ಸ್ತ್ರೀ ಸಂವೇದನೆಯ ಹಿರಿಯ ಸಾಹಿತಿ ಡಾ ಸಾರಾ ಅಬೂಬಕ್ಕರ್ ನಿಧನ - Karavali Times ಸ್ತ್ರೀ ಸಂವೇದನೆಯ ಹಿರಿಯ ಸಾಹಿತಿ ಡಾ ಸಾರಾ ಅಬೂಬಕ್ಕರ್ ನಿಧನ - Karavali Times

728x90

10 January 2023

ಸ್ತ್ರೀ ಸಂವೇದನೆಯ ಹಿರಿಯ ಸಾಹಿತಿ ಡಾ ಸಾರಾ ಅಬೂಬಕ್ಕರ್ ನಿಧನ

ಮಂಗಳೂರು, ಜನವರಿ 09, 2023 (ಕರಾವಳಿ ಟೈಮ್ಸ್) : ಕನ್ನಡ ಖ್ಯಾತ ಲೇಖಕಿ, ಮಹಿಳಾ ಸಂವೇದನೆಯ ಸಾಹಿತಿ ಡಾ ಸಾರಾ ಅಬೂಬಕ್ಕರ್ (86) ಅವರು ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ಮಧ್ಯಾಹ್ನ 1 ಗಂಟೆ ವೇಳೆಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮಂಗಳೂರಿನ ಹ್ಯಾಟ್ ಹಿಲ್ ಬಳಿ ನೆಲೆಸಿದ್ದ ಡಾ ಸಾರಾ ಅವರು ನಾಲ್ವರು ಪುತ್ರರು ಹಾಗೂ ಅಪಾರ ಪ್ರಮಾಣದ ಬಂಧು-ಬಳಗ, ಅಭಿಮಾನಿ ವರ್ಗವನ್ನು ಅಗಲಿದ್ದಾರೆ.


ಅವರು ಗಡಿನಾಡು ಕಾಸರಗೋಡಿನ ಮಲಯಾಳಂ ಮಾತನಾಡುವ ಕುಟುಂಬದಲ್ಲಿ ವಕೀಲರಾದ ಪಿ ಅಹಮದ್ ಮತ್ತು ಝೈನಬಿ ಅವರ ಪುತ್ರಿಯಾಗಿ 1936 ರ ಜೂನ್ 30 ರಂದು ಜನಿಸಿದರು. ಬೆಳೆಯುವಾಗಲೆ ಮಹಿಳಾ ಸಮಾನತೆ, ಮಹಿಳಾ ಸಬಲೀಕರಣದ ಚಿಂತನೆ ಹೊಂದಿದ್ದ ಡಾ ಸಾರಾ ಅವರ  ಮೊದಲ ಕಾದಂಬರಿ ಚಂದ್ರಗಿರಿಯ ತೀರದಲ್ಲಿ ಜನಪ್ರಿಯವಾಗಿ ಗಮನ ಸೆಳೆದಿದೆ. ಸುಮಾರು 10 ಕಾದಂಬರಿ, 6 ಕಥಾ ಸಂಕಲನಗಳು, 5 ಬಾನುಲಿ ನಾಟಕ, ಲೇಖನ, ಪ್ರವಾಸ ಕಥನ ಸಹಿತ ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದರು. 


ಕೇರಳದ ಕಾಸರಗೋಡು ಜಿಲ್ಲೆಯವರಾದ ಇವರು ಚಂದ್ರಗಿರಿ ತೀರದಲ್ಲಿ ಪುಸ್ತಕವನ್ನು ಬರೆದಿದ್ದಾರೆ. ಎಂಜಿನಿಯರ್ ಆಗಿದ್ದ ಅಬೂಬಕ್ಕರ್ ಅವರೊಡನೆ ಸಾರಾ ಅವರ ವಿವಾಹ ನೆರವೇರಿದ್ದು, ಓದಿನಲ್ಲಿ ಅಪಾರ ಆಸಕ್ತರಾಗಿದ್ದ ಸಾರಾ ಅವರು ಶಿವರಾಮ ಕಾರಂತರು, ಇನಾಂದಾರ್, ಭೈರಪ್ಪ, ಅನಂತಮೂರ್ತಿ ಇವರೆಲ್ಲರ ಬರವಣಿಗೆಗೆ ಮಾರು ಹೋಗಿ ಸದಾ ಓದಿನಲ್ಲಿ ಮಗ್ನರಾಗಿರುತ್ತಿದ್ದರು. ಮನೋವಿಜ್ಞಾನದ ಬಗ್ಗೆ ತ್ರಿವೇಣಿಯವರು ಬರೆದ ಕಾದಂಬರಿಗಳು ಸಾರಾ ಅವರಲ್ಲಿ  ಆಕರ್ಷಣೆ ಹುಟ್ಟಿಸಿದವು.

ಸಾರಾ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ  ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಿ. ಸರೋಜಾದೇವಿ ಪ್ರಶಸ್ತಿ, ‘ಸಹನಾ’ ಕಾದಂಬರಿಗೆ ವರ್ಧಮಾನ ಪ್ರಶಸ್ತಿ, ‘ಸುಳಿಯಲ್ಲಿ ಸಿಕ್ಕವರು’ ಕೃತಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಹಾಗೂ ಸಂದೇಶ ಪ್ರಶಸ್ತಿ, ಅನುಪಮ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ  ಸಹಿತ  ಹಲವಾರು ಪ್ರಮುಖ ಪ್ರಶಸ್ತಿ ಗೌರವಗಳನ್ನು ಪಡೆದುಕೊಂಡಿದ್ದಾರೆ. 

ಡಾ ಸಾರಾ ಅವರ ಪಾರ್ಥಿವ ಶರೀರವನ್ನು ಮಂಗಳೂರಿನ ಹಾಥಿಲ್‍ನಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು, ರಾತ್ರಿ 8 ಗಂಟೆಗೆ ದಫನ ಕಾರ್ಯ ನಡೆಯಲಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಸ್ತ್ರೀ ಸಂವೇದನೆಯ ಹಿರಿಯ ಸಾಹಿತಿ ಡಾ ಸಾರಾ ಅಬೂಬಕ್ಕರ್ ನಿಧನ Rating: 5 Reviewed By: karavali Times
Scroll to Top