ಮತೀಯವಾದ, ಕೋಮುವಾದ, ಓಟ್ ಬ್ಯಾಂಕ್ ಹಗ್ಗ-ಜಗ್ಗಾಟದ ಮುಂದೆ ಜನರ ಆರೋಗ್ಯ, ಜೀವಕ್ಕೆ ಬೆಲೆ ಇಲ್ಲದಾಯಿತೇ? - Karavali Times ಮತೀಯವಾದ, ಕೋಮುವಾದ, ಓಟ್ ಬ್ಯಾಂಕ್ ಹಗ್ಗ-ಜಗ್ಗಾಟದ ಮುಂದೆ ಜನರ ಆರೋಗ್ಯ, ಜೀವಕ್ಕೆ ಬೆಲೆ ಇಲ್ಲದಾಯಿತೇ? - Karavali Times

728x90

12 June 2022

ಮತೀಯವಾದ, ಕೋಮುವಾದ, ಓಟ್ ಬ್ಯಾಂಕ್ ಹಗ್ಗ-ಜಗ್ಗಾಟದ ಮುಂದೆ ಜನರ ಆರೋಗ್ಯ, ಜೀವಕ್ಕೆ ಬೆಲೆ ಇಲ್ಲದಾಯಿತೇ?

ಕೊರೋನಾ ನಿಯಂತ್ರಣಕ್ಕೆ ಮುನ್ನವೇ ಡೆಂಗ್ಯೂ ಡಂಗುರ, ಮುಂಜಾಗ್ರತೆ ಕೈಗೊಳ್ಳಬೇಕಾದ ಆಡಳಿತಗಳು ಜೀವ ಹಾನಿ ಬಳಿಕ ಎಚ್ಚೆತ್ತುಕೊಳ್ಳುತ್ತಿವೆ!






ಬಂಟ್ವಾಳ, ಜೂನ್ 12, 2022 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಶಂಕಿತ ಡೆಂಗ್ಯೂ ಜ್ವರಕ್ಕೆ ಈಗಾಗಲೇ ತಾಲೂಕಿನಲ್ಲಿ ಓರ್ವ ಯುವಕ ಬಲಿಯಾಗಿದ್ದಾನೆ. ಇದುವರೆಗೆ ಬಂಟ್ವಾಳ ತಾಲೂಕಿನಲ್ಲಿ 17 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ ಎಂದು ಡಾ ನವೀನ್ ಚಂದ್ರ ಮಾಹಿತಿ ನೀಡಿದ್ದಾರೆ. 

ಮುಂಗಾರು ಪೂರ್ವದಲ್ಲಿ ಸಹಜವಾಗಿ ಮಾಡಬೇಕಾದ ಸ್ವಚ್ಛತೆ ಹಾಗೂ ತ್ಯಾಜ್ಯ ವಿಲೇವಾರಿ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳದ ಪರಿಣಾಮವಾಗಿ ಈ ರೀತಿಯ ಮಾರಕ ಕಾಯಿಲೆಗಳು ಉಲ್ಬಣಗೊಳ್ಳಲು ಕಾರಣವಾಗಿದೆ ಎನ್ನಲಾಗುತ್ತಿದೆ. ಪುರಸಭೆ, ಪಂಚಾಯತ್ ಆಡಳಿತಗಳು ಹಾಗೂ ಆರೋಗ್ಯ ಇಲಾಖೆ ನಾಡಿನ ತ್ಯಾಜ್ಯ ನಿರ್ವಹಣೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಬಗ್ಗೆ ಯಾವುದೇ ಕಠಿಣ ನಿರ್ಧಾರಕ್ಕೆ ಬರಲು ವಿಫಲವಾಗಿರುವುದೇ ಸಾಂಕ್ರಾಮಿಕ ರೋಗಗಳ ಬಗ್ಗೆ ತಾತ್ಸಾರ ಉಂಟಾಗಲು ಕಾರಣ ಎಂಬುದು ಜನಜನಿತ. ಇಲಾಖೆಗಳು ಕ್ರಮ ಕೈಗೊಳ್ಳದ ಹೊರತು ಜನ ಜಾಗೃತಿ ಮೂಡಲು ಕಷ್ಟ ಸಾಧ್ಯವಾಗಿದ್ದು, ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಸಾಂಕ್ರಾಮಿಕ ರೋಗಗಳ ಬಗ್ಗೆ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ. 

