ದಸರಾ ಹಬ್ಬದ ಸರಳತೆಯ ನೆಪದಲ್ಲಿ ಭ್ರಷ್ಟಾಚಾರ, ಹಣ ದುರುಪಯೋಗ ಸಾಧ್ಯತೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವ ರಾಜ್ಯದ ಜನ - Karavali Times ದಸರಾ ಹಬ್ಬದ ಸರಳತೆಯ ನೆಪದಲ್ಲಿ ಭ್ರಷ್ಟಾಚಾರ, ಹಣ ದುರುಪಯೋಗ ಸಾಧ್ಯತೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವ ರಾಜ್ಯದ ಜನ - Karavali Times

728x90

14 September 2020

ದಸರಾ ಹಬ್ಬದ ಸರಳತೆಯ ನೆಪದಲ್ಲಿ ಭ್ರಷ್ಟಾಚಾರ, ಹಣ ದುರುಪಯೋಗ ಸಾಧ್ಯತೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವ ರಾಜ್ಯದ ಜನ

 


ಸರಳ ದಸರಾ ಹಬ್ಬಕ್ಕೆ ಬಿಡುಗಡೆಯಾಗಿರುವ 15 ಕೋಟಿ ಹಣದ ಖರ್ಚು ಬಗ್ಗೆ ಜನರಿಂದ ಪ್ರಶ್ನೆಗಳ ಸುರಿಮಳೆ 


ಸರಕಾರ ಉತ್ತರಿಸಲಿದೆಯೇ? ವಿರೋಧ ಪಕ್ಷಗಳು ಎಚ್ಚೆತ್ತುಕೊಳ್ಳುವುದೇ?


ಬೆಂಗಳೂರು, ಸೆ. 14, 2020 (ಕರಾವಳಿ ಟೈಮ್ಸ್) : ಕೊರೊನಾ ವೈರಸ್ ಹಾಗೂ ಲಾಕ್ ಡೌನ್ ಸಂಧಿಗ್ದತೆ ಕಾರಣಕ್ಕಾಗಿ ಈ ಬಾರಿ ಸರಳ ದಸರಾ ಆಚರಿಸುವುದಾಗಿ ಇತ್ತೀಚೆಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯ ಸರಕಾರ ತೀರ್ಮಾನಿಸಿದೆ. ತೀವ್ರ ಹಣಕಾಸಿನ ಕೊರತೆ ಎದುರಿಸುತ್ತಿರುವ ಹಿನ್ನಲೆಯಲ್ಲಿ ಸರಳ ದಸರಾ ರಾಜ್ಯ ಸರಕಾರದ ಬೊಕ್ಕಸಕ್ಕೆ ಒಂದಷ್ಟು ನಿರಾಳತೆ ತಂದುಕೊಡಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಸರಕಾರ ದಸರಾ ಸರಳ ಎಂದು ಮಾತ್ರ ಘೋಷಿಸಿದೆ ಹೊರತು ಅದಕ್ಕೆ ಬೇಕಾಗುವ ವೆಚ್ಚಕ್ಕಾಗಿ ಬಿಡುಗಡೆ ಮಾಡಿದ ಮೊತ್ತ ಬರೋಬ್ಬರಿ 15 ಕೋಟಿ ರೂಪಾಯಿ. ಎಂದಿನಂತೆ ಇಷ್ಟೊಂದು ದೊಡ್ಡ ಮೊತ್ತವನ್ನೇ ಈ ಬಾರಿಯೂ ಸರಕಾರ ಬಿಡುಗಡೆಗೊಳಿಸಿದರೆ ಅದೇಗೆ ಸರಳ ದಸರಾ ಆಗುತ್ತದೆ ಎಂಬ ಪ್ರಶ್ನೆ ಇದೀಗ ರಾಜ್ಯದ ಜನರಿಂದ ಕೇಳಿ ಬರುತ್ತಿದೆ. 

ಈಗಾಗಲೇ ಈ ಬಾರಿಯ ಸರಳ ದಸರಾಗೆ ರಾಜ್ಯ ಸರಕಾರ 10 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ 5 ಕೋಟಿ ರೂಪಾಯಿ ನೀಡುತ್ತಿದೆ. ಈ ಮೂಲಕ ಒಟ್ಟು ದಸರಾಗೆ ಬಿಡುಗಡೆಗೊಳ್ಳುವ ಅನುದಾನ 15 ಕೋಟಿ ರೂಪಾಯಿ. ಈ ಬಾರಿಯ ದಸರಾದಲ್ಲಿ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ದಸರಾ ಉದ್ಘಾಟನೆ, ವಿಜಯ ದಶಮಿ ದಿನ ಅರಮನೆಯ ಒಳಗೆ ಜಂಬೂ ಸವಾರಿ ಹಾಗೂ ಅರಮನೆ ಆವರಣದಲ್ಲಿ 8 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ಇವಿಷ್ಟು ಮಾತ್ರ ನಡೆಯಲಿದೆ ಎಂದು ಸರಕಾರ ಘೋಷಿಸಿದೆ. ಇಷ್ಟು ಸರಳ ಕಾರ್ಯಕ್ರಮಗಳಿಗಾಗಿ 15 ಕೋಟಿ ರೂಪಾಯಿ ಬಿಡುಗಡೆ ಏಕೆ ಎಂಬುದೇ ಇದೀಗ ರಾಜ್ಯದ ಜನರ ಪ್ರಶ್ನೆ.

