ಉಳ್ಳಾಲ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ : 6 ಮಂದಿ ನಾಪತ್ತೆ - Karavali Times ಉಳ್ಳಾಲ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ : 6 ಮಂದಿ ನಾಪತ್ತೆ - Karavali Times

728x90

30 November 2020

ಉಳ್ಳಾಲ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ : 6 ಮಂದಿ ನಾಪತ್ತೆ



ಮಂಗಳೂರು, ಡಿ. 01, 2020 (ಕರಾವಳಿ ಟೈಮ್ಸ್) : ಮಂಗಳೂರಿನ ಉಳ್ಳಾಲ ಸಮೀಪ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಿ 6 ಮಂದಿ ಮೀನುಗಾರರು ನಾಪತ್ತೆಯಾಗಿದ್ದಾರೆ. 22 ಮಂದಿ ಮೀನುಗಾರರಿದ್ದ ಬೋಳಾರ ನಿವಸಿ ಪ್ರಶಾಂತ್ ಎಂಬವರ ಮಾಲಕತ್ವದ ‘ಶ್ರೀ ರಕ್ಷಾ’ ಎಂಬ ಮೀನುಗಾರಿಕಾ ಬೋಟ್ ಸಮುದ್ರದ ಭಾರೀ ಅಲೆಗಳಿಗೆ ಸಿಲುಕಿ ಮುಳುಗಡೆಯಾಗಿದೆ ಎನ್ನಲಾಗಿದೆ. 16 ಮಂದಿಯನ್ನು ರಕ್ಷಿಸಲಾಗಿದ್ದು, 6 ಮಂದಿ ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. 

ಸೋಮವಾರ ಸಂಜೆ 6.30ರ ವೇಳೆಗೆ ಹಿಡಿದ ಮೀನನ್ನು ತುಂಬಿಸುವ ವೇಳೆ ಭಾರೀ ಅಲೆಗಳ ಹೊಡೆತಕ್ಕೆ ಬೋಟ್ ಪಲ್ಟಿಯಾಗಿದೆ. ಬೋಟ್‍ನಲ್ಲಿ ಉಳ್ಳಾಲ, ಮಂಗಳೂರು ಹಾಗೂ ತಮಿಳುನಾಡು ಮೂಲದ ಮೀನುಗಾರರು ಇದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಖಚಿತ ಮಾಹಿತಿ ದೊರೆಯಬೇಕಷ್ಟೆ. ದುರಂತದ ಮಾಹಿತಿ ಅರಿತ ಕೂಡಲೇ ನಾಪತ್ತೆಯಾದ ಮೀನುಗಾರರ ರಕ್ಷಣೆಗೆ ಹಲವು ಬೋಟ್‍ಗಳು ಸ್ಥಳಕ್ಕೆ ದೌಡಾಯಿಸಿದೆ. 

ಉಳ್ಳಾಲದಿಂದ ಪಶ್ಚಿಮಕ್ಕೆ ಕೆಲವು ನಾಟಿಕಲ್ ಮೈಲು ದೂರದಲ್ಲಿ ಈ ದುರಂತ ಸಂಭವಿಸಿದೆ. 22 ಮೀನುಗಾರರೊಂದಿಗೆ ಬೋಟ್ ಸೋಮವಾರ ಮುಂಜಾನೆ 5 ಗಂಟೆಗೆ ಕಡಲ ತೀರದಿಂದ ಹೊರಟಿದೆ. ಇಡೀ ದಿನ ಮೀನುಗಾರಿಕೆ ಕೈಗೊಂಡ ನಂತರ, ಮಂಗಳವಾರ ಬೆಳಿಗ್ಗೆ ತೀರಕ್ಕೆ ತಲುಪುವ ನಿರೀಕ್ಷೆ ಇತ್ತು. ಆದರೆ ತೀರ ತಲುಪದ  ಕಾರಣ ಬೋಟ್ ಮಾಲೀಕರು ಬೋಟಿನಲ್ಲಿದ್ದವರನ್ನು ವೈರ್‍ಲೆಸ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಸಂಪರ್ಕ ಸಾಧ್ಯವಾಗಿಲ್ಲ.

ಅನುಮಾನಗೊಂಡ ಮಾಲೀಕರು ಪ್ರದೇಶದಲ್ಲಿ ಮೀನುಗಾರಿಕೆಗೆ ತೆರಳಿದ್ದ ಇತರೆ ಬೋಟ್‍ಗಳವರೊಂದಿಗೆ ಸಂಪರ್ಕ ಸಾಧಿಸಿ ವಿಚಾರಿಸಿದ್ದಾರೆ. ಆ ಸಮಯದಲ್ಲಿ, ಅಪಾಯಕ್ಕೆ ಸಿಕ್ಕಿರುವ ದೋಣಿಯಲ್ಲಿದ್ದ ಆರು ಮಂದಿ ನಾಪತ್ತೆಯಾಗಿರುವುದನ್ನು ಬದುಕುಳಿದವರು ಹೇಳಿದ್ದಾರೆ. ಭಾರೀ ಪ್ರಮಾಣದಲ್ಲಿ ಮೀನು ಸಿಕ್ಕಿದ್ದು ಬಲವಾದ ಗಾಳಿಯ ಪರಿಣಾಮ ದೋಣಿ ಸಮತೋಲನ ಕಳೆದುಕೊಂಡು ಮುಳುಗಿದೆ ಎಂದು ತಿಳಿದು ಬಂದಿದೆ. ಕ್ಯಾಬಿನ್‍ನಲ್ಲಿದ್ದವರಿಗೆ ಧಿಂಗಿ  ದೊರಕಿಲ್ಲ ಅಲ್ಲದೆ ಗಾಳಿಯ ಕಾರಣ ಈಜಿ ದಡಕ್ಕೆ ಬರಲೂ ಆಗಲಿಲ್ಲ. 

ಸಧ್ಯ ಸ್ಥಳದಲ್ಲಿರುವ ಇತರ ಮೀನುಗಾರಿಕೆ ದೋಣಿಗಳು ಕಾರ್ಯಾಚರಣೆ ನಡೆಸಿದೆ. ಕಾಣೆಯಾದ ದೋಣಿಗಾಗಿ ಹುಡುಕುತ್ತಿರುವ ಮೀನುಗಾರರು ದೋಣಿಯ ಯಾವುದೇ ಭಾಗವನ್ನು ಸಮುದ್ರದ ನೀರಿನ ಮೇಲೆ ಕಾಣದ ಕಾರಣ ದೋಣಿ ಮುಳುಗಿದಂತೆ ತೋರುತ್ತದೆ ಎಂದು ಹೇಳಿದ್ದಾರೆ.









  • Blogger Comments
  • Facebook Comments

0 comments:

Post a Comment

Item Reviewed: ಉಳ್ಳಾಲ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ : 6 ಮಂದಿ ನಾಪತ್ತೆ Rating: 5 Reviewed By: karavali Times
Scroll to Top