ಬಿಸಿ ಮತ್ತು ಪೌಷ್ಟಿಕ ಆಹಾರ ಎಲ್ಲರಿಗೂ ಲಭ್ಯಮಾಡುವ ನಿಟ್ಟಿನಲ್ಲಿ ಸರಕಾರ ಚಿಂತಿಸಬೇಕು : ಡಾ ತೇಜಸ್ವಿನಿ ಅನಂತಕುಮಾರ್ - Karavali Times ಬಿಸಿ ಮತ್ತು ಪೌಷ್ಟಿಕ ಆಹಾರ ಎಲ್ಲರಿಗೂ ಲಭ್ಯಮಾಡುವ ನಿಟ್ಟಿನಲ್ಲಿ ಸರಕಾರ ಚಿಂತಿಸಬೇಕು : ಡಾ ತೇಜಸ್ವಿನಿ ಅನಂತಕುಮಾರ್ - Karavali Times

728x90

7 June 2021

ಬಿಸಿ ಮತ್ತು ಪೌಷ್ಟಿಕ ಆಹಾರ ಎಲ್ಲರಿಗೂ ಲಭ್ಯಮಾಡುವ ನಿಟ್ಟಿನಲ್ಲಿ ಸರಕಾರ ಚಿಂತಿಸಬೇಕು : ಡಾ ತೇಜಸ್ವಿನಿ ಅನಂತಕುಮಾರ್

ಬೆಂಗಳೂರು, ಜೂನ್ 07, 2021 (ಕರಾವಳಿ ಟೈಮ್ಸ್) : ಬಿಸಿ ಮತ್ತು ಪೌಷ್ಟಿಕ ಆಹಾರ ಎಲ್ಲರಿಗೂ ಲಭ್ಯ ಮಾಡುವ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಅದಮ್ಯ ಚೇತನ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್ ಅಭಿಪ್ರಾಯಪಟ್ಟರು. 

ಅನಂತಕುಮಾರ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗಿದ್ದ 5ನೇ ದೇಶ ಮೊದಲು–ಹಸಿವನ್ನು ಮೀರಿದ ಪೌಷ್ಠಿಕತೆ–ದೇಶದಲ್ಲಿ ಹೆಚ್ಚುವರಿ ಆಹಾರ ಮತ್ತು ಕಡಿಮೆ ಪೌಷ್ಟಿಕತೆಯ ಒಗಟು ವೆಬಿನಾರ್ ನಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಪೌಷ್ಟಿಕತೆಯ ಸೂಚ್ಯಾಂಕದಲ್ಲಿ ಭಾರತ ದೇಶದ ಸ್ಥಾನ ಬಹಳ ಕೆಳಗಿನದ್ದಾಗಿದೆ. ಹಾಗಂತ ನಮ್ಮ ದೇಶದಲ್ಲಿ ಆಹಾರ ಉತ್ಪಾದನೆಯ ಪ್ರಮಾಣ ಕಡಿಮೆಯದ್ದು ಎಂದು ಅರ್ಥವಲ್ಲ. ನಾವು ಅಗತ್ಯ ಪ್ರಮಾಣಕ್ಕಿಂತಲೂ ಹೆಚ್ಚು ಆಹಾರ ಉತ್ಪಾದನೆ ಮಾಡುವ ರಾಷ್ಟ್ರವಾಗಿದ್ದೇವೆ. ಆದರೆ, ನಮ್ಮಲ್ಲಿ ಶೇಕಡಾ 40 ಆಹಾರ ಹಾಳಾಗುತ್ತಿದೆ. ಕೆಲವೆಡೆ ಆಹಾರ ಹಾಳಾದರೆ, ಕೆಲವೆಡೆ ಆಹಾರ ಸಿಗುತ್ತಿಲ್ಲ. ಈ ಅಂತರವನ್ನು ಕಡಿಮೆ ಮಾಡಬೇಕು. ಸರಿಯಾದ ಊಟ ಮಾಡಿಯೂ ಅಗತ್ಯ ಪೌಷ್ಟಿಕಾಂಶಗಳನ್ನು ಸೇವಿಸದೇ ಇರುವುದು ಅಪೌಷ್ಟಿಕತೆ. ನಾವು ನಮ್ಮ ಪ್ರಾಚೀನ ವೈವಿಧ್ಯಮಯ ಆಹಾರ ಪದ್ದತಿಯಿಂದ ವಿಮುಖರಾಗುತ್ತಿದ್ದು, ಅವಸರದ ಹಾಗೂ ಸರಿಯಾದ ಪೌಷ್ಟಿಕ ಆಹಾರ ಇಲ್ಲದೆ ಬಳುತ್ತಿದ್ದೇವೆ. ಅದಮ್ಯ ಚೇತನ ಸಂಸ್ಥೆ ತನ್ನ ಬಿಸಿಯೂಟದಲ್ಲಿ ಪೌಷ್ಟಿಕತೆಯನ್ನು ಸೇರಿಸುವ ಮೂಲಕ ವಿದ್ಯಾರ್ಥಿಗಳು ಅಪೌಷ್ಟಿಕತೆಯಿಂದ ಬಳಲದೇ ಇರುವುದಕ್ಕೆ ಆದಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು. 