ಈ ಬಾರಿ ಯಾವುದೇ ದಸರಾ ಉಪ ಸಮಿತಿಗಳಿಲ್ಲ, ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲ, ದೀಪಾಲಂಕಾರವನ್ನೂ ಮಾಡಲಾಗುವುದಿಲ್ಲ. ಆದರೂ ದಸರಾ ಮೊತ್ತ 15 ಕೋಟಿ ಬಿಡುಗಡೆ. ಹಾಗಾದರೆ ಖರ್ಚು ಮಾಡುವ ದಾರಿಗಳು ಯಾವುದು ಎಂದು ಪ್ರಶ್ನಿಸಿದರೆ ಅದಕ್ಕೆ ಸಮರ್ಪಕ ಉತ್ತರ ಸಂಬಂಧಪಟ್ಟವರಿಂದ ದೊರೆಯುತ್ತಿಲ್ಲ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆಯಂತೆ ಸರಕಾರ ಬಿಡುಗಡೆಗೊಳಿಸಿರುವ ಹಣ ಬರೀ ದಸರಾ ಆಚರಣೆಗೆ ಸೀಮಿತವಾಗಿಲ್ಲ. ಅದು ರಸ್ತೆ ಅಭಿವೃದ್ದಿ ಸೇರಿದಂತೆ ಸಮಗ್ರ ಮೈಸೂರು ಅಭಿವೃದ್ಧಿಗಾಗಿ. ಒಂದು ರೂಪಾಯಿಯೂ ದುರುಪಯೋಗವಾಗಲು ಬಿಡುವುದಿಲ್ಲ. ಹಣದ ಬಳಕೆಯ ಪರಿಪೂರ್ಣ ಲೆಕ್ಕವನ್ನು ದಸರಾ ನಂತರ ನೀಡಲಾಗುವುದು. ಕೊರೊನಾ ಸಂಕಷ್ಟ ಕಾಲದಲ್ಲೂ ದಸರಾ ಹಬ್ಬಕ್ಕೆ ಸರಕಾರ ಭರ್ಜರಿ ಅನುದಾನ ನೀಡಿದೆ. ಇದರ ಪರಿಪೂರ್ಣ ಸದುಪಯೋಗ ಮಾಡಿಕೊಳ್ಳುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ. 

ಸಚಿವರ ಹೇಳಿಕೆ ಏನಿದ್ದರೂ ಇನ್ನು ದಸರಾ ಹಬ್ಬಕ್ಕೆ ಇರುವುದು ಬರೀ ಒಂದೇ ತಿಂಗಳು ಮಾತ್ರ. ಇನ್ನು ರಸ್ತೆ ಕಾಮಗಾರಿ ಪ್ರಾರಂಭಿಸುವುದು ಯಾವಾಗ? ಅದನ್ನು ಪೂರ್ಣಗೊಳಿಸುವುದು ಯಾವಾಗ? ರಸ್ತೆ ಕಾಮಗಾರಿಯ ರೂಪುರೇಷೆಯೇ ಇನ್ನೂ ಸಿದ್ದಗೊಂಡಿಲ್ಲ. ಅಲ್ಲದೆ ಇನ್ನೂ ಮಳೆ ತೀವ್ರತೆ ಕಡಿಮೆಯಾಗಿಲ್ಲ. ಮಳೆಯಿಂದಾಗಿ ಕಾಮಗಾರಿ ಆರಂಭಿಸುವುದಾದರೂ ಹೇಗೆ? ಈ ಎಲ್ಲಾ ಪ್ರಶ್ನೆಗಳನ್ನು ರಾಜ್ಯದ ಜನ ಸರಕಾರದ ಮುಂದಿಡುವ ಮೂಲಕ ಈ ಬಾರಿಯ ದಸರಾಗೆ ಬಿಡುಗಡೆಯಾಗಿರುವ ದೊಡ್ಡ ಮೊತ್ತದ ಅನುದಾನದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಲ್ಲದೆ, ಮತ್ತೊಂದು ಭ್ರಷ್ಟಾಚಾರ, ಹಗರಣ ನಡೆಯುವ ಮೊದಲೇ ಸರಕಾರ ಹಾಗೂ ವಿರೊಧ ಪಕ್ಷಗಳು ಎಚ್ಚೆತ್ತುಕೊಳ್ಳಬೇಕು ಎಂಬ ಸಲಹೆಯನ್ನೂ ಜನ ನೀಡುತ್ತಿದ್ದಾರೆ. 


  • Blogger Comments
  • Facebook Comments

0 comments:

Post a Comment

Item Reviewed: ದಸರಾ ಹಬ್ಬದ ಸರಳತೆಯ ನೆಪದಲ್ಲಿ ಭ್ರಷ್ಟಾಚಾರ, ಹಣ ದುರುಪಯೋಗ ಸಾಧ್ಯತೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವ ರಾಜ್ಯದ ಜನ Rating: 5 Reviewed By: karavali Times
Scroll to Top