ಗ್ರಾಮ ಮಟ್ಟದಲ್ಲಿ ಅಧಿಕಾರಿಗಳು ಜನರೊಂದಿಗೆ ಸ್ಪಂದಿಸಿದಾಗ ಯುದ್ದದ ಸಮಯವನ್ನು ಗೆಲ್ಲಲು ಸಾಧ್ಯ : ಬಂಟ್ವಾಳದಲ್ಲಿ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಸಲಹೆ - Karavali Times ಗ್ರಾಮ ಮಟ್ಟದಲ್ಲಿ ಅಧಿಕಾರಿಗಳು ಜನರೊಂದಿಗೆ ಸ್ಪಂದಿಸಿದಾಗ ಯುದ್ದದ ಸಮಯವನ್ನು ಗೆಲ್ಲಲು ಸಾಧ್ಯ : ಬಂಟ್ವಾಳದಲ್ಲಿ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಸಲಹೆ - Karavali Times

728x90

1 May 2021

ಗ್ರಾಮ ಮಟ್ಟದಲ್ಲಿ ಅಧಿಕಾರಿಗಳು ಜನರೊಂದಿಗೆ ಸ್ಪಂದಿಸಿದಾಗ ಯುದ್ದದ ಸಮಯವನ್ನು ಗೆಲ್ಲಲು ಸಾಧ್ಯ : ಬಂಟ್ವಾಳದಲ್ಲಿ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಸಲಹೆ

ಬಂಟ್ವಾಳ, ಮೇ 01, 2021 (ಕರಾವಳಿ ಟೈಮ್ಸ್) : ತಾಲೂಕು ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೇ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ತಳಮಟ್ಟದಲ್ಲೇ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಿದಾಗ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ ಎಂದು ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಅವರು ತಾಲೂಕು ಮಟ್ಟದ ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳಿಗೆ ಸಲಹೆ ನೀಡಿದರು. 

ಶನಿವಾರ ಬೆಳಿಗ್ಗೆ ಬಿ ಸಿ ರೋಡಿನ ತಾ ಪಂ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ ಸಂಬಂಧಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಯಾವುದೇ ಕಾರಣಕ್ಕೂ ಜಿಲ್ಲಾಧಿಕಾರಿ ಅಥವಾ ಜಿ ಪಂ ಕಾರ್ಯನಿರ್ವಹಣಾಧಿಕಾರಿಗಳು ಜನರಿಗೆ ಉತ್ತರಿಸುವ ಪರಿಸ್ಥಿತಿ ತಳಮಟ್ಟದ ಅಧಿಕಾರಿಗಳು ನಿರ್ಮಿಸಬಾರದು. 24*7 ಮಾದರಿಯಲ್ಲಿ ಜನರ ದೂರವಾಣಿ ಕರೆಗಳಿಗೆ ಸ್ಪಂದಿಸಿ ಸಹಕಾರ ಮನೋಭಾವದಿಂದ ಕೆಲಸ ಮಾಡಿ ಎಂದು ಕರೆ ನೀಡಿದರು. ಗ್ರಾಮಮಟ್ಟದಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಿದರೆ ಮಂಗಳೂರು ಕೇಂದ್ರದ ಅಧಿಕಾರಿಗಳು ಉತ್ತರಿಸುವ ಪ್ರಮೇಯ ಬರುವುದಿಲ್ಲ ಎಂದು ಡಿಸಿ ಹೇಳಿದರು. 

ಇದೇ ವೇಳೆ ಮಾತನಾಡಿದ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಅವರು ಈ ಬಾರಿ ಟಾಸ್ಕ್ ಫೋರ್ಸ್ ಸಮಿತಿ ಪುನರ್ರಚನೆಯಾಗಿರುವ ಬಗ್ಗೆ ಅಧಿಕಾರಿಗಳು ನನ್ನ ಗಮನಕ್ಕೆ ತಂದಿಲ್ಲ ಹಾಗೂ ಈ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಇದಕ್ಕೆ ಧ್ವನಿಗೂಡಿಸಿದ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ ಅವರು ಅಧಿಕಾರಿಗಳು ಜನಪ್ರತಿನಿಧಿಗಳಿಗೇ ಮಾಹಿತಿ ನೀಡದೆ, ಸಭೆಯನ್ನೂ ಕರೆಯದೆ ಇದ್ದರೆ ನಾವು ಜನರ ಸಮಸ್ಯೆಗಳಿಗೆ ಸ್ಪಂದಿಸುವುದಾದರೂ ಹೇಗೆ ಎಂದು ಜಿಲ್ಲಾಧಿಕಾರಿಗೆ ಪ್ರಶ್ನಿಸಿದರು. ಈ ಸಂದರ್ಭ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿ ರಾಜೇಂದ್ರ ಅವರು ಜನಪ್ರತಿನಿಧಿಗಳಿಗೆ ಕಾಲ ಕಾಲಕ್ಕೆ ಮಾಹಿತಿ ನೀಡಿ ಅವರನ್ನು ಸೇರಿಸಿಕೊಂಡು ಕಾರ್ಯನಿರ್ವಹಿಸುವ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರ ದೊರಯುವಂತೆ ಮಾಡಬೇಕು ಎಂದು ತಾ ಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಹಾಗೂ ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರಿಗೆ ಸೂಚಿಸಿದರು. ಇದೊಂದು ಯುದ್ದದ ಸಮಯ. ಈ ಸಂದರ್ಭದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡದೆ ಹೊಂದಾಣಿಕೆ ಮಾಡಿಕೊಂಡು ಟೀಂ ಆಗಿ ಯುದ್ದೋಪಾದಿಯಲ್ಲಿ ಕೆಲಸ ಮಾಡಿ ಎಂದು ಇದೇ ವೇಳೆ ಡಿಸಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಸಲಹೆ ನೀಡಿದರು. 

