ಫೆ 25 ರಂದು ಪುದು ಪಂಚಾಯತ್ ಚುನಾವಣೆ : ಶಾಸಕರ ಬಲ ಇದ್ದರೂ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸದ ಆಡಳಿತದ ವಿರುದ್ದ ಗ್ರಾಮಸ್ಥರ ವಿರೋಧ ಜೋರಾಗಿದೆ - Karavali Times ಫೆ 25 ರಂದು ಪುದು ಪಂಚಾಯತ್ ಚುನಾವಣೆ : ಶಾಸಕರ ಬಲ ಇದ್ದರೂ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸದ ಆಡಳಿತದ ವಿರುದ್ದ ಗ್ರಾಮಸ್ಥರ ವಿರೋಧ ಜೋರಾಗಿದೆ - Karavali Times

728x90

14 February 2023

ಫೆ 25 ರಂದು ಪುದು ಪಂಚಾಯತ್ ಚುನಾವಣೆ : ಶಾಸಕರ ಬಲ ಇದ್ದರೂ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸದ ಆಡಳಿತದ ವಿರುದ್ದ ಗ್ರಾಮಸ್ಥರ ವಿರೋಧ ಜೋರಾಗಿದೆ

ಬಂಟ್ವಾಳ, ಫೆಬ್ರವರಿ 14, 2023 (ಕರಾವಳಿ ಟೈಮ್ಸ್) : ತಾಲೂಕಿನ ಅವಧಿ ಪೂರ್ಣಗೊಂಡ ಪುದು ಗ್ರಾಮ ಪಂಚಾಯತಿಗೆ ಚುನಾವಣೆ ಘೋಷಣೆಯಾಗಿದ್ದು, ಫೆ 25 ರಂದು ಶ£ವಾರ ಚುನಾವಣೆ ನಡೆಯಲಿದೆ. ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ, ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತಿನಲ್ಲಿ ಈ ಬಾರಿ ಆಡಳಿತ ವಿರೋಧಿ ಅಲೆ ಜೋರಾಗಿಯೇ ಕೇಳಿ ಬರುತ್ತಿದ್ದು, ಪಂಚಾಯತ್ ವ್ಯಾಪ್ತಿಯ ಯಾವುದೇ ಸಮಸ್ಯೆಗಳಿಗೆ ರಮ್ಲಾನ್ ಮಾರಿಪಳ್ಳ ಅಧ್ಯಕ್ಷತೆಯ ಆಡಳಿತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸದೆ ಜಡತ್ವದ ಆಡಳಿತ ನೀಡಿರುವುದೇ ಈ ಬಾರಿ ಮತದಾರರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಗ್ರಾಮಸ್ಥರು ಹೇಳಿಕೊಳ್ಳುತ್ತಿದ್ದಾರೆ. 

ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಮುಖವಾಗಿ ತ್ಯಾಜ್ಯ ಸಮಸ್ಯೆಯೇ ಗ್ರಾಮಸ್ಥರಿಗೆ ಬಲುದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಪುದು ಗ್ರಾಮದ ಪ್ರಮುಖ ಪ್ರದೇಶಗಳಾದ ಫರಂಗಿಪೇಟೆ, ಮಾರಿಪಳ್ಳ ಮೊದಲಾದ ಪರಿಸರಗಳು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಇದ್ದು, ಪಂಚಾಯತ್ ಆಡಳಿತದ ಅಸಮರ್ಪಕ ನೀತಿಯಿಂದ ಉಂಟಾಗಿರುವ ತ್ಯಾಜ್ಯ ಸಮಸ್ಯೆ ಹೆದ್ದಾರಿಯನ್ನೇ ಆವರಿಸಿ ಇಡೀ ಪಂಚಾಯತ್‍ಗೆ ಕೆಟ್ಟ ಹೆಸರು ತರುವಂತಾಗಿದೆ ಎನ್ನುತ್ತಾರೆ ಗ್ರಾಮಸ್ಥರು. ಒಂದೆರಡು ಬಾರಿ ಕಣ್ಣು ಕಟ್ಟಿಗೆ ಕ್ರಮ ಜರುಗಿಸಿದ್ದೇವೆ ಎನ್ನುವ ಆಡಳಿತ ಉಳಿದಂತೆ ತ್ಯಾಜ್ಯ ಸಮಸ್ಯೆಗೆ ಯಾವುದೇ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದೆ. 

