ಪುದು ಗ್ರಾಮ ಪಂಚಾಯತ್ ಚುನಾವಣೆಗೆ ದಿನಗಣನೆ : ಗ್ರಾಮದ ಈಡೇರದ ಸಮಸ್ಯೆಗಳು ಹಾಗೂ ಆಡಳಿತಗಾರರ ಸ್ಪಂದನೆಯ ಕೊರತೆಯೇ ಮತದಾರರ ಬಹು ಚರ್ಚಿತ ವಿಷಯ - Karavali Times ಪುದು ಗ್ರಾಮ ಪಂಚಾಯತ್ ಚುನಾವಣೆಗೆ ದಿನಗಣನೆ : ಗ್ರಾಮದ ಈಡೇರದ ಸಮಸ್ಯೆಗಳು ಹಾಗೂ ಆಡಳಿತಗಾರರ ಸ್ಪಂದನೆಯ ಕೊರತೆಯೇ ಮತದಾರರ ಬಹು ಚರ್ಚಿತ ವಿಷಯ - Karavali Times

728x90

21 February 2023

ಪುದು ಗ್ರಾಮ ಪಂಚಾಯತ್ ಚುನಾವಣೆಗೆ ದಿನಗಣನೆ : ಗ್ರಾಮದ ಈಡೇರದ ಸಮಸ್ಯೆಗಳು ಹಾಗೂ ಆಡಳಿತಗಾರರ ಸ್ಪಂದನೆಯ ಕೊರತೆಯೇ ಮತದಾರರ ಬಹು ಚರ್ಚಿತ ವಿಷಯ

ಬಂಟ್ವಾಳ, ಫೆಬ್ರವರಿ 22, 2023 (ಕರಾವಳಿ ಟೈಮ್ಸ್) : ತಾಲೂಕಿನ ಅವಧಿ ಪೂರ್ಣಗೊಂಡ ಪುದು ಗ್ರಾಮ ಪಂಚಾಯತ್ ಚುನಾವಣೆಗೆ ದಿನಗಣನೆ ಆರಂಭಗೊಂಡಿದ್ದು, ಫೆಬ್ರವರಿ 25 ರಂದು ಶನಿವಾರ ಮತದಾನ ನಡೆಯಲಿದೆ. ಪಂಚಾಯತಿಯ 34 ಸ್ಥಾನಗಳಿಗೆ ಅಂತಿಮವಾಗಿ ಬಿಜೆಪಿ, ಕಾಂಗ್ರೆಸ್, ಎಸ್ ಡಿ ಪಿ ಐ ಹಾಗೂ ಪಕ್ಷೇತರರು ಸೇರಿ ಒಟ್ಟು 99 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 

ನಾಮಪತ್ರ ಪರಿಶೀಲನೆಯ ಸಂದರ್ಭದಲ್ಲಿ ಸಲ್ಲಿಕೆಯಾಗಿದ್ದ ಒಟ್ಟು 103 ನಾಮಪತ್ರಗಳ ಪೈಕಿ ಒಂದು ನಾಮಪತ್ರ ತಿರಸ್ಕೃತಗೊಂಡರೆ, ಉಳಿದಂತೆ 102 ನಾಮಪತ್ರಗಳ ಪೈಕಿ ಮೂವರು ನಾಮಪತ್ರ ವಾಪಾಸು ಪಡೆಯುವ ಕೊನೆ ದಿನಾಂಕದಂದು ನಾಮಪತ್ರವನ್ನು ವಾಪಾಸ್ ಪಡೆದಿದ್ದಾರೆ. 

ಆಡಳಿರೂಢ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳಾಗಿ 34 ಮಂದಿ ಕಣದಲ್ಲಿದ್ದರೆ, ಪ್ರಮುಖ ವಿರೋಧ ಪಕ್ಷ ಬಿಜೆಪಿ ಬೆಂಬಲಿತರಾಗಿ 32 ಮಂದಿ, ಎಸ್ ಡಿ ಪಿ ಐ ಬೆಂಬಲಿತ 28 ಅಭ್ಯರ್ಥಿಗಳು ಹಾಗೂ ಐವರು ಸ್ವತಂತ್ರ ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. 