ಕೊರೋನಾದಂತಹ ಮಾರಕ ವೈರಸ್ ಬಂದು ವಿಶ್ವವನ್ನೇ ಸ್ಥಬ್ಧಗೊಳಿಸಿದ್ದರೂ ಇನ್ನೂ ಕೂಡಾ ಆರೋಗ್ಯ ಸಂಬಂಧಿ ಕ್ರಮಕ್ಕೆ ಸರಕಾರಗಳು ಮುಂದಾಗದೆ ಇರುವುದು ಅವಾಂತರಕ್ಕೆ ಕಾರಣವಾಗುತ್ತಿದೆ ಎನ್ನಲಾಗುತ್ತಿದೆ. ಮುಂಗಾರು ಪೂರ್ವದಲ್ಲಿ ಸಹಜವಾಗಿ ಸ್ಥಳೀಯಾಡಳಿತ ಹಾಗೂ ಜಿಲ್ಲಾಡಳಿತಗಳು ಚರಂಡಿ ಹೂಳೆತ್ತುವಿಕೆ, ಸಾರ್ವಜನಿಕ ಸ್ಥಳಗಳ ಶುಚೀಕರಣ, ಸಾರ್ವಜನಿಕ ಸರಕಾರಿ ಕಚೇರಿ ಸುತ್ತಮುತ್ತಲ ಪ್ರದೇಶಗಳ ಸ್ವಚ್ಛತೆ ಬಗ್ಗೆ ಕ್ರಮ ಕೈಗೊಳ್ಳುವುದು ವಾಡಿಕೆಯಾಗಿದೆ. ಆದರೆ ಕೊರೋನಾ ಲಾಕ್ ಡೌನ್ ಬಳಿಕ ಇದ್ಯಾವುದಕ್ಕೂ ಗಮನ ಕೊಡುವ ಕೆಲಸ ನಡೆಯದೆ ಇರುವ ಪರಿಣಾಮ ಇಂತಹ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. 

ಕೇವಲ ರಾಜಕೀಯ, ಮತೀಯವಾದ, ಕೋಮುವಾದ, ಓಟ್ ಬ್ಯಾಂಕ್ ಹಗ್ಗ-ಜಗ್ಗಾಟದ ಮುಂದೆ ಜನರ ಆರೋಗ್ಯಕ್ಕೆ ಹಾಗೂ ಜೀವಕ್ಕೆ ಬೆಲೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. 

ಈಗಾಗಲೇ ಬಂಟ್ವಾಳ ತಾಲೂಕಿನಲ್ಲಿ ಶಂಕಿತ ಡೆಂಗ್ಯೂ ಪ್ರಕರಣಕ್ಕೆ ಜೂ 9ರಂದು ವರ್ಷದ ಮೊದಲ ಬಲಿ ಪಡೆದಿದ್ದು, ವಾಮದಪದವು ನಿವಾಸಿ ಕೃಷಿಕ, ಗ್ರಾಮ ಪಂಚಾಯತ್ ಸದಸ್ಯೆ ಪುಷ್ಪಾವತಿ ಅವರ ಪುತ್ರ ಸಂದೀಪ್ ಪೂಜಾರಿ (31) ಶಂಕಿತ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾನೆ, ಇತ್ತೀಗಷ್ಟೆ ವಿವಾಹವಾಗಿರುವ ಮೃತ ಯುವಕ ಒಂದು ವರ್ಷದ ಮಗು, ಪತ್ನಿಯನ್ನು ಅನಾಥವಾಗಿಸಿ ಇಹಲೋಕ ತ್ಯಜಿಸಿದ್ದಾರೆ. 

ಡೆಂಗ್ಯೂ ಜ್ವರಕ್ಕೆ ಮೊದಲ ಬಲಿಯಾದ ಬಳಿಕ ಎಚ್ಚೆತ್ತುಕೊಂಡಿರುವ ಆಡಳಿತ ಇದೀಗ ತಾಲೂಕಿನ ಆಯಕಟ್ಟಿನ ಪ್ರದೇಶಗಳಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಫಾಗಿಂಗ್ ನಡೆಸುವ ಕಾರ್ಯ ನಡೆಸುತ್ತಿದೆ. ಚರಂಡಿ ಹೂಳೆತ್ತುವಿಕೆ, ಕಳೆ ಗಿಡಗಳ ನಿಭಾವಣೆ ಮೊದಲಾದ ಮುಂಗಾರು ಪೂರ್ವದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಇದೀಗ ನಡೆಸುತ್ತಿರುವುದು ಕಂಡು ಬರುತ್ತಿದೆ. ಕೋಟೆ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ಎಂಬ ಗಾದೆ ಮಾತಿನಂತೆ ಸ್ಥಳೀಯಾಡಳಿತಗಳದ್ದಾಗಿದೆ. 