ಕೇಂದ್ರ ಮತ್ತು ರಾಜ್ಯ ಸರಕಾರಗಳು ಆಯಾ ಪ್ರದೇಶದ ಜನಸಂಖ್ಯೆಯ ಆಧಾರದ ಮೇಲೆ ಕಮ್ಯೂನಿಟಿ ಕಿಚನ್ಗಳನ್ನು ಪ್ರಾರಂಭಿಸಬೇಕು. ಪೌಷ್ಟಿಕತೆ ಮತ್ತು ಶುಚಿತ್ವಕ್ಕೆ ಆದ್ಯತೆ ನೀಡುವ ಮೂಲಕ ಎಲ್ಲರಿಗೂ ಬಿಸಿ ಮತ್ತು ಪೌಷ್ಟಿಕ ಆಹಾರ ಕಡಿಮೆ ದರದಲ್ಲಿ ಅಥವಾ ಉಚಿತವಾಗಿ ದೊರಕಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು. 

ಇದೇ ವೇಳೆ ಅದಮ್ಯ ಚೇತನ ಸಂಸ್ಥೆಯ ವತಿಯಿಂದ ಪೌಷ್ಟಿಕ ಮತ್ತು ಸಾತ್ವಿಕ ಆಹಾರ ಆಂದೋಲನಕ್ಕೆ ಚಾಲನೆ ನೀಡಲಾಯಿತು. 

1000 ರೂಪಾಯಿಗಳನ್ನು ನೀಡಿ ಸದಸ್ಯರಾದವರಿಗೆ ನಮ್ಮ ಪ್ರಾಚೀನ ಆಹಾರ ಧಾನ್ಯಗಳನ್ನು ಒಳಗೊಂಡಂತಹ ಕಿಟ್ ನ್ನು ನೀಡಲಾಗುತ್ತದೆ. ಇದು ಸಾಂಕ್ರಾಮಿಕ ರೋಗದ ಸಮಯದಲ್ಲಿ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿ ಎಂದರು. 

ಆರೋಗ್ಯ ಮತ್ತು ಶಿಕ್ಷಣವನ್ನು ದಾನದ ವರ್ಗದಲ್ಲಿ (ಚಾರಿಟಿ ಕೆಟಗರಿ) ಸೇರಿಸಿದ್ದು ತೆರಿಗೆಯಲ್ಲಿ ಹಲವಾರು ವಿನಾಯಿತಿಗಳನ್ನು ನೀಡಲಾಗಿದೆ. ಆದರೆ, ಆಹಾರವನ್ನು ದಾನವಾಗಿ ನೀಡುವಂತಹ ಸಂಸ್ಥೆಗಳಿಗೆ ಇನ್ನೂ ಯಾವುದೇ ವಿನಾಯಿತಿಗಳು ಇಲ್ಲದ ಕಾರಣ ಬಹಳಷ್ಟು ಜನರು ತಮಗೆ ಇಷ್ಟವಿದ್ದರೂ ಈ ಕಾರ್ಯದಲ್ಲಿ ತೊಡಗಿಕೊಳ್ಳದೇ ಇರುವಂತಾಗಿದೆ. ಆದ್ದರಿಂದ ದೇಶದ ಕಾನೂನು ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿರುವ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. 

