ಅಪಘಾತದಿಂದ ಮೃತಪಟ್ಟ ಮಗುವಿನ ಕುಟುಂಬಕ್ಕೆ ಯೂಸುಫ್ ಅಲಿ ಪರಿಹಾರ : ಯುಎಇಯಲ್ಲಿ ಗಲ್ಲು ಶಿಕ್ಷೆಯಿಂದ ಪಾರಾದ ಕೃಷ್ಣನ್ - Karavali Times ಅಪಘಾತದಿಂದ ಮೃತಪಟ್ಟ ಮಗುವಿನ ಕುಟುಂಬಕ್ಕೆ ಯೂಸುಫ್ ಅಲಿ ಪರಿಹಾರ : ಯುಎಇಯಲ್ಲಿ ಗಲ್ಲು ಶಿಕ್ಷೆಯಿಂದ ಪಾರಾದ ಕೃಷ್ಣನ್ - Karavali Times

728x90

3 June 2021

ಅಪಘಾತದಿಂದ ಮೃತಪಟ್ಟ ಮಗುವಿನ ಕುಟುಂಬಕ್ಕೆ ಯೂಸುಫ್ ಅಲಿ ಪರಿಹಾರ : ಯುಎಇಯಲ್ಲಿ ಗಲ್ಲು ಶಿಕ್ಷೆಯಿಂದ ಪಾರಾದ ಕೃಷ್ಣನ್

 ಕೊಚ್ಚಿ, ಜೂನ್ 03, 2021 (ಕರಾವಳಿ ಟೈಮ್ಸ್) : ದುಬೈಯಲ್ಲಿ ನಡೆದ ಕಾರು ಅಪಘಾತದ ವೇಳೆ ಸುಡಾನಿ ಬಾಲಕನೋರ್ವನ ಸಾವಿಗೆ ಕಾರಣನಾಗಿ ಮರಣ ದಂಡನೆಗೆ ಗುರಿಯಾಗಿದ್ದ ಕೇರಳ ಮೂಲದ ಚಾಲಕ ಬೆಕ್ಸ್ ಕೃಷ್ಣನ್ ಗೆ ಎನ್ ಆರ್ ಐ ಉದ್ಯಮಿ ಯೂಸುಫ್ ಅಲಿ ಪುನರ್ಜನ್ಮ ನೀಡಿರುವ ಕುತೂಹಲಕಾರಿ ಘಟನೆ ವರದಿಯಾಗಿದೆ.


ತ್ರಿಶೂರ್ ಜಿಲ್ಲೆಯ ಪುಥೆಂಚಿರಾ ಮೂಲದ 45 ವರ್ಷದ ಬೆಕ್ಸ್ ಕೃಷ್ಣನ್ ಕಳೆದ ಏಳು ವರ್ಷಗಳಿಂದ ಅಬುಧಾಬಿಯ ಅಲ್ ವಾತ್ಬಾ ಜೈಲಿನಲ್ಲಿದ್ದಾರೆ. ಬೆಕ್ಸ್ ಕೃಷ್ಣನ್ ಅಬುಧಾಬಿಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ 2012 ರ ಸೆಪ್ಟೆಂಬರ್ 7 ರಂದು ಕೆಲಸಕ್ಕೆ ಸಂಬಂಧಿಸಿದ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಆಟವಾಡುತ್ತಿದ್ದ ಮಕ್ಕಳ ಗುಂಪಿಗೆ ನುಗ್ಗಿತ್ತು. ಪರಿಣಾಮ  ಸುಡಾನಿ ಬಾಲಕನೊಬ್ಬ ಮೃತಪಟ್ಟಿದ್ದನು.

ಘಟನೆಗೆ ಸಂಬಂಧಿಸಿದಂತೆ ಸಿಸಿ ಟಿವಿ ಫೂಟೇಜ್ ಸಂಗ್ರಹಿಸಿದ ಅಬುಧಾಬಿ ಪೊಲೀಸರು ಕೃಷ್ಣನ್ ವಿರುದ್ಧ ಕೊಲೆ ಆರೋಪ ಹೊರಿಸಿದ್ದರು. ಪೊಲೀಸರ ಸಿಸಿ ಟಿವಿ ದೃಶ್ಯಾವಳಿಗಳನ್ನು ಪುರಾವೆಯಾಗಿ ಪರಿಗಣಿಸಿದ ಕೋರ್ಟ್ ಕೃಷ್ಣಗೆ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. 

