ಸರಕಾರ ಜನರಲ್ಲಿ ಗೊಂದಲ ಮೂಡಿಸುವ ಬದಲು ಧೈರ್ಯ ಮೂಡಿಸಬೇಕು : ಶಾಸಕ ಖಾದರ್ - Karavali Times ಸರಕಾರ ಜನರಲ್ಲಿ ಗೊಂದಲ ಮೂಡಿಸುವ ಬದಲು ಧೈರ್ಯ ಮೂಡಿಸಬೇಕು : ಶಾಸಕ ಖಾದರ್ - Karavali Times

728x90

4 May 2021

ಸರಕಾರ ಜನರಲ್ಲಿ ಗೊಂದಲ ಮೂಡಿಸುವ ಬದಲು ಧೈರ್ಯ ಮೂಡಿಸಬೇಕು : ಶಾಸಕ ಖಾದರ್

 

ಬಹುದೇಶೀಯ ಕಂಪೆನಿಗಳಿಗೆ ಅವಕಾಶ ನೀಡಿ, ಬಡ ವ್ಯಾಪಾರಿಗಳಿಗೆ ನಿರ್ಬಂಧ : ಕಫ್ರ್ಯೂ ನಿಯಮದಲ್ಲಿ ತಾರತಮ್ಮ ಸರಿಯಲ್ಲ


ಆಕ್ಸಿಜನ್ ಸಮಸ್ಯೆ ಪರಿಹಾರಕ್ಕೆ ಸರಕಾರ ಹಾಗೂ ಜಿಲ್ಲೆಗಳು ಶ್ವೇತಪತ್ರ ಹೊರಡಿಸಬೇಕು


ಮಂಗಳೂರು, ಮೇ 04, 2021 (ಕರಾವಳಿ ಟೈಮ್ಸ್) : ಸರಕಾರದ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳ ಮಧ್ಯೆ ಹೊಂದಾಣಿಕೆ ಬೇಕು, ಸಿಎಂ ಹಾಗೂ ಮಂತ್ರಿಗಳು ದಿನಕ್ಕೊಂದು ಗೊಂದಲದ ಹೇಳಿಕೆಗಳನ್ನು ನೀಡಿ ಜನರನ್ನು ಅಲೆದಾಡಿಸುವ ಬದಲು ಜನರಿಗೆ ಧೈರ್ಯ ತುಂಬುವ ಕೆಲಸ ಸರಕಾರ ಮಾಡಬೇಕಿದೆ ಎಂದು ಮಂಗಳೂರು ಶಾಸಕ, ಮಾಜಿ ಆರೋಗ್ಯ ಸಚಿವ ಯು ಟಿ ಖಾದರ್ ಹೇಳಿದರು. 

ಮಂಗಳವಾರ ತನ್ನ ಅನಾರೋಗ್ಯದ ನಡುವೆಯೂ ನಗರದ ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಸದ್ಯದ ಕ್ರಿಟಿಕಲ್ ಪರಿಸ್ಥಿತಿಯಲ್ಲಿ ಸರಕಾರ ಮೆಡಿಕಲ್ ಎಮರ್ಜೆನ್ಸಿ ಘೋಷಿಸಿ ಬೇಕಾದ ಸಕಲ ವ್ಯವಸ್ಥೆಗಳನ್ನು ಮಾಡಬೇಕು ಎಂದರು. 

