ಆಗಸ್ಟ್ 27 ರಿಂದ ಸೆ 11ರವರೆಗೆ ಅರಬ್ ರಾಷ್ಟ್ರದಲ್ಲಿ ಏಶ್ಯಾ ಕಪ್ ಕ್ರಿಕೆಟ್ ಟೂರ್ನಿ : ಆ 28 ರಂದು ಭಾರತ-ಪಾಕ್ ನಡುವೆ ಹೈವೋಲ್ಟೇಜ್ ಪಂದ್ಯ - Karavali Times ಆಗಸ್ಟ್ 27 ರಿಂದ ಸೆ 11ರವರೆಗೆ ಅರಬ್ ರಾಷ್ಟ್ರದಲ್ಲಿ ಏಶ್ಯಾ ಕಪ್ ಕ್ರಿಕೆಟ್ ಟೂರ್ನಿ : ಆ 28 ರಂದು ಭಾರತ-ಪಾಕ್ ನಡುವೆ ಹೈವೋಲ್ಟೇಜ್ ಪಂದ್ಯ - Karavali Times

728x90

2 August 2022

ಆಗಸ್ಟ್ 27 ರಿಂದ ಸೆ 11ರವರೆಗೆ ಅರಬ್ ರಾಷ್ಟ್ರದಲ್ಲಿ ಏಶ್ಯಾ ಕಪ್ ಕ್ರಿಕೆಟ್ ಟೂರ್ನಿ : ಆ 28 ರಂದು ಭಾರತ-ಪಾಕ್ ನಡುವೆ ಹೈವೋಲ್ಟೇಜ್ ಪಂದ್ಯ

ದುಬೈ, ಆಗಸ್ಟ್ 02, 2022 (ಕರಾವಳಿ ಟೈಮ್ಸ್) : ಈ ಬಾರಿಯ ಏಷ್ಯಾ ಕಪ್ ಟೂರ್ನಿ ಶ್ರೀಲಂಕಾದಿಂದ ಯುಎಇಗೆ ಸ್ಥಳಾಂತರಗೊಂಡು ಇದೀಗ ಅಂತಿಮ ವೇಳಾಪಟ್ಟಿ ಸಿದ್ದಗೊಂಡಿದೆ. ಆಗಸ್ಟ್ 27 ರಿಂದ ಸೆಪ್ಟೆಂಬರ್ 11ರವರೆಗೆ ಅರಬ್ ರಾಷ್ಟ್ರದಲ್ಲಿ ಮತ್ತೊಂದು ಕ್ರಿಕೆಟ್ ಕಲರವ ರಂಗೇರಲಿದೆ. ಟೂರ್ನಿಯ ವಿಶೇಷತೆ ಎಂದರೆ ಟೂರ್ನಿ ಆರಂಭವಾದ ಮರುದಿನವನೇ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ಸೆಣಸಾಟ ನಡೆಸಲಿದೆ. ಗ್ರೂಪ್ ‘ಎ’ ನಲ್ಲಿ ಸ್ಥಾನ ಪಡೆದಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಆಗಸ್ಟ್ 28 ರಂದು ಪರಸ್ಪರ ಸೆಣಸಾಡಲಿವೆ. ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಕೊನೆಯ ಬಾರಿಗೆ 2021ರ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಭಾರತ ಎದುರು ಪಾಕಿಸ್ತಾನ ತಂಡವು 10 ವಿಕೆಟ್‍ಗಳ ಅಂತರದ ಗೆಲುವು ದಾಖಲಿಸಿತ್ತು. 