ಕೃಷ್ಣನ್ ನನ್ನು ಉಳಿಸುವ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದವು. ಕೊನೆಗೆ ಕುಟುಂಬವು ಬಿಜೆಪಿ ಮುಖಂಡ ಸೇತು ಮಾಧವನ್ ಸಹಾಯದಿಂದ ಎನ್ಆರ್ ಐ ಉದ್ಯಮಿ ಎಂ ಎ ಯೂಸುಫ್ ಅಲಿ ಅವರನ್ನು ಸಂಪರ್ಕಿಸಿತು. ಏತನ್ಮಧ್ಯೆ, ಮಗುವನ್ನು ಕಳೆದುಕೊಂಡ ನೋವಿನಿಂದ ಕುಟುಂಬವು ವಾಪಾಸು ಸುಡಾನ್ ದೇಶಕ್ಕೆ ತೆರಳಿತ್ತು. ಇದು ಮಧ್ಯಸ್ಥಿಕೆ ಪ್ರಯತ್ನಗಳನ್ನು ಅಸಾಧ್ಯಗೊಳಿಸಿತು. 

ಆದರೆ ಯೂಸುಫ್ ಅಲಿ ಪಟ್ಟುಬಿಡದೆ ಸುಡಾನ್‌ನಲ್ಲಿ ಕುಟುಂಬ ಇರುವ ಸ್ಥಳವನ್ನು ಪತ್ತೆ ಮಾಡಲು ಆಫ್ರಿಕಾಗೆ ತೆರಳಿದರು.  ಕೊನೆಗೂ ಸಾವಿಗೀಡಾದ ಮಗುವಿನ ಕುಟುಂಬವನ್ನು ಕಂಡುಕೊಂಡ ಯೂಸುಫ್ ಅಲಿ ಅವರು ಕುಟುಂಬದೊಂದಿಗೆ ಕೃಷ್ಣನ್ ಅವರನ್ನು ಕ್ಷಮಿಸುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಲ್ಲದೆ ಆ ಕುಟುಂಬವನ್ನು ಅಬುಧಾಬಿಗೆ ಕರೆತರುವಲ್ಲೂ ಸಫಲರಾದರು.

2021ರ ಜನವರಿಯಲ್ಲಿ ಕೃಷ್ಣನ್ ಕ್ಷಮಿಸಲು ಸಂತ್ರಸ್ತೆಯ ಕುಟುಂಬ ಒಪ್ಪಿಕೊಂಡಿತು. ನಂತರ ಯೂಸುಫ್ ಅಲಿ 5 ಲಕ್ಷ ದಿರ್ಹಂ (1 ಕೋಟಿ ರೂಪಾಯಿ) ಪರಿಹಾರವಾಗಿ ನೀಡಿದರು. ಇದರಿಂದ ಪ್ರಕರಣ ಸುಖಾಂತ್ಯ ಕಂಡಿದ್ದು, ಕೃಷ್ಣನ್ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಶೀಘ್ರದಲ್ಲಿ ಅವರು ಜೈಲಿನಿಂದ ಬಿಡುಗಡೆ ಹೊಂದಿ ಕೇರಳಕ್ಕೆ ಮರಳಲಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

ತನಗೆ ಪುನರ್ಜನ್ಮ ನೀಡಿದ ಯೂಸುಫ್ ಅಲಿ ಅವರನ್ನು ಭೇಟಿಯಾಗಲು ಕಾಯುತ್ತಿದ್ದೇನೆ. ತನ್ನನ್ನು ಅತಂತ್ರದಿಂದ ರಕ್ಷಿಸಿದ್ದಕ್ಕಾಗಿ ಕೃತಜ್ಞತೆಯನ್ನು ತಿಳಿಸುತ್ತೇನೆ ಎಂದು ಕೃಷ್ಣನ್ ಹೇಳಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಅಪಘಾತದಿಂದ ಮೃತಪಟ್ಟ ಮಗುವಿನ ಕುಟುಂಬಕ್ಕೆ ಯೂಸುಫ್ ಅಲಿ ಪರಿಹಾರ : ಯುಎಇಯಲ್ಲಿ ಗಲ್ಲು ಶಿಕ್ಷೆಯಿಂದ ಪಾರಾದ ಕೃಷ್ಣನ್ Rating: 5 Reviewed By: lk
Scroll to Top