100 ರೂ ಮುಖಬೆಲೆಯ ಹಳೇ ಸೀರಿಸ್ ನೋಟುಗಳು ಮಾರ್ಚ್ ವೇಳೆಗೆ ಸಂಪೂರ್ಣ ಹಿಂತೆಗೆತ ಆರ್.ಬಿ.ಐ. - Karavali Times 100 ರೂ ಮುಖಬೆಲೆಯ ಹಳೇ ಸೀರಿಸ್ ನೋಟುಗಳು ಮಾರ್ಚ್ ವೇಳೆಗೆ ಸಂಪೂರ್ಣ ಹಿಂತೆಗೆತ ಆರ್.ಬಿ.ಐ. - Karavali Times

728x90

21 January 2021

100 ರೂ ಮುಖಬೆಲೆಯ ಹಳೇ ಸೀರಿಸ್ ನೋಟುಗಳು ಮಾರ್ಚ್ ವೇಳೆಗೆ ಸಂಪೂರ್ಣ ಹಿಂತೆಗೆತ ಆರ್.ಬಿ.ಐ.

ಮಂಗಳೂರು, ಜ. 22, 2021 (ಕರಾವಳಿ ಟೈಮ್ಸ್) : ನೂರು ರೂಪಾಯಿ ಮುಖಬೆಲೆಯ ಸ್ವಚ್ಛವಾದ ಹೊಸ ಸೀರಿಸ್ ನೋಟುಗಳು ಚಲಾವಣೆಗೆ ಬರುವಂತೆ ಮಾಡುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್.ಬಿ.ಐ) ಹಳೆಯ ಸೀರಿಸ್ ಹೊಂದಿರುವ ಎಲ್ಲಾ ಕರೆನ್ಸಿಗಳನ್ನು ವಾಪಾಸು ಪಡೆಯಲು ನಿರ್ಧರಿಸಿದೆ ಎಂದು ಆರ್.ಬಿ.ಐ. ಸಹಾಯಕ ಪ್ರಬಂಧಕ ಬಿ.ಎಂ. ಮಹೇಶ್ ತಿಳಿಸಿದ್ದಾರೆ. ನಗರದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಬ್ಯಾಂಕಿಂಗ್ ಭದ್ರತಾ ಸಮಿತಿ ಮತ್ತು ನಗದು ನಿರ್ವಹಣಾ ಸಮಿತಿ ಸಬೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಳೆಯ ನೋಟುಗಳಂತೆ ಕಾಣುವ ಖೋಟಾ ನೋಟುಗಳು ಹೆಚ್ಚಾಗಿರುವುದರಿಂದ 100 ರ ಮುಖಬೆಲೆಯ ಹಳೆಯ ಸೀರಿಸ್ ನೋಟುಗಳನ್ನು ಹಿಂಪಡೆಯಲಾಗುತ್ತಿದೆ. ಹಳೆಯ ಸೀರಿಸ್ ಹೊಂದಿರುವ 100ರ ಕರೆನ್ಸಿ ನೋಟುಗಳನ್ನು ಮಾರ್ಚ್ ಅಂತ್ಯದ ವೇಳೆಗೆ ಸಂಪೂರ್ಣವಾಗಿ ಹಿಂಪಡೆಯುವ ನಿರ್ಧಾರಕ್ಕೆ ಬರಲಾಗಿದೆ. ಕಳೆದ 6 ವರ್ಷಗಳಿಂದ ಈ ನೋಟುಗಳು ಮುದ್ರಣವಾಗುತ್ತಿಲ್ಲ. ಆದರೆ, ಈ ಹಿಂದೆಯೇ ಮುದ್ರಣಗೊಂಡಿರುವ ಈ ನೋಟುಗಳನ್ನು ಸಂಪೂರ್ಣವಾಗಿ ಹಿಂಪಡೆಯುವುದು ಆರ್‍ಬಿಐ ಉದ್ದೇಶವಾಗಿದೆ. ಚಲಾವಣೆಯಲ್ಲಿರುವ ಹಳೆಯ ನೋಟುಗಳನ್ನು ಹಂತ ಹಂತವಾಗಿ ಹಿಂಪಡೆಯುತ್ತಾ ಬರಲಾಗಿದೆ. ಮಾರ್ಚ್ ಅಂತ್ಯಕ್ಕೆ ಇದು ಪೂರ್ಣವಾಗಲಿದೆ ಎಂದರು. ನೋಟು ವಾಪಸ್ ಕಾರಣಕ್ಕೆ ಜನತೆ ಯಾವುದೇ ಕಾರಣಕ್ಕೂ ಭಯ ಪಡುವ ಅಗತ್ಯವಿಲ್ಲ. ಸ್ವಚ್ಛ ನೋಟುಗಳು