ಕೋಮುವಾದ-ಮತೀಯವಾದಕ್ಕೆ ಬಲಿಯಾಗುವ ಅಮಾಯಕರ ಸಾವಿನಲ್ಲೂ ರಾಜಕೀಯ ಬೇಳೆ ಬೇಯಿಸುವ ಪ್ರಯತ್ನ ನಡೆಸುವ ರಾಜಕೀಯ ಪಕ್ಷಗಳು, ಮತೀಯವಾದಿ ಸಂಘಟನೆಗಳು ಬಂಟ್ವಾಳದಲ್ಲಿ ಶಂಕಿತ ಡೆಂಗ್ಯೂ ಜ್ವರಕ್ಕೆ ಬಲಿಯಾದ ಹದಿ ಹರೆಯದ, ನವವಿವಾಹಿತ ಯುವಕನ ಅಕಾಲಿಕ ಮರಣದ ಬಗ್ಗೆ ಯಾವುದೇ ಮರುಕವಾಗಲೀ, ಕಾರುಣ್ಯವಾಗಲೀ ಪ್ರದರ್ಶಿಸದೆ ಇರುವುದು ವಿಪರ್ಯಾಸ. ಅದೂ ಕೂಡಾ ಗ್ರಾಮ ಪಂಚಾಯತ್ ಸದಸ್ಯೆಯೋರ್ವರ ಪುತ್ರನಾಗಿದ್ದು, ಹಲವು ಸಂಘ-ಸಂಸ್ಥೆಗಳಲ್ಲಿ ಗುರುತಿಸಿ ತನ್ನ ಜೀವನದ ಬಹುಪಾಲು ಸಮಯವನ್ನು ಸಮಾಜಕ್ಕಾಗಿ ಮೀಸಲಿಟ್ಟ ಸಮಾಜ ಜೀವಿಯ ಬಗ್ಗೆ ಮರುಕಪಡಲು ಜನ ಇಲ್ಲದಾಯಿತೇ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಯದಲ್ಲಿ ಮೂಡಿ ಬರುತ್ತಿದೆ. ಅದೂ ಕೂಡಾ ನವವಿವಾಹಿತನಾಗಿ ಪತ್ನಿ ಹಾಗೂ ಹಸುಗೂಸನ್ನು ತಬ್ಬಲಿಯಾಗಿಸಿ ಆಡಳಿತದ ಅವ್ಯವಸ್ಥೆಗೆ ಬಲಿಯಾದರೂ ಕನಿಷ್ಠ ಸಂತಾಪ ಸೂಚಿಸುವ ಮನಸ್ಸುಗಳೇ ಇಲ್ಲದಾಗಿದೆ ಎನ್ನುವಾಗಿಂತಹ ಶಂಕಿತ ಸಾಂಕ್ರಾಮಿಕ ರೋಗಗಳಿಗೆ ಇನ್ನಷ್ಟು ಬಲಿಯಾಗಲಿ ಎನ್ನುವ ಕಾಯುವಿಕೆಯೇ ಅಥವಾ ಜನರ ಜೀವಕ್ಕೆ  ಅತ್ಯಮೂಲ್ಯ ಬೆಲೆ ಕಲ್ಪಿಸುವ ಮನೋವೈಶಾಲ್ಯತೆಯೂ ಇಲ್ಲದಾಯಿತೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುವುದಂತೂ ಸಹಜವಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮತೀಯವಾದ, ಕೋಮುವಾದ, ಓಟ್ ಬ್ಯಾಂಕ್ ಹಗ್ಗ-ಜಗ್ಗಾಟದ ಮುಂದೆ ಜನರ ಆರೋಗ್ಯ, ಜೀವಕ್ಕೆ ಬೆಲೆ ಇಲ್ಲದಾಯಿತೇ? Rating: 5 Reviewed By: karavali Times
Scroll to Top