ಸ್ಕಾಟ್‍ಲೆಂಡ್ ತಂಡಕ್ಕೆ ಭರ್ಜರಿ ಸೋಲಿಣಿಸಿದ ಟೀಂ ಇಂಡಿಯಾ : ರನ್ ಧಾರಣೆಯಲ್ಲಿ ಕಿವೀಸ್, ಅಫಘಾನ್ ಮೀರಿಸಿ ಮುನ್ನಡೆದ ಕೊಹ್ಲಿ ಪಾಳಯ - Karavali Times ಸ್ಕಾಟ್‍ಲೆಂಡ್ ತಂಡಕ್ಕೆ ಭರ್ಜರಿ ಸೋಲಿಣಿಸಿದ ಟೀಂ ಇಂಡಿಯಾ : ರನ್ ಧಾರಣೆಯಲ್ಲಿ ಕಿವೀಸ್, ಅಫಘಾನ್ ಮೀರಿಸಿ ಮುನ್ನಡೆದ ಕೊಹ್ಲಿ ಪಾಳಯ - Karavali Times

728x90

5 November 2021

ಸ್ಕಾಟ್‍ಲೆಂಡ್ ತಂಡಕ್ಕೆ ಭರ್ಜರಿ ಸೋಲಿಣಿಸಿದ ಟೀಂ ಇಂಡಿಯಾ : ರನ್ ಧಾರಣೆಯಲ್ಲಿ ಕಿವೀಸ್, ಅಫಘಾನ್ ಮೀರಿಸಿ ಮುನ್ನಡೆದ ಕೊಹ್ಲಿ ಪಾಳಯ

ದುಬೈ, ನವೆಂಬರ್ 06, 2021 (ಕರಾವಳಿ ಟೈಮ್ಸ್) : ಟಿ-20 ವಿಶ್ವಕಪ್ ಟೂರ್ನಿಯ ಶುಕ್ರವಾರ ರಾತ್ರಿ ದುಬೈ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್ ಅಂತರದಲ್ಲಿ ಇನ್ನೂ 81 ಎಸೆತಗಳು ಬಾಕಿ ಇರುವಂತೆಯೇ ಸ್ಕಾಟ್‍ಲೆಂಡ್ ತಂಡವನ್ನು ಭರ್ಜರಿಯಾಗಿ ಹಿಮ್ಮೆಟ್ಟಿಸುವ ಮೂಲಕ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರುವುದರ ಜೊತೆಗೆ ರನ್ ಧಾರಣೆಯಲ್ಲಿ 2ನೇ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡ್ ತಂಡವನ್ನು ಮೀರಿಸಿದೆ. 

ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಸ್ಕಾಟ್‍ಲೆಂಡ್ ತಂಡಕ್ಕೆ ನೀಡಿದರು. ಗೆಲುವು ಅನಿವಾರ್ಯತೆಯ ಜೊತೆಗೆ ರನ್ ಧಾರಣೆ ಕೂಡಾ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆಯಲ್ಲಿದ್ದ ಟೀಂ ಇಂಡಿಯಾ ನಾಯಕ ಸಹಜವಾಗಿಯೇ ಈ ತೀರ್ಮಾನಕ್ಕೆ ಬಂದಿದ್ದರು. ನಾಯಕ ಕೊಹ್ಲಿ ಅವರ ನಿರ್ಧಾರವನ್ನು ತಂಡ ಬೌಲರ್‍ಗಳು ಹುಸಿ ಮಾಡಿಲ್ಲ. ವೇಗದ ದಾಳಿಗಾರರಾದ ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬುಮ್ರಾ ಮತ್ತು ಸ್ಪಿನ್ನರ್‍ಗಳಾದ ರವೀಂದ್ರ ಜಡೇಜಾ ಹಾಗೂ ಆರ್ ಅಶ್ವಿನ್ ಅವರ ನಿಖರ ದಾಳಿಗೆ ತತ್ತರಿಸಿದ ಸ್ಕಾಟ್‍ಲೆಂಡ್ 17.4 ಓವರ್‍ಗಳಲ್ಲೇ ಕೇವಲ 85 ರನ್‍ಗಳಿಗೆ ತನ್ನ ಪಾಳಿಯನ್ನು ಕೊನೆಗೊಳಿಸಿತು. ಜಾರ್ಜ್ ಮುನ್ಸೆ ಅವರ 24 ರನ್‍ಗಳೇ ಸ್ಕಾಟ್ಲೆಂಡ್ ಪರ ಗರಿಷ್ಠ ವೈಯುಕ್ತಿ ಮೊತ್ತವಾಗಿ ದಾಖಲಾಯಿತು. ನಾಯಕ ಕೈಲ್ ಕೊಯಟ್ಜರ್ ಕೇವಲ 1 ರನ್ ಸಿಡಿಸಿ ನಿರಾಸೆ ಮೂಡಿಸಿದರು. 

ಭಾರತ ಪರ ಮೊಹಮ್ಮದ್ ಶಮಿ ಹಾಗೂ ರವೀಂದ್ರ ಜಡೇಜಾ ತಲಾ 3 ವಿಕೆಟ್ ಪಡೆದರೆ, ಬುಮ್ರಾ 2 ಹಾಗೂ ಅಶ್ವಿನ್ 1 ವಿಕೆಟ್ ಉರುಳಿಸಿದರು. 86 ರನ್ ಸುಲಭ ಗುರಿ ಪಡೆದ ಟೀಂ ಇಂಡಿಯಾ ಅತೀ ಕಡಿಮೆ ಓವರ್ ಹಾಗೂ ಗರಿಷ್ಠ ವಿಕೆಟ್ ಉಳಿಸಿಕೊಂಡು ಗೆಲುವು ಸಾಧಿಸಿದರೆ ಮಾತ್ರ ಆಫ್ಘಾನಿಸ್ತಾನ ತಂಡವನ್ನು ಹಿಂದಿಕ್ಕಿಸಲು ಸಾಧ್ಯ ಅನ್ನೋದನ್ನು ಅರಿತುಕೊಂಡು ಆಟಗಾರರು ಬ್ಯಾಟ್ ಬೀಸಿದರು. ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಸ್ಪೋಟಕ ಆರಂಭ ನೀಡಿದರು. ಕೆಎಲ್ ರಾಹುಲ್ ಕೇವಲ 19 ಎಸೆತದಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 50 ಸಿಡಿಸಿ ವಿಕೆಟ್ ಒಪ್ಪಿಸಿದರೆ, ರೋಹಿತ್ ಶರ್ಮಾ 16 ಎಸೆತದಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡ 30 ರನ್ ಗಳಿಸಿದರು. ಭಾರತ 2ನೇ ವಿಕೆಟ್ ಪತನದ ವೇಳೆ 82 ರನ್ ಸಿಡಿಸಿತ್ತು. ನಾಯಕ ವಿರಾಟ್ ಕೊಹ್ಲಿ ಅಜೇಯ 2 ರನ್ ಹಾಗೂ ಸೂರ್ಯಕುಮಾರ್ ಯಾದವ್ ಅಜೇಯ 6 ರನ್ ಸಿಡಿಸಿ ಗೆಲುವಿನ ಔಪಚಾರಿಕತೆ ಪೂರ್ಣಗೊಳಿಸಿದರು. 

ಈ ಮೂಲಕ ಟೀಂ ಇಂಡಿಯಾ 6.3 ಓವರ್‍ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಪ್ರಸ್ತುತ ಗೆಲುವಿನೊಂದಿಗೆ ಭಾರತ ನೆಟ್‍ರನ್ ರೇಟ್ +1.619. ಇದು ನ್ಯೂಜಿಲೆಂಡ್ ಹಾಗೂ ಆಫ್ಘಾನಿಸ್ತಾನವನ್ನು ಹಿಂದಿಕ್ಕಿದೆ. ಅಂಕಪಟ್ಟಿಯಲ್ಲಿ ಸದ್ಯ ಭಾರತ 3ನೇ ಸ್ಥಾನಕ್ಕೆ ಜಿಗಿದಿದೆ. ಮೊದಲ ಸ್ಥಾನದಲ್ಲಿ ಪಾಕಿಸ್ತಾನ, 2ನೇ ಸ್ಥಾನವನ್ನು ನ್ಯೂಜಿಲೆಂಡ್ ಪಡೆದುಕೊಂಡಿದೆ. ಆಫ್ಘಾನಿಸ್ತಾನ 4ನೇ ಸ್ಥಾನಕ್ಕೆ ಕುಸಿದಿದೆ. 

ಟಿ-20 ವಿಶ್ವಕಪ್ ನಲ್ಲಿ ಅತೀ ಹೆಚ್ಚು ಎಸೆತಗಳು ಬಾಕಿ ಇರುವಂತೆ ಪಡೆದ ಗೆಲುವುಗಳಲ್ಲಿ ಇಂದಿನ ಟೀಂ ಇಂಡಿಯಾ ಗೆಲುವು 3ನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ 2014 ರಲ್ಲಿ ನೆದರ್ಲೆಂಡ್ ತಂಡವನ್ನು 90 ಎಸೆತಗ ಇರುವಂತೆ ಸೋಲಿಸಿದ ಶ್ರೀಲಂಕಾ ಇದೆ. ಇದೇ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡ 82 ಎಸೆತ ಇರುವಂತೆ ಬಾಂಗ್ಲಾದೇಶ ತಂಡವನ್ನು ಸೋಲಿಸಿ 2ನೇ ಸ್ಥಾನ ಪಡೆದುಕೊಂಡಿದೆ. 4ನೇ ಸ್ಥಾನವನ್ನು ಕೂಡಾ ಶ್ರೀಲಂಕಾ ಪಡೆದುಕೊಂಡಿದ್ದು, ಇದೇ ವಿಶ್ವಕಪ್ ಪಂದ್ಯದಲ್ಲಿ ನೆದರ್ಲೆಂಡ್ ತಂಡವನ್ನು 77 ಎಸೆತ ಇರುವಂತೆ ಶ್ರೀಲಂಕಾ ಸೋಲಿಸಿದೆ. 2007 ರಲ್ಲಿ ಕೀನ್ಯಾ ತಂಡವನ್ನು 74 ಎಸೆತ ಇರುವಂತೆ ಸೋಲಿಸಿದ ನ್ಯೂಜಿಲೆಂಡ್ 5ನೇ ಸ್ಥಾನದಲ್ಲಿದ್ದರೆ, ಇದೇ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ 70 ಎಸೆತ ಬಾಕಿ ಇರುವಂತೆ ವೆಸ್ಟ್‍ಇಂಡೀಸ್ ತಂಡವನ್ನು ಸೋಲಿಸಿದ ಇಂಗ್ಲಂಡ್ ತಂಡ 6ನೇ ಸ್ಥಾನದಲ್ಲಿದೆ. 

ಕೆ ಎಲ್ ರಾಹುಲ್ 18 ಎಸೆತಗಳಲ್ಲಿ ಸಿಡಿಸಿದ ಅರ್ಧ ಶತಕ ವೈಯುಕ್ತಿಕ ಮತ್ತು ಭಾರತದ ಪರ ದಾಖಲೆ ನಿರ್ಮಾಣ ಮಾಡಿದ್ದು, ರಾಹುಲ್ ಅವರ ಟಿ-20 ಕ್ರಿಕೆಟ್ ಮತ್ತು ಟಿ-20 ವಿಶ್ವಕಪ್ ಕ್ರಿಕೆಟ್ ವೃತ್ತಿಪರ ವೇಗದ ಅರ್ಧಶತಕವಾಗಿದೆ. ಅದೇ ರೀತಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪರ ದಾಖಲಾದ 4ನೇ ವೇಗದ ಅರ್ಧಶತಕವಾಗಿದೆ. ಈ ಹಿಂದೆ 2007 ರಲ್ಲಿ ಡರ್ಬನ್‍ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ಯುವರಾಜ್ ಸಿಂಗ್ ಕೇವಲ 12 ಎಸೆತಗಳಲ್ಲೇ ಅರ್ಧಶತಕ ಸಿಡಿಸಿದ್ದರು. ಇದು ಭಾರತದ ಪರ ಮತ್ತು ಟಿ-20 ವಿಶ್ವಕಪ್ ಟೂರ್ನಿಯಲ್ಲಿ ದಾಖಲಾದ ವೇಗದ ಅರ್ಧಶತಕವಾಗಿದೆ. 2014ರಲ್ಲಿ ಐರ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾದ ಸ್ಚೀಫೆನ್ ಮೈಬರ್ಗ್ ಕೇವಲ 17 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದು, ಇದು ಟಿ-20 ವಿಶ್ವಕಪ್ ಟೂರ್ನಿಯಲ್ಲಿ ದಾಖಲಾದ 2ನೇ ವೇಗದ ಅರ್ಧಶತಕವಾಗಿದೆ. ಮೀರ್‍ಪುರ್‍ನಲ್ಲಿ 2014ರಲ್ಲಿ ಪಾಕಿಸ್ತಾನದ ವಿರುದ್ಧ ಆಸ್ಚ್ರೇಲಿಯಾದ ಗ್ಲೇನ್ ಮ್ಯಾಕ್ಸ್‍ವೆಲ್ 18 ಎಸೆತಗಳಲ್ಲಿ ಸಿಡಿಸಿದ್ದ ಅರ್ಧಶತಕ 3ನೇ ಸ್ಥಾನದಲ್ಲಿದೆ. ಇಂದು ದುಬೈನಲ್ಲಿ ಸ್ಕಾಟ್ಲೆಂಡ್ ವಿರುದ್ಧ ಕೆಎಲ್ ರಾಹುಲ್ ಗಳಿಸಿದ 18 ಎಸೆತಗಳಲ್ಲಿ ಅರ್ಧಶತಕ ನಾಲ್ಕನೇ ಸ್ಥಾನದಲ್ಲಿದೆ.

  • Blogger Comments
  • Facebook Comments

0 comments:

Post a Comment

Item Reviewed: ಸ್ಕಾಟ್‍ಲೆಂಡ್ ತಂಡಕ್ಕೆ ಭರ್ಜರಿ ಸೋಲಿಣಿಸಿದ ಟೀಂ ಇಂಡಿಯಾ : ರನ್ ಧಾರಣೆಯಲ್ಲಿ ಕಿವೀಸ್, ಅಫಘಾನ್ ಮೀರಿಸಿ ಮುನ್ನಡೆದ ಕೊಹ್ಲಿ ಪಾಳಯ Rating: 5 Reviewed By: karavali Times
Scroll to Top