ಪಕ್ಷ ಸಂಘಟನೆಗೆ ಪ್ರತಿ ಬೂತ್ ನಲ್ಲಿ ಡಿಜಿಟಲ್ ಯೂಥ್ ಸೃಷ್ಟಿ : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ - Karavali Times ಪಕ್ಷ ಸಂಘಟನೆಗೆ ಪ್ರತಿ ಬೂತ್ ನಲ್ಲಿ ಡಿಜಿಟಲ್ ಯೂಥ್ ಸೃಷ್ಟಿ : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ - Karavali Times

728x90

6 January 2021

ಪಕ್ಷ ಸಂಘಟನೆಗೆ ಪ್ರತಿ ಬೂತ್ ನಲ್ಲಿ ಡಿಜಿಟಲ್ ಯೂಥ್ ಸೃಷ್ಟಿ : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ಬಂಟ್ವಾಳ, ಜ 06, 2021 (ಕರಾವಳಿ ಟೈಮ್ಸ್) : ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಕಾರ್ಯಕರ್ತರ ನೋವು-ಭಾವನೆಗಳ ಅರಿವು ಚೆನ್ನಾಗಿ ಗೊತ್ತಿದ್ದು, ಕಾರ್ಯಕರ್ತರ ಭಾವನೆಗೆ ಹೊಂದಿಕೊಂಡು ಪಕ್ಷದ ಎಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು. 

ಕೆಪಿಸಿಸಿ ವತಿಯಿಂದ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಣೆಮಂಗಳೂರು ಸಾಗರ್ ಆಡಿಟೋರಿಯಂನಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಪ್ರಥಮ ಮೈಸೂರು ವಿಭಾಗಮಟ್ಟದ ಸಂಕಲ್ಪ ಸಮಾವೇಶದ ಬಗ್ಗೆ ಸಂಜೆ ಮಾಧ್ಯಮ ಮಂದಿಗೆ ವಿವರಿಸಿ ಮಾತನಾಡಿದ ಅವರು ಬ್ಲಾಕ್ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರ ಅಭಿಪ್ರಾಯಗಳನ್ನು ಕೇಳಿ, ಸಲಹೆಗಳನ್ನು ಪಡೆದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಅದಕ್ಕೆ ಹೊಂದಿಕೊಂಡು ಕಾರ್ಯಪ್ರವೃತ್ತರಾಗುವುದಾಗಿ ಹೇಳಿದರು. 

ಇದುವರೆಗೆ ಕೆಪಿಸಿಸಿ ಹೇಳಿದ್ದನ್ನು ಜಿಲ್ಲೆ, ಬ್ಲಾಕ್ ಮಟ್ಟದ ನಾಯಕರು ಕೇಳಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದರು. ಇನ್ನು ಮುಂದಿನ ದಿನಗಳಲ್ಲಿ ಪಕ್ಷದ ತಳ ಮಟ್ಟದ ಕಾರ್ಯಕರ್ತರ ಅಭಿಪ್ರಾಯ ಕೇಳಿಕೊಂಡು ಕೆಪಿಸಿಸಿ ಪಕ್ಷದ ಸಂಘಟನೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಹೇಳಿದ ಡಿಕೆಶಿ ಜನರ ಧ್ವನಿ ಕೇಳಿಕೊಂಡು ಜನಪರ ಹೋರಾಟದ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಚಿಂತನೆ ನಡೆಸಲಿದ್ದೇವೆ ಎಂದರು. 

