ನಾಳೆಯಿಂದ (ಜುಲೈ 18) ಹಲವು ಅಗತ್ಯ ವಸ್ತು, ಸೇವೆಗಳು ಮತ್ತಷ್ಟು ದುಬಾರಿ : ಕೇಂದ್ರ ಸರಕಾರದ ಜಿ.ಎಸ್.ಟಿ. ವಿಧಿಸುವ ನಿರ್ಧಾರಕ್ಕೆ ವ್ಯಾಪಕರ ಆಕ್ರೋಶ, ಸರಕಾರದ ವಿರುದ್ದ ಸಿದ್ದು ಗರಂ - Karavali Times ನಾಳೆಯಿಂದ (ಜುಲೈ 18) ಹಲವು ಅಗತ್ಯ ವಸ್ತು, ಸೇವೆಗಳು ಮತ್ತಷ್ಟು ದುಬಾರಿ : ಕೇಂದ್ರ ಸರಕಾರದ ಜಿ.ಎಸ್.ಟಿ. ವಿಧಿಸುವ ನಿರ್ಧಾರಕ್ಕೆ ವ್ಯಾಪಕರ ಆಕ್ರೋಶ, ಸರಕಾರದ ವಿರುದ್ದ ಸಿದ್ದು ಗರಂ - Karavali Times

728x90

17 July 2022

ನಾಳೆಯಿಂದ (ಜುಲೈ 18) ಹಲವು ಅಗತ್ಯ ವಸ್ತು, ಸೇವೆಗಳು ಮತ್ತಷ್ಟು ದುಬಾರಿ : ಕೇಂದ್ರ ಸರಕಾರದ ಜಿ.ಎಸ್.ಟಿ. ವಿಧಿಸುವ ನಿರ್ಧಾರಕ್ಕೆ ವ್ಯಾಪಕರ ಆಕ್ರೋಶ, ಸರಕಾರದ ವಿರುದ್ದ ಸಿದ್ದು ಗರಂ

ಬೆಂಗಳೂರು, ಜುಲೈ 17, 2022 (ಕರಾವಳಿ ಟೈಮ್ಸ್) : ದಿನಬಳಕೆಯ ವಿವಿಧ ವಸ್ತುಗಳು ಮತ್ತು ಹಲವು ಸೇವೆಗಳ ಮೇಲಿನ ಜಿಎಸ್‍ಟಿ ತೆರಿಗೆ ದರ ಹೆಚ್ಚಿಸುವ ಬಗ್ಗೆ ಜಿಎಸ್‍ಟಿ ಮಂಡಳಿಯ ಸಭೆಯಲ್ಲಿ ನಿರ್ಧರಿಸಿದಂತೆ ಇವುಗಳ ಮೇಲಿನ ಜಿಎಸ್‍ಟಿ ಜುಲೈ 18 ರ ಸೋಮವಾರದಿಂದಲೇ (ನಾಳೆಯಿಂದ) ಜಾರಿಗೆ ಬರಲಿದೆ. 

ಜಿಎಸ್‍ಟಿ ಮಂಡಳಿಯ ಈ ನಿರ್ಧಾರದಿಂದ ಜನಸಾಮಾನ್ಯರು ಮತ್ತೊಮ್ಮೆ ಬೆಲೆ ಏರಿಕೆಯ ಬಿಸಿ ಅನುಭವಿಸುವಂತಾಗಿದೆ. ಪ್ಯಾಕ್ ಮಾಡಿದ ಮೀನು, ಮಾಂಸ, ಮೊಸರು, ಪನ್ನೀರ್, ಜೇನು ತುಪ್ಪ, ಬೆಲ್ಲ, ಒಣಗಿಸಿದ ತರಕಾರಿ, ಗೋಧಿ, ಇತರೆ ಧಾನ್ಯಗಳು, ಮಂಡಕ್ಕಿ, ಸಾವಯವ ಗೊಬ್ಬರ, ಕೋಕೋಪೀಟ್‍ಗೆ ಜುಲೈ 18 ರಿಂದ ಐದು ಶೇಕಡಾ ತೆರಿಗೆ ಜಾರಿಯಾಗಲಿದೆ. 