ಪಂಚಾಯತ್ ವ್ಯಾಪ್ತಿಯ ಪ್ರಮುಖ ಪೇಟೆಯಾಗಿರುವ ಫರಂಗಿಪೇಟೆ ಪೇಟೆಯಲ್ಲಿ ಹಲವು ಸಮಸ್ಯೆಗಳು ನಿತ್ಯ ತಾಂಡವವಾಡುತ್ತಿದ್ದು, ಪಂಚಾಯತ್ ಕಚೇರಿಯೂ ಅಲ್ಲೇ ಸಮೀಪದಲ್ಲೇ ಇದೆ. ಪಂಚಾಯತ್ ಕಚೇರಿಯ ಅನತಿ ದೂರದ ಫರಂಗಿಪೇಟೆಯಲ್ಲಿ ಎಲ್ಲೆಂದರೆಲ್ಲಿ ಅನಗತ್ಯ ಗೂಡಂಗಡಿಗಳು ರಾರಾಜಿಸುತ್ತಿದ್ದು, ಸೂಕ್ತವಾದ ವಾಹನ ನಿಲುಗಡೆಗೆ ವ್ಯವಸ್ಥೆಯಾಗಲೀ, ಪಾರ್ಕಿಂಗ್ ವ್ಯವಸ್ಥೆಯಾಗಲೀ ಸಮರ್ಪಕವಾಗಿರುವುದಿಲ್ಲ. ಹೆದ್ದಾರಿ ಬದಿಯ ಪೇಟೆಯಲ್ಲಿ ಎಲ್ಲವೂ ಅಲ್ಲೋಲಕಲ್ಲೋಲವಾಗಿದೆ ಎನ್ನುವ ಗ್ರಾಮಸ್ಥರು ಪೇಟೆಯೊಂದರ ಪರಿಸ್ಥಿತಿಯನ್ನೇ ನಿಭಾಯಿಸುವ ಮನಸ್ಸು ಮಾಡದ ಆಡಳಿತ ಇನ್ನು ಒಳಗಿನ ಗ್ರಾಮಾಂತರ ಪ್ರದೇಶಗಳಲ್ಲಿ ಹಲವು ಮೂಲಭೂತ ಸಮಸ್ಯೆಗಳು ಇನ್ನು ಹಾಗೇ ಬೀಡುಬಿಟ್ಟಿದೆ ಎನ್ನುತ್ತಾರೆ. ಅಲ್ಲದೆ ಬಹುಕಾಲದ ಫರಂಗಿಪೇಟೆ-ಕುಂಪಣಮಜಲು ರೈಲ್ವೇ ಕ್ರಾಸಿಂಗ್ ಸಮಸ್ಯೆಗೂ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಈ ಬಾರಿಯೂ ಆಡಳಿತ ವಿಫಲವಾಗಿದೆ ಎಂದು ಈ ಭಾಗದ ಜನ ಆಕ್ರೋಶಿತರಾಗುತ್ತಿದ್ದಾರೆ. ಸ್ವಪಕ್ಷದ ಶಾಸಕರ ಬಲವೂ ಇರುವುದರಿಂದ ಈ ಭಾಗದ ಸಮಸ್ಯೆ ಪರಿಹರಿಸುವುದು ಇಲ್ಲಿನ ಆಡಳಿತಕ್ಕೆ ಕಷ್ಟವೇನಿಲ್ಲ. ಆದರೆ ಆಡಳಿತದೊಳಗಿನ ಹೊಂದಾಣಿಕೆಯ ಕೊರತೆಯೇ ಸ್ಪಷ್ಟ ಬಹುಮತ ಪಡೆದ ಆಡಳಿತ ಇದ್ದರೂ ಇಲ್ಲಿನ ಎಲ್ಲ ಸಮಸ್ಯೆಗಳು ಹಾಗೇ ಹಾಸು ಹೊಕ್ಕಾಗಿರಲು ಕಾರಣ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಾರೆ. 

