ಸಂಕಷ್ಟದ ಸಮಯದಲ್ಲೂ ಜನರ ಕೈ ಹಿಡಿಯದ ರಾಜ್ಯ ಸರಕಾರ ಇದ್ದರೇನು ಬಿದ್ದರೇನು : ಆಪ್ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಆಕ್ರೋಶ - Karavali Times ಸಂಕಷ್ಟದ ಸಮಯದಲ್ಲೂ ಜನರ ಕೈ ಹಿಡಿಯದ ರಾಜ್ಯ ಸರಕಾರ ಇದ್ದರೇನು ಬಿದ್ದರೇನು : ಆಪ್ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಆಕ್ರೋಶ - Karavali Times

728x90

17 November 2020

ಸಂಕಷ್ಟದ ಸಮಯದಲ್ಲೂ ಜನರ ಕೈ ಹಿಡಿಯದ ರಾಜ್ಯ ಸರಕಾರ ಇದ್ದರೇನು ಬಿದ್ದರೇನು : ಆಪ್ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಆಕ್ರೋಶ
ಬೆಂಗಳೂರು, ನ 17, 2020 (ಕರಾವಳಿ ಟೈಮ್ಸ್) : ಸಂಕಷ್ಟದ ಸಮಯದಲ್ಲೂ ಜನರ ಕೈ ಹಿಡಿಯದ ರಾಜ್ಯ ಸರಕಾರ ಜನ ಸಾಮಾನ್ಯರ ಮೇಲೆ ಹೊರೆ ಹಾಕುತ್ತಲೇ ಇದೆ. ವಿದ್ಯುತ್ ದರ ಏರಿಕೆ ಮಾಡಿ ಹೃದಯ ಹೀನರಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವರ್ತಿಸುತ್ತಿದ್ದಾರೆ. ಈ ವಿದ್ಯುತ್ ದರ ಏರಿಕೆ ವಿರುದ್ದ ಆಮ್ ಆದ್ಮಿ ಪಕ್ಷ “ಶಾಕ್ ಬೇಡಾ- ಕಡಿಮೆ ಮಾಡಿ ಇಲ್ಲದಿದ್ದರೆ ಕುರ್ಚಿ ಖಾಲಿ ಮಾಡಿ’’ ಎನ್ನುವ ಘೋಷ ವಾಕ್ಯದೊಂದಿಗೆ ಬೃಹತ್ ಹೋರಾಟ ನಡೆಸಲಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಎಚ್ಚರಿಕೆ ನೀಡಿದರು.

ನಗರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ “ಶಾಕ್ ಬೇಡ” ಆಪ್ ಬಿಡುಗಡೆ ಮಾಡಿ ಮಾತನಾಡಿದ ಅವರು ಎಎಪಿ “ಶಾಕ್ ಬೇಡ” ಎನ್ನುವ ನೂತನ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಿದ್ದು, ಇದರಲ್ಲಿ ಬೆಂಗಳೂರಿನ ಜನರು ತಮ್ಮ ಪ್ರಸ್ತುತ ವಿದ್ಯುತ್ ಬಳಕೆಯನ್ನು ನಮೂದಿಸುವ ಮೂಲಕ, ಅವರು 2020 ರ ನವೆಂಬರ್‍ನಿಂದ ಎಷ್ಟು ವಿದ್ಯುತ್ ಬಿಲ್ ಪಾವತಿಸುತ್ತಾರೆ ಮತ್ತು ಅಷ್ಟೇ ಪ್ರಮಾಣದ ವಿದ್ಯುತ್ ಉಪಯೋಗಿಸುವ ದೆಹಲಿಯ ನಿವಾಸಿಗಳು ಎಷ್ಟು ಬಿಲ್ ಪಾವತಿಸುತ್ತಾರೆ ಎನ್ನುವುದನ್ನು ತುಲನೆ ಮಾಡಿ ನೋಡಬಹುದು ಎಂದು ಹೇಳಿದರು.

ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ದೀಪಾವಳಿಯ ನಂತರ ಬೆಂಗಳೂರಿನ ಮನೆ ಮನೆಗೆ ತೆರಳಿ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರಕಾರ ಮತ್ತು ಹಿಂದಿನ ಸರಕಾರಗಳ ದುಷ್ಕೃತ್ಯಗಳು ಮತ್ತು ಭ್ರಷ್ಟಾಚಾರಗಳ ಬಗ್ಗೆ ಜನರಿಗೆ ತಿಳಿಸಲಿದ್ದಾರೆ. ನಮ್ಮ ಕರ್ನಾಟಕವನ್ನು ಆಳಿದ ಎಲ್ಲಾ 3 ಪಕ್ಷಗಳೇ ಇಂದಿನ ಈ ಪರಿಸ್ಥಿತಿಗೆ ಕಾರಣ. ಈ ಕೂಡಲೇ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ತನ್ನ ಅವೈಜ್ಞಾನಿಕ ದರ ಹೆಚ್ಚಳದ ಆದೇಶವನ್ನು  ಹಿಂಪಡೆಯುವಂತೆ ಒತ್ತಾಯಿಸಿದರು.

ಕೋವಿಡ್-19 ಸಾಂಕ್ರಾಮಿಕ ರೋಗ ಇಡೀ ಪ್ರಪಂಚವನ್ನೆ ಹಿಂಡಿ ಹಿಪ್ಪೆ ಮಾಡಿದೆ. ಇತರ ದೇಶಗಳಲ್ಲಿನ ಸರಕಾರಗಳು ಲಾಕ್‍ಡೌನ್‍ನಿಂದ ಉಂಟಾಗಿರುವ ಹಿಂದೆಂದೂ ಕಾಣದ ನಷ್ಟವನ್ನು ನಿವಾರಿಸಲು ತಮ್ಮ ಜನತೆಗೆ ಹಣಕಾಸಿನ ನೆರವು ನೀಡಿ ಆರ್ಥಿಕ ಸಂಕಷ್ಟದಿಂದ ರಕ್ಷಿಸಿವೆ. ಲಾಕ್‍ಡೌನ್ ಸಮಯದಲ್ಲಿ ದೆಹಲಿ ಸರಕಾರವು ಉಚಿತ ಪಡಿತರ, ಆಹಾರ ಧಾನ್ಯ, ಆರ್ಥಿಕ ನೆರವು ವೈದ್ಯಕೀಯ ಸೇವೆಗಳನ್ನು ನೀಡಿ ದೆಹಲಿಯ ಬಡವರನ್ನು ಉಳಿಸಿತ್ತು. ಆದರೆ ಇಲ್ಲಿನ ಸರಕಾರ ಬರೆ ಮೇಲೆ ಬರೆ ಹಾಕುತ್ತಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಕರ್ನಾಟಕದ ಜನತೆಯನ್ನು ಹುರಿದು ಮುಕ್ಕಿದೆ ಎಂದೇ ಹೇಳಬಹುದು. ಜನರ ಕಷ್ಟವನ್ನು ಪರಿಹರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು ಮಾತ್ರವಲ್ಲದೆ ಜನರ ಮೇಲೆ ನಿರಂತರವಾಗಿ ಗದಾ ಪ್ರಹಾರ ಮಾಡುತ್ತಲೇ ಇದೆ. ನಮ್ಮ ದೇಶದ ಜನರ ಆದಾಯದಲ್ಲಿ ಸರಾಸರಿ 50% ಕಡಿಮೆ ಆಗಿದೆ ಎಂದು ಅಂದಾಜಿಸಲಾಗಿದೆ. ಇಂತಹ ಸಮಯದಲ್ಲಿ ಯಡಿಯೂರಪ್ಪ ಸರಕಾರ ಅತ್ಯಗತ್ಯವಾದ ವಿದ್ಯುತ್ ದರವನ್ನು ಶೇ 6 ರಷ್ಟು ಹೆಚ್ಚಳ ಮಾಡಿ ಹೃದಯ ಹೀನವಾಗಿ ವರ್ತಿಸಿದೆ. ಲಾಕ್‍ಡೌನ್ ಕಾರಣದಿಂದಾಗಿ ಆದಾಯವಿಲ್ಲದೆ, ಉದ್ಯೋಗವಿಲ್ಲದೆ ಬದುಕುತ್ತಿರುವ ಜನರಿಗೆ ಇದು ವಾರ್ಷಿಕ ಸಾವಿರಾರು ರೂಪಾಯಿಗಳ ಹೊರೆ ಹಾಕಿದೆ. ಅಧಿಕಾರಕ್ಕೆ ಬಂದರೆ ಸಾಕು ಹಣ ದೋಚುವುದನ್ನೆ ಕೆಲಸ ಮಾಡಿಕೊಂಡಿರುವ ಬಿಜೆಪಿ ಭ್ರಷ್ಟಾಚಾರದಲ್ಲಿಯೇ ದಿನದೂಡುತ್ತಿದೆ. ನಮ್ಮ ರಾಜ್ಯ ಸರಕಾರ ವಿದ್ಯುತ್ ವಿತರಣೆ ಮಾಡುವಾಗ ಆಗುವ ನಷ್ಟ ಹಾಗೂ ವಿದ್ಯುತ್ ಕಳ್ಳತನವನ್ನು ತಡೆಯಲು ಯಾವುದೇ ಕ್ರಮ ತೆಗೆದುಕೊಳ್ಳದೇ ಆ ನಷ್ಟವನ್ನು ಜನರ ಮೇಲೆ ಹಾಕಿ ತನ್ನ ನರಿ ಬುದ್ದಿ ತೋರಿಸುತ್ತಿದೆ.