ಜೊತೆಗೆ ನಿತ್ಯದ ಬಾಡಿಗೆ 1000 ರೂಪಾಯಿಗಿಂತ ಕಡಿಮೆ ಇರುವ ಹೋಟೆಲ್ ಕೊಠಡಿಗಳಿಗೆ ಇದ್ದ ವಿನಾಯ್ತಿ ರದ್ದಾಗಲಿದ್ದು, ಶೇ. 12ರಷ್ಟು ತೆರಿಗೆ ಬೀಳಲಿದೆ. ಪ್ರತಿದಿನಕ್ಕೆ 5 ಸಾವಿರ ರೂಪಾಯಿಗಿಂತ ಹೆಚ್ಚಿನ ಶುಲ್ಕ ಇರುವ ಐಸಿಯು ಹೊರತುಪಡಿಸಿದ ಆಸ್ಪತ್ರೆ ಕೊಠಡಿಗಳ ಬಿಲ್ ಗೂ ಕೂಡಾ 5 ಶೇಕಡಾ ಜಿಎಸ್‍ಟಿ ಜಾರಿಯಾಗಲಿದೆ. ಇದರಿಂದಾಗಿ ಇನ್ನು ಮುಂದೆ ಆರೋಗ್ಯ ಸೇವೆಗಳಲ್ಲೂ ಸಾರ್ವಜನಿಕರು ದುಬಾರಿತ್ವ ಅನುಭವಿಸಬೇಕಾಗಿದೆ. ಕೇಂದ್ರ ಸರಕಾರದ ಈ ಜಿಎಸ್‍ಟಿ ವಿಧಿಸುವ ನಿರ್ಧಾರಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ವಿರೋಧ ಕೇಳಿ ಬಂದಿದೆ. ಜನ ಸಾಮಾನ್ಯರ ಕಷ್ಟ ಕೇಂದ್ರ ಸರಕಾರ ಅರಿತುಕೊಳ್ಳುವುದಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಜೆಎಸ್‍ಟಿ ಮಂಡಳಿಯ ನೂತನ ನಿರ್ಧಾರದಂತೆ ಪ್ಯಾಕ್ ಮಾಡಿದ ಮೀನು, ಮಾಂಸ, ಮೊಸರು, ಪನ್ನೀರ್, ಜೇನುತುಪ್ಪ, ಬೆಲ್ಲ, ಒಣಗಿಸಿದ ತರಕಾರಿ, ಗೋಧಿ, ಇತರೆ ಧಾನ್ಯಗಳು, ಮಂಡಕ್ಕಿ, ಸಾವಯವ ಗೊಬ್ಬರ, ಕೋಕೋಪೀಟ್. ಪ್ಯಾಕ್ ಮಾಡಿದ ಬ್ರ್ಯಾಂಡೆಡ್ ಭೂಪಟ, ಚಾರ್ಚ್, ಅಟ್ಲಾಸ್, ಸೋಲಾರ್ ವಾಟರ್ ಹೀಟರ್, ಮುದ್ರಣ, ಬರಹ/ ಚಿತ್ರಕಲೆಯ ಇಂಕ್, ಎಲ್‍ಇಡಿ ಬಲ್ಬ್, ಎಲ್‍ಇಡಿ ಲ್ಯಾಂಪ್, ಚರ್ಮದ ಸಿದ್ಧ ಉತ್ಪನ್ನಗಳು, ಟೈಲರಿಂಗ್, ಜವಳಿ ಸೇವೆಗಳು, ಅಂಚೆ ಇಲಾಖೆ ಬುಕ್ ಪೆÇೀಸ್ಟ್, 10 ಗ್ರಾಂಗಿಂತ ಕಡಿಮೆ ಇರುವ ಲಕೋಟೆ, ಚೆಕ್‍ಬುಕ್, ಪ್ರತಿದಿನ 1 ಸಾವಿರ ರೂಪಾಯಿಗಿಂತ ಕಡಿಮೆ ಬಾಡಿಗೆ ಇರುವ ಹೋಟೆಲ್ ಕೊಠಡಿಗಳಿಗೂ ಇನ್ನು ಶೇ. 12ರಷ್ಟು ತೆರಿಗೆ ಜಾರಿ. ಪ್ರತಿದಿನ 5 ಸಾವಿರ ರೂಪಾಯಿಗಿಂತ ಹೆಚ್ಚಿನ ಶುಲ್ಕ ಇರುವ ಐಸಿಯು ಹೊರತುಪಡಿಸಿದ ಆಸ್ಪತ್ರೆ ಕೊಠಡಿಗಳ ಬಿಲ್‍ಗೆ ಶೇ. 5ರಷ್ಟು ಜಿಎಸ್‍ಟಿ ಅನ್ವಯವಾಗಲಿದೆ. 

