ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಬಂಟ್ವಾಳ ನೇತ್ರಾವತಿ : ತಗ್ಗು ಪ್ರದೇಶದ ನಿವಾಸಿಗಳಿಗೆ ಆತಂಕ - Karavali Times ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಬಂಟ್ವಾಳ ನೇತ್ರಾವತಿ : ತಗ್ಗು ಪ್ರದೇಶದ ನಿವಾಸಿಗಳಿಗೆ ಆತಂಕ - Karavali Times

728x90

10 July 2022

ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಬಂಟ್ವಾಳ ನೇತ್ರಾವತಿ : ತಗ್ಗು ಪ್ರದೇಶದ ನಿವಾಸಿಗಳಿಗೆ ಆತಂಕ

 ಬಂಟ್ವಾಳ, ಜುಲೈ 10, 2022 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಕಳೆದೊಂದು ವಾರದಿಂದ ಭಾರೀ ಮಳೆ ಮುಂದುವರಿದಿದ್ದು, ಜೀವನದಿ ನೇತ್ರಾವತಿ ಮೈತುಂಬಿ ಹರಿಯುತ್ತಿದೆ. ಭಾನುವಾರ ಬೆಳಿಗ್ಗೆಯಿಂದಲೇ ನದಿ ನೀರಿನ ಮಟ್ಟದಲ್ಲಿ ನಿರಂತರ ಏರಿಕೆ ಕಂಡುಬರುತ್ತಿದ್ದು, ಅಪಾಯದ ಮಟ್ಟ ಮೀರಿ ಅಂದರೆ 8.5 ಮೀಟರ್ ಮೀರಿ ಹರಿಯುತ್ತಿದೆ. 

 ನದಿ ತೀರದ ತಗ್ಗು ಪ್ರದೇಶಗಳಿಗೆ ನೆರೆ ನೀರು ನುಗ್ಗಿದ್ದು, ಪಾಣೆಮಂಗಳೂರು, ಆಲಡ್ಕ, ಬೋಗೋಡಿ, ಗುಡ್ಡೆಅಂಗಡಿ, ನಂದಾವರ, ಗೂಡಿನಬಳಿ, ಬಂಟ್ವಾಳ, ಕೆಳಗಿಪೇಟೆ, ಬಡ್ಡಕಟ್ಟೆ, ನಾವೂರು, ಮೈಂದಾಳ, ಸರಪಾಡಿ, ಅಜಿಲಮೊಗರು ಮೊದಲಾದ ಪ್ರದೇಶಗಳ ತಗ್ಗು ಪ್ರದೇಶಗಳ ಮನೆ-ಅಂಗಡಿಗಳತ್ತ ನೀರು ಆವರಿಸಿದ್ದು ಪರಿಸರವಾಸಿಗಳು ಶನಿವಾರ ರಾತ್ರಿಯೇ ತಾಲೂಕಾಡಳಿತ ಹಾಗೂ ಕಂದಾಯ ಅಧಿಕಾರಿಗಳ ಸೂಚನೆಯಂತೆ ಅಪಾಯ ಅರಿತು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ. 

 ಭಾನುವಾರ ಬಕ್ರೀದ್ ಹಬ್ಬದ ಹಿನ್ನಲೆಯಲ್ಲಿ ಮುಸ್ಲಿಂ‌ ಕುಟುಂಬಗಳು ತೊಂದರೆ ಅನುಭವಿಸಿದರೂ ಸುರಕ್ಷತೆಯ ಕಡೆಗೆ ಗಮನ ನೀಡಿದ್ದಾರೆ. ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಕೆಲ ತಗ್ಗು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜನರ ಸುರಕ್ಷತೆಗೆ ಗಮನ‌ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

 ಪುರಸಭಾ ವ್ಯಾಪ್ತಿಯ 24ನೇ ವಾರ್ಡಿನ ಬಹುತೇಕ ಪ್ರದೇಶಗಳು ನೆರೆ ನೀರು ಆವರಿಸಲಾರಂಭಿಸಿದ್ದು, ಸ್ಥಳೀಯ ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್ ಅವರು ಬಕ್ರೀದ್ ಹಬ್ಬದ ನಿಬಿಡತೆಯ ನಡುವೆಯೂ ವಾರ್ಡಿನ ಪೂರ್ಣ ಪ್ರದೇಶಗಳಲ್ಲಿ ಸಂಚಾರ ನಡೆಸಿ ತಗ್ಗು ಪ್ರದೇಶವಾಸಿಗಳ ಹಾಗೂ ಅಧಿಕಾರಿಗಳ ನಡುವೆ ಸಂಪರ್ಕ ಸಾಧಿಸಿ ಸುರಕ್ಷತೆಗೆ ಒತ್ತು ನೀಡಿದ್ದಾರೆ.

 ಭಾನುವಾರ ಮಧ್ಯಾಹ್ನದ ಬಳಿಕ ಮಳೆ ಕಡಿಮೆಯಾಗಿದ್ದು, ನದಿ ನೀರಿನ ಹರಿವಿನಲ್ಲೂ ಕೊಂಚ ಇಳಿಮುಖ ಕಂಡುಬಂದಿದೆ. ಆದರೂ ತಗ್ಗು ಪ್ರದೇಶದ ಜನರ ಆತಂಕ ಇನ್ನೂ ದೂರವಾಗಿಲ್ಲ. ತಾಲೂಕಾಡಳಿತ ಹಾಗೂ ಕಂದಾಯ ಅಧಿಕಾರಿಗಳು ಜಿಲ್ಲಾಡಳಿತ ಸೂಚನೆಯಂತೆ ಕಟ್ಟೆಚ್ಚರ ಪಾಲಿಸುತ್ತಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಬಂಟ್ವಾಳ ನೇತ್ರಾವತಿ : ತಗ್ಗು ಪ್ರದೇಶದ ನಿವಾಸಿಗಳಿಗೆ ಆತಂಕ Rating: 5 Reviewed By: karavali Times
Scroll to Top