ಎಎಪಿ ಸರಕಾರ ದೆಹಲಿಯಲ್ಲಿ ಅಧಿಕಾರಕ್ಕೆ ಬಂದಾಗಿನಿಂದ, ದೆಹಲಿ ಜನತೆ 200 ಯೂನಿಟ್ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ ಮತ್ತು 200 ಯುನಿಟ್ ಮೇಲ್ಪಟ್ಟ ಬಳಕೆಗೆ ಕಡಿಮೆ ದರವನ್ನು ಪಾವತಿಸುತ್ತಿದ್ದಾರೆ. ಆಶ್ಚರ್ಯದ ಸಂಗತಿ ಎಂದರೆ ದೆಹಲಿಯ ವಿದ್ಯುತ್ ಬೆಲೆಯಲ್ಲಿ ಇದುವರೆಗೂ ಒಂದೇ ಒಂದು ರೂಪಾಯಿ ಹೆಚ್ಚಳ ಮಾಡಿಲ್ಲ. ಇನ್ನೊಂದು ಕುತುಹಲಕಾರಿ ಸಂಗತಿ ಎಂದರೆ ದೆಹಲಿ ರಾಜ್ಯ ವಿದ್ಯುತ್ ಉತ್ಪಾದಿಸುವುದಿಲ್ಲ, ಅಲ್ಲಿನ ವಿದ್ಯುತ್ ವಿತರಣೆಯನ್ನು ಸಂಪೂರ್ಣವಾಗಿ ಖಾಸಗಿ ಕಂಪನಿಗಳ ಕೈಯಲ್ಲಿದೆ. ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ವಿತರಣೆ ಸಂಪೂರ್ಣವಾಗಿ ಸರಕಾರದ ಬಳಿ ಇದೆ. ಆದರೂ ಕರ್ನಾಟಕದಲ್ಲಿ ವಿದ್ಯುತ್ ಬೆಲೆ ದೆಹಲಿಗಿಂತ 10 ರಿಂದ 15% ಕಡಿಮೆ ಇರಬೇಕಿತ್ತು ಆದರೆ ಇದೆಯೇ ಎಂದವರು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ಉಪಾಧ್ಯಕ್ಷ ಸುರೇಶ್ ರಾಥೋಡ್, ಮುಖ್ಯ ವಕ್ತಾರ ಶರತ್ ಖಾದ್ರಿ, ಜ್ಯೋತಿಷ್, ಮುಖಂಡರಾದ ಪ್ರಕಾಶ್ ನೆಡಂಗಡಿ, ಶಾಷವಲಿ ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಸಂಕಷ್ಟದ ಸಮಯದಲ್ಲೂ ಜನರ ಕೈ ಹಿಡಿಯದ ರಾಜ್ಯ ಸರಕಾರ ಇದ್ದರೇನು ಬಿದ್ದರೇನು : ಆಪ್ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಆಕ್ರೋಶ Rating: 5 Reviewed By: karavali Times
Scroll to Top