಜನದ್ರೋಹ ಆಗಲಾರದೇ? ಬೆಡ್ ಇಲ್ಲ, ಔಷಧಿ ಇಲ್ಲ, ಊಟ ಕೊಡ್ತಿಲ್ಲ, ಅಂಬ್ಯುಲೆನ್ಸ್ ಇಲ್ಲ, ವೆಂಟಿಲೇಟರ್ ಇಲ್ಲ. ಬೀದಿಯಲ್ಲಿಯೇ ಹೆಣವಾದರು, ಸತ್ತ ಮೇಲೆಯೂ ದಪನ ಮಾಡುವವರಿಲ್ಲ ಎನ್ನುವುದೇ ಮಾಧ್ಯಮಗಳಲ್ಲಿ ನಿತ್ಯ ಸುದ್ದಿ. ರಾಜ್ಯದಲ್ಲಿ ಸೋಂಕಿನ ಸಂಖ್ಯೆ 1,29,287ಕ್ಕೆ ಸಾವಿನ ಸಂಖ್ಯೆ 2412ಕ್ಕೆ ಏರಿದೆ. ಪರಿಸ್ಥಿತಿ ಹೀಗಿರುತ್ತಾ ನಾವು ಸುಮ್ಮನಿರಬೇಕಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

    ರಾಜ್ಯದ ಜನ ಜನ ಬೆಡ್ ಇಲ್ಲ, ವೆಂಟಿಲೇಟರ್ ಇಲ್ಲ, ಆಕ್ಸಿಜನ್ ಪೂರೈಕೆ ಯಂತ್ರಗಳಿಲ್ಲ, ಊಟ-ತಿಂಡಿ ಇಲ್ಲ, ಉದ್ಯೋಗ ಇಲ್ಲ ಎಂದು ಗೋಳಾಡುತ್ತಿದ್ದಾರೆ. ಬಿಜೆಪಿ ಸರಕಾರಕ್ಕೆ ಜನರ ಕಷ್ಟ ಕಾಣಲಿಲ್ಲ, ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಗಳಿಸಬಹುದಾದ ದುಡ್ಡು ಮಾತ್ರ ಕಂಡಿದೆ ಎಂದು ಅಣಕವಾಡಿದರು.

    ಅಕ್ರಮದ ಬಗ್ಗೆ ಸಿಎಂ ಅವರನ್ನು ಪ್ರಶ್ನಿಸಿದರೆ “ಮಾಹಿತಿ ಕೊಡಿ” ಎನ್ನುತ್ತಾರೆ, ದಾಖಲೆಗಳನ್ನು ಬಿಡುಗಡೆ ಮಾಡಿದರೆ ಅದು ಸುಳ್ಳು ಎನ್ನುತ್ತಾರೆ. ತನಿಖೆ ಮಾಡಿಸಿ ಎಂದರೆ ಸುಳ್ಳಿನ ಬಗ್ಗೆ ತನಿಖೆ ಯಾಕೆ ಎಂದು ಕೇಳ್ತಾರೆ. ಜನರ ಬಳಿ ಹೋಗದೆ ನಮಗೆ ಬೇರೆ ದಾರಿ ಏನಿದೆ? 24 ಗಂಟೆಯೊಳಗೆ ಸಿದ್ದರಾಮಯ್ಯನವರ ಮನೆ ಬಾಗಿಲಿಗೆ ಮಾಹಿತಿ ಕಳಿಸಿಕೊಡ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿ 24 ದಿನ ಕಳೆದು ಹೋಗಿದೆ. ಇಲ್ಲಿಯವರೆಗೆ ರಾಜ್ಯ ಸರ್ಕಾರದಿಂದ ಒಂದು ಹಾಳೆ ಮಾಹಿತಿ ನನಗೆ ಬಂದಿಲ್ಲ. ಸತ್ಯ ಹೇಳಲು ನಿಮಗೆ ಭಯ ಯಾಕೆ? ಎಂದು ಸಿದ್ದು ಸಿಎಂ ಯಡಿಯೂರಪ್ಪ ಅವರನ್ನು ಪ್ರಶ್ನಿಸಿದ್ದಾರೆ.





  • Blogger Comments
  • Facebook Comments

0 comments:

Post a Comment

Item Reviewed: ನಮಗೆ ಲೀಗಲ್ ನೋಟೀಸು ಕೊಟ್ಟು ಸರಕಾರ ನಮ್ಮ ಕೆಲಸ ಸುಲಭ ಮಾಡಿದೆ : ಸಿದ್ದರಾಮಯ್ಯ Rating: 5 Reviewed By: karavali Times
Scroll to Top