ಡಿ ಕಾಕ್ ಚೀಟಿಂಗ್ ಸಿಗ್ನಲ್ : ದಾಖಲೆಯ ದ್ವಿಶತಕ ತಪ್ಪಿಸಿಕೊಂಡು ನಿರಾಸೆ ಅನುಭವಿಸಿದ ಫಖರ್ ಝಮಾನ್ - Karavali Times ಡಿ ಕಾಕ್ ಚೀಟಿಂಗ್ ಸಿಗ್ನಲ್ : ದಾಖಲೆಯ ದ್ವಿಶತಕ ತಪ್ಪಿಸಿಕೊಂಡು ನಿರಾಸೆ ಅನುಭವಿಸಿದ ಫಖರ್ ಝಮಾನ್ - Karavali Times

728x90

5 April 2021

ಡಿ ಕಾಕ್ ಚೀಟಿಂಗ್ ಸಿಗ್ನಲ್ : ದಾಖಲೆಯ ದ್ವಿಶತಕ ತಪ್ಪಿಸಿಕೊಂಡು ನಿರಾಸೆ ಅನುಭವಿಸಿದ ಫಖರ್ ಝಮಾನ್

ಡಿಕಾಕ್ ಸಿಗ್ನಲ್ ಬಗ್ಗೆ ಸಾಮಾಜಿಕ ತಾಣದಲ್ಲಿ ಕ್ರಿಕೆಟ್ ಅಭಿಮಾನಿಗಳ ಆಕ್ರೋಶ


ಜೊಹಾನ್ಸ್‍ಬರ್ಗ್, ಎಪ್ರಿಲ್ 06, 2021 (ಕರಾವಳಿ ಟೈಮ್ಸ್) :
ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನ ನಡುವೆ ಭಾನುವಾರ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಆರಂಭಿಕ ಆಟಗಾರ ಫಖರ್ ಝಮಾನ್ ಅವರನ್ನು ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಅವರು ವಂಚನಾ ಸಿಗ್ನಲ್ ಮೂಲಕ ರನೌಟ್ ಮಾಡಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಆಕ್ರೋಶಕ್ಕೆ ಕಾರಣವಾಗಿದೆ. 


    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ ನಿಗದಿತ 50 ಓವರ್‍ಗಳಲ್ಲಿ 6 ವಿಕೆಟ್ ಕಳೆದುಕೊಂಡು ಬರೋಬ್ಬರಿ 341 ರನ್ ಭಾರಿಸಿ 342 ರನ್‍ಗಳ ಕಠಿಣ ಗುರಿಯನ್ನು ಪಾಕಿಸ್ತಾನ ತಂಡಕ್ಕೆ ನಿಗದಿಪಡಿಸಿತ್ತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಪ್ರವಾಸಿ ಪಾಕಿಸ್ತಾನ ಒಂದೆಡೆ ವಿಕೆಟ್ ಪತನಗೊಳ್ಳುತ್ತಿದ್ದರೂ ಆರಂಭಿಕ ಆಟಗಾರ ಫಖರ್ ಝಮಾನ್ ಕೆಚ್ಚೆದೆಯ ಆಟವಾಡಿ ಪಾಕಿಸ್ತಾನ ತಂಡ 300ರ ಗಡಿ ದಾಟಲು ಕಾರಣರಾಗಿ ತಂಡದ ವಿರೋಚಿತ ಸೋಲಿನಲ್ಲೂ ಕ್ರಿಕೆಟ್ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. 