ಜನತೆಯ ಕೈಗೆ ಸಿಗಬೇಕೆಂಬುದು ಮಾತ್ರ ಉದ್ದೇಶ. ಇದು ನೋಟು ಅಮಾನ್ಯೀಕರಣವಲ್ಲ ಎಂದು ಇದೇ ವೇಳೆ ಮಹೇಶ್ ಸ್ಪಷ್ಟಪಡಿಸಿದ್ದಾರೆ. ಹೊಸ ಸೀರಿಸ್ ಹೊಂದಿರುವ 100ರ ಮುಖಬೆಲೆಯ ನೋಟುಗಳು ಮಾತ್ರ ಚಲಾವಣೆಯಲ್ಲಿರಬೇಕು. ಬ್ಯಾಂಕ್‍ಗಳು ಕೂಡಾ ಅಂತಹ ನೋಟುಗಳನ್ನು ಇರಿಸಿಕೊಳ್ಳದೆ ಕರೆನ್ಸಿ ಚೆಸ್ಟ್‍ಗೆ ಒಪ್ಪಿಸಬೇಕು ಎಂದು ಸೂಚಿಸಿದರು. ಇದೇ ವೇಳೆ 10 ರೂಪಾಯಿ ನಾಣ್ಯಗಳ ಚಲಾವಣೆ ಬಗ್ಗೆಯೂ ಮಾತನಾಡಿದ ಮಹೇಶ್ 10 ರೂಪಾಯಿ ನಾಣ್ಯ ಚಲಾವಣೆಗೊಳ್ಳುವಂತೆ ಮಾಡಲು ಬ್ಯಾಂಕ್‍ಗಳಿಗೆ ಸೂಚಿಸಿದರು. ಕರೆನ್ಸಿ ಚೆಸ್ಟ್‍ಗಳಲ್ಲಿ 10 ರೂಪಾಯಿ ನಾಣ್ಯದ ಮಿನಿ ಪರ್ವತವೇ ಸೃಷ್ಟಿಯಾಗುತ್ತಿದೆ. ನಕಲಿ ನೋಟಾದರೂ ಸಿಗಬಹುದು ಆದರೆ, 10 ರೂಪಾಯಿ ನಾಣ್ಯ ನಕಲಿಯಾಗಲು ಸಾಧ್ಯವೇ ಇಲ್ಲ ಎನ್ನುವುದನ್ನು ಜನರಿಗೆ ಮನದಟ್ಟು ಮಾಡಿಸಿಕೊಡಬೇಕು. ಅಲ್ಲದೆ, ಸರಕಾರಿ ಕಚೇರಿಗಳೂ ಈ ನಾಣ್ಯ ಸ್ವೀಕರಿಸಿ ಚಲಾಯಿಸಲು ಮುಂದಾಗಬೇಕು ಎಂದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲೂ ಶೇ. 92ರಷ್ಟು ಎಟಿಎಂಗಳು ಕೆಲಸ ಮಾಡಿವೆ. ಇದೊಂದು ಉತ್ತಮ ಕೆಲಸ ಎಂದು ಬ್ಯಾಂಕ್ ಪ್ರತಿಧಿಗಳನ್ನು ಶ್ಲಾಘಿಸಿದ ಅವರು ಆದಷ್ಟೂ ಎಲ್ಲಾ ಬ್ಯಾಂಕ್ ಶಾಖೆಗಳೂ ಕರೆನ್ಸಿ ಚೆಸ್ಟ್‍ಗೆ ಲಿಂಕ್ ಆಗಿರಬೇಕು. ಕರೆನ್ಸಿ ಚೆಸ್ಟ್‍ಗೆ ಹಣ ಡೆಪಾಸಿಟ್ ಮಾಡುವ ಬ್ಯಾಂಕ್‍ಗಳಿಗೆ ಚೆಸ್ಟ್ ಬ್ಯಾಂಕ್‍ನವರು 1,000 ನೋಟಿನ ಬಂಡಲಿಗೆ 50 ರೂಪಾಯಿಗಿಂತ ಹೆಚ್ಚು ವಿಧಿಸಬಾರದು. ಒಂದು ವೇಳೆ ಹಾಗೆ ಮಾಡುವುದು ಗಮನಕ್ಕೆ ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದವರು ಎಚ್ಚರಿಸಿದರು.
  • Blogger Comments
  • Facebook Comments

0 comments:

Post a Comment

Item Reviewed: 100 ರೂ ಮುಖಬೆಲೆಯ ಹಳೇ ಸೀರಿಸ್ ನೋಟುಗಳು ಮಾರ್ಚ್ ವೇಳೆಗೆ ಸಂಪೂರ್ಣ ಹಿಂತೆಗೆತ ಆರ್.ಬಿ.ಐ. Rating: 5 Reviewed By: karavali Times
Scroll to Top