ಹೆಚ್ಚುತ್ತಿರುವ ಕಸದ ರಾಶಿಗಳು, ಹಂದಿಗಳ ಗೂಡಾಗುತ್ತಿರುವ ಬೆಂಗಳೂರು ನಗರ : ಎಎಪಿ ಮಹಿಳಾ ನಾಯಕಿ ಜನನಿ ಭರತ್ ಕಳವಳ - Karavali Times ಹೆಚ್ಚುತ್ತಿರುವ ಕಸದ ರಾಶಿಗಳು, ಹಂದಿಗಳ ಗೂಡಾಗುತ್ತಿರುವ ಬೆಂಗಳೂರು ನಗರ : ಎಎಪಿ ಮಹಿಳಾ ನಾಯಕಿ ಜನನಿ ಭರತ್ ಕಳವಳ - Karavali Times

728x90

19 November 2020

ಹೆಚ್ಚುತ್ತಿರುವ ಕಸದ ರಾಶಿಗಳು, ಹಂದಿಗಳ ಗೂಡಾಗುತ್ತಿರುವ ಬೆಂಗಳೂರು ನಗರ : ಎಎಪಿ ಮಹಿಳಾ ನಾಯಕಿ ಜನನಿ ಭರತ್ ಕಳವಳ



ಬೆಂಗಳೂರು, ನ. 19, 2020 (ಕರಾವಳಿ ಟೈಮ್ಸ್) : ಬೆಂಗಳೂರು ನಗರದಲ್ಲಿ ಕಸದ ಬ್ಲಾಕ್ ಸ್ಪಾಟ್‍ಗಳು ಹೆಚ್ಚುತ್ತಿದ್ದು, ಬಿಬಿಎಂಪಿ ನೇಮಕ ಮಾಡಿಕೊಂಡಿರುವ ಮಾರ್ಷಲ್‍ಗಳನ್ನು ಮೂಲ ಕರ್ತವ್ಯಕ್ಕೆ ಮರು ನಿಯೋಜಿಸಬೇಕು ಎಂದು ಆಮ್ ಆದ್ಮಿ ಪಕ್ಷದ ಮಹಿಳಾ ನಾಯಕಿ ಜನನಿ ಭರತ್ ಆಗ್ರಹಿಸಿದ್ದಾರೆ. 

ನಗರದಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ಮಾರ್ಷಲ್‍ಗಳನ್ನು ಬಿಬಿಎಂಪಿ ನೇಮಕ ಮಾಡಿಕೊಂಡಿದ್ದು ಎಲ್ಲೆಂದರಲ್ಲಿ ಕಸ ಎಸೆಯುವವರನ್ನು ಹಿಡಿದು ದಂಡ ವಿಧಿಸಲು ಹಾಗೂ ಬ್ಲಾಕ್ ಸ್ಪಾಟ್‍ಗಳು ಹೆಚ್ಚಾಗದಂತೆ ನಿಗಾವಹಿಸುವ ಸಲುವಾಗಿದೆ. ಆದರೆ, ಬಿಬಿಎಂಪಿ ಈ ಕೆಲಸದಿಂದ ಇವರನ್ನು ವಿಮುಖರನ್ನಾಗಿ ಮಾಡಿ ಜನರ ಸುಲಿಗೆಗೆ ಇಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಮ್ ಆದ್ಮಿ ಪಕ್ಷ ನಡೆಸಿದ ಸರ್ವೇಕ್ಷಣೆ ಪ್ರಕಾರ ನಗರದಲ್ಲಿ ಸುಮಾರು 1038ಕ್ಕೂ ಹೆಚ್ಚು ಬ್ಲಾಕ್ ಸ್ಪಾಟ್ (ಕಸದ ರಾಶಿಗಳು) ಕಂಡು ಬಂದಿವೆ. ಇದರಿಂದ ಸೊಳ್ಳೆ, ಹಂದಿ, ಬೀದಿ ನಾಯಿಗಳ ಕಾಟ ವಿಪರೀತವಾಗಿದೆ, ಕಸದ ಮಾಫಿಯಾ ಜತೆ ಕೈ ಜೋಡಿಸಿರುವ ಬಿಬಿಎಂಪಿ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಿ, ಅದನ್ನು ಬಿಟ್ಟು ಜನರನ್ನು ದೋಚುವುದಲ್ಲ. ಬೆಂಗಳೂರು ಅಭಿವೃದ್ದಿ ಖಾತೆಯನ್ನು ತಮ್ಮ ಬಳಿ ಇಟ್ಟುಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಈ ಬಗ್ಗೆ ಗಮನ ಹರಿಸಿ ಎಂದು ಸಲಹೆ ನೀಡಿದರು. 