ಸೋಶಿಯಲ್ ಮೀಡಿಯಾ ವೇಗವಾಗಿರುವ ಹಿನ್ನಲೆಯಲ್ಲಿ ಪಕ್ಷದ ವತಿಯಿಂದ ಪ್ರತಿ ಬೂತಿನಲ್ಲಿ ಡಿಜಿಟಲ್ ಯೂತ್ ಸೃಷ್ಟಿಸಿ ಆ ಮೂಲಕ ಸಾಮಾಜಿಕ ತಾಣಗಳ ಮೂಲಕವೂ ಜನರಿಗೆ ಹತ್ತಿರವಾಗುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದ ಕೆಪಿಸಿಸಿ ಅಧ್ಯಕ್ಷರು, ಬಿಜೆಪಿ ಸರಕಾರಗಳ ಆಡಳಿತ ವೈಫಲ್ಯಗಳ ವಿರುದ್ದ ಹೋರಾಟಕ್ಕೆ ಕಾರ್ಯಕರ್ತರು ಸಜ್ಜಾಗಬೇಕು ಎಂದು ಕರೆ ನೀಡಿದರು. ನಮ್ಮದು ಅಧಿಕಾರಕ್ಕಾಗಿ ಮಾತ್ರ ಇರುವ ರಾಜಕಾರಣವಾಗಿರದೆ ಮೌಲ್ಯ-ಸಿದ್ದಾಂತ ರೂಢಿಸಿಕೊಂಡು ಜನರ, ಕಾರ್ಯಕರ್ತರ ಸೇವೆಗಾಗಿ ಎಲ್ಲಾ ವರ್ಗ, ಜಾತಿ-ಧರ್ಮದ ಜನರನ್ನು ಒಗ್ಗೂಡಿಸಿಕೊಂಡು ಸೌಹಾರ್ದ ರಾಜಕಾರಣ ನಮ್ಮದು ಎಂದು ಹೇಳಿದ ಡಿಕೆಶಿ ಪಕ್ಷದಿಂದ ದೂರ ಹೋದವರನ್ನು ಶೀಘ್ರದಲ್ಲೇ ಮನವೊಲಿಸಿ ಮತ್ತೆ ಪಕ್ಷಕ್ಕೆ ಕರೆ ತರುವ ಚಿಂತನೆಗಳನ್ನೂ ಮಾಡಲಾಗುತ್ತಿದೆ ಎಂದರು. 

ಜನ ಬಿಜೆಪಿಗೆ ಅಧಿಕಾರ ಕೊಟ್ಟು ನೋಡಿದ್ದಾರೆ. ರಾಜ್ಯದ ಜನ ವಿದ್ಯಾವಂತರು, ಬುದ್ದಿವಂತರು, ಪ್ರಜ್ಞಾವಂತರಿದ್ದಾರೆ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಆಡಳಿತದಲ್ಲಿ ಜನರ ಪರವಾಗಿ ಸರಕಾರ ಏನೂ ಕೆಲಸ ಮಾಡಿಲ್ಲ ಎಂಬುದನ್ನು ಮನಗಂಡಿದ್ದಾರೆ. ಕೊರೋನಾದಂತಹ ಕಷ್ಟ ಕಾಲದಲ್ಲೂ ಬಿಜೆಪಿ ಸರಕಾರ ಜನರ ಕೈ ಹಿಡಿಯಲು ವಿಫಲವಾಗಿದೆ ಎಂದು ಟೀಕಿಸಿದ ಡಿಕೆಶಿ ಮುಂದಿನ ದಿನಗಳಲ್ಲಿ ಜನ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿಯೇ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಂಬರುವ ತಾ ಪಂ ಹಾಗೂ ಜಿ ಪಂ ಚುನಾವಣೆಗಳನ್ನು ಗೆಲ್ಲುವ ನಿಟ್ಟಿನಲ್ಲಿ ಮೊದಲು ಕಾರ್ಯಕ್ರಮ ಹಾಕಿಕೊಳ್ಳುವುದಾಗಿ ಡಿಕೇಶಿ ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್ ಆರ್ ಪಾಟೀಲ್, ಮಾಜಿ ಸಭಾಪತಿ ವಿ ಆರ್ ಸುದರ್ಶನ್, ದ ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಜೊತೆಗಿದ್ದರು. 
  • Blogger Comments
  • Facebook Comments

0 comments:

Post a Comment

Item Reviewed: ಪಕ್ಷ ಸಂಘಟನೆಗೆ ಪ್ರತಿ ಬೂತ್ ನಲ್ಲಿ ಡಿಜಿಟಲ್ ಯೂಥ್ ಸೃಷ್ಟಿ : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ Rating: 5 Reviewed By: karavali Times
Scroll to Top