ಈ ಬಾರಿಯ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನದ ಜತೆಗೆ ‘ಎ’ ಗುಂಪಿನಲ್ಲಿ ಅರ್ಹತಾ ಸುತ್ತಿನಲ್ಲಿ ವಿಜೇತವಾದ ತಂಡ ಸ್ಥಾನ ಪಡೆಯಲಿದೆ. ‘ಬಿ’ ಗುಂಪಿನಲ್ಲಿ ಶ್ರೀಲಂಕಾ, ಆಪ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಸ್ಥಾನ ಪಡೆದಿವೆ. ಗ್ರೂಪ್ ಹಂತದ ಪಂದ್ಯಗಳು ಆಗಸ್ಟ್ 27 ರಿಂದ ಸೆಪ್ಟೆಂಬರ್ 2 ರವರೆಗೆ ನಡೆಯಲಿವೆ. ಇದಾದ ಬಳಿಕ ಸೂಪರ್ 4 ರ ಹಂತದ ಪಂದ್ಯಗಳು ಸೆಪ್ಟೆಂಬರ್ 3 ರಿಂದ ಸೆಪ್ಟೆಂಬರ್ 9ರವರೆಗೆ ನಡೆಯಲಿವೆ. ಸೆ. 11 ರಂದು ಫೈನಲ್ ಪಂದ್ಯ ನಡೆಯಲಿದೆ. 

ಭಾರತ ಕ್ರಿಕೆಟ್ ತಂಡವು ಈ ಹಿಂದೆ ಏಷ್ಯಾಕಪ್ ಟೂರ್ನಿಯ ಕಳೆದೆರಡು ಮುಖಾಮುಖಿಯಲ್ಲೂ ಪಾಕಿಸ್ತಾನ ಎದುರು ಗೆಲುವು ಸಾಧಿಸಿತ್ತು. ಇದೀಗ ಏಷ್ಯಾಕಪ್ ಟೂರ್ನಿಯಲ್ಲಿ ಪಾಕ್ ಎದುರು ಹ್ಯಾಟ್ರಿಕ್ ಗೆಲುವು ದಾಖಲಿಸುವ ಅವಕಾಶ ಭಾರತ ಪಾಲಿಗೆ ಬಂದೊದಗಿದೆ. ಈ ಬಾರಿಯ ಏಷ್ಯಾಕಪ್ ಟೂರ್ನಿಯು ಮುಂಬರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಟಿ-20 ಮಾದರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ಈ ಬಾರಿಯ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯು ದುಬೈ ಮಾತ್ರವಲ್ಲದೇ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿಯೂ ಪಂದ್ಯಾಟಗಳು ನಡೆಯಲಿವೆ. ಭಾರತೀಯ ಕಾಲಮಾನ ಸಂಜೆ 7.30ಕ್ಕೆ ಏಷ್ಯಾಕಪ್ ಪಂದ್ಯಾವಳಿಗಳು ಆರಂಭವಾಗಲಿವೆ. 2018ರಲ್ಲಿ ಕೊನೆಯ ಬಾರಿಗೆ ನಡೆದ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಬಾಂಗ್ಲಾದೇಶ ತಂಡವನ್ನು ಬಗ್ಗುಬಡಿದು ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

ಈ ಮೊದಲು ಈ ಬಾರಿಯ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಶ್ರೀಲಂಕಾದಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಶ್ರೀಲಂಕಾದಲ್ಲಿ ಇತ್ತೀಚೆಗೆ ತಲೆದೋರಿರುವ ರಾಜಕೀಯ ಅರಾಜಕತೆ ಹಾಗೂ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಟೂರ್ನಿಯನ್ನು ದ್ವೀಪ ರಾಷ್ಟ್ರದಿಂದ ಅರಬ್ ರಾಷ್ಟ್ರಕ್ಕೆ ಸ್ಥಳಾಂತರಿಸಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಆಗಸ್ಟ್ 27 ರಿಂದ ಸೆ 11ರವರೆಗೆ ಅರಬ್ ರಾಷ್ಟ್ರದಲ್ಲಿ ಏಶ್ಯಾ ಕಪ್ ಕ್ರಿಕೆಟ್ ಟೂರ್ನಿ : ಆ 28 ರಂದು ಭಾರತ-ಪಾಕ್ ನಡುವೆ ಹೈವೋಲ್ಟೇಜ್ ಪಂದ್ಯ Rating: 5 Reviewed By: karavali Times
Scroll to Top