ಕೋವಿಡ್ ಕೇರ್ ಸೆಂಟರ್‍ಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದ ಡೀಸಿ ಅಲ್ಲಿ ತಂಗುವ ಸಂತ್ರಸ್ತರಿಗೆ ಉತ್ತಮ ಗುಣಮಟ್ಟದ ಆಹಾರ ಒದಗಿಸಿ, ಇದಕ್ಕೆ ಸರಕಾರದಿಂದ ಎಸ್ ಟಿ ಆರ್ ಎಫ್ ಫಂಡ್ ಬಳಕೆಗೆ ಅವಕಾಶವಿದ್ದು, ಪ್ರತಿ ವ್ಯಕ್ತಿಗೆ ಗರಿಷ್ಠ 250 ರೂಪಾಯಿ ಖರ್ಚು ಮಾಡಲು ಅವಕಾಶ ಇದೆ ಎಂದು. ಮೃತದೇಹ ಸಾಗಾಟ ಹಾಗೂ ಅಂತ್ಯ ಸಂಸ್ಕಾರದ ವ್ಯವಸ್ಥೆ ಮಾಡಲೂ ಸರಕಾರದ ನಿರ್ದೇಶನ ಇದ್ದು, ಯಾವುದೇ ಕಾರಣಕ್ಕೂ ಜನ ಶುಲ್ಕ ವಿಧಿಸುವ ಖಾಸಗಿಯವರನ್ನು ಸಂಪರ್ಕಿಸುವ ಸನ್ನಿವೇಶ ನಿರ್ಮಿಸಬೇಡಿ. ಸರಕಾರಿ ಅಂಬ್ಯುಲೆನ್ಸ್ ಸಾಕಾಗದಿದ್ದಲ್ಲಿ ಖಾಸಗಿ ಅಂಬ್ಯಲೆನ್ಸ್ ಗಳನ್ನೂ ಬಳಸಿ ಅದಕ್ಕೆ ಬೇಕಾದ ಪಾವತಿ ವ್ಯವಸ್ಥೆ ಮಾಡಿಕೊಳ್ಳಿ ಎಂದು ಕೂಡಾ ಡೀಸಿ ಅಧಿಕಾರಿಗಳಿಗೆ ಇದೇ ವೇಳೆ ಸೂಚಿಸಿದರು. ಕೋವಿಡ್ ನಿರ್ವಹಣೆಗೆ ಸರಕಾರದಲ್ಲಿ ಯಾವುದೇ ರೀತಿಯ ಹಣಕಾಸಿನ ಕೊರತೆ ಇಲ್ಲ. ಕೋವಿಡ್ ಕಾರಣಕ್ಕೆ ವಾಹನಗಳ ಬಳಕೆಗೆ ಯಾವುದೇ ಕಾರಣಕ್ಕೂ ಹಿಂದೆ ಮುಂದೆ ನೋಡುವುದು ಬೇಡ. ಅದಕ್ಕಾಗಿ ತಗಲುವ ಬಾಡಿಗೆ ವಿಷಯದಲ್ಲೂ ಆಲೋಚನೆ ಮಾಡುವ ಅಗತ್ಯವಿಲ್ಲ. ಈಗಾಗಲೇ ಕೋವಿಡ್ ಸಂಬಂಧಿ ಕಾರಣಕ್ಕಾಗಿ ಖರ್ಚು ಮಾಡಲು ದಕ್ಷಿಣ ಕನ್ನಡ ಜಿಲ್ಲಾಡಳಿತದ ಬಳಿ 15 ಕೋಟಿ ರೂಪಾಯಿ ಸಂಗ್ರಹವಿದೆ ಹಾಗೂ ಬಂಟ್ವಾಳ ತಾಲೂಕಾಡಳಿತದ ಬಳಿ 40 ಲಕ್ಷ ರೂಪಾಯಿ ಸಂಗ್ರಹವಿದೆ ಎಂದ ಜಿಲ್ಲಾಧಿಕಾರಿ ಕೇವಲ ಕೋವಿಡ್ ಕಾರಣಕ್ಕೆ ಮಾತ್ರ ಇದರ ಬಳಕೆಗೆ ಅವಕಾಶವಿದೆ ಎಂದರು. 

