ಸೌಹಾರ್ದ ಸಮ್ಮಿಲನವಾಗಿ, ನಾಡ ಹಬ್ಬವಾಗಿ ‘ಬಂಟ್ವಾಳ ಮೂಡೂರು-ಪಡೂರು ಕಂಬಳ’ : ರಮಾನಾಥ ರೈ - Karavali Times ಸೌಹಾರ್ದ ಸಮ್ಮಿಲನವಾಗಿ, ನಾಡ ಹಬ್ಬವಾಗಿ ‘ಬಂಟ್ವಾಳ ಮೂಡೂರು-ಪಡೂರು ಕಂಬಳ’ : ರಮಾನಾಥ ರೈ - Karavali Times

728x90

15 April 2022

ಸೌಹಾರ್ದ ಸಮ್ಮಿಲನವಾಗಿ, ನಾಡ ಹಬ್ಬವಾಗಿ ‘ಬಂಟ್ವಾಳ ಮೂಡೂರು-ಪಡೂರು ಕಂಬಳ’ : ರಮಾನಾಥ ರೈ

ಬಂಟ್ವಾಳ, ಎಪ್ರಿಲ್ 15, 2022 (ಕರಾವಳಿ ಟೈಮ್ಸ್) : ಎಪ್ರಿಲ್ 17 ರ ಭಾನುವಾರದಂದು ನಾವೂರು ಗ್ರಾಮದ ಕೂಡಿಬೈಲಿನಲ್ಲಿ ನಡೆಯುವ ಹನ್ನೊಂದನೇ ವರ್ಷದ ಮೂಡೂರು-ಪಡೂರು ಬಂಟ್ವಾಳ ಕಂಬಳವು ಸರ್ವಧರ್ಮೀಯ ಪ್ರತಿನಿಧಿಗಳ ಕೂಡುವಿಕೆಯಿಂದ ಸೌಹಾರ್ದ ಸಮ್ಮಿಲನವಾಗಿ ಹಾಗೂ ನಾಡಹಬ್ಬವಾಗಿ ವಿಶಿಷ್ಟವಾಗಿ ಆಯೋಜನೆಗೊಳ್ಳಲಿದೆ ಎಂದು ಕಂಬಳ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದ್ದಾರೆ. 

ಕಂಬಳ ಸಿದ್ದತೆಗಳು ಪೂರ್ಣಗೊಂಡ ಹಿನ್ನಲೆಯಲ್ಲಿ ಗುರುವಾರ ಬಿ ಸಿ ರೋಡಿನಲ್ಲಿ ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜಿಲ್ಲೆಯ ಇತಿಹಾಸದಲ್ಲೇ ಅತ್ಯಂತ ಕಡಿಮೆ ಅವಧಿಯಲ್ಲಿ ಕಂಬಳ ಕರೆ ನಿರ್ಮಾಣ ಮಾಡಿ ಕಂಬಳ ಆಯೋಜಿಸುವಂತದ್ದು ಇದೇ ಪ್ರಥಮ ಬಾರಿ ಆಗಿದ್ದು, ಬಂಟ್ವಾಳ ಕಂಬಳ ಈ ಬಾರಿ ಇತಿಹಾಸ ನಿರ್ಮಿಸಲಿದೆ ಎಂದರು. 

