ಐಪಿಎಲ್ 2020 : ಮುಂಬೈ ಬೃಹತ್ ಮೊತ್ತಕ್ಕೆ ಕೆಕೆಆರ್ ನಿರುತ್ತರ - Karavali Times ಐಪಿಎಲ್ 2020 : ಮುಂಬೈ ಬೃಹತ್ ಮೊತ್ತಕ್ಕೆ ಕೆಕೆಆರ್ ನಿರುತ್ತರ - Karavali Times

728x90

23 September 2020

ಐಪಿಎಲ್ 2020 : ಮುಂಬೈ ಬೃಹತ್ ಮೊತ್ತಕ್ಕೆ ಕೆಕೆಆರ್ ನಿರುತ್ತರ

 


49 ರನ್ ಗಳಿಂದ ಕೆಕೆಆರ್ ಮಣಿಸಿದ ರೋಹಿತ್ ಬಳಗ 

ಅಬುದಾಬಿ, ಸೆ 24, 2020 (ಕರಾವಳಿ ಟೈಮ್ಸ್) : ಇಲ್ಲಿನ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಐಪಿಎಲ್ 13ನೇ ಆವೃತ್ತಿಯ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ 49 ರನ್ ಗಳಿಂದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸಿದೆ. ಈ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಟೂರ್ನಿಯ ಮೊದಲ ಪಂದ್ಯದಲ್ಲೇ ಸೋಲನುಭವಿಸಿದರೆ, ಮುಂಬೈ ಇಂಡಿಯನ್ಸ್ ದುಬೈ ಐಪಿಎಲ್ ನಲ್ಲಿ ಮೊದಲ ಗೆಲುವು ದಾಖಲಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್  ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿ ಎದುರಾಳಿಗೆ 196 ರನ್ ಗಳ ಬೃಹತ್ ಸವಾಲನ್ನು ನೀಡಿತು.

 ರೋಹಿತ್ ಶರ್ಮಾ 54 ಎಸೆತಗಳಲ್ಲಿ 6 ಸಿಕ್ಸರ್ ಸೇರಿದಂತೆ 80 ರನ್ ಸಿಡಿಸಿ ತಂಡದ ಮೊತ್ತ ಇನ್ನೂರರ ಸಮೀಪಕ್ಕೆ ಕೊಂಡೊಯ್ಯಲು ನೆರವಾದರು.  ಸೂರ್ಯ ಕುಮಾರ್ ಯಾದವ್ 47 ರನ್ ಗಳಿಸಿದರು. 

ಮುಂಬೈ ಇಂಡಿಯನ್ಸ್ ನೀಡಿದ 196 ರನ್ ಗಳ ಬೃಹತ್ ಗುರಿ ಬೆನ್ನತ್ತಿದ್ದ ಕೆಕೆಆರ್ 9 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಲಷ್ಟೇ ಶಕ್ತವಾಯಿತು. 

 ಪಂದ್ಯದುದ್ದಕ್ಕೂ ಮುಂಬೈ ಇಂಡಿಯನ್ಸ್ ವೇಗಿಗಳು ನೈಟ್ ರೈಡರ್ಸ್ ಮೇಲೆ ಸವಾರಿ ಮಾಡಿದರು. ಮೊದಲ ಓವರಿನಿಂದಲೇ ಒತ್ತಡ ಹಾಕಲು ಆರಂಭಿಸಿದ ಟ್ರೆಂಟ್ ಬೌಲ್ಟ್  4 ಓವರ್ ಮಾಡಿ 30 ರನ್ ನೀಡಿ ಎರಡು ವಿಕೆಟ್ ಪಡೆದರು. ಜಸ್ಪ್ರೀತ್ ಬುಮ್ರಾ ನಾಲ್ಕು ಓವರ್ ಎಸೆತಗಾರಿಕೆ ನಡೆಸಿ ಒಂದೇ ಓವರಿನಲ್ಲಿ ಎರಡು ಪ್ರಮುಖ ವಿಕೆಟ್ ಕಿತ್ತು ಕೋಲ್ಕತ್ತಾ ತಂಡವನ್ನು ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು.

ಇನ್ನಿಂಗ್ಸ್ ನ ಮೊದಲ ಓವರ್ ಮೇಡನ್ ಓವರ್ ಮಾಡಿದ ವೇಗಿ ಬೌಲ್ಟ್ ತಾವು ಮಾಡಿದ ಎರಡನೇ ಓವರಿನಲ್ಲಿ ಯುವ ಆಟಗಾರ ಶುಭಮನ್ ಗಿಲ್ ಅವರನ್ನು ಔಟ್ ಮಾಡಿದರು. ನಾಲ್ಕನೇ ಓವರಿನಲ್ಲಿ ಜೇಮ್ಸ್ ಪ್ಯಾಟಿನ್ಸನ್ ಅವರ ಬೌನ್ಸರ್ ಗೆ ಸುನಿಲ್ ನರೈನ್ ಅವರು ವಿಕೆಟ್ ಕೀಪರ್ ಗೆ ಕ್ಯಾಚ್ ನೀಡಿ ಹೊರ ನಡೆದರು.