ಪ್ರತಿದಿನ 5 ಸಾವಿರ ರೂಪಾಯಿಗಿಂತ ಹೆಚ್ಚಿನ ಬಾಡಿಗೆ ವಿಧಿಸುವ ಸಾರ್ವಜನಿಕ ಧಾರ್ಮಿಕ ಕೇಂದ್ರಗಳು, ಮಾಸಿಕ ಎರಡೂವರೆ ಸಾವಿರ ರೂಪಾಯಿಗಿಂತ ಹೆಚ್ಚಿನ ಬಾಡಿಗೆ ಇರುವ ವಾಣಿಜ್ಯ ಮಳಿಗೆಗಳಿಗೂ ಜಿಎಸ್‍ಟಿ ಜಾರಿಯಾಗಲಿದೆ. ವಸತಿ ಉದ್ದೇಶಕ್ಕಾಗಿ ಉದ್ಯಮ ಸಂಸ್ಥೆಗಳು ತಮ್ಮ ವಸತಿ ಕಟ್ಟಡಗಳನ್ನು ಬಾಡಿಗೆಗೆ ನೀಡಿದ್ದರೆ ಅದಕ್ಕೆ ಈವರೆಗೆ ಇದ್ದ ವಿನಾಯಿತಿ ರದ್ದಾಗಲಿದ್ದು, ಬ್ಲಡ್ ಬ್ಯಾಂಕ್‍ಗಳಿಗೆ ನೀಡಲಾಗಿದ್ದ ತೆರಿಗೆ ವಿನಾಯ್ತಿಯೂ ರದ್ದಾಗಲಿದೆ. 

ಈ ಮಧ್ಯೆ ಕೇಂದ್ರ ಸರಕಾರದ 5 ಶೇಕಡಾ ಜೆಎಸ್‍ಟಿ ವಿಧಿಸುವ ಕ್ರಮಕ್ಕೆ ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮಂಡಕ್ಕಿ ಉತ್ಪಾದನೆ ಮೇಲೂ ಶೇ.5 ರಷ್ಟು ಜಿಎಸ್‍ಟಿ ವಿಧಿಸುತ್ತಿರುವುದು ಕ್ರೌರ್ಯದ ಪರಮಾವಧಿ ಎಂದಿದ್ದಾರೆ. ಕೇಂದ್ರ ಸರಕಾರ ತಕ್ಷಣ ಮಂಡಕ್ಕಿ ಮತ್ತಿತರ ಬಡವರ ಆಹಾರ ಉತ್ಪಾದನೆ ಮೇಲಿನ ಜಿಎಸ್‍ಟಿಯನ್ನು ರದ್ದುಗೊಳಿಸಬೇಕು. ಈ ಬಗ್ಗೆ ರಾಜ್ಯ ಸರಕಾರ ಒತ್ತಡ ಹೇರಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ಬಡವರ ಅನ್ನದ ತಟ್ಟೆಗೆ ಕೈ ಹಾಕಿ ತುತ್ತು ಅನ್ನವನ್ನೂ ಕಿತ್ತುಕೊಳ್ಳುವುದು ಅಮಾನವೀಯ. ಕೂಡಲೇ ಬಡವರ ಆಹಾರ ಉತ್ಪಾದನೆ ಮೇಲಿನ ಜಿಎಸ್‍ಟಿ ರದ್ದುಗೊಳಿಸಲು ಕೇಂದ್ರ ಸರಕಾರವನ್ನು ಒತ್ತಾಯಿಸುವಂತೆ ಅವರು ಆಗ್ರಹಿಸಿದ್ದಾರೆ.

‘ಕೇಂದ್ರ ಸರಕಾರದ ತಲೆಕೆಳಗಾದ ಆರ್ಥಿಕ ನೀತಿಗಳಿಂದ ದೇಶದ ದುಡಿಯುವ ವರ್ಗ ಈಗಾಗಲೇ ಹೈರಾಣಾಗಿದೆ. ಇದೀಗ ಬಡವರ ಆಹಾರ ಉತ್ಪಾದನೆ ಮೇಲೂ ಶೇ.5 ರಷ್ಟು ಜಿಎಸ್‍ಟಿ ವಿಧಿಸಿರುವುದು ಕ್ರೌರ್ಯದ ಪರಮಾವಧಿ. ಮಂಡಕ್ಕಿ ಭಟ್ಟಿಯಲ್ಲಿ ದುಡಿಯುವ ಕೂಲಿ ಕಾರ್ಮಿಕರಿಗೆ ಎರಡು ಹೊತ್ತಿನ ಊಟಕ್ಕೆ ಆಗುವಷ್ಟೂ ಗಳಿಕೆ ಇರುವುದಿಲ್ಲ. ಇಂತಹ ಸಾಮಾನ್ಯ ಜ್ಞಾನವೂ ಇಲ್ಲದೆ ಜನತೆಯನ್ನು ಶತ್ರುಗಳಂತೆ ಭಾವಿಸಿ ಡಬಲ್ ಎಂಜಿನ್ ಸರಕಾರಗಳು ನಿರ್ಧಾರ ಕೈಗೊಳ್ಳುತ್ತಿವೆ’ ಎಂದು ಸಿದ್ದು ಕಿಡಿ ಕಾರಿದ್ದಾರೆ.