ನಾವೂರು ಕಂಬಳದ ಗದ್ದೆಯೇ ಒಂದು ರೀತಿಯ ವಿಶೇಷತೆಯಾಗಿದ್ದು, ಹರಿಪ್ರಸಾದ್ ಬೊಳ್ಳುಲ್ಲಾಯ, ಹಮೀದ್ ಪಾಂಗೋಡಿ, ಡೇನಿಯಲ್ ಪಾಯ್ಸ್ ಹಾಗೂ ಗಿಲ್ಬರ್ಟ್ ಪಾಯಸ್ ಎಂಬ ಮೂರೂ ಧರ್ಮಗಳನ್ನು ಪ್ರತಿನಿಧಿಸುವ ವ್ಯಕ್ತಿಗಳಿಗೆ ಸೇರಿದ್ದಾಗಿದ್ದು ಒಂದು ರೀತಿಯ ಸೌಹಾರ್ದತೆಯನ್ನು ಸಾರುವಂತಾಗಿದೆ ಎಂದ ರೈ ಕಂಬಳ ಸಭಾ ಕಾರ್ಯಕ್ರಮದಲ್ಲೂ ಎಲ್ಲಾ ವರ್ಗದ ಗೌರವಾನ್ವಿತರಿಗೂ ಸಾರ್ವಜನಿಕರಿಗೂ ಅವಕಾಶ ಕಲ್ಪಿಸಲಾಗಿದ್ದು, ಸೌಹಾರ್ದ ಸಮ್ಮಿಲನವಾಗಿ ಮೂಡಿ ಬರಲಿದೆ ಎಂದರು. 

ಪದ್ಮವಿಭೂಷಣ ರಾಜರ್ಷಿ, ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ಅವರ ಶುಭ ಆಶೀರ್ವಾದದೊಂದಿಗೆ ನಡೆಯುವ ಕಂಬಳವನ್ನು ಕರ್ನಾಟಕ ಆರ್ಯ ಈಡಿಗ ಮಹಾ ಸಂಸ್ಥಾನ ಸೊಲೂರು ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ, ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಅಲ್ಲಿಪಾದೆ ಸಂತ ಅಂತೋನಿ ಚರ್ಚ್ ಧರ್ಮಗುರು ಫೆಡ್ರಿಕ್ ಮೊಂತೆರೊ, ಕಾವಳಕಟ್ಟೆ ಹಝ್ರತ್ ಡಾ ಮೌಲಾನಾ ಫಾಝಿಲ್ ರಿಝ್ವಿ, ಸುಲ್ತಾನ್ ನಗರ ಬದ್ರಿಯಾ ಜುಮಾ ಮಸೀದಿ ಧರ್ಮಗುರು ಮೊಹಮ್ಮದ್ ನಾಸೀಹ್ ದಾರಿಮಿ ಅವರುಗಳು ಜಂಟಿಯಾಗಿ ಉದ್ಘಾಟಿಸುವರು ಎಂದವರು ತಿಳಿಸಿದರು.

ಈ ಸಂದರ್ಭ ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್, ಸಂಚಾಲಕ ಬಿ ಪದ್ಮಶೇಖರ್ ಜೈನ್, ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪ್ರದಾನ ಕಾರ್ಯದರ್ಶಿ ಎಡ್ತೂರು ರಾಜೀವ ಶೆಟ್ಟಿ, ಉಪಾಧ್ಯಕ್ಷರುಗಳಾದ ಮಾಯಿಲಪ್ಪ ಸಾಲಿಯಾನ್, ಸುದರ್ಶನ್ ಜೈನ್, ಅವಿಲ್ ಮಿನೇಜಸ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಕಂಬಳ ಆಯೋಜನೆಯ ಪ್ರಮುಖ ಪಾತ್ರಧಾರಿಗಳಾದ ಶಬೀರ್ ಸಿದ್ದಕಟ್ಟೆ, ಡೆಂಝಿಲ್ ನೊರೊನ್ಹಾ ಅಲ್ಲಿಪಾದೆ ಮೊದಲಾದವರು ಜೊತೆಗಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಸೌಹಾರ್ದ ಸಮ್ಮಿಲನವಾಗಿ, ನಾಡ ಹಬ್ಬವಾಗಿ ‘ಬಂಟ್ವಾಳ ಮೂಡೂರು-ಪಡೂರು ಕಂಬಳ’ : ರಮಾನಾಥ ರೈ Rating: 5 Reviewed By: karavali Times
Scroll to Top