ಅದೇ ರೀತಿ ಸರಕಾರ ಲಾಕ್ ಡೌನ್, ಕಫ್ರ್ಯೂ ಹೇರುವಾಗಲೂ ತಾರತಮ್ಯದ ಕ್ರಮ ಅನುಸರಿಸುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಶಾಸಕ ಖಾದರ್ ಆಗ್ರಹಿಸಿದರು. ಈಗಾಗಲೇ ರಾಜ್ಯಾದ್ಯಂತ ಬಂದ್ ಆದೇಶ ನೀಡಿದ ಸರಕಾರ ಅಗತ್ಯ ವಸ್ತುಗಳಲ್ಲದ ಅಂಗಡಿಗಳಿಗೆ ನಿರ್ಬಂಧ ಹೇರಿದೆ. ಇದು ಸರಿಯಾದ ಕ್ರಮನೇ. ಆದರೆ ಅಮೆಝಾನ್ ಹಾಗೂ ಫ್ಲಿಪ್ ಕಾರ್ಟ್ ಗಳಂತಹ ಪ್ರಭಾವಿ ಆನ್ ಲೈನ್ ಕಂಪೆನಿಗಳಿಗೆ ಅವಕಾಶ ಕೊಟ್ಟು ಬಡ ವ್ಯಾಪಾರಿಗಳಿಗೆ ನಿರ್ಬಂಧ ಹೇರಿದ ಕ್ರಮ ಪ್ರಶ್ನಾರ್ಹವಾಗಿದೆ ಎಂದ ಖಾದರ್ ಆನ್ ಲೈನ್ ಮಾರ್ಕೆಟಿಂಗ್ ನೀಡಿರುವ ಅವಕಾಶ ತಕ್ಷಣ ನಿಲ್ಲಿಸಬೇಕು. ಅಥವಾ ಎಲ್ಲ ಬಡ ವ್ಯಾಪಾರಿಗಳಿಗೂ ಮಾರ್ಗಸೂಚಿ ಪಾಲನೆ ಜೊತೆ ಅವಕಾಶ ಕಲ್ಪಿಸಬೇಕು. ವಿದೇಶಿ ಕಂಪೆನಿಗಳಿಗೆ ಮಹತ್ವ ನೀಡುತ್ತಿರುವ ಆನ್ ಲೈನ್ ಕಂಪೆನಿಗಳಿಗೆ ಅವಕಾಶ ನೀಡಿ ಸ್ವದೇಶಿ ಉತ್ಪನ್ನ ಮಾರಾಟ ಮಾಡುವ ಸ್ಥಳೀಯರಿಗೆ ಅವಕಾಶ ನಿರಾಕರಿಸಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದೇ ವೇಳೆ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಮಾತನಾಡಿದ ಶಾಸಕ ಖಾದರ್, ಆಕ್ಸಿಜನ್ ಎಷ್ಟಿದೆ ಎಂಬ ಬಗ್ಗೆ ರಾಜ್ಯ ಸರಕಾರ ಹಾಗೂ ಆಯಾ ಜಿಲ್ಲಾಡಳಿತಗಳು ಶ್ವೇತಪತ್ರ ಬಿಡುಗಡೆ ಮಾಡಬೇಕು. ಯಾಕೆಂದರೆ ಈ ಹಿಂದಿನ ದಿನಗಳಿಗಿಂತ ಇದೀಗ ಮೂರು ಪಟ್ಟು ಅಧಿಕ ವೆಂಟಿಲೇಟರ್‍ಗಳ ಅಗತ್ಯವಿದೆ. ಆದ್ದರಿಂದ ಎಲ್ಲಾ ಆಸ್ಪತ್ರೆಗಳಲ್ಲಿ ಎಷ್ಟು ಆಕ್ಸಿಜನ್‍ಗಳ ಅವಶ್ಯಕತೆ ಇದೆ, ಎಷ್ಟು ಸರಬರಾಜು ಆಗುತ್ತಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ದೊರಬೇಕಿದೆ ಎಂದು ಆಗ್ರಹಿಸಿದರು. 

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾರದ ಹಿಂದೆ ಆಕ್ಸಿಜನ್ ಕೊರತೆಯ ಬಗ್ಗೆ ಗಮನ ಸೆಳೆದಾಗ ಯಾವುದೇ ಸಮಸ್ಯೆಗಳಿಲ್ಲ. ಸಾಕಷ್ಟು ಆಕ್ಸಿಜನ್ ಇದೆ ಎಂದು ದಿನಕ್ಕೊಬ್ಬ ಸಚಿವರು ಹೇಳಿಕೆ ನೀಡಿ ಇಡೀ ರಾಜ್ಯದ ಜನರ ಗಮನವನ್ನು ಬೇರೆಡೆ ಸೆಳೆದಿದ್ದರು. ಆದರೆ, ಈ ಮಧ್ಯೆ ಚಾಮರಾಜನಗರದಲ್ಲಿ ಆಕ್ಸಿಜನ್ ಕೊರೆತ ಕಾರಣದಿಂದಲೇ ದುರಂತ ನಡೆದು ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಇದಕ್ಕೆ ಯಾರು ಕಾರಣ ಎಂದು ಸರಕಾರ ಸ್ಪಷ್ಟಪಡಿಸಲಿ ಎಂದ ಖಾದರ್ ದುರ್ಘಟನೆಗೆ ಸರಕಾರದ ವೈಫಲ್ಯವೇ ಕಾರಣ ಎಂದು ಆರೋಪಿಸಿದರು. 