ಜಿಲ್ಲೆಯ ಹೊರಗಡೆಯಿಂದ ಬಂದವರ ಪಟ್ಟಿಯನ್ನು ಸಮಗ್ರವಾಗಿ ತಯಾರಿಸಿ ಅಂತಹವರ ಸೂಕ್ತ ಪರೀಕ್ಷೆ ಮಾಡಿಕೊಂಡು ಸಮಸ್ಯೆ ಉಂಟಾಗದಂತೆ ಕಾರ್ಯನಿರ್ವಹಿಸಿ. ಈ ಕೆಲಸಕ್ಕೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸಾಕಾಗದಿದ್ದಲ್ಲಿ ಉಳಿದ ಇಲಾಖೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಿಬ್ಬಂದಿಗಳಿದ್ದಾರೆ. ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡು ಯುದ್ದವನ್ನು ಯಶಸ್ವಿಯಾಗಿ ಗೆಲ್ಲುವ  ಪ್ರಯತ್ನ ಮಾಡಿ ಎಂದು ಜಿಲ್ಲಾಧಿಕಾರಿ ಡಾ ರಾಜೇಂದ್ರ ಕರೆ ನೀಡಿದರು. 

ಇದೇ ವೇಳೆ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಂಟ್ವಾಳದ ನಗರ ಪ್ರದೇಶಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಜಾಸ್ತಿಯಾಗುತ್ತಿದ್ದು, ಈ ಬಗ್ಗೆ ಪುರಸಭಾ ಮುಖ್ಯಾಧಿಕಾರಿಗಳು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿ ಹೊಂದಾಣಿಕೆ ಮೂಲಕ ಕಾರ್ಯನಿರ್ವಹಿಸಿ ಆ ಮೂಲಕ ಸಾಂಕ್ರಾಮಿಕ ರೋಗ ತಡೆಗಟ್ಟಲು ಆದ್ಯತೆ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. 

ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ಬೆಂಗಳೂರು ಹಾಗೂ ಇತರ ಹೊರ ಊರುಗಳಿಂದ ಬರುವ ಜನರ ಮೇಲೆ ವಿಶೇಷ ನಿಗಾ ಇಡುವುದರ ಜೊತೆಗೆ ಅವರ ಆರೋಗ್ಯದ ಸ್ಥಿತಿಗತಿಯನ್ನು ಖಾತ್ರಿ ಪಡಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಹಾಗೂ ಪಾಸಿಟಿವ್ ವ್ಯಕ್ತಿಗಳ ಕ್ವಾರಂಟೈನ್ ಬಗ್ಗೆಯೂ ಸೂಕ್ತ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. 

ಇದೇ ವೇಳೆ ಜಿ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರ್ ಅವರು ಟಾಸ್ಕ್ ಫೋರ್ಸ್ ಸಮಿತಿ ರಚನೆಯ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. 

ಬಂಟ್ವಾಳ ಆರೋಗ್ಯಾಧಿಕಾರಿ ಡಾ ದೀಪಾ ಪ್ರಭು ಅವರು ತಾಲೂಕಿನ ಸಮಗ್ರ ಕೋವಿಡ್ ಚಿತ್ರಣದ ಬಗ್ಗೆ ಜಿಲ್ಲಾಧಿಕಾರಿಗಳ ಮುಂದೆ ವರದಿ ಮಂಡಿಸಿದರು. 

ಸಭೆಯಲ್ಲಿ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್, ಜಿಲ್ಲಾ ಎಸ್ಪಿ ಋಷಿಕೇಶ್ ಸೊನಾವಣೆ, ತಾ ಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ತಾಲೂಕು ತಹಶೀಲ್ದಾರ್ ರಶ್ಮಿ ಎಸ್ ಆರ್, ಬಂಟ್ವಾಳ ಡಿವೈಎಸ್ಪಿ ವೆಲೆಂಟೈನ್ ಡಿ’ಸೋಜ ಹಾಗೂ ವಿವಿಧ ಇಲಾಖಾಧಿಕಾರಿಗಳು ಭಾಗವಹಿಸಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಗ್ರಾಮ ಮಟ್ಟದಲ್ಲಿ ಅಧಿಕಾರಿಗಳು ಜನರೊಂದಿಗೆ ಸ್ಪಂದಿಸಿದಾಗ ಯುದ್ದದ ಸಮಯವನ್ನು ಗೆಲ್ಲಲು ಸಾಧ್ಯ : ಬಂಟ್ವಾಳದಲ್ಲಿ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಸಲಹೆ Rating: 5 Reviewed By: karavali Times
Scroll to Top