ವೀಕೆಂಡ್ ದ್ವಿತೀಯ ಪಂದ್ಯದಲ್ಲಿ ಆರ್ಸಿಬಿಗೆ 37 ರನ್ ಅಮೋಘ ಜಯ - Karavali Times ವೀಕೆಂಡ್ ದ್ವಿತೀಯ ಪಂದ್ಯದಲ್ಲಿ ಆರ್ಸಿಬಿಗೆ 37 ರನ್ ಅಮೋಘ ಜಯ - Karavali Times

728x90

10 October 2020

ವೀಕೆಂಡ್ ದ್ವಿತೀಯ ಪಂದ್ಯದಲ್ಲಿ ಆರ್ಸಿಬಿಗೆ 37 ರನ್ ಅಮೋಘ ಜಯ

 


ಕುಸಿದ ತಂಡಕ್ಕೆ ಆಸರೆಯಾದ ನಾಯಕ ಕೊಹ್ಲಿ, ಸುಂದರ್, ಮೋರಿಸ್ ಸುಂದರ ಸ್ಪೆಲ್ ಗೆ ನೆಲಕಚ್ಚಿದ ಚೆನ್ನೈ


ಅಬುಧಾಬಿ, ಅ. 11, 2020 (ಕರಾವಳಿ ಟೈಮ್ಸ್) : ಇಲ್ಲಿನ ನ್ಯಾಷನಲ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ವೀಕೆಂಡ್ ದ್ವಿತೀಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ವಿರುದ್ದ ಅಮೋಘ 37 ರನ್‍ಗಳ ಜಯ ಸಾಧಿಸಿದೆ.

 ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಯಕ ವಿರಾಟ್ ಕೊಹ್ಲಿ ಅವರು ನಾಯಕನ ಆಟವಾಡಿ 90 ರನ್‍ಗಳಿಸಿದ ಕಾರಣ ನಿಗದಿತ 20 ಓವರಿನಲ್ಲಿ 169 ರನ್ ಗಳಿಸಿತು. 170 ರನ್ ಗುರಿ ಬೆನ್ನಟ್ಟಿದ ಚೆನ್ನೈ ತಂಡ ಆರ್ಸಿಬಿ ದಾಳಿಗಾರರ ಬಿಗು ದಾಳಿಗೆ ಸಿಲುಕಿ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 132 ರನ್ ಗಳಿಸಲು ಮಾತ್ರ ಶಕ್ತವಾಯಿತು. ಈ ಮೂಲಕ ಆರ್ಸಿಬಿ 37 ರನ್ ಗಳಿಂದ ಪಂದ್ಯ ಜಯಿಸಿತು.

ಬೆಂಗಳೂರು ತಂಡದ  ಬೌಲರ್ ಗಳು ಚೆನ್ನೈ ತಂಡದ ದಾಂಡಿಗರನ್ನು ಸಂಪೂರ್ಣವಾಗಿ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಆರಂಭದಲ್ಲೇ ಮಾರಕ ದಾಳಿ ಸಂಘಟಿಸಿದ ವಾಷಿಂಗ್ಟನ್ ಸುಂದರ್ ಚೆನ್ನೈ ತಂಡದ ಆರಂಭಿಕ ಆಟಗಾರರಿಬ್ಬರಿಗೂ ಪೆವಿಲಿಯನ್ ಹಾದಿ ತೋರಿದರು. ತನ್ನ 3 ಓವರ್ ದಾಳಿಯಲ್ಲಿ ಕೇವಲ 16 ರನ್ ನೀಡಿದ ಸುಂದರ್  2 ವಿಕೆಟ್ ಪಡೆದರು. ಇವರಿಗೆ ಸಾಥ್ ನೀಡಿದ ಕ್ರಿಸ್ ಮೋರಿಸ್ ತನ್ನ ಪಾಳಿನ 4 ಓವರ್ ಗಳಲ್ಲಿ 19 ರನ್ ನೀಡಿ ಪ್ರಮುಖ 3 ವಿಕೆಟ್ ಕಿತ್ತರು. 

ಇಂದಿನ ಪಂದ್ಯದಲ್ಲಿ ಸೋಲಿನ ನಡುವೆಯೂ ಧೋನಿ ದಾಖಲೆಯೊಂದನ್ನು ಮಾಡಿದರು. 5ನೇ ಕ್ರಮಾಂಕದಲ್ಲಿ ಕ್ರೀಸಿಗೆ ಬಂದ ಸಿ.ಎಸ್.ಕೆ. ನಾಯಕ ಧೋನಿ 6 ಎಸೆತಗಳಲ್ಲಿ 10 ರನ್ ಸಿಡಿಸಿ ಔಟ್ ಆದರಾದರೂ. ಯಜುವೇಂದ್ರ ಚಹಲ್ ಅವರ ಓವರ್ ನಲ್ಲಿ ಸಿಡಿಸಿದ ಏಕೈಕ ಸಿಕ್ಸರ್ ಮೂಲಕ ದಾಖಲೆ ಬರೆದರು. ಐಪಿಎಲ್ ಇತಿಹಾಸದಲ್ಲಿ ಭಾರತೀಯ ಆಟಗಾರನಾಗಿ 300 ಸಿಕ್ಸರ್ ಭಾರಿಸಿದ ಮೊದಲ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು. ಈ ಪಟ್ಟಿಯಲ್ಲಿ ಕ್ರಿಸ್ ಗೇಲ್ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನ  ಎಬಿ ಡಿವಿಲಿಯರ್ಸ್ ಅವರಿಗಿದೆ.

170 ರನ್ ಗಳ ಗುರಿ ಬೆನ್ನಟ್ಟಿದ ಚೆನ್ನೈ ತಂಡ ಆರಂಭದಿಂದಲೂ ನಿಧಾನಗತಿಯ ಆಟಕ್ಕೆ ಮಾರು ಹೋಯಿತು. ಅನುಭವಿ ಆರಂಭಿಕ ಆಟಗಾರರಾದ ಶೇನ್ ವ್ಯಾಟ್ಸನ್ ಹಾಗೂ ಫಾಫ್ ಡು ಪ್ಲೆಸಿಸ್ ವೇಗವಾಗಿ ರನ್ ಗಳಿಸಲು ವಿಫಲರಾದರು. ಇನ್ನಿಂಗ್ಸಿನ 3ನೇ ಓವರಿನ ಕೊನೆಯ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದ ಫಾಫ್ ಡು ಪ್ಲೆಸಿಸ್ (8 ರನ್) ವಾಷಿಂಗ್ಟನ್ ಸುಂದರ್ ಅವರಿಗೆ ಮೊದಲ‌ ಬಲಿಯಾದರು. 5ನೇ ಓವರಿನ 4ನೇ ಎಸೆತದಲ್ಲಿ ಶೇನ್ ವ್ಯಾಟ್ಸನ್ (14 ರನ್) ಅವರು ಕೂಡಾ ವಾಷಿಂಗ್ಟನ್ ಸುಂದರ್ ಗೆ  ಕ್ಲೀನ್ ಬೌಲ್ಡ್ ಆದರು.

ಆರಂಭಿಕ ಆಘಾತಕ್ಕೆ ಸಿಲುಕಿದ ಚೆನ್ನೈ ಪವರ್ ಪ್ಲೇ ಮುಕ್ತಾಯಕ್ಕೆ 2 ವಿಕೆಟ್ ಕಳೆದುಕೊಂಡು 26 ರನ್ ಮಾತ್ರ ಒಟ್ಟುಗೂಡಿಸಿತು. ಬಳಿಕ ಜೊತೆಯಾದ ಅಂಬಾಟಿ ರಾಯುಡು ಹಾಗೂ ಎನ್ ಜಗದೀಶನ್ ನಿಧಾನವಾಗಿ ಆಡಿದ ಪರಿಣಾಮ ಚೆನ್ನೈ 10 ಓವರ್ ಮುಕ್ತಾಯಕ್ಕೆ 2 ವಿಕೆಟ್ ಕಳೆದುಕೊಂಡು 47 ರನ್ ಸೇರಿಸಿತು. ಜಗದೀಶನ್-ರಾಯುಡು ಜೋಡಿ ಅರ್ಧಶತಕದ ಜೊತೆಯಾಟವಾಡಿತು.

28 ಎಸೆತಗಳಲ್ಲಿ 33 ರನ್ ಗಳಿಸಿದ್ದ ಜಗದೀಶನ್ ಅವಸರದ ರನ್ ಕದಿಯಲು ಹೋಗಿ ಕ್ರಿಸ್ ಮೋರಿಸ್ ಅವರಿಂದ ರನೌಟ್ ಆದರು. ನಂತರ ಬಂದ ನಾಯಕ ಧೋನಿ ಸಿಕ್ಸರ್ ಸಿಡಿಸಿ ಸ್ಫೋಟಕ ಬ್ಯಾಟಿಂಗ್‍ ಸೂಚನೆ ನೀಡಿದರಾದರೂ 6 ಎಸೆತಗಳಲ್ಲಿ 10 ರನ್ ಸಿಡಿಸಿ ಕ್ಯಾಚ್ ನೀಡಿ ಪೆವಿಲಿಯನ್ ಗೆ ಮರಳಿದರು. ಬಳಿಕ ಬಂದ ಸ್ಯಾಮ್ ಕರ್ರನ್ ಅವರು ಶೂನ್ಯ ಸುತ್ತಿ ಕ್ರಿಸ್ ಮೋರಿಸ್ ಅವರಿಗೆ ವಿಕೆಟ್ ಒಪ್ಪಿಸಿದರು. 40 ಎಸೆತಗಳಲ್ಲಿ 42 ರನ್‍ ಗಳಿಸಿದ್ದ ಅಂಬಟಿ ರಾಯುಡು ಇಸುರು ಉದಾನಾ ಎಸೆದ  17ನೇ ಓವರಿನ 3ನೇ ಎಸೆತದಲ್ಲಿ ಬೌಲ್ಡ್ ಆದರು. ಸಿಕ್ಸರ್ ಎತ್ತಲು ಹೋದ ಡ್ವೇನ್ ಬ್ರಾವೋ ಅವರು ಕೂಡಾ  ಕ್ರಿಸ್ ಮೋರಿಸ್ ಗೆ ವಿಕೆಟ್ ಒಪ್ಪಿಸಿದರು. ಅದೇ ಓವರಿನಲ್ಲಿ ರವೀಂದ್ರ ಜಡೇಜಾ ಕೂಡಾ ನಿರ್ಗಮಿಸಿದ ಪರಿಣಾಮ ಚೆನ್ನೈ ತಂಡ ಸೋಲನುಭವಿಸಿತು.












  • Blogger Comments
  • Facebook Comments

0 comments:

Post a Comment

Item Reviewed: ವೀಕೆಂಡ್ ದ್ವಿತೀಯ ಪಂದ್ಯದಲ್ಲಿ ಆರ್ಸಿಬಿಗೆ 37 ರನ್ ಅಮೋಘ ಜಯ Rating: 5 Reviewed By: karavali Times
Scroll to Top