ಮಂಡಕ್ಕಿ ಉತ್ಪಾದನೆಗೆ ತಗಲುವ ವೆಚ್ಚ, ಮಾರಾಟ ವೆಚ್ಚಕ್ಕಿಂತ ಹೆಚ್ಚಾಗಿದೆ. ಮಳೆಗಾಲದಲ್ಲಿ ಮಂಡಕ್ಕಿ ಉತ್ಪಾದನೆಗೆ ಹಲವು ತೊಂದರೆಗಳಿವೆ. ಅಕ್ಕಿ ಒಣಗಿರುವುದಿಲ್ಲ, ಭತ್ತದ ಬೆಲೆ ಗಗನಕ್ಕೆ ಏರಿರುತ್ತದೆ. ಮಾರಾಟವೂ ಕುಸಿದಿರುತ್ತದೆ. ಮಳೆಗಾಲದಲ್ಲಿ ಅಕ್ಕಿ ನೆನೆದರೆ ಮಂಡಕ್ಕಿ ಭಟ್ಟಿಗಳನ್ನು ವಾರಗಟ್ಟಲೆ ಮುಚ್ಚಬೇಕಾಗುತ್ತದೆ. ಭಟ್ಟಿ ಮುಚ್ಚಿದರೆ ಮಂಡಕ್ಕಿ ಕಾರ್ಮಿಕರಿಗೆ ಬೇರೆ ಕಡೆ ಕೂಲಿ ಕೆಲಸವೂ ಸಿಗುವುದಿಲ್ಲ. ಒಂದು ಹೊತ್ತಿನ ಊಟಕ್ಕೂ ಕೂಲಿ ಕಾರ್ಮಿಕರು ಪರದಾಡಬೇಕಾಗುತ್ತದೆ. ಇದು ಸರ್ಕಾರಕ್ಕೆ ಅರಿವಿದೆಯೇ ಎಂದವರು ಪ್ರಶ್ನಿಸಿದ್ದಾರೆ. 

ಸರಕಾರಕ್ಕೆ ಕನಿಷ್ಠ ಮಾನವೀಯತೆ ಇದ್ದಿದ್ದರೂ ಮಂಡಕ್ಕಿ ಮತ್ತಿತರ ಸಣ್ಣ-ಪುಟ್ಟ ಬಡವರ ಆಹಾರ ಉತ್ಪಾದನೆ ಮೇಲೆ ಜಿಎಸ್‍ಟಿ ವಿಧಿಸುತ್ತಿರಲಿಲ್ಲ. ದಾವಣಗೆರೆಯೊಂದರಲ್ಲೆ 5 ಸಾವಿರಕ್ಕೂ ಹೆಚ್ಚು ಕುಟುಂಬಗಳು ಮಂಡಕ್ಕಿ ಉತ್ಪಾದನೆಯನ್ನೇ ನೆಚ್ಚಿಕೊಂಡಿವೆ. ದಾವಣಗೆರೆ ಮತ್ತಿತರ ಕಡೆಯ ಮಂಡಕ್ಕಿ ಉತ್ಪಾದಕರ ಕ್ಷೇಮಾಭಿವೃದ್ಧಿ ಸಂಘದವರು ನನ್ನನ್ನು ಭೇಟಿಯಾಗಿ ಮಂಡಕ್ಕಿಗೂ ಜಿಎಸ್‍ಟಿ ವಿಧಿಸಿರುವುದರಿಂದ ಆಗಿರುವ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ. ಸರಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಸಿದ್ದರಾಮಯ್ಯ ಸಿಎಂ ಬೊಮ್ಮಾಯಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.


  • Blogger Comments
  • Facebook Comments

0 comments:

Post a Comment

Item Reviewed: ನಾಳೆಯಿಂದ (ಜುಲೈ 18) ಹಲವು ಅಗತ್ಯ ವಸ್ತು, ಸೇವೆಗಳು ಮತ್ತಷ್ಟು ದುಬಾರಿ : ಕೇಂದ್ರ ಸರಕಾರದ ಜಿ.ಎಸ್.ಟಿ. ವಿಧಿಸುವ ನಿರ್ಧಾರಕ್ಕೆ ವ್ಯಾಪಕರ ಆಕ್ರೋಶ, ಸರಕಾರದ ವಿರುದ್ದ ಸಿದ್ದು ಗರಂ Rating: 5 Reviewed By: karavali Times
Scroll to Top