ಪಂದ್ಯದ ಆರಂಭದಿಂದಲೂ ಮೇಲುಗೈ ಸಾಧಿಸಿದ ಮುಂಬೈ ದಾಳಿಗಾರರು ಕೋಲ್ಕತ್ತಾವನ್ನು ಕಟ್ಟಿ ಹಾಕಿದ್ದರು. ಪವರ್ ಪ್ಲೇ ಅವಧಿಯಲ್ಲಿ ಕೇವಲ 33 ರನ್ ಗಳಿಸಲು ಮಾತ್ರ ಕೆಕೆಆರ್ ಶಕ್ತವಾಗಿದ್ದು, ಮುಂಬೈ ದಾಳಿಗಾರರ ನಿಖರ ಎಸೆತಗಾರಿಕೆಗೆ ಸಾಕ್ಷಿಯಾಗಿತ್ತು. ಕೋಲ್ಕತ್ತಾ 6 ಓವರ್ ಮುಕ್ತಾಯದ ವೇಳೆ ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿತ್ತು. ಬಳಿಕ ನಾಯಕ ದಿನೇಶ್ ಕಾರ್ತಿಕ್ ಮತ್ತು ನಿತೀಶ್ ರಾಣಾ ಉತ್ತಮ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದ್ದರು. ಆದರೆ 10ನೇ ಓವರಿನ ಮೊದಲ ಎಸೆತದಲ್ಲಿ 30 ರನ್ ಗಳಿಸಿ ಆಡುತ್ತಿದ್ದ ಕಾರ್ತಿಕ್ ಔಟ್ ಆದರು.

24 ರನ್‍ಗಳಿಸಿ ನಿಧಾನಗತಿಯ ದಾಂಡುಗಾರಿಕೆ ನಡೆಸುತ್ತಿದ್ದ ನಿತೀಶ್ ರಾಣಾ ಸೀಮಾ‌ ರೇಖೆಯ ಬಳಿ ಹಾರ್ದಿಕ್ ಪಾಂಡ್ಯ ಹಿಡಿದ ಉತ್ತಮ ಕ್ಯಾಚಿಗೆ ಬಲಿಯಾದರು. ಬಳಿಕ ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ ನಿಖರತೆಗೆ ಆಂಡ್ರೆ ರಸ್ಸೆಲ್ ಕ್ಲೀನ್ ಬೌಲ್ಡ್ ಆದರು. ಇದಾದ ಬಳಿಕ ಆದೇ ಓವರಿನಲ್ಲಿ ಇಯೊನ್ ಮೋರ್ಗಾನ್ ಅವರಿಗೂ ಕೂಡ ಬುಮ್ರಾ ಪೆವಿಲಿಯನ್ ಹಾದಿ ತೋರಿದರು. ನಂತರ ಬಂದ ನಿಖಿಲ್ ನಾಯಕ್ ಅವರು ಟ್ರೆಂಟ್ ಬೌಲ್ಟ್ ಅವರಿಗೆ ವಿಕೆಟ್ ಒಪ್ಪಿಸಿದರು. ಅಲ್ಲಿಗೆ ಬಹುತೇಕ ಕೆಕೆಆರ್ ಸೋಲಿನತ್ತ ಮುಖ ಮಾಡಿತ್ತು.

ಕೊನೆಯಲ್ಲಿ ಪ್ಯಾಟ್ ಕಮ್ಮಿನ್ಸ್ ಒಂದಷ್ಟು ಅಬ್ಬರ ತೋರಿದರು. ನಾಲ್ಕು ಭರ್ಜರಿ ಸಿಕ್ಸರ್ ಗಳೊಂದಿಗೆ ಕೇವಲ 12 ಎಸೆತಗಳಲ್ಲಿ 33 ರನ್ ಸಿಡಿಸಿ ಮಿಂಚಿದರು.









  • Blogger Comments
  • Facebook Comments

0 comments:

Post a Comment

Item Reviewed: ಐಪಿಎಲ್ 2020 : ಮುಂಬೈ ಬೃಹತ್ ಮೊತ್ತಕ್ಕೆ ಕೆಕೆಆರ್ ನಿರುತ್ತರ Rating: 5 Reviewed By: karavali Times
Scroll to Top