ರೋಚಕ ಹೋರಾಟದಲ್ಲಿ ಲಂಕಾ ದಹನ ಮಾಡಿದ ಹರಿಣಗಳು : ಕೊನೆಯ ಓವರಿನಲ್ಲಿ ಮಿಲ್ಲರ್ ಸಿಡಿಸಿದ ಸತತ 2 ಸಿಕ್ಸರಿಗೆ ಲಂಕಾ ಉಡೀಸ್ - Karavali Times ರೋಚಕ ಹೋರಾಟದಲ್ಲಿ ಲಂಕಾ ದಹನ ಮಾಡಿದ ಹರಿಣಗಳು : ಕೊನೆಯ ಓವರಿನಲ್ಲಿ ಮಿಲ್ಲರ್ ಸಿಡಿಸಿದ ಸತತ 2 ಸಿಕ್ಸರಿಗೆ ಲಂಕಾ ಉಡೀಸ್ - Karavali Times

728x90

30 October 2021

ರೋಚಕ ಹೋರಾಟದಲ್ಲಿ ಲಂಕಾ ದಹನ ಮಾಡಿದ ಹರಿಣಗಳು : ಕೊನೆಯ ಓವರಿನಲ್ಲಿ ಮಿಲ್ಲರ್ ಸಿಡಿಸಿದ ಸತತ 2 ಸಿಕ್ಸರಿಗೆ ಲಂಕಾ ಉಡೀಸ್

ಶಾರ್ಜಾ, ಸೆಪ್ಟಂಬರ್ 30, 2021 (ಕರಾವಳಿ ಟೈಮ್ಸ್) : ಟಿ-20 ವಿಶ್ವಕಪ್ ಟೂರ್ನಿಯ ಶನಿವಾರ ಶಾರ್ಜಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರೋಚಕ ಹೋರಾಟ ನೀಡಿದ ದಕ್ಷಿಣ ಆಪ್ರಿಕಾ ತಂಡವು ಶ್ರೀಲಂಕಾ ತಂಡಕ್ಕೆ 4 ವಿಕೆಟ್‍ಗಳ ಸೋಲುಣಿಸುವ ಮೂಲಕ ತನ್ನ ಪ್ಲೇಅಪ್ ಕನಸು ಜೀವಂತವಾಗಿರಿಸಿಕೊಂಡಿದೆ.

ಮಿಲ್ಲರ್ ಅವರ ಸತತ ಸಿಕ್ಸರ್ ನಿಂದಾಗಿ ಶ್ರೀಲಂಕಾ ಬೌಲರ್ ವನಿಂದು ಹಸರಂಗ ಅವರ ಹ್ಯಾಟ್ರಿಕ್ ವ್ಯರ್ಥವಾಯಿತು. ಕೊನೆಯ ಓವರಿನಲ್ಲಿ ಮಿಲ್ಲರ್ ಸತತ 2 ಸಿಕ್ಸರ್ ಸಿಡಿಸಿ ಗೆಲುವಿನ ಹೀರೋ ಎನಿಸಿದರು. 

ಶ್ರೀಲಂಕಾ ನಿಗದಿಪಡಿಸಿದ್ದ 143 ರನ್‍ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ರೀಜಾ ಹೆಂಡ್ರಿಕ್ಸ್ 11 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ವಿಕೆಟ್ ಕೀಪರ್ ದಾಂಡುಗಾರ  ಕ್ವಿಂಟನ್ ಡಿ ಕಾಕ್ 12 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇಬ್ಬರು ಆರಂಭಿಕರನ್ನು ಪೆವಿಲಿಯನ್‍ಗಟ್ಟುವಲ್ಲಿ ಚಮೀರಾ ಯಶಸ್ವಿಯಾದರು. ವ್ಯಾನ್ ಡರ್ ಡುಸೇನ್ 16 ರನ್ ಬಾರಿಸಿ ರನೌಟ್ ಆಗಿ ಪೆವಿಲಿಯನ್ ಸೇರಿದರು. ಈ ವೇಳೆಗೆ ದಕ್ಷಿಣ ಆಫ್ರಿಕ ತಂಡವು 8 ಓವರ್ ಮುಕ್ತಾಯಕ್ಕೆ 3 ವಿಕೆಟ್ ಕಳೆದುಕೊಂಡು ಕೇವಲ 49 ರನ್ ಬಾರಿಸಿತ್ತು. 

ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಬವುಮಾ 46 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 46 ರನ್ ಬಾರಿಸಿ ಹಸರಂಗ ಬೌಲಿಂಗ್‍ನಲ್ಲಿ ವಿಕೆಟ್ ಒಪ್ಪಿಸಿದರು. ಲಂಕಾ ತಂಡ ಸ್ಟಾರ್ ಸ್ಪಿನ್ನರ್ ವನಿಂದು ಹಸರಂಗ, ಉತ್ತಮವಾಗಿ ಆಡುತ್ತಿದ್ದ ಏಯ್ಡನ್ ಮಾರ್ಕ್‍ರಮ್ (19) ಅವರನ್ನು ತಮ್ಮ ಕೂಟದ ಮೂರನೇ ಓವರ್‍ನ ಕೊನೆಯ ಎಸೆತದಲ್ಲಿ ವಿಕೆಟ್ ಕಬಳಿಸಿದರು. ಇದಾದ ಬಳಿಕ 18ನೇ ಓವರ್‍ನ ಮೊದಲೆರಡು ಎಸೆತಗಳಲ್ಲಿ ತೆಂಬ ಬವುಮಾ ಹಾಗೂ ಡ್ವೇನ್ ಪ್ರಿಟೋರಿಯಸ್ ಅವರನ್ನು ಪೆವಿಲಿಯನ್ನಿಗಟ್ಟುವ ಮೂಲಕ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದರು. ಈ ಮೂಲಕ ಟಿ-20 ವಿಶ್ವಕಪ್‍ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಮೂರನೇ ಬೌಲರ್ ಎನ್ನುವ ಕೀರ್ತಿಗೆ ಹಸರಂಗ ಭಾಜನರಾದರು. 2007ರಲ್ಲಿ ಅಸ್ಟ್ರೇಲಿಯಾದ ವೇಗಿ ಬ್ರೆಟ್ ಲೀ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ್ದರು. 2021ರ ವಿಶ್ವಕಪ್ ಟೂರ್ನಿಯಲ್ಲಿ ನಮಿಬಿಯಾದ ಕರ್ಟಿಸ್ ಚಾಂಪರ್ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಈ ಸಾಧನೆ ಮಾಡಿದ್ದಾರೆ.

ತೆಂಬಾ ಬವುಮಾ ಹಾಗೂ ಡ್ವೇನ್ ಪ್ರಿಟೋರಿಯಸ್ ವಿಕೆಟ್ ಕಬಳಿಸಿದಾಗ ಲಂಕಾ ಪಾಳಯದಲ್ಲಿ ಸಂಭ್ರಮ ಮನೆ ಮಾಡಿತ್ತು. ಕೊನೆಯ ಓವರ್‍ನಲ್ಲಿ ದಕ್ಷಿಣ ಆಫ್ರಿಕಾ ಗೆಲ್ಲಲು 15 ರನ್‍ಗಳ ಅಗತ್ಯವಿತ್ತು. 20ನೇ ಓವರ್ ಬೌಲಿಂಗ್ ಮಾಡಲಿಳಿದ ಲಹಿರು ಕುಮಾರ ಎಸೆತದಲ್ಲಿ ಕಗಿಸೋ ರಬಾಡ 1 ರನ್ ಗಳಿಸಿದರು. ಸ್ಟ್ರೈಕ್‍ಗೆ ಬಂದ ಡೇವಿಡ್ ಮಿಲ್ಲರ್ 2 ಎಸೆತಗಳಲ್ಲಿ ಸತತ 2 ಸಿಕ್ಸರ್ ಸಿಡಿಸುವ ಮೂಲಕ ಅಫ್ರಿಕಾ ಗೆಲುವಿನ ಹಾದಿ ಸುಗಮಗೊಳಿಸಿದರು. ಕೊನೆಯ 3 ಎಸೆತಗಳಲ್ಲಿ 2 ರನ್ ಅಗತ್ಯವಿತ್ತು. ನಾಲ್ಕನೇ ಎಸೆತದಲ್ಲಿ ಮಿಲ್ಲರ್ ಒಂದು ರನ್ ಗಳಿಸಿದರು. 5ನೇ ಎಸೆತದಲ್ಲಿ ರಬಾಡ ಬೌಂಡರಿ ಬಾರಿಸಿ ತಂಡವನ್ನು ದಡ ಸೇರಿಸಿದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ನಿಗದಿತ 20 ಓವರ್‍ಗಳಲ್ಲಿ 142 ರನ್ ಮಾತ್ರ ಗಳಿಸಲು ಶಕ್ತವಾಯಿತು. ಆರಂಭಿಕ ದಾಂಡಿಗ ಪತುಮ ನಿಸ್ಸಾಂಕ (72), ಅಸಲಂಕಾ (21) ಹಾಗೂ ನಾಯಕ ದಸುನ್ ಶನಕ (11) ಹೊರತುಪಡಿಸಿ ಉಳಿದ್ಯಾವರಾರೂ ಎರಡಂಕಿ ಮೊತ್ತ ತಲುಪಿಲ್ಲ. 

  • Blogger Comments
  • Facebook Comments

0 comments:

Post a Comment

Item Reviewed: ರೋಚಕ ಹೋರಾಟದಲ್ಲಿ ಲಂಕಾ ದಹನ ಮಾಡಿದ ಹರಿಣಗಳು : ಕೊನೆಯ ಓವರಿನಲ್ಲಿ ಮಿಲ್ಲರ್ ಸಿಡಿಸಿದ ಸತತ 2 ಸಿಕ್ಸರಿಗೆ ಲಂಕಾ ಉಡೀಸ್ Rating: 5 Reviewed By: karavali Times
Scroll to Top