    ಪಾಕಿಸ್ತಾನ ಇನ್ನಿಂಗ್ಸಿನ 49ನೇ ಓವರಿನ ಪ್ರಥಮ ಎಸೆತದಲ್ಲಿ ಎರಡು ರನ್ ಕದಿಯುವ ಭರದಲ್ಲಿ 193 ರನ್ ಗಳಿಸಿ ದಾಖಲೆಯ ದ್ವಿಶತಕದತ್ತ ಮುನ್ನುಗ್ಗುತ್ತಿದ್ದ ಫಖರ್ ಝಮಾನ್ 9ನೇ ಆಟಗಾರನಾಗಿ ರನೌಟ್ ಆಗಿದ್ದರು. ಫಖರ್ ಝಮಾನ್ ಅವರ ವಿಕೆಟ್ ಪತನದಿಂದಾಗಿ ಪಾಕಿಸ್ತಾನ ತಂಡ ವಿರೋಚಿತ ಸೋಲು ಅನುಭವಿಸಿತ್ತಲ್ಲದೆ ದಾಖಲೆಯೊಂದನ್ನೂ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದರು. ಪಂದ್ಯದ ಬಳಿಕ ಫಖರ್ ಝಮಾನ್ ಅವರ ರನೌಟ್ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೆಂಡಿಂಗ್ ಟಾಪಿಕ್ ಆಗಿ ಆಫ್ರಿಕಾ ವಿಕೆಟ್ ಕೀಪರ್ ಡಿಕಾಕ್ ಅವರ ನಡೆ ಕ್ರಿಕೆಟ್ ಅಭಿಮಾನಿಗಳ ವಿಪರೀತ ಆಕ್ರೋಶಕ್ಕೂ ಕಾರಣವಾಗಿತ್ತು. 


    ಲುಂಗಿ ಎನ್‍ಜಿಡಿ ಅವರು ಎಸೆದ ಇನ್ನಿಂಗ್ಸಿನ 49ನೇ ಓವರಿನ ಪ್ರಥಮ ಎಸೆತವನ್ನು ಫಖರ್ ಝಮಾನ್ ಲಾಂಗ್ ಆಫ್ ಬೌಂಡರಿ ಕಡೆ ಬಲವಾಗಿ ಭಾರಿಸಿದರಾದರೂ ಆ ಚೆಂಡನ್ನು ಮಾರ್ಕಂ ತಡೆದು ವಿಕೆಟ್ ಕೀಪರ್ ಡಿಕಾಕ್ ಅವರತ್ತ ಎಸೆದರು. ಈ ವೇಳೆ ಇಬ್ಬರು ಬ್ಯಾಟ್ಸ್‍ಮನ್‍ಗಳು ಎರಡು ರನ್ ಕದಿಯಲು ಮುಂದಾದರು. ಈ ಸಂದರ್ಭ ಮಾರ್ಕಂ ಬಾಲನ್ನು ನೇರವಾಗಿ ಸ್ಟ್ರೈಕ್‍ನತ್ತ ಎಸೆದರು. ಬಾಲ್ ತನ್ನತ್ತ ಬರುವುದನ್ನು ಗಮನಿಸಿದ ಆಫ್ರಿಕಾ ವಿಕೆಟ್ ಕೀಪರ್ ಡಿಕಾಕ್ ಅವರು ಮಾರ್ಕಂ ಅವರಿಗೆ ಕೈ ತೋರಿಸಿ ನಾನ ಸ್ಟ್ರೈಕರ್ ಕಡೆ ಚೆಂಡು  ಎಸೆಯುವಂತೆ ಹೇಳಿದ ರೀತಿಯಲ್ಲಿ ಸಿಗ್ನಲ್ ಮಾಡಿದರು. ವಿಕೆಟ್ ಕೀಪರ್ ನೀಡಿದ ಚೀಟಿಂಗ್ ಸಿಗ್ನಲ್ ನೋಡಿದ ಫಖರ್ ಝಮಾನ್ ತನ್ನ ಓಟದ ವೇಗವನ್ನು ಕಡಿಮೆ ಮಾಡಿ ನಾನ್ ಸ್ಟ್ರೈಕರ್ ಭಾಗದತ್ತ ತಿರುಗಿ ನೋಡಿದರು. ಈ ವೇಳೆ ಚೆಂಡು ಸ್ಟ್ರೈಕರ್ ಭಾಗದತ್ತ ಬರುವುದನ್ನು ತಿಳಿದುಕೊಳ್ಳುವಷ್ಟರ ಹೊತ್ತಿಗೆ ಚೆಂಡು ನೇರವಾಗಿ ವಿಕೆಟಿಗೆ ಬಡಿದಾಗಿತ್ತು. ಈ ಮೂಲಕ ಫಖರ್ ಝಮಾನ್ ಅವರು ತನ್ನ ಮ್ಯಾರಥಾನ್ ಇನ್ನಿಂಗ್ಸಿಗೆ ಅಂತ್ಯ ಹಾಡಿ ರನೌಟ್ ಆಗಿ ಕೇವಲ ಏಳು ರನ್‍ಗಳಿಂದ ದ್ವಿಶತಕ ಅವಕಾಶ ಮಿಸ್ ಮಾಡಿಕೊಂಡು ಪೆವಿಲಿಯನ್ ಕಡೆ ಬಹಳಷ್ಟು ನಿರಾಸೆಯಿಂದ ಹೆಜ್ಜೆ ಹಾಕಿದರು. ಒಂದು ವೇಳೆ ಫಖರ್ ಝಮಾನ್ ಈ ಪಂದ್ಯದಲ್ಲಿ 200 ರನ್ ಭಾರಿಸಿದ್ದರೆ ಪಾಕ್ ಪರ ಎರಡು ಬಾರಿ 200 ರನ್‍ಗಳ ಗಡಿಯನ್ನು ದಾಟಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದರು. ಈ ಮೊದಲು 2018 ರಲ್ಲಿ ಝಿಂಬಾಬ್ವೆ ತಂಡದ ವಿರುದ್ಧ ಫಖರ್ ಝಮಾನ್ ಅಜೇಯ 210 ರನ್ ಹೊಡೆದಿದ್ದರು.


