ಕರಾವಳಿಯಲ್ಲಿ ತೌಕ್ತೇ ಚಂಡಮಾರುತ ಅಬ್ಬರ : ಮಂಗಳೂರಿನ ಹಲವು ಕುಟುಂಬಗಳ ಸ್ಥಳಾಂತರ - Karavali Times ಕರಾವಳಿಯಲ್ಲಿ ತೌಕ್ತೇ ಚಂಡಮಾರುತ ಅಬ್ಬರ : ಮಂಗಳೂರಿನ ಹಲವು ಕುಟುಂಬಗಳ ಸ್ಥಳಾಂತರ - Karavali Times

728x90

15 May 2021

ಕರಾವಳಿಯಲ್ಲಿ ತೌಕ್ತೇ ಚಂಡಮಾರುತ ಅಬ್ಬರ : ಮಂಗಳೂರಿನ ಹಲವು ಕುಟುಂಬಗಳ ಸ್ಥಳಾಂತರ

 ಮಂಗಳೂರು,‌ ಮೇ 15, 2021 (ಕರಾವಳಿ ಟೈಮ್ಸ್) : ತೌಕ್ತೇ  ಚಂಡಮಾರುತ ಅಬ್ಬರಿಸುತ್ತಿದ್ದು, ಕರ್ನಾಟಕ ಕರಾವಳಿಗೆ ತೀವ್ರ ರೀತಿಯಲ್ಲಿ ಅಪ್ಪಳಿಸಿದೆ. ಪರಿಣಾಮವಾಗಿ  ಶುಕ್ರವಾರ ರಾತ್ರಿಯಿಂದ ಕರಾವಳಿ ಜಿಲ್ಲೆಗಳಾದ್ಯಂತ ಭಾರೀ ಗಾಳಿ ಮಳೆಯಾಗುತ್ತಿದೆ.

ಮಳೆಯಿಂದಾಗಿ ಮಂಗಳೂರಿನಲ್ಲಿ  ಹಲವು ಮನೆಗಳಿಗೆ ಹಾನಿಯಾಗಿದೆ. ಸುರಕ್ಷತಾ ಕ್ರಮವಾಗಿ ಸುಮಾರು ಐವತ್ತಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

ಮಳೆ, ಪ್ರವಾಹ ಸಂಬಂಧಿತ ಅನಾಹುತ ತಡೆಗೆ  ಜಿಲ್ಲೆಗೆ ಎನ್.ಡಿ.ಆರ್.ಎಫ್ ತಂಡ ಆಗಮಿಸಿದೆ. ಜಿಲ್ಲೆಯ ಕೆಲವೆಡೆ ಶುಕ್ರವಾರ ರಾತ್ರಿಯಿಂದಲೆ ಮಳೆ ಆರಂಭವಾಗಿದ್ದು ಶನಿವಾರ ರಾತ್ರಿವರೆಗೂ ಮುಂದುವರೆದಿದೆ. ಮಳೆಯ ಜೊತೆಗೆ ಬಲವಾದ ಗಾಳಿಯಿಂದ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ.

ಸೋಮೇಶ್ವರ ಮತ್ತು ಉಳ್ಳಾಲದಲ್ಲಿ ಸಮುದ್ರಕ್ಕೆ ಸಮೀಪದಲ್ಲಿರುವ ಹಲವಾರು ಮನೆಗಳು ಹಾನಿಯಾಗಿವೆ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ. 

ಸೋಮೇಶ್ವರದಲ್ಲಿ 14 ಕುಟುಂಬಗಳನ್ನು ಸ್ಥಳೀಯ ಮದರಸಾದಲ್ಲಿ ತೆರೆಯಲಾದ ಪರಿಹಾರ ಶಿಬಿರಕ್ಕೆ ಸ್ಥಳಾಂತರಿಸಲಾಗಿದ್ದು, ಎಂಟು ಕುಟುಂಬಗಳನ್ನು ಉಳ್ಳಾಲದ ಸರಕಾರಿ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಇತರ ಕುಟುಂಬಗಳನ್ನು ಪಣಂಬೂರು, ಮುಲ್ಕಿ ಮತ್ತು ಇತರ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎನ್ನಲಾಗಿದೆ. ಇನ್ನು ಕೆಲವು ಕುಟುಂಬಗಳು ತಮ್ಮ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಮಂಗಳೂರು ತಾಲ್ಲೂಕಿನಲ್ಲಿ ಜಿಲ್ಲಾಡಳಿತ ವತಿಯಿಂದ 20ಕ್ಕೂ ಹೆಚ್ಚು ಪರಿಹಾರ ಶಿಬಿರಗಳನ್ನು ತೆರೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಚಂಡಮಾರುತದ ಪರಿಣಾಮ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಭಾರತೀಯ ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಪ್ರದೇಶದಲ್ಲಿ ಇನ್ನೂ ಕೆಲ ದಿನಗಳ ಮಟ್ಟಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

  • Blogger Comments
  • Facebook Comments

0 comments:

Post a Comment

Item Reviewed: ಕರಾವಳಿಯಲ್ಲಿ ತೌಕ್ತೇ ಚಂಡಮಾರುತ ಅಬ್ಬರ : ಮಂಗಳೂರಿನ ಹಲವು ಕುಟುಂಬಗಳ ಸ್ಥಳಾಂತರ Rating: 5 Reviewed By: karavali Times
Scroll to Top