ಅಮೇರಿಕಾದ ವಿಶ್ವ ಭಾರತೀಯ ವಿಜ್ಞಾನಿಗಳು ಮತ್ತು ಟೆಕ್ನೋಕ್ರಾಟ್ಗಳ ಅಸೋಷಿಯೇಷನ್ ನ ಸಂಚಾಲಕರು ಮತ್ತು ದೇಶದಲ್ಲಿ ಆಹಾರ ಕ್ರಾಂತಿ–ಪೌಷ್ಟಿಕತೆಯ ಮಿಷನ್ ನ ಮುನ್ನಡೆಸುತ್ತಿರುವ ಡಾ. ಯೆಲ್ಲೋಜಿ ರಾವ್ ಮಿರ್ಜಾಕರ್ ಮಾತನಾಡಿ, ನಾವು ಹುಟ್ಟುವುದಕ್ಕೂ ಮುಂಚಿನಿಂದಲೂ ಸರಿಯಾದ ಪೌಷ್ಟಿಕತೆಯನ್ನ ಪಡೆದುಕೊಳ್ಳುವುದು ಬಹಳ ಅವಶ್ಯ ಎಂದು ಸಂಶೋಧನೆಗಳು ಹೇಳುತ್ತವೆ. ಅದರಲ್ಲೂ ಗರ್ಭ ಧರಿಸಿದಾಗ ತಾಯಿ ತಗೆದುಕೊಳ್ಳುವ ಆಹಾರ ಮಗುವಿನ ಬೆಳವಣಿಗೆಯಲ್ಲಿ ಬಹಳ ಮಹತ್ವದ ಕೆಲಸವನ್ನು ಮಾಡುತ್ತದೆ. ಅದೇ ಬೆಳವಣಿಗೆಯ ಹಂತದಲ್ಲಿರುವ ಮಗು ಅಪೌಷ್ಟಿಕತೆಯಿಂದ ಬಳಲಿದಾಗ ಮೆದುಳು ಕುಗ್ಗುವುದನ್ನೂ ಸಂಶೋದನೆಗಳು ತಿಳಿಸಿವೆ. ಅಲ್ಲದೆ, ದೇಶ ಅಪೌಷ್ಟಿಕತೆಯ ಸೂಚ್ಯಾಂಕದಲ್ಲಿ ಬಹಳ ಹಿಂದಿನ ಸ್ಥಾನದಲ್ಲಿದ್ದು, ನಮ್ಮಲ್ಲಿ ಬಹಳಷ್ಟು ಜನರು ಅಪೌಷ್ಟಿಕತೆಯಿಂದ ಬಳಲುತ್ತಿರುವುದನ್ನು ಕಾಣಬಹುದಾಗಿದೆ. ನಮ್ಮ ಪ್ರಾಚೀನ ಆಹಾರ ಪದ್ದತಿಯಲ್ಲಿ ಪೌಷ್ಟಿಕಾಂಶಗಳನ್ನು ಅಳವಡಿಸಿಕೊಳ್ಳುವ ಮೂಲಕ ವೈವಿಧ್ಯಮಯ ಆಹಾರ ಪದ್ದತಿಯನ್ನು ಅನುಸರಿಸಲಾಗುತ್ತಿತ್ತು. ಆದರೆ, ಕೇವಲ ಕಾರ್ಬೋಹೈಡ್ರೈಟ್ ಧಾನ್ಯಗಳ ಅತಿಯಾದ ಕೃಷಿಯಿಂದಾಗಿ ಪೌಷ್ಟಿಕ ಆಹಾರ ಧಾನ್ಯಗಳ ಕೊರತೆ ಹೆಚ್ಚಾಗಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ದೇಶದಾದ್ಯಂತ ಪೌಷ್ಟಿಕ ಆಹಾರ ಪದ್ದತಿಯ ಬಗ್ಗೆ ತಿಳುವಳಿಕೆ ಮೂಡಿಸುವ ಕಾರ್ಯ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಅನಂತಕುಮಾರ್ ಪ್ರತಿಷ್ಠಾನದ ಅಧ್ಯಕ್ಷ ಪ್ರೋ. ಪಿ.ವಿ ಕೃಷ್ಣ ಭಟ್,  ಡಾ ಬಿ.ಎಸ್ ಶ್ರೀನಾಥ್, ಅದಮ್ಯ ಚೇತನ ಸಂಸ್ಥೆಯ ಟ್ರಸ್ಟಿಗಳಾದ ಪ್ರದೀಪ್ ಓಕ್ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಸುಮಾರು 800 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಬಿಸಿ ಮತ್ತು ಪೌಷ್ಟಿಕ ಆಹಾರ ಎಲ್ಲರಿಗೂ ಲಭ್ಯಮಾಡುವ ನಿಟ್ಟಿನಲ್ಲಿ ಸರಕಾರ ಚಿಂತಿಸಬೇಕು : ಡಾ ತೇಜಸ್ವಿನಿ ಅನಂತಕುಮಾರ್ Rating: 5 Reviewed By: karavali Times
Scroll to Top