ಇದೀಗ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳು ಮತಬೇಟೆ ಆರಂಭಿಸಿದ್ದು, ಮತದಾರರ ಮನಗೆಲ್ಲಲು ವಿವಿಧ ಕಸರತ್ತು ನಡೆಸಿ ಮತದಾರರ ಮನೆ ಬಾಗಿಲಿಗೆ ದಾಂಗುಡಿ ಇಡುತ್ತಿದ್ದಾರೆ. ಕಳೆದ ಬಾರಿ ಅಧಿಕಾರ ನಡೆಸಿದ ರಮ್ಲಾನ್ ಮಾರಿಪಳ್ಳ ನೇತೃತ್ವದ ಕಾಂಗ್ರೆಸ್ ಬೆಂಬಲಿಗರು ಶಾಸಕರ ಬಲ ಇದ್ದರೂ ಕೂಡಾ ಜನಪರ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಗ್ರಾಮದ ಜನ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರಾದರೂ ಈ ಬಾರಿಯೂ ಕಾಂಗ್ರೆಸ್ ಬೆಂಬಲಿತರೇ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸದಲ್ಲಿದ್ದಾರೆ. 

ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ಸಮಸ್ಯೆ ಪರಿಹಾರ ಕಾಣದ ಸಮಸ್ಯೆಯಾಗಿಯೇ ಉಳಿದಿದ್ದು, ಫರಂಗಿಪೇಟೆ ಹಾಗೂ ಮಾರಿಪಳ್ಳ ಪೇಟೆಗಳಲ್ಲಿ ಹಲವಾರು ಸಮಸ್ಯೆಗಳು ಇನ್ನೂ ಹಾಗೇ ಬೀಡುಬಿಟ್ಡಿದೆ. ಇನ್ನು ಪಂಚಾಯತ್ ಕಚೇರಿಯ ಒಳಗೆ ಭ್ರಷ್ಟಾಚಾರದ ವಾಸನೆಯ ಬಗ್ಗೆಯೂ ಗ್ರಾಮಸ್ಥರು ಆರೋಪಿಸುತ್ತಾರೆ. ಪಂಚಾಯತ್ ಕಚೇರಿಯಲ್ಲಿ ಸಣ್ಣ ಕಡತ ವಿಲೇವಾರಿಯಂತಹ ಕೆಲಸ-ಕಾರ್ಯಗಳಿಗೂ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳ ಕೈ ಬಿಸಿ ಮಾಡದೆ ಯಾವುದೂ ಸುಲಲಿತವಾಗಿ ನಡೆಯುತ್ತಿರಲಿಲ್ಲ ಎನ್ನುವ ಗ್ರಾಮಸ್ಥರು 9-11 ರಂತಹ ಸಣ್ಣ ಕಡತ ವಿಲೇವಾರಿಗೂ ಗ್ರಾಮಸ್ಥರು ಅಲೆದಾಟ ನಡೆಸಬೇಕಾದ ಪರಿಸ್ಥಿತಿ ಇಲ್ಲಿನ ಪಂಚಾಯತಿನಲ್ಲಿತ್ತು ಎಂದು ಅಸಾಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಆಡಳಿತ ಪಕ್ಷದ ಅಧ್ಯಕ್ಷ-ಉಪಾಧ್ಯಕ್ಷರ ಸಹಿತ ಕೆಲ ಸದಸ್ಯರುಗಳು ಕೂಡಾ ಸಾರ್ವಜನಿಕರ ತುರ್ತು ಕರೆಗಳಿಗೆ ಯಾವುದೇ ರೀತಿಯ ಸ್ಪಂದನೆ ನೀಡುತ್ತಿರಲಿಲ್ಲ. ನೂರು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸದೆ, ತಿರುಗಿ ಕರೆ ಮಾಡದೆ ತೀವ್ರ ನಿರ್ಲಕ್ಷ್ಯ ತೋರುತ್ತಿದ್ದರು ಎಂದು ದೂರುವ ಗ್ರಾಮಸ್ತರು ಕೊನೆಗೆ ಪಂಚಾಯತ್ ಕಚೇರಿಯ ಬಾಗಿಲಲ್ಲೇ ಬೀಡುಬಿಟ್ಟಿರುವ ಆಡಳಿತ ಪಕ್ಷದ ಪ್ರತಿನಿಧಿಗಳ ಚೇಲಾಗಳ ಕೈ ಬಿಸಿ ಮಾಡಿದ ಬಳಿಕವೇ ಕಡತ ವಿಲೇ ಅಥವಾ ಸಾರ್ವಜನಿಕರ ಕೆಲಸ-ಕಾರ್ಯಗಳು ನಡೆಯುತ್ತಿದ್ದವು ಎಂದು ಗಂಭೀರವಾಗಿ ಆರೋಪಿಸುತ್ತಾರೆ. 