ಅಲ್ಲದೆ ಆಡಳಿತ ಪಕ್ಷದ ಸದಸ್ಯರೊಳಗೇ ಎರಡು ಬಣಗಳಿದ್ದು, ಇದಕ್ಕೆ ಸ್ಥಳೀಯ ಮಾಜಿ ಜಿ ಪಂ ಸದಸ್ಯರೋರ್ವರು ಮತ್ತಷ್ಟು ತುಪ್ಪ ಸುರಿಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸುವ ಗ್ರಾಮಸ್ಥರು ಪಂಚಾಯತ್ ಅಧ್ಯಕ್ಷರು ಯಾವುದೇ ಹೆಜ್ಜೆ ಇಡುವುದಾದರೂ ಅದಕ್ಕೆ ಮಾಜಿ ಜಿ ಪಂ ಸದಸ್ಯರ ಹಸ್ತಕ್ಷೇಪ ಇದ್ದೇ ಇದೆ. ಪಂಚಾಯತ್ ಒಳಗಿನ ಸದಸ್ಯರ ಸಲಹೆ-ಸೂಚನೆಯನ್ನು ಅಧ್ಯಕ್ಷರು ಒಪ್ಪುತ್ತಿಲ್ಲ ಎನ್ನಲಾಗುತ್ತಿದೆ. ಸ್ವಜನ ಪಕ್ಷಪಾತ ಇಲ್ಲಿನ ಆಡಳಿತದಲ್ಲಿ ಕಂಡು ಬಂದಿರುವುದೇ ಇದೀಗ ಆಡಳಿತ ವಿರೋಧಿ ಅಲೆ ಎದ್ದು ಕಾಣಲು ಕಾರಣವಾಗುತ್ತಿದೆ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ. 

ಒಟ್ಟು 34 ಸದಸ್ಯ ಬಲ ಹೊಂದಿರುವ ಪುದು ಪಂಚಾಯತಿನಲ್ಲಿ ಕಾಂಗ್ರೆಸ್ ಬೆಂಬಲಿತರು ಪ್ರಬಲರಾಗಿದ್ದು, ಕಳೆದ ಬಾರಿ 27 ಮಂದಿ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿ ಸ್ಪಷ್ಟ ಬಹುಮತ ಪಡೆದುಕೊಂಡಿದ್ದರೆ, 6 ಸ್ಥಾನಗಳು ಬಿಜೆಪಿ ಬೆಂಬಲಿತರ ಪಾಲಾಗಿತ್ತು. ಎಸ್ ಡಿ ಪಿ ಐ ಬೆಂಬಲಿತರು ಕೇವಲ ಒಂದು ಸ್ಥಾನ ಮಾತ್ರ ಪಡೆದುಕೊಂಡಿದ್ದರು. ಈ ಬಾರಿ ಇಲ್ಲಿನ ಆಡಳಿತ ವಿರೋಧಿ ಅಲೆ ವಿರೋಧ ಪಕ್ಷಗಳಿಗೆ ವರದಾನವಾಗುತ್ತಾ ಅಥವಾ ಕಾಂಗ್ರೆಸ್ ಪ್ರಾಬಲ್ಯ ಮುಂದುವರೆಯುತ್ತಾ ಎಂಬುದಕ್ಕೆ ಫೆ 25 ರ ಚುನಾವಣೆ ಉತ್ತರ ನೀಡಲಿದೆ. 

ಇದರ ಜೊತೆಗೆ ವಿವಿಧ ಕಾರಣಗಳಿಂದ ತೆರವಾಗಿದ್ದ ಬಂಟ್ವಾಳ ತಾಲೂಕಿನ ನೆಟ್ಲಮುಡ್ನೂರು ಹಾಗೂ  ಅನಂತಾಡಿ ಗ್ರಾಮ ಪಂಚಾಯತಿನ ಎರಡು ಸದಸ್ಯ ಸ್ಥಾನಗಳ ಉಪಚುನಾವಣೆಯೂ ನಡೆಯಲಿದೆ.

  • Blogger Comments
  • Facebook Comments

0 comments:

Post a Comment

Item Reviewed: ಫೆ 25 ರಂದು ಪುದು ಪಂಚಾಯತ್ ಚುನಾವಣೆ : ಶಾಸಕರ ಬಲ ಇದ್ದರೂ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸದ ಆಡಳಿತದ ವಿರುದ್ದ ಗ್ರಾಮಸ್ಥರ ವಿರೋಧ ಜೋರಾಗಿದೆ Rating: 5 Reviewed By: karavali Times
Scroll to Top