    ಪಾಕಿಸ್ತಾನ ಅಂತಿಮವಾಗಿ 9 ವಿಕೆಟ್ ನಷ್ಟಕ್ಕೆ 324 ರನ್ ಗಳಿಸಿ ವಿರೋಚಿತ ಸೋಲು ಅನುಭವಿಸಿತು. ಸರಣಿಯೂ 1-1 ರಲ್ಲಿ ಸಮಬಲಗೊಂಡು ಕೊನೆಯ ಪಂದ್ಯಕ್ಕೆ ಫೈನಲ್ ಮಹತ್ವ ಕೂಡಿ ಬಂತು. ಫಖರ್ ಝಮನ್ ಅವರ ಕೆಚ್ಚೆದೆಯ ಆಟಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.


    ಕ್ವಿಂಟನ್ ಡಿ ಕಾಕ್ ಅವರ ಈ ಚೀಟಿಂಗ್ ಸಿಗ್ನಲ್ ಬಗ್ಗೆ ಪಂದ್ಯದ ಬಳಿಕ ಕ್ರಿಕೆಟ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಕ್ರೀಡಾ ಸ್ಪೂರ್ತಿ ಮರೆತ ಆಟ ಇದಾಗಿದೆ ಎಂದು ಕಿಡಿ ಕಾರಿದ್ದಾರೆ. ಇದೇ ವೇಳೆ ಇನ್ನು ಕೆಲವರು ಡಿಕಾಕ್ ತಪ್ಪು ಮಾಡಿಲ್ಲ. ಫಖರ್ ಝಮಾನ್ ತನ್ನ ಓಟದ ಕಡೆಗೆ ಚಿತ್ತ ನೀಡದೆ ಇರುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ಬ್ಯಾಟ್ಸ್‍ಮನ್‍ಗಳು ಪಂದ್ಯದ ಕೊನೆವರೆಗೂ ಏಕಾಗ್ರತೆಯಿಂದ ಆಡಬೇಕು ಎಂಬುದಕ್ಕೆ ಈ ಘಟನೆ ಪಾಠವಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಡಿ ಕಾಕ್ ಚೀಟಿಂಗ್ ಸಿಗ್ನಲ್ : ದಾಖಲೆಯ ದ್ವಿಶತಕ ತಪ್ಪಿಸಿಕೊಂಡು ನಿರಾಸೆ ಅನುಭವಿಸಿದ ಫಖರ್ ಝಮಾನ್ Rating: 5 Reviewed By: karavali Times
Scroll to Top