ಕಸದ ಮಾಫಿಯಾ ಜತೆ ಕೈ ಜೋಡಿಸಿರುವ ಸರಕಾರ ಹಾಗೂ ಬಿಬಿಎಂಪಿ 198 ಪ್ಯಾಕೇಜ್‍ಗಳನ್ನು 89ಕ್ಕೆ ಇಳಿಸಿರುವ ಕಾರಣ ಕಸ ಸಂಗ್ರಹ ವ್ಯತ್ಯಯವಾಗಿ ಬ್ಲಾಕ್ ಸ್ಪಾಟ್‍ಗಳು ಹೆಚ್ಚುತ್ತಿವೆ. ಈಗಾಗಲೇ ನಗರದಲ್ಲಿ ಡೆಂಗ್ಯೂ, ಚಿಕುನ್ ಗುನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಕಸದ ರಾಶಿಗಳಿಂದ ಸೊಳ್ಳೆ ಉತ್ಪತ್ತಿಯಾಗಿ ಜನ ರೋಗದಿಂದ ನರಳುವಂತೆ ಮಾಡುವುದು ಬಿಬಿಎಂಪಿ ಉದ್ದೇಶವೇ? ಆಯುಕ್ತ ಮಂಜುನಾಥ್ ಪ್ರಸಾದ್, ಆಡಳಿತಾಧಿಕಾರಿ ಗೌರವ್ ಗುಪ್ತ ಅವರು ಉತ್ತರಿಸಬೇಕು, ಪ್ರತಿ ಮನೆ, ಮನೆಯಿಂದ ಕಸ ಸಂಗ್ರಹಕ್ಕೆ ಎಂದು 600 ರೂಪಾಯಿಯಷ್ಟು ಸೆಸ್ ಸಂಗ್ರಹ ಏಕೆ ಮಾಡಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದರು. 

ಎಎಪಿ ಮಾಧ್ಯಮ ಸಂಯೋಜಕ ಸೋಮಶೇಖರ್ ಮಾತನಾಡಿ, ವಾರ್ಡ್ ಮಟ್ಟದಲ್ಲಿ ನೇಮಕ ಮಾಡಿರುವ ನೋಡಲ್ ಅಧಿಕಾರಿಗಳು ಸಹ ಸರಿಯಾಗಿ ಸ್ಪಂದಿಸುತ್ತಿಲ್ಲ ಕರೆ ಮಾಡಿದರೆ ಸ್ವೀಕರಿಸಿದೆ ವಾಟ್ಸ್‍ಪ್ ಮೂಲಕ ಬ್ಲಾಕ್ ಸ್ಪಾಟ್‍ಗಳ ಫೆÇೀಟೋ ಕಳಿಸಿ ಎಂದು ಹೇಳಿ ಆನಂತರ ಸಮರ್ಪಕವಾಗಿ ಉತ್ತರಿಸುತ್ತಿಲ್ಲ ಎಂದು ದೂರಿದರು.

ಕಸದ ರಾಶಿಗಳು ಎಲ್ಲೆಂದರಲ್ಲಿ ಹೆಚ್ಚಾಗುತ್ತಿರುವ ಕಾರಣ ಹಂದಿಗಳ ಸಂಖ್ಯೆಯೂ ಇದ್ದಕ್ಕಿದ್ದಂತೆ ವಿಪರೀತವಾಗಿದೆ, ಬೀಡಾಡಿ ದನಗಳ ಸಂಖ್ಯೆಯೂ ಹೆಚ್ಚಳವಾಗಿದ್ದು ರಸ್ತೆಯಲ್ಲಿ ಸಂಚರಿಸುವುದೇ ದುಸ್ತರವಾಗಿದೆ ಎಂದರು. ಮೂಲ ಕರ್ತವ್ಯದಿಂದ ವಿಮುಖರನ್ನಾಗಿಸಿ ಸಾರ್ವಜನಿಕರ ಸುಲಿಗೆಗೆ ನೇಮಿಸಿರುವ ಮಾರ್ಷಲ್‍ಗಳನ್ನು ಕೂಡಲೇ ಮೂಲ ಕರ್ತವ್ಯಕ್ಕೆ ಮರಳಿಸಬೇಕು ಎಂದು ಆಗ್ರಹಿಸಿದರು. 









  • Blogger Comments
  • Facebook Comments

0 comments:

Post a Comment

Item Reviewed: ಹೆಚ್ಚುತ್ತಿರುವ ಕಸದ ರಾಶಿಗಳು, ಹಂದಿಗಳ ಗೂಡಾಗುತ್ತಿರುವ ಬೆಂಗಳೂರು ನಗರ : ಎಎಪಿ ಮಹಿಳಾ ನಾಯಕಿ ಜನನಿ ಭರತ್ ಕಳವಳ Rating: 5 Reviewed By: karavali Times
Scroll to Top