ಈ ಎಲ್ಲಾ ಆರೋಪಗಳ ಹಿನ್ನಲೆಯಲ್ಲಿ ಈ ಬಾರಿ ಆಡಳಿತ ಪಕ್ಷ ಅಷ್ಟು ಸುಲಭವಾಗಿ ಮತ್ತೆ ಮತದಾರರ ಮನಗೆಲ್ಲಲು ಸಾಧ್ಯವಿಲ್ಲ ಎನ್ನಲಾಗಿದ್ದು, ಗ್ರಾಮಸ್ಥರ ಈ ಎಲ್ಲಾ ಅಸಮಾಧಾನಗಳನ್ನೇ ವಿರೋಧ ಪಕ್ಷಗಳು ಬಂಡವಾಳವಾಗಿಸಿ ಮತ ಬಾಚುವ ಸಿದ್ದತೆಯಲ್ಲಿದೆ. ಪಂಚಾಯತಿನ ಕೆಲ ವಾರ್ಡುಗಳಲ್ಲಿ ಬೆದರಿಕೆ, ಗೂಂಡಾಗಿರಿಯ ವರ್ತನೆಗಳೂ ನಡೆಯುತ್ತಿದೆ ಎಂದು ಗ್ರಾಮದ ಜನ ಆರೋಪಿಸುತ್ತಾರಲ್ಲದೆ, ಸಹಜವಾಗಿ ಚುನಾವಣಾ ಸಂದರ್ಭ ಪೊಲೀಸ್ ಇಲಾಖೆ ಅಪರಾಧ ಪ್ರಕರಣಗಳಲ್ಲಿ ತೊಡಗಿಸಿಕೊಂಡವರ ಮೇಲೆ ನಿಗಾ ಇಡುವ ರೂಢಿ ಇದ್ದು, ಪುದು ಪಂಚಾಯತ್ ಚುನಾವಣೆಗೆ ಸಂಬಂಧಪಟ್ಟಂತೆ ಅದು ಕಾರ್ಯಗೊಂಡಿಲ್ಲ ಎಂದು ಆರೋಪಿಸಿದ್ದಾರೆ. 

ಒಟ್ಟಿನಲ್ಲಿ ಫೆ 25 ರಂದು ಚುನಾವಣೆ ನಡೆಯಲಿದ್ದು, ಎಲ್ಲಾ ಪಕ್ಷಗಳ ಬೆಂಬಲಿತರು ಮತ ಬೇಟೆಗಾಗಿ ಸಜ್ಜಾಗಿದ್ದು, ಫೆ 28 ರಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಪುದು ಗ್ರಾಮ ಪಂಚಾಯತ್ ಚುನಾವಣೆಗೆ ದಿನಗಣನೆ : ಗ್ರಾಮದ ಈಡೇರದ ಸಮಸ್ಯೆಗಳು ಹಾಗೂ ಆಡಳಿತಗಾರರ ಸ್ಪಂದನೆಯ ಕೊರತೆಯೇ ಮತದಾರರ ಬಹು ಚರ್ಚಿತ ವಿಷಯ Rating: 5 Reviewed By: karavali Times
Scroll to Top