ಇಂತಹ ಸಾವು-ನೋವುಗಳು ಸಂಭವಿಸದಂತೆ ಮುಂದಿನ ದಿನಗಳಲ್ಲಿ ಸಮರ್ಪಕವಾದ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವೆಂಟಿಲೇಟರ್ ಗಳು ಎಷ್ಟಿವೆ? ಅದರ ಅಗತ್ಯ ಎಷ್ಟಿದೆ ಎಂಬುದರ ಬಗ್ಗೆ ತಿಳಿದುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದ ಖಾದರ್ ದಕ್ಷಿಣ ಕನ್ನಡ ಜಿಲ್ಲೆಗೆ ಶೇ. 80 ರಷ್ಟು ದ್ರವ ಆಕ್ಸಿಜನ್ ಜಿಂದಾಲ್ ನಿಂದ ಬರುತ್ತದೆ. ಶೇ. 20 ರಷ್ಟು ಪಾಲ್ಘಾಟ್ ನಿಂದ ಬರುತ್ತದೆ. ಇದು ನನಗೆ ಗೊತ್ತಿರುವ ವಿಚಾರ ಎಂದರು. ಆದರೆ ಕೇರಳದಲ್ಲಿ ಸೋಂಕಿತರ ಸಂಖ್ಯೆ ಉಲ್ಬಣಗೊಂಡಲ್ಲಿ ಇಡೀ ಆಕ್ಸಿಜನ್ ವ್ಯವಸ್ಥೆಯನ್ನು ಸರಕಾರ ವಶಕ್ಕೆ ಪಡೆದುಕೊಳ್ಳುತ್ತದೆ. ಅವರ ಆದೇಶಗಳಿಲ್ಲದೆ ಯಾವುದೇ ರಾಜ್ಯಕ್ಕಾಗಲಿ, ಸರಕಾರಕ್ಕಾಗಲಿ ಆಕ್ಸಿಜನ್ ಗಳು ಸರಬರಾಜು ಆಗುವುದಿಲ್ಲ. ಆದ್ದರಿಂದ ಜಿಲ್ಲೆಗೆ ಬರುವ ಆಕ್ಸಿಜನ್ ಕಡಿತವಾಗುವ ಸಾಧ್ಯತೆ ಇದೆ. ಆದ್ದರಿಂದ ಅದಕ್ಕೆ ಪರ್ಯಾಯ ವ್ಯವಸ್ಥೆಗಳೇನು ಎಂಬುದನ್ನು ಸರಕಾರ ಸ್ಪಷ್ಟಪಡಿಸಬೇಕು ಎಂದು ಖಾದರ್ ಆಗ್ರಹಿಸಿದರು. 

ಇತ್ತೀಚೆಗೆ ನಡೆದ ರಸ್ತೆ ಅಪಘಾತದ ಬರಳಿಕ ಕಾಲಿಗೆ ಗಾಯಮಾಡಿಕೊಂಡು ಬೆಂಗಳೂರು ಹಾಗೂ ಕೇರಳದ ಮನೆಗಳಲ್ಲಿ ವಿಶ್ರಾಂತಿಯಲ್ಲಿದ್ದ ಶಾಸಕ ಖಾದರ್ ಇದೇ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿ ಜನರ ಯೋಗ-ಕ್ಷೇಮ ವಿಚಾರಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಸರಕಾರ ಜನರಲ್ಲಿ ಗೊಂದಲ ಮೂಡಿಸುವ ಬದಲು ಧೈರ್ಯ ಮೂಡಿಸಬೇಕು : ಶಾಸಕ ಖಾದರ್ Rating: 5 Reviewed By: karavali Times
Scroll to Top