ಎಬಿಡಿ-ಕೊಹ್ಲಿ ದಾಖಲೆ ಜೊತೆಯಾಟಕ್ಕೆ ಕೊಚ್ಚಿ ಹೋದ ಕೆಕೆಆರ್ - Karavali Times ಎಬಿಡಿ-ಕೊಹ್ಲಿ ದಾಖಲೆ ಜೊತೆಯಾಟಕ್ಕೆ ಕೊಚ್ಚಿ ಹೋದ ಕೆಕೆಆರ್ - Karavali Times

728x90

12 October 2020

ಎಬಿಡಿ-ಕೊಹ್ಲಿ ದಾಖಲೆ ಜೊತೆಯಾಟಕ್ಕೆ ಕೊಚ್ಚಿ ಹೋದ ಕೆಕೆಆರ್

 


10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮುಂಬೈ, ಡೆಲ್ಲಿ ಜೊತೆ 3ನೇ ಸ್ಥಾನ ಹಂಚಿಕೊಂಡ ಆರ್ಸಿಬಿ

ಶಾರ್ಜಾ, ಅ. 13, 2020 (ಕರಾವಳಿ ಟೈಮ್ಸ್) : ಇಲ್ಲಿನ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಐಪಿಎಲ್‌ ಕೂಟದ ಪಂದ್ಯದಲ್ಲಿ  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ದ 82 ರನ್ ಗಳ ಭಾರೀ ಅಂತರದಿಂದ ಜಯ ಗಳಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ 194 ರನ್ ಗಳಿಸಿತ್ತು. ಗುರಿಯನ್ನು ಬೆನ್ನಟ್ಟಿದ ಕೆಕೆಆರ್ ತಂಡದ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 112 ರನ್ ಗಳಷ್ಟೇ ಶಕ್ತವಾಯಿತು. ಈ ಗೆಲುವಿನ ಮೂಲಕ ಆರ್ ಸಿಬಿ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು. ಕೆಕೆಆರ್ 8 ಅಂಕಗಳೊಂದಿಗೆ 4ನೇ ಸ್ಥಾನಕ್ಕೆ ಇಳಿದಿದೆ.

195 ರನ್‍ಗಳ ಬೃಹತ್ ಗುರಿ ಬೆನ್ನತ್ತಿದ ಕೆಕೆಆರ್ ತಂಡಕ್ಕೆ ಆರಂಭಿಕರಾದ ಗಿಲ್, ಟಾಮ್ ಬ್ಯಾಂಟನ್ ಉತ್ತಮ ಆರಂಭ ನೀಡಲು ವಿಫಲರಾದರು. 4 ಓವರ್ ವೇಳೆಗೆ ಕೆಕೆಆರ್ 23 ರನ್ ಗಳಿಸಿದ್ದ ವೇಳೆ 8 ರನ್ ಗಳಿಸಿದ್ದ ಬ್ಯಾಂಟನ್ ರನೌಟ್ ಮೂಲಕ ಔಟಾದರು. ಬಳಿಕ 9 ರನ್ ಗಳಿಸಿದ್ದ ರಾಣಾ, ಸುಂದರ್ ಗೆ ವಿಕೆಟ್ ಒಪ್ಪಿಸಿದರು. 51 ರನ್ ಗಳಿಸುವ ವೇಳೆಗೆ ಕೆಕೆಆರ್ ತಂಡದ ಇಬ್ಬರು ಆರಂಭಿಕರು ಪೆವಿಲಿಯನ್ ಸೇರಿದ್ದರು.

10ನೇ ಓವರ್ ವೇಳೆಗೆ 55 ರನ್ ಗಳಿಸಿದ್ದ ಕೋಲ್ಕತ್ತಾ ತಂಡ ಶುಭ್‍ಮನ್ ಗಿಲ್‍ರನ್ನು ರನೌಟ್ ಮೂಲಕ ಕಳೆದುಕೊಂಡಿತ್ತು. ಕಳೆದ ಪಂದ್ಯದಲ್ಲಿ ಕೆಕೆಆರ್ ತಂಡದ ಗೆಲುವಿಗೆ ಕಾರಣವಾಗಿದ್ದ ದಿನೇಶ್ ಕಾರ್ತಿಕ್ ಕೇವಲ 1 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಬಳಿಕ ಬಂದ ಯಾವುದೇ ದಾಂಡಿಗರು ಆರ್ ಸಿಬಿ ದಾಳಿಗಾರರನ್ನು ಸಮರ್ಥವಾಗಿ ಎದುರಿಸಲು ವಿಫಲರಾದರು. ಮಾರ್ಗನ್ 8, ರಸೇಲ್ 16, ಕಮ್ಮಿನ್ಸ್ 1, ತ್ರಿಪಾಠಿ 16, ನಾಗರಕೋತಿ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ವರುಣ್ 7 ರನ್ ಹಾಗೂ ಪ್ರಸಿದ್ಧ ಕೃಷ್ಣ 2 ರನ್ ಗಳಿಸಿ ಅಜೇಯರಾಗಿ ಉಳಿದರು. ನಿಗದಿತ 20 ಓವರ್ ಗಳ ಅಂತ್ಯಕ್ಕೆ 9 ವಿಕೆಟ್ ಕಳೆದು ಕೊಂಡು 112 ರನ್ ಗಳಷ್ಟೇ ಶಕ್ತವಾಯಿತು.

ಆರ್ ಸಿಬಿ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಮೋರಿಸ್ 4 ಓವರ್ ಗಳಲ್ಲಿ 17 ರನ್ ನೀಡಿ 2 ವಿಕೆಟ್ ಪಡೆದರು. ವಾಷಿಂಗ್ಟನ್ ಸುಂದರ್ 4 ಓವರ್ ಗಳಲ್ಲಿ 20 ರನ್ ನೀಡಿ 2 ವಿಕೆಟ್ ಕಿತ್ತರು. ಉಳಿದಂತೆ ಚಹಲ್, ಉದಾನ, ಸಿರಾಜ್, ಸೈನಿ ತಲಾ 1 ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾದರು.

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆರ್ ಸಿಬಿಗೆ ಆರಂಭಿಕರಾದ ಪಡಿಕ್ಕಲ್ ಹಾಗೂ ಫಿಂಚ್ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‍ಗೆ 50 ರನ್ ಗಳ ಜೊತೆಯಾಟವನ್ನು ನೀಡಿತ್ತು. ಬಳಿಕ ಕೊಹ್ಲಿ, ಎಬಿ ಡೆವಿಲಿಯರ್ಸ್ ಜೋಡಿ ಶತಕದ ಜೊತೆಯಾಟವಾಡಿ ನಿಗದಿತ 20 ಓವರ್ ಗಳಲ್ಲಿ ತಂಡ 2 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಲು ಕಾರಣವಾಯಿತು. ಪಂದ್ಯದಲ್ಲಿ ಪಡಿಕ್ಕಲ್ 32 ರನ್, ಫಿಂಚ್ 46 ರನ್ ಗಳಿಸಿದರೆ. 28 ಎಸೆತಗಳಲ್ಲಿ ಕೊಹ್ಲಿ 33 ರನ್, ಎಬಿಡಿ 33 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್ ಸಹಿತ 73 ರನ್ ಗಳಿಸಿ ಅಜೇಯರಾಗಿ ಉಳಿದರು.

2013ರ ಬಳಿಕ ಟೂರ್ನಿಯಲ್ಲಿ ಆಡಿದ ಆರಂಭದ 7 ಪಂದ್ಯಗಳಲ್ಲಿ ಮೊದಲ ಬಾರಿಗೆ ಆರ್‌ಸಿಬಿ  5 ರಲ್ಲಿ ಜಯಗಳಿಸಿದೆ. ಕಳೆದ ವರ್ಷ ಆರ್‌ಸಿಬಿ ಮೊದಲ 7 ಪಂದ್ಯವಾಡಿ 1 ಪಂದ್ಯ ಮಾತ್ರ ಗೆದ್ದುಕೊಂಡಿತ್ತು.

ಪಂದ್ಯದಲ್ಲಿ ಶತಕದ ಜೊತೆಯಾಡುವ ಮೂಲಕ ಐಪಿಎಲ್‍ನಲ್ಲಿ ಕೊಹ್ಲಿ, ಎಬಿಡಿ ದಾಖಲೆ ಬರೆದಿದ್ದಾರೆ. ಐಪಿಎಲ್‍ನಲ್ಲಿ ಎಬಿಡಿ, ಕೊಹ್ಲಿ ಜೋಡಿ 3 ಸಾವಿರ ರನ್ ಪೂರೈಸಿತು. ಅಲ್ಲದೇ ಐಪಿಎಲ್‍ನಲ್ಲಿ 10ನೇ ಬಾರಿಗೆ ಶತಕ ಜೊತೆಯಾಟವಾಡಿದ ಜೋಡಿ ಎಂಬ ದಾಖಲೆ ಬರೆದರು.

ಇಲ್ಲಿಯವರೆಗೆ ಐಪಿಎಲ್‍ನಲ್ಲಿ ಕ್ರೀಸ್ ಗೇಲ್–ವಿರಾಟ್ ಕೊಹ್ಲಿ 9 ಬಾರಿ, ಧವನ್–ವಾರ್ನರ್ 6 ಬಾರಿ, ಜಾನಿ ಬೈರ್​ಸ್ಟೋ–ವಾರ್ನರ್ ಜೋಡಿ 5 ಬಾರಿ, ಗಂಭೀರ್–ಉತ್ತಪ್ಪ ಜೋಡಿ 5 ಬಾರಿ ಶತಕದ ಜೊತೆಯಾಟವಾಡಿದೆ.







  • Blogger Comments
  • Facebook Comments

0 comments:

Post a Comment

Item Reviewed: ಎಬಿಡಿ-ಕೊಹ್ಲಿ ದಾಖಲೆ ಜೊತೆಯಾಟಕ್ಕೆ ಕೊಚ್ಚಿ ಹೋದ ಕೆಕೆಆರ್ Rating: 5 Reviewed By: karavali Times
Scroll to Top