ಕೊನೆಗೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದು ಪಿಯುಸಿ ಅರ್ಧ ವಾರ್ಷಿಕ ಪರೀಕ್ಷೆ ಮುಂದೂಡಿದ ಪದವಿಪೂರ್ವ ಶಿಕ್ಷಣ ಇಲಾಖೆ  - Karavali Times ಕೊನೆಗೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದು ಪಿಯುಸಿ ಅರ್ಧ ವಾರ್ಷಿಕ ಪರೀಕ್ಷೆ ಮುಂದೂಡಿದ ಪದವಿಪೂರ್ವ ಶಿಕ್ಷಣ ಇಲಾಖೆ  - Karavali Times

728x90

18 November 2021

ಕೊನೆಗೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದು ಪಿಯುಸಿ ಅರ್ಧ ವಾರ್ಷಿಕ ಪರೀಕ್ಷೆ ಮುಂದೂಡಿದ ಪದವಿಪೂರ್ವ ಶಿಕ್ಷಣ ಇಲಾಖೆ 

 ಬೆಂಗಳೂರು, ನವೆಂಬರ್ 19, 2021 (ಕರಾವಳಿ ಟೈಮ್ಸ್) : ಕೊನೆಗೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಪದವಿಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಅರ್ಧ ವಾರ್ಷಿಕ ಪರೀಕ್ಷೆಗಳನ್ನು ಮುಂದೂಡಿದ್ದು, ಹೊಸ ದಿನಾಂಕ ಪ್ರಕಟಿಸಿದೆ. 

 ನವೆಂಬರ್ 29 ರಿಂದ ಡಿಸೆಂಬರ್ 30ರವರೆಗೆ ಪರೀಕ್ಷೆಗಳನ್ನು ನಡೆಸುವುದಾಗಿ ಈ ಹಿಂದೆ ನಿಗದಿಪಡಿಸಲಾಗಿತ್ತು. ಇದೀಗ ದಿನಾಂಕ ಬದಲಾಯಿಸಿದ ಇಲಾಖೆ ಡಿಸೆಂಬರ್ 9 ರಿಂದ 23ರವರೆಗೆ ಪರೀಕ್ಷೆಗಳು ನಡೆಯಲಿದ್ದು, ಉತ್ತರ ಪತ್ರಿಕೆಗಳ ಮೌಲ್ಯಮಾಪನವೂ ಕಾಲೇಜಿನ ಹಂತದಲ್ಲಿಯೇ ನಡೆಯಲಿದೆ ಎಂದು ತಿಳಿಸಿದೆ. 

 ನವೆಂಬರ್ 16ರಂದು ಪಿಯು ಕಾಲೇಜು ಶಿಕ್ಷಕರ ಸಂಘಟನೆಗಳ ಪ್ರತಿನಿಧಿಗಳು ಪಿಯು ಮಂಡಳಿ ನಿರ್ದೇಶಕರನ್ನು ಭೇಟಿಯಾಗಿದ್ದರು. ನವೆಂಬರ್ 17ರಂದು ವಿದ್ಯಾರ್ಥಿಗಳು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಮಂಡಳಿಯು ತನ್ನ ನಿರ್ಧಾರ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದರು.

 ಅರ್ಧವಾರ್ಷಿಕ ಪರೀಕ್ಷೆಯನ್ನು ಬೋರ್ಡ್ ಪರೀಕ್ಷೆಯಾಗಿ ನಡೆಸುವುದಾಗಿ ಪಿಯು ಮಂಡಳಿ ನಿರ್ದೇಶಕರು ನವೆಂಬರ್ 12ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ ತಿಳಿಸಿದ್ದರು. ಮಂಡಳಿಯೇ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲಿದ್ದು, ಜಿಲ್ಲಾಮಟ್ಟದಲ್ಲಿ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಮಂಡಳಿ ಹೇಳಿಕೊಂಡಿತ್ತು. ಮಂಡಳಿಯ ಈ ಕ್ರಮವನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವಿರೋಧಿಸಿದ್ದರು. 

 ಈ ಮೊದಲು ಅರ್ಧವಾರ್ಷಿಕ ಪರೀಕ್ಷೆಗಳನ್ನು ಕಾಲೇಜು ಹಂತದಲ್ಲಿಯೇ ನಡೆಸಲಾಗುತ್ತಿತ್ತು. ಕಾಲೇಜುಗಳಲ್ಲಿ ಮುಕ್ತಾಯವಾಗಿರುವ ಪಠ್ಯಕ್ರಮವನ್ನು ಗಮನಿಸಿ ಪ್ರಶ್ನೆ ಪತ್ರಿಕೆಗಳನ್ನು ರೂಪಿಸಲಾಗುತ್ತಿತ್ತು. ಆದರೆ ಈ ಬಾರಿ ಮಂಡಳಿ ಹೊಸ ಪರೀಕ್ಷಾ ಕ್ರಮವನ್ನು ಸಲಹೆ ಮಾಡಿ, ಪಠ್ಯಕ್ರಮದ ಅರ್ಧದಷ್ಟು ಪಾಠಗಳನ್ನು ಆಧರಿಸಿ ಪ್ರಶ್ನಪತ್ರಿಕೆ ರೂಪಿಸಲಾಗುವುದು ಎಂದು ಹೇಳಿತ್ತು. ಆದರೆ ಕಾಲೇಜುಗಳಲ್ಲಿ ಇಷ್ಟು ಪಾಠವೇ ಆಗಿಲ್ಲ ಎನ್ನುವುದು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಆಕ್ಷೇಪವಾಗಿತ್ತು.

 ಅರ್ಧವಾರ್ಷಿಕ ಪರೀಕ್ಷೆಯನ್ನು ಇಲಾಖೆಯಿಂದ ನಡೆಸುವ ನಿರ್ಧಾರಕ್ಕೆ ವಿದ್ಯಾರ್ಥಿಗಳಿಂದ ವಿರೋಧ ಹಾಗೂ ಈ ಸಂಬಂಧ ಕೆಲ ಅಂಶಗಳನ್ನು ಪುನರ್ ಪರಿಶೀಲಿಸುವಂತೆ ಪಿಯು ಉಪನ್ಯಾಸಕರು ಮತ್ತು ಪ್ರಾಂಶುಪಾಲರಿಂದ ಮನವಿ ಬಂದ ಹಿನ್ನೆಲೆಯಲ್ಲಿ ನಿರ್ದೇಶಕರು ಬುಧವಾರ ಪ್ರಾಂಶುಪಾಲರ ಸಂಘದ ಅಧ್ಯಕ್ಷರೂ ಆದ ಹಾಲಿ ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ, ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್. ನಿಂಗೇಗೌಡ, ಅನುದಾನಿತ ಶಾಲಾ ಕಾಲೇಜುಗಳ ಬೋಧಕ, ಬೋಧಕೇತರ ಸಿಬ್ಬಂದಿಗಳ ಸಂಘದ ಅಧ್ಯಕ್ಷ ಕರಬಸಪ್ಪ ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ನಿರ್ದೇಶಕರು ಮಲ್ಲೇಶ್ವರದ ಕಚೇರಿಯಲ್ಲಿ ಸಭೆ ನಡೆಸಿ ಅಭಿಪ್ರಾಯ ಪಡೆದರು. ದ್ವಿತೀಯ ಪಿಯು ಜತೆಗೆ ಪ್ರಥಮ ಪಿಯು ಅರ್ಧವಾರ್ಷಿಕ ಪರೀಕ್ಷೆಯನ್ನೂ ಒಂದೇ ಅವಧಿಯಲ್ಲಿ ನಡೆಸಲು ಸಲಹೆಗಳು ಬಂದಿದ್ದವು. ಉಪನ್ಯಾಸಕರ ಒತ್ತಾಯದಂತೆ ಜಿಲ್ಲೆ, ತಾಲ್ಲೂಕು ಕೇಂದ್ರಗಳ ಬದಲು ಆಯಾ ಕಾಲೇಜುಗಳಲ್ಲೇ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಅವಕಾಶ ಮಾಡಿಕೊಡಲು ಇಲಾಖೆ ಒಪ್ಪಿತ್ತು. 

ಸಭೆಯಲ್ಲಿ ಡಿ.13 ರಿಂದ 24ರವರೆಗೆ ಪರೀಕ್ಷೆ ನಡೆಸಲು ಚರ್ಚೆ ನಡೆಯಿತಾದರೂ, ಈ ಅವಧಿಯಲ್ಲಿ ಕೆಪಿಎಸ್ಸಿ ಪರೀಕ್ಷೆಗಳು ಇರುವುದರಿಂದ ಪರಿಶೀಲಿಸಬೇಕಾಗುತ್ತದೆ. ಗುರುವಾರ ಸಚಿವರೊಂದಿಗೆ ಸಭೆ ನಡೆಸಿ ಪರಿಷ್ಕೃತ ವೇಳಾಪಟ್ಟಿಸಿದ್ಧಪಡಿಸಿ ಪ್ರಕಟಿಸುವುದಾಗಿ £ರ್ದೇಶಕರು ಸಭೆಗೆ ತಿಳಿಸಿದ್ದರು.

 ಇದೀಗ ರಾಜ್ಯಾದ್ಯಂತ ನಿಯೋಜಿತ ಕೇಂದ್ರಗಳಲ್ಲೇ ಪರೀಕ್ಷೆ ನಡೆಯಲಿದ್ದು, ಕೋವಿಡ್ ನಡುವೆ ಪರೀಕ್ಷೆ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಸೂಚಿಸಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಕೊನೆಗೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದು ಪಿಯುಸಿ ಅರ್ಧ ವಾರ್ಷಿಕ ಪರೀಕ್ಷೆ ಮುಂದೂಡಿದ ಪದವಿಪೂರ್ವ ಶಿಕ್ಷಣ ಇಲಾಖೆ  Rating: 5 Reviewed By